Advertisement

ಪಿಎಂ ನೇತೃತ್ವದ ಸಭೆಗೆ ‘ಕೈ’ಕಾರ್ಯತಂತ್ರ

01:07 AM Jun 19, 2019 | mahesh |

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಕರೆದಿರುವ ಸರ್ವ ಪಕ್ಷಗಳ ಸಭೆ ಹಾಗೂ ಸರ್ವ ಸಂಸದರ ಸಭೆಗಾಗಿ ತನ್ನ ಕಾರ್ಯತಂತ್ರಗಳನ್ನು ರೂಪಿಸುವ ನಿಟ್ಟಿನಲ್ಲಿ, ಮಂಗಳವಾರ ಕಾಂಗ್ರೆಸ್‌ ನಾಯಕರ ಸಭೆ ನಡೆದಿದೆ.

Advertisement

ದೆಹಲಿಯ ಜನಪಥ್‌ ರಸ್ತೆಯಲ್ಲಿರುವ ಸೋನಿಯಾ ಗಾಂಧಿ ನಿವಾಸದಲ್ಲಿ ನಡೆದ ಸಭೆಗೆ ಕಾಂಗ್ರೆಸ್‌ನ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಯವರೇ ಅಧ್ಯಕ್ಷತೆ ವಹಿಸಿದ್ದರು. ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ, ಹಿರಿಯ ನಾಯಕರಾದ ಮನಮೋಹನ್‌ ಸಿಂಗ್‌, ಪಿ. ಚಿದಂಬರಂ, ಎ.ಕೆ. ಆ್ಯಂಟನಿ, ಗುಲಾಂ ನಬಿ ಆಜಾದ್‌, ಆನಂದ್‌ ಶರ್ಮಾ, ಜೈರಾಂ ರಮೇಶ್‌, ಕೆ. ಸುರೇಶ್‌ ಹಾಗೂ ಪಶ್ಚಿಮ ಬಂಗಾಳದ ಕಾಂಗ್ರೆಸ್‌ ಸಂಸದ ಅಧೀರ್‌ ರಂಜನ್‌ ಚೌಧರಿ ಭಾಗವಹಿಸಿದ್ದರು.

‘ಏಕ ದೇಶ, ಏಕ ಚುನಾವಣೆ’ ಪರಿಕಲ್ಪನೆಯ ಸಾಧಕ-ಬಾಧಕ ಚರ್ಚಿಸುವ ಉದ್ದೇಶದಿಂದ ಪ್ರಧಾನಿ ಮೋದಿ, ಬುಧವಾರ ಸರ್ವಪಕ್ಷಗಳ ಅಧ್ಯಕ್ಷರ ಸಭೆ ಕರೆದಿದ್ದಾರೆ. ಇನ್ನು, ಮಹಾತ್ಮಾ ಗಾಂಧಿಯವರ 150ನೇ ಜನ್ಮದಿನಾಚರಣೆ, 2022ರಲ್ಲಿ ಭಾರತದ 75ನೇ ಸ್ವಾತಂತ್ರ್ಯೋತ್ಸವ ಆಚರಿಸುವ ಬಗ್ಗೆಯೂ ಚರ್ಚಿಸಲಾಗುತ್ತದೆ. ಗುರುವಾರ ರಾತ್ರಿ ಎಲ್ಲಾ ಸಂಸದರಿಗಾಗಿ ಪ್ರಧಾನಿ ನಿವಾಸದಲ್ಲಿ ಪ್ರತ್ಯೇಕ ಸಭೆ ಆಯೋಜಿಸಲಾಗಿದ್ದು, ನಂತರ ರಾತ್ರಿ ಭೋಜನ ಕೂಟ ಏರ್ಪಡಿಸಲಾಗಿದೆ.

ಸಭೆ ಬಹಿಷ್ಕರಿಸಿದ ದೀದಿ ಬುಧವಾರದ ಸಭೆಯನ್ನು ಬಹಿಷ್ಕರಿಸುವುದಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ. ಈ ಬಗ್ಗೆ ಕೇಂದ್ರಕ್ಕೆ ಮಾಹಿತಿ ನೀಡಿರುವ ಅವರು, ‘ಒಂದು ದೇಶ, ಒಂದು ಚುನಾವಣೆ’ಯಂಥ ಗಹನವಾದ ವಿಚಾರವನ್ನು ಒಂದೇ ದಿನದಲ್ಲಿ ಚರ್ಚಿಸಲು ಸಾಧ್ಯವಿಲ್ಲ. ಈ ಕುರಿತು ಶ್ವೇತಪತ್ರ ಹೊರಡಿಸಿ ಎಂದಿದ್ದಾರೆ.

ಉನ್ನತ ಅಧಿಕಾರಿಗಳ ಜತೆ ಮೋದಿ ಸಭೆಬಜೆಟ್ ಮಂಡನೆಗೆ ದಿನ ಸಮೀಪಿಸುತ್ತಿರುವಂತೆಯೇ ಮಂಗಳವಾರ ಪ್ರಧಾನಿ ಮೋದಿ ಹಣಕಾಸು ಹಾಗೂ ಇತರೆ ಸಚಿವಾಲಯಗಳ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಆರ್ಥಿಕತೆಯನ್ನು ಹಳಿಗೆ ತರುವ ಮತ್ತು ಉದ್ಯೋಗ ಸೃಷ್ಟಿಗೆ ಕ್ರಮ ಕೈಗೊಳ್ಳುವ ಕುರಿತು ಚರ್ಚಿಸಲಾಗಿದೆ. ವಿತ್ತ ಇಲಾಖೆಯ ಪ್ರಮುಖ ಐವರು ಕಾರ್ಯದರ್ಶಿಗಳು, ನೀತಿ ಆಯೋಗದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಜಿದ್ದರು.

Advertisement

22ರಂದು ಸಭೆ: ಇದೇ ವೇಳೆ, ಜೂ.22ರಂದು ಪ್ರಧಾನಿ ಮೋದಿ ಅವರು ಪ್ರಮುಖ ಆರ್ಥಿಕ ತಜ್ಞರೊಂದಿಗೆ ಮಾತುಕತೆ ನಡೆಸಲಿದ್ದು, ಆರ್ಥಿಕ ಪ್ರಗತಿ ಹಾಗೂ ಉದ್ಯೋಗಾವಕಾಶ ಸೃಷ್ಟಿಗೆ ಸಂಬಂಧಿಸಿದ ಮಾರ್ಗಸೂಚಿ ಸಿದ್ಧಪಡಿಸುವ ಕುರಿತು ಚರ್ಚಿಸಲಿದ್ದಾರೆ. ನೀತಿ ಆಯೋಗವು ಈ ಸಭೆ ಆಯೋಜಿಸಿದ್ದು, ವಿವಿಧ ಸಚಿವರು, ನೀತಿ ಆಯೋಗದ ಪದಾಧಿಕಾರಿಗಳು, ಖ್ಯಾತ ಅರ್ಥಶಾಸ್ತ್ರಜ್ಞರು, ವಿವಿಧ ವಲಯಗಳ ತಜ್ಞರು ಮತ್ತು ಕೈಗಾರಿಕೋದ್ಯಮಿಗಳು ಇದರಲ್ಲಿ ಭಾಗವಹಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next