Advertisement

ಬೇಸಗೆಯ ದಿರಿಸಿನಲ್ಲಿ ತಂಪನೆಯ ಅನುಭವ

12:40 AM Mar 06, 2020 | mahesh |

ಇದು ಬೇಸಗೆ ಕಾಲ. ಬೇಸಗೆಯ ಬಿರು ಬಿಸುಲಿಗೆ ಬೆಂದು ಬಸವಳಿಯುವ ಮುನ್ನ ದೇಹಕ್ಕೆ ಸ್ವಲ್ಪ ತಂಪು ಮಾಡುವ ಬಟ್ಟೆಗಳ ಆಯ್ಕೆಯೂ ಈ ಹೊತ್ತಿನಲ್ಲಿ ಅವಶ್ಯ. ಧರಿಸುವ ದಿರಿಸಿನಿಂದ ಹಿಡಿದು ದೈನಂದಿನ ಎಲ್ಲ ಕೆಲಸ ಕಾರ್ಯಗಳಿಗೂ ತಂಪಿನ ಆಯ್ಕೆ ಅಗತ್ಯವೂ ಕೂಡ.

Advertisement

ಪ್ರಕೃತಿ ಬದಲಾಗುತ್ತಲೇ ಇರುತ್ತದೆ. ಬೇಸಗೆ, ಮಳೆಗಾಲ, ಚಳಿಗಾಲಕ್ಕೆ ಪ್ರಕೃತಿ ತೆರೆದುಕೊಂಡಂತೆ ಪ್ರಾಣಿ, ಪಕ್ಷಿಗಳು, ಮನುಷ್ಯರು ಪ್ರಕೃತಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಈ ವಿಷಯದಲ್ಲಿ ಮನುಷ್ಯ ತುಸು ಹೆಚ್ಚೇ ಹೊಂದಾಣಿಕೆಗೆ ತೆರೆದುಕೊಳ್ಳಬೇಕಾದ ಅವಶ್ಯವಿದೆ. ಹಾಗಾಗಿ ಪ್ರಾಕೃತಿಕವಾಗಿ ಘಟಿಸುವ ಕಾಲಕ್ಕೆ ತಕ್ಕಂತೆ ಮನುಷ್ಯನ ದಿರಿಸುಗಳು ಬದಲಾಗಬೇಕಾಗುತ್ತದೆ.

ಬಟ್ಟೆಯಲ್ಲಿಯೂ ತಂಪನ್ನೀಯುವ ಬಟ್ಟೆಗಳಿವೆಯಾ ಎಂದು ಆಶ್ಚರ್ಯವಾಗಬಹದು. ಹತ್ತಿ ಬಟ್ಟೆಗಳು ಆ ಕೆಲಸವನ್ನು ಮಾಡುತ್ತದೆ ಎಂಬುದು ಅಷ್ಟೇ ಸತ್ಯ. ಶುದ್ಧ ಹತ್ತಿ ನಿಸರ್ಗದ ಕೊಡುಗೆ. ಹೆಚ್ಚು ತಾಪಮಾನ ಇರುವೆಡೆ ಇದೊಂದು ವರದಾನ. ಬಿಸಿಯನ್ನು ಹೀರಿಕೊಳ್ಳುವ ಶಕ್ತಿ ಇರುವುದರಿಂದ ಕಾಟನ್‌ ಬಟ್ಟೆ, ಹಾಸಿಗೆಗಳಿಗೆ ಬೇಡಿಕೆಯೂ ಹೆಚ್ಚುತ್ತಿದೆ. ಎಷ್ಟೇ ಫ್ಯಾಶನ್‌ ಬದಲಾದರೂ ಹತ್ತಿ ಬಟ್ಟೆಗೆ ಬೇಡಿಕೆ ಕುಸಿದಿಲ್ಲ. ಮಂಗಳೂರಿನಲ್ಲಿಯೂ ಶುದ್ಧ ಕಾಟನ್‌ ಬಟ್ಟೆ, ಹಾಸಿಗೆಗಳಿಗೆ ಬೇಡಿಕೆ.

ಉಡುಗೆ ತೊಡುಗೆಗಳ ಸ್ಟೈಲ್‌ ಪ್ರತಿ ದಿನವೂ ಬದಲಾಗುತ್ತಲೇ ಇರುತ್ತದೆ. ದೇಶಿಯ ಶೈಲಿಯ ದಿರಿಸು, ಪಾಶ್ಚಾತ್ಯ ಶೈಲಿಯ ಉಡುಗೆಗಳೊಂದಿಗೆ ಬೆರೆತು ಹೊಸ ಶೈಲಿಯೊಂದಿಗೆ ಮಾರುಕಟ್ಟೆಗೆ ಕಾಲಿಟ್ಟ ಮೇಲಂತೂ ಜನ ಖರೀದಿಗೆ ಮುಗಿ ಬೀಳುವಂತಾಯಿತು. ಆದರೆ, ಪಾಶ್ಚಾತ್ಯ ಉಡುಗೆಗಳ ಟ್ರೆಂಡ್‌ ಹೆಚ್ಚಾದಂತೆ ದೇಸಿ ಉಡುಗೆಗಳಿಗೆ ಎಲ್ಲಿ ಬೇಡಿಕೆ ಕಡಿಮೆಯಾಗಿ ಬಿಡುತ್ತದೆಯೋ ಎಂಬ ಸಣ್ಣ ಆತಂಕವೂ ವ್ಯಾಪಾರಸ್ಥರಲ್ಲಿತ್ತು. ಆದರೆ ಬದಲಾದ ಹವಾಗುಣ, ದೇಸಿ ಉಡುಗೆಗಳ ಮೋಹ ಜನರಲ್ಲಿ ಆ ಉಡುಗೆಗಳ ಮೇಲಿನ ಗೌರವವನ್ನು ಇನ್ನಷ್ಟು ಹೆಚ್ಚು ಮಾಡಿದೆ. ಅಂತಹ ದೇಸಿ ಉಡುಗೆ-ತೊಡುಗೆಗಳ ಪೈಕಿ ಕಾಟನ್‌ ಬಟ್ಟೆಗಳಿಗೆ ಸ್ಥಾನ ಇದ್ದೇ ಇದೆ.

ಮಳೆಗಾಲಕ್ಕೆ ಸಿಂಥೆಟಿಕ್‌, ಚಳಿಗಾಲಕ್ಕೆ ಉಣ್ಣೆ, ಖಾದಿ, ಬೇಸಗೆಗೆ ಕಾಟನ್‌ ಬಟ್ಟೆಗಳು ಬೆಸ್ಟ್‌ ಎಂಬುದು ಹಳೆ ಕಾಲದ ಮಾತು. ಈಗೇನಿದ್ದರೂ ಮಳೆ, ಚಳಿ, ಬೇಸಗೆಯೆಂಬ ಬೇಧವಿಲ್ಲದೆ, ಎಲ್ಲ ಕಾಲಗಳಲ್ಲಿಯೂ ಕಾಟನ್‌ ಬಟ್ಟೆಯೇ ಬೆಸ್ಟ್‌ ಎಂಬುವಷ್ಟರ ಮಟ್ಟಿಗೆ ಕಾಲ ಬದಲಾಗಿದೆ. ಈ ರೀತಿಯ ಬದಲಾವಣೆಗೆ ಕಾರಣ ಹವಾಮಾನದಲ್ಲಾದ ಬದಲಾವಣೆಯೇ ಎಂದರೂ ತಪ್ಪಾಗದು. ಈ ಸೆಕೆಯಿಂದ ನಿರಾಳತೆ ಪಡೆದುಕೊಳ್ಳಲು ಕಾಟನ್‌ ಬಟ್ಟೆಗಳ ಮೊರೆ ಹೋಗುವುದು ಟ್ರೆಂಡ್‌ ಆಗಿ ಬಿಟ್ಟಿದೆ.

Advertisement

ಮಂಗಳೂರಿನಲ್ಲಿಯೂ ಬೇಡಿಕೆ
ಮಂಗಳೂರು ನಗರ ಹೇಳೀ ಕೇಳಿ ಅತೀ ಹೆಚ್ಚು ತಾಪಮಾನವಿರು ಪ್ರದೇಶ. ಕಡಲತಡಿ ಮಂಗಳೂರಿನಲ್ಲಿ ಇಲ್ಲಿನ ಬಿಸಿಯಾದ ಹವಾಮಾನಕ್ಕೆ ಶುದ್ಧ ಹತ್ತಿಯ ಬಟ್ಟೆಗಳ ಬಳಕೆಯೇ ಬೆಸ್ಟ್‌. ಅದಕ್ಕಾಗಿಯೇ ಶುದ್ಧ ಕಾಟನ್‌ ಬಟ್ಟೆಗಳಿಗೆ ಹಲವು ದಶಕಗಳಿಂದಲೇ ಬೇಡಿಕೆ ಇದೆ. ಆದರೆ ಕಳೆದ ಮೂರ್‍ನಾಲ್ಕು ವರ್ಷಗಳಿಂದ ಏರುತ್ತಿರುವ ತಾಪಮಾನವು ಕಾಟನ್‌ ಬಟ್ಟೆ ಖರೀದಿಯನ್ನು ಟ್ರೆಂಡ್‌ ಆಗಿಸಿದೆ ಎನ್ನುತ್ತಾರೆ ಬಟ್ಟೆ ಅಂಗಡಿಗಳ ಮಾಲಕರು.

ನಗರ ವಾಸಿಗಳ ನೆಮ್ಮದಿಯ ನಿದ್ದೆಯನ್ನೂ ಕಸಿದು ಕೊಂಡಿರುವ ಸೆಕೆ ಎಂಬ ರಾಕ್ಷಸನಿಂದ ಮುಕ್ತಿ ಪಡೆಯಲು ಕಾಟನ್‌ ಹಾಸಿಗೆಗಳ ಬಳಕೆ ಯೊಂದೇ ದಾರಿ. ಅದಕ್ಕಾಗಿ ಬಟ್ಟೆ ಮಾತ್ರವಲ್ಲ ಕಾಟನ್‌ ಹಾಸಿಗೆ, ಪಿಲ್ಲೋಗಳಿಗೂ ಬೇಡಿಕೆ ಜಾಸ್ತಿ ಇದೆ. ಮನೆಯಲ್ಲೇ ತಯಾರಿಸುವ ಹತ್ತಿಯ ಹಾಸಿಗೆ, ದಿಂಬುಗಳನ್ನು ತಂದು ನಗರದಲ್ಲಿ ಬಳಸುವವರ ಸಂಖ್ಯೆಯೂ ಜಾಸ್ತಿಯಾಗುತ್ತಿದೆ.

ಕಾಟನ್‌ ಡ್ರೆಸ್‌, ಹಾಸಿಗೆ ಮಾರಾಟ ಮಾಡುವ ಮಂಗಳೂರಿನ ಬಹುತೇಕ ಅಂಗಡಿಗಳ ಸಿಬಂದಿ ಪ್ಯೂರ್‌ ಕಾಟನ್‌ ಬಟ್ಟೆ, ಹಾಸಿಗೆ, ದಿಂಬುಗಳನ್ನೇ ಕೊಳ್ಳುವಂತೆ ಸಲಹೆ ಮಾಡುತ್ತಾರೆ ಎಂಬುದು ಮತ್ತೂಂದು ವಿಶೇಷ. ದೈನಂದಿನ ವ್ಯವಹಾರಕ್ಕೆ ಬಟ್ಟೆ ಕೊಳ್ಳಲು ಬಂದವರಿಗೆ ನೈಲಾನ್‌ ಉಡುಪುಗಳಿಗಿಂತ ಕಾಟನ್‌ ಬಟ್ಟೆಗಳನ್ನೇ ಖರೀದಿಸಿ ಎಂದು ಹೇಳುತ್ತೇವೆ. ಇದರಲ್ಲಿ ಸೆಕೆ ಹೆಚ್ಚಾಗದಂತೆ ತಡೆಯುವ ಗುಣವಿದ್ದು, ಧರಿಸಿದವರಿಗೆ ಸ್ವಲ್ಪ ಮಟ್ಟಿನ ನಿರಾಳ ಸಿಗುತ್ತದೆ ಎಂಬುದೇ ಕಾರಣ ಎಂಬುದು ಬಟ್ಟೆ ಅಂಗಡಿಗಳ ಸಿಬಂದಿ ಮಾತು. ಬೆಲೆಯೂ ಕಮ್ಮಿಯಾಗಿರುತ್ತದೆ.

ಶರ್ಟ್‌, ಸೀರೆಗೆ ಬೇಡಿಕೆ
ಸೆಕೆಯಿಂದ ನಿರಾಳ ಹೊಂದಲು ಕಾಟನ್‌ ಬಟ್ಟೆಗಳ ಆಯ್ಕೆ ನಮ್ಮ ಮುಂದಿದೆ. ಶುದ್ಧ ಹತ್ತಿಯ ಶರ್ಟ್‌, ಸೀರೆ ಸದ್ಯ ಟ್ರೆಂಡ್‌ ಆಗಿ ಚಾಲ್ತಿಯಲ್ಲಿದೆ. ಕಾಟನ್‌ ಸೀರೆಗೆ ವೈವಿಧ್ಯ ಕಲರ್‌ಫುಲ್‌ ಡಿಸೈನ್‌ ಹೊಂದಿರುವ ಬ್ಲೌಸ್‌ ಧರಿಸುವುದು ಹೊಸ ಸ್ಟೈಲ್‌. ಮದುವೆ ಮನೆಗಳಲ್ಲಿಯೂ ಕಾಟನ್‌ ಸೀರೆಗಳೇ ಸದ್ಯ ಮೇಳೈಸುತ್ತಿರುವುದು ಬೇಸಗೆಯ ಧಿರಿಸಿನ ವ್ಯಾಮೋಹ ಹೇಗಿದೆ ಎಂಬುದಕ್ಕೆ ಸಾಕ್ಷಿ. ಪ್ಯೂರ್‌ ಕಾಟನ್‌ ಚೂಡಿದಾರ್‌, ಕುರ್ತಾ, ಮಕ್ಕಳ ಉಡುಗೆಗೂ ಬೇಡಿಕೆ ಇದೆ.

– ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next