Advertisement
ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ದೊಡ್ಡಕೊಪ್ಪಲು ಗ್ರಾಮದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಸೇನೆಯ ವತಿಯಿಂದ ಗ್ರಾಮದಲ್ಲಿ ಆಯೋಜಿಸಿದ್ದ ಸಂಗೊಳ್ಳಿರಾಯಣ್ಣ ಪ್ರತಿಮೆ ಉದ್ಘಾಟನಾ ಸಮಾರಂಭ ಇದಕ್ಕೆ ಸಾಕ್ಷಿಯಾಯಿತು.
ಜೊತೆಯಾಗೇ ಇರುತ್ತೇವೆ: ರಾಜಕೀಯ ಮತ್ತು ರಾಜಕಾರಣಿಗಳಲ್ಲಿ ವಿರೋಧ, ದ್ವೇಷ ಶಾಶ್ವತವಲ್ಲ. ಪಕ್ಷ ಮತ್ತು ಚುನಾವಣಾ ರಾಜಕಾರಣ ಬಂದಾಗ ತಾತ್ವಿಕ ವಿರೋಧ ಮಾಡಬೇಕೇ ಹೊರತು ಪರಸ್ಪರ ವೈರತ್ವ ಸಾಧಿಸಬಾರದು. ಹಾಗಾಗಿ ಸಮಾಜದ ಹಿತ ದೃಷ್ಟಿಯಿಂದ ನಾನು, ಸಿದ್ದರಾಮಯ್ಯ ಮತ್ತು ಕೆ.ಎಸ್.ಈಶ್ವರಪ್ಪ ಸದಾ ಜೊತೆಯಾಗಿರುತ್ತೇವೆ ಎಂದು ತಿಳಿಸಿದರು. ರಾಜಕೀಯ ಹೊರೆತು ಸ್ನೇಹಿತರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ನನ್ನ ಮತ್ತು ಸಿದ್ದರಾಮಯ್ಯನವರ ನಡುವೆ ರಾಜಕೀಯವಾಗಿ ಟೀಕೆ, ಟಿಪ್ಪಣಿ ಮತ್ತು ಬೈಗುಳ ಹಾಗೂ ವಾಗ್ವಾದ ನಡೆದಿರುವಷ್ಟು ಬೇರೆ ಯಾವುದೇ ರಾಜಕಾರಣಿಗಳ ನಡುವೆಯೂ ನಡೆದಿಲ್ಲ. ಆದರೆ ಅದು ನಮ್ಮಿಬ್ಬರ ನಡುವೆ ನಡೆದಿರುವುದು ನಮ್ಮ ಪಕ್ಷಗಳ ನಿಷ್ಠೆಯ ಮಾತುಗಳೇ ಹೊರತು ವೈಯಕ್ತಿಕವಲ್ಲ ಎಂದು ಸ್ಪಷ್ಟನೆ ನೀಡಿದರು.
Related Articles
Advertisement
ಅಭಿವೃದ್ಧಿಯಲ್ಲಿ ರಾಜೀಯಾಗಲ್ಲ: ಸಿದ್ದರಾಮಯ್ಯನವರನ್ನು ಹಾಡಿ ಹೊಗಳಿದ ಕೆ.ಎಸ್.ಈಶ್ವರಪ್ಪ ನನ್ನ ಮತ್ತು ವಿಪಕ್ಷ ನಾಯಕರ ನಡುವಿನ ಸ್ನೇಹ ಅಜರಾಮರವಾದುದ್ದು, ಅದನ್ನು ದೂರ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಅಭಿವೃದ್ಧಿ ವಿಚಾರದಲ್ಲಿ ನಾವು ರಾಜಿಯಾಗಲ್ಲ ಮತ್ತು ಇಂದು ನಾವು ಮೂವರು ಒಂದೇ ವೇದಿಕೆಯಲ್ಲಿ ಸೇರಿರುವುದು ಕೆಲವರಿಗೆ ಹೊಟ್ಟೆಯುರಿ ಬರುವಂತೆ ಮಾಡಿರ ಬಹುದು ಎಂದರು.
ನಂತರ ಮಾತನಾಡಿದ ಪಕ್ಷ ನಾಯಕ ಸಿದ್ದರಾಮಯ್ಯ, ನಾನು, ಅಡಗೂರು ಎಚ್.ವಿಶ್ವನಾಥ್ ಮತ್ತು ಕೆ.ಎಸ್.ಈಶ್ವರಪ್ಪ ಒಂದೇ ವೇದಿಕೆಯಲ್ಲಿ ಕುಳಿತು ತುಂಬಾ ದಿನಗಳಾಗಿತ್ತು. ಈಗ ಆ ಸಮಯ ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.
ರಾಜಕೀಯವಾಗಿ ವಿರೋಧ ಅಷ್ಟೇ: ರಾಜಕೀಯವಾಗಿ ವೈರತ್ವ ಶಾಶ್ವತವಲ್ಲ, ಆದ್ದರಿಂದ ವೈಯಕ್ತಿಕವಾಗಿ ಮಾನವೀಯ ಸಂಬಂಧಗಳನ್ನು ಬೆಳೆಸಿಕೊಳ್ಳಬೇಕು, ನಾನೇನು ಎಚ್.ವಿಶ್ವನಾಥ್ ಮತ್ತು ಈಶ್ವರಪ್ಪ ಅವರ ಜೊತೆ ಆಸ್ತಿ ಹಂಚಿಕೊಳ್ಳಬೇಕೆ ಎಂದು ಪ್ರಶ್ನಿಸಿದರಲ್ಲದೆ ರಾಜಕೀಯವಾಗಿ ವಿರೋಧ ಮಾಡಬೇಕೆ ಹೊರತು ವೈರತ್ವ ಬೆಳೆಸಿಕೊಳ್ಳಬಾರದು ಎಂದು ಹೇಳಿದರು.
ಈ ಮೂವರು ನಾಯಕರು ಒಂದೇ ವೇದಿಕೆಯಲ್ಲಿ ಕುಳಿತು ಪರಸ್ಪರ ಹೊಗಳಿಕೊಂಡಿದ್ದು, ನೆರೆದಿದ್ದ ಸಾವಿರಾರು ಮಂದಿಯನ್ನು ಆಶ್ಚರ್ಯಚಕಿತರನ್ನಾಗಿ ಮಾಡುವುದರ ಜತೆಗೆ ತಮ್ಮ ಸಮಾಜದ ಮೂವರು ದಿಗ್ಗಜ ರಾಜಕಾರಣಿಗಳ ವರ್ತನೆ ಅವರಲ್ಲಿ ಸಂತಸ ಉಂಟು ಮಾಡಿತು.
ಇತಿಹಾಸ ಪುರುಷರು ಯುವ ಪೀಳಿಗೆಗೆ ಸ್ಫೂರ್ತಿಕೆ.ಆರ್.ನಗರ: ಇತಿಹಾಸ ಪುರುಷರು ಮನುಷ್ಯನ ಜೀವನಕ್ಕೆ ಸ್ಫೂರ್ತಿ ಮತ್ತು ಪ್ರೇರಣೆಯಾಗಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ತಾಲೂಕಿನ ದೊಡ್ಡಕೊಪ್ಪಲು ಗ್ರಾಮದಲ್ಲಿ ನಡೆದ ಸಂಗೊಳ್ಳಿ ರಾಯಣ್ಣ ಪ್ರತಿಮೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಪ್ರತಿಯೊಬ್ಬರೂ ದೇಶಭಕ್ತಿಯನ್ನು ಬೆಳೆಸಿಕೊಂಡರೆ ದೇಶ ಅಖಂಡವಾಗಿರುತ್ತದೆ. ಆಗ ರಾಷ್ಟ್ರವನ್ನು ವಿಭಜಿಸಲು ಯಾರಿದಂಲೂ ಸಾಧ್ಯವಿಲ್ಲ ಎಂದರು. ಎಲ್ಲರೂ ತಮ್ಮ ಜಾತಿಯ ಹೆಸರನ್ನು ಹೆಮ್ಮೆಯಿಂದ ಹೇಳಿಕೊಂಡು ಸಮುದಾಯದ ಏಳಿಗೆಗೆ ಪರಸ್ಪರ ಸಂಘಟನಾ ಮನೋಭಾವನೆಯಿಂದ ದುಡಿಯಬೇಕು. ದೇಶಕ್ಕೆ ಸ್ವಾತಂತ್ರ ತಂದು ಕೊಡಲು ಹೋರಾಡಿ ತನ್ನ ಪ್ರಾಣ ತ್ಯಜಿಸಿದ ಸಂಗೊಳ್ಳಿ ರಾಯಣ್ಣ ಮಹಾನ್ ದೇಶಭಕ್ತ ಎಂದು ಬಣ್ಣಿಸಿದರು. ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿ ನೂರು ಎಕರೆ ಸರ್ಕಾರಿ ಭೂಮಿಯ ಜತೆಗೆ 262 ಕೋಟಿ ರೂ. ಅನುದಾನ ನೀಡಿದ್ದೆ ಎಂದು ಮಾಹಿತಿ ನೀಡಿದ ಸಿದ್ದರಾಮಯ್ಯ, ಈಗ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅನುದಾನದ ಕೊರತೆಯಿಂದ ಕಾಮಗಾರಿ ವಿಳಂಬವಾಗಿ ಸಾಗುತ್ತಿದೆ ಎಂದರು. ನನಗೆ ಯಾವಾಗಲೂ ಆರೋಗ್ಯ ಹದಗೆಟ್ಟಿಲ್ಲ ಎಂದು ಸ್ಪಷ್ಟನೆ ನೀಡಿದ ಸಿದ್ದರಾಮಯ್ಯ, 20 ವರ್ಷಗಳ ಹಿಂದೆ ಹೃದಯಕ್ಕೆ ಸ್ಟಂಟ್ ಹಾಕಿಸಿಕೊಂಡಿದ್ದೆ. ಈಗ ಅದು ಬ್ಲಾಕ್ ಆಗಿದ್ದರಿಂದ ಮತ್ತೂಮ್ಮೆ ಸ್ಟಂಟ್ ಹಾಕಿಸಿಕೊಂಡಿದ್ದೇನೆ ಅಷ್ಟೇ ಎಂದು ತಿಳಿಸಿದರು. ಕಾರ್ಯಕ್ರಮ ಆರಂಭಕ್ಕೂ ಮೊದಲು ದೊಡ್ಡಕೊಪ್ಪಲು ಗ್ರಾಮದ ಮುಖ್ಯ ವೃತ್ತದಲ್ಲಿ ನಿರ್ಮಿಸಿರುವ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಸಿದ್ದರಾಮಯ್ಯ, ಎಚ್.ವಿಶ್ವನಾಥ್ ಮತ್ತು ಕೆ.ಎಸ್.ಈಶ್ವರಪ್ಪ ಜೊತೆಗೂಡಿ ಉದ್ಘಾಟಿಸಿದರು. ಮಾಜಿ ಸಂಸದ ವಿರೂಪಾಕ್ಷಪ್ಪ, ಮಾಜಿ ಶಾಸಕರಾದ ಎಂ.ಕೆ.ಸೋಮಶೇಖರ್, ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ, ತಾಪಂ ಅಧ್ಯಕ್ಷ ಎಂ.ನಾಗರಾಜು, ಉಪಾಧ್ಯಕ್ಷೆ ಸಿದ್ದಮ್ಮದೇವರಾಜು, ಜಿಪಂ ಸದಸ್ಯರಾದ ಡಿ.ರವಿಶಂಕರ್, ಅಚ್ಯುತಾನಂದ, ಅಮಿತ್.ವಿ.ದೇವರಹಟ್ಟಿ, ಕಾಂಗ್ರೆಸ್ ವಕ್ತಾರೆ ಐಶ್ವರ್ಯಮಹದೇವ್, ಮಾಜಿ ಅಧ್ಯಕ್ಷ ಕೆ.ಮರಿಗೌಡ, ಕಾಂಗ್ರೆಸ್ ಮುಖಂಡರಾದ ಜೆ.ಜೆ.ಆನಂದ, ಗ್ರಾಪಂ ಅಧ್ಯಕ್ಷ ಡಿ.ರಾಜೇಗೌಡ ಸೇರಿದಂತೆ ಸಂಗೊಳ್ಳಿ ರಾಯಣ್ಣ ಯುವ ಸೇನೆಯ ಪದಾಧಿಕಾರಿಗಳು ಇದ್ದರು. ಸಚಿವ ಸ್ಥಾನದ ಬಗ್ಗೆ ವರಿಷ್ಠರು ನಿರ್ಧರಿಸುತ್ತಾರೆ
ಕೆ.ಆರ್.ನಗರ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ತನ್ನ ಅವಧಿಯನ್ನು ಪೂರ್ಣಗೊಳಿಸಲು ಸಹಕಾರ ನೀಡುವ ಉದ್ದೇಶದಿಂದ ರಾಜೀನಾಮೆ ನೀಡಿ ಪುನರಾಯ್ಕೆಯಾಗಿರುವ ಎಲ್ಲಾ ಶಾಸಕರಿಗೂ ಸಚಿವ ಸ್ಥಾನ ನೀಡುವ ವಿಚಾರದಲ್ಲಿ ಮುಖ್ಯಮಂತ್ರಿಗಳು ಮತ್ತು ಪಕ್ಷದ ವರಿಷ್ಠರು ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ನಿಗದಿತ ದಿನಾಂಕದಂದು ನಡೆಯದೆ ಪದೇ ಪದೆ ಮುಂದೆ ಹೋಗುತ್ತಿದೆಯಲ್ಲ ಎಂಬ ಸುದ್ಧಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ಶೀಘ್ರದಲ್ಲಿಯೇ ಎಲ್ಲವೂ ಸುಖಾಂತ್ಯಗೊಳ್ಳಲಿದೆ ಎಂದರು. ಉಪ ಚುನಾವಣೆಯಲ್ಲಿ ಸೋತವರಿಗೂ ಮಂತ್ರಿ ಸ್ಥಾನ ದೊರೆಯುವ ಬಗ್ಗೆ ಪ್ರಶ್ನಿಸಿದಾಗ ಇದಕ್ಕೆ ಸ್ಪಷ್ಟ ಉತ್ತರ ನೀಡದ ಸಚಿವರು ಅದನ್ನು ವರಿಷ್ಠರು ನಿರ್ಧರಿಸಲಿದ್ದಾರೆ ಎಂದರಲ್ಲದೆ ಈ ವಿಚಾರದಲ್ಲಿ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ತಿಳಿಸಿದರು. ಪ್ರವಾಸಿ ಮಂದಿರಕ್ಕೆ ಆಗಮಿಸಿದ ಸಚಿವರನ್ನು ಮಾಜಿ ಸಚಿವ ಎಚ್.ವಿಶ್ವನಾಥ್ ಮತ್ತು ತಾಲೂಕು ಬಿಜೆಪಿ ಅಧ್ಯಕ್ಷ ಹೊಸಹಳ್ಳಿವೆಂಕಟೇಶ್ ಮತ್ತಿತರ ಬಿಜೆಪಿ ಮುಖಂಡರು, ಕಾರ್ಯಕರ್ತರು ಸ್ವಾಗತಿಸಿದರು.