Advertisement

ಒಬಿಸಿ ಮನದಲ್ಲಿ ಕಮಲ ಅರಳಿಸಿದ ಸಮಾವೇಶ

06:05 PM Oct 31, 2022 | Team Udayavani |

ಕಲಬುರಗಿ: ಕಲ್ಯಾಣದ ನೆಲದಲ್ಲಿ ಹಿಂದುಳಿದ ವರ್ಗಗಳ ಮೊಟ್ಟಮೊದಲ ದಾಖಲೆ ವಿರಾಟ ಸಮಾವೇಶ ಭರ್ಜರಿಯಾಗಿ ನೆರವೇರಿದೆ. ನಿರೀಕ್ಷೆಗೂ ನೂರು ಜನ ಸೇರಿದ್ದು ಐತಿಹಾಸಿಕ. ಈ ಸಮಾವೇಶದ ಮೂಲಕ ಹಿಂದುಳಿದ ವರ್ಗಗಳನ್ನು ತೆಕ್ಕೆಗೆ ಸೆಳೆದುಕೊಂಡು ಅವರ ಎದೆಯಲ್ಲಿ ಬಿಜೆಪಿ ಗೂಡು ಕಟ್ಟಿದ್ದಂತು ದಿಟ.

Advertisement

ಅಚ್ಚರಿ ಎಂದರೆ ಕಾರ್ಯಕ್ರಮ ಮುಗಿಯುತ್ತಿದ್ದರೂ ಜನರಿನ್ನೂ ವೇದಿಕೆಯತ್ತ ಧಾವಿಸುತ್ತಲೇ ಇದ್ದರು. ಕೆಲವರಂತೂ ನೇರವಾಗಿ ಊಟಕ್ಕಾಗಿ ಮಾತೇ ಮಾಣಿಕೇಶ್ವರಿ ದಾಸೋಹ ಮನೆಯತ್ತ ಅವಸರದಿಂದಲೇ ಹೆಜ್ಜೆ ಹಾಕುತ್ತಿದ್ದರು. ಇವೆರಲ್ಲೂ ದೂರದ ಜಿಲ್ಲೆಗಳಿಂದ ನಸುಕಿನ ಜಾವ ಬಿಟ್ಟವರು. ಸಮಾವೇಶ ಮುಗಿಯುವ ಹೊತ್ತಿಗೆ ಯುದ್ಧದ ಸ್ಥಳಕ್ಕೆ ಬಂದವರಂತೆ ಲಗುಬಗೆಯಿಂದ ಊಟಕ್ಕೂ, ಭಾಷಣ ಕೇಳಿಲಿಕ್ಕೂ ಓಡಾಡಿದರು. ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಭಾಷಣ ಸಿಗಲಿಲ್ಲ. ಇನ್ನೂ ಕೆಲವರಿಗೆ ಭಾಷಣ ಸಿಕ್ಕಿತು, ಆದರೆ, ಊಟ ಸಿಗಲಿಲ್ಲ.

ಏಕೆಂದರೆ ಅದಾಗಲೇ ಸಮಯ 4 ಗಂಟೆಯಾಗಿತ್ತು. ಇಡೀ ಸಮಾವೇಶದಲ್ಲಿ ಬಂದ ಒಬಿಸಿಗಳ ಲೆಕ್ಕವೇ ಪಕ್ಕಾ ಆಗುತ್ತಿಲ್ಲ. ಬಿಜೆಪಿ ಮುಖಂಡರ ಪ್ರಕಾರ 3ಲಕ್ಷಕ್ಕೂ ಅಧಿಕ. ಪೊಲೀಸರ ಪ್ರಕಾರ 2ಲಕ್ಷಕ್ಕೂ ಅಧಿಕ. ಆದರೂ ವೇದಿಕೆ ಒಳಗೂ, ಹೊರಗೂ ಜನ ಏಕ ತೆರನಾಗಿ ಕಂಡು ಬಂದರು.

10ರಿಂದ ನಿರಂತರ ಊಟ: ಬೆಳಗ್ಗೆ 10 ಗಂಟೆಗೆ ಸಣ್ಣಗೆ ಊಟ ಆರಂಭವಾಗಿತ್ತು. 250 ಜನ ಬಾಣಸಿಗರು, 400 ಜನ ವ್ಯವಸ್ಥೆಗೆ ಟೊಂಕ ಕಟ್ಟಿ ನಿಂತಿದ್ದರು. ಬರೋಬ್ಬರಿ ಆರು ಗಂಟೆಗೆಳ ಕಾಲ ನಿರಂತರ ಊಟ ಬಡಿಸಲಾಗುತ್ತಿತ್ತು. 102 ಕೌಂಟರ್‌ಗಳಲ್ಲಿದ್ದವು. ಯಾವ ಕೌಂಟರ್‌ ಸನಿಹವಿದೆಯೋ ಅಲ್ಲಿಯೇ ಹೆಚ್ಚು ಜನ ನುಗ್ಗಿ ಬರುತ್ತಿದ್ದರು. ಪ್ರತಿಯೊಬ್ಬರಿಗೂ ಬಾಳೆ ತಟ್ಟೆಯಲ್ಲಿ ಮೊಸರನ್ನ, ಹುಗ್ಗಿ, ಪುಲಾವ್‌, ನೀರಿನ ಬಾಟಲಿ ನೀಡಲಾಗುತ್ತಿತ್ತು. ಕೈ ತೊಳೆಯಲು ಬೇರೆ ನೀರು
ಬಳಸುವಂತೆ, ಉಂಡ ತಟ್ಟೆ ವಾಹನಗಳಲ್ಲಿ ಹಾಕುವಂತೆ ಮತ್ತು ನೀರು, ಪರಿಸರ ಕಾಪಾಡಿಕೊಳ್ಳುವಂತೆ ಬಿಜೆಪಿ ಕಾರ್ಯಕರ್ತರು ನಿರಂತರವಾಗಿ ಧನಿವರ್ಧಕದಲ್ಲಿ ಮನವಿ ಮಾಡುತ್ತಲೇ ಇದ್ದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಆಹಾರ ಸಮಿತಿ ಅಧ್ಯಕ್ಷ ಲಿಂಗರಾಜ ಬಿರಾದಾರ, ಜಿಪಂ ಮಾಜಿ ಸದಸ್ಯ ರೇವಣಸಿದ್ಧಪ್ಪ ಸಂಕಾಲಿ, ಸಿದ್ದಣ್ಣಗೌಡ ದಮ್ಮೂರ್‌, ಗುರುಶಾಂತ ಪಾಟೀಲ ನಿಂಬಾಳ್‌, ಬಸವರಾಜ ಬಿರಾದಾರ ಹಾಗೂ ಎಂಟು ಮಂಡಲದ ಪ್ರಮುಖರು ಆಹಾರದ ಇಡೀ ವ್ಯವಸ್ಥೆ ನೋಡಿಕೊಂಡು ಸಮಾವೇಶ ಯಶಸ್ವಿ ಎನ್ನಿಸುವಲ್ಲಿ ತಮ್ಮ ಪಾಲು ದಾಖಲಿಸಿದ್ದಾರೆ.

Advertisement

ಗಮನ ಸೆಳೆದ ವೇದಿಕೆ: ಇಡೀ ಸಮಾವೇಶದಲ್ಲಿ ಊಟದಷ್ಟೇ ಗಮನ ಸೆಳೆದದ್ದು ವೇದಿಕೆ. ಇದಂತೂ ಪಕ್ಕಾ ಒಬಿಸಿಗಳಿಗೆ ಹಿಡಿದಿಡಲು ಮಾಡಿದಂತಿತ್ತು. ಕೋಲಿ, ಕಬ್ಬಲಿಗ, ಮರಾಠ, ಕುರುಬ, ಅಲೆಮಾರಿ, ಮಡಿವಾಳ, ಮೋಚಿಗಳು, ಹೂಗಾರ, ದರ್ಜಿಗಳು, ಸಿಕ್ಕಲಿಗರು, ಕಮ್ಮಾರ, ಕುಂಬಾರ, ಗಾಣಿಗ, ನೇಕಾರ ಸಮಾಜದ ಆದರ್ಶ ಪುರುಷರು, ಮಹಿಳೆಯರು ಕಾಯಕ ಮಾಡುವ ಭಾವಚಿತ್ರಗಳನ್ನು ವೇದಿಕೆ ಮುಂಭಾಗದಲ್ಲಿ ಕಟ್ಟಲಾಗಿತ್ತು. ಪ್ರಮುಖ ಆಕರ್ಷಣೆಯಾಗಿತ್ತು.

ಗಣ್ಯರು, ಮುಖ್ಯಮಂತ್ರಿಗಳು ಬರುವ ದ್ವಾರಕ್ಕೆ ಕನಕಗುರು ದ್ವಾರ, ದಾಸೋಹ ಮನೆಗೆ ಮಾತೆ ಮಾಣಿಕೇಶ್ವರಿ ಹೆಸರು, ಮುಖ್ಯ ವೇದಿಕೆಗೆ ಶಿವಾಜಿ ಮಹಾರಾಜ್‌ ಸಭಾ ಭವನ ಎಂತಲೂ ಎಲ್ಲವೂ ಒಬಿಸಿಮಯವಾಗುವಂತೆ ತುಂಬಾ ಎಚ್ಚರಿಕೆಯಿಂದ ನೋಡಿಕೊಂಡಿರುವುದು ಪ್ರತಿಯೊಂದು ಸಮಾಜದ ಎದೆ ಗೂಡು ಬಿಜೆಪಿಯ ಕೆಲಸಕ್ಕೆ ಹಚ್ಚುವಂತೆ ಮಾಡಿದ್ದು ವೇದಿಕೆ ಸಮಿತಿ ಅಧ್ಯಕ್ಷ ಹಾಗೂ ಶಾಸಕ ದತ್ತಾತ್ರೇಯ ಪಾಟೀಲ ರೇವೂರ್‌, ಮಹಾದೇವ ಬೆಳಮಗಿ, ಶ್ರೀನಿವಾಸ ದೇಸಾಯಿ, ನಗರ ಬಿಜೆಪಿ ಅಧ್ಯಕ್ಷ ಸಿದ್ಧಾಜಿ ಪಾಟೀಲ ಹಾಗೂ 10 ಮಂಡಲ ಪ್ರಮುಖರು ವೇದಿಕೆ ರೂಪಿಸಿರುವ ರೂವಾರಿಗಳು.

ಪೊಲೀಸ್‌ ಭದ್ರತೆಯೂ ಸೈ: ಇಡೀ ಸಮಾವೇಶದ ವೇದಿಕೆ, ಊಟದ ಮನೆ, ರಸ್ತೆ, ಮೂರು ಕಡೆಗಳ ಪಾರ್ಕಿಂಗ್‌, ಸಮಾವೇಶ ನಡೆದ ಪ್ರದೇಶದಲ್ಲಿನ ಪೊಲೀಸ್‌ ಬಂದೋಬಸ್ತ್ ಸೂಕ್ತವಾಗಿತ್ತು. ಎಲ್ಲೆಡೆ ಪೊಲೀಸರು ಮತ್ತು ಬಿಜೆಪಿ ಕಾರ್ಯಕರ್ತರು ಬಂದ ಅತಿಥಿಗಳಿಗೆ ದಾರಿ ತೋರಿಸುವುದು, ವೇದಿಕೆ ಒಳಗೆ ಬಿಡಲು ಎಲ್ಲೆಡೆ ಮೆಟಲ್‌ ಡಿಟೆಕ್ಟರ್‌ ಅಳವಡಿಸಿ ಪ್ರತಿಯೊಬ್ಬರನ್ನು ಪರೀಕ್ಷೆ ಮಾಡಲಾಗುತ್ತಿತ್ತು. ಕಪ್ಪು ಬಣ್ಣದ ಸಾಕ್ಸ್‌ ಸೇರಿದಂತೆ ಯಾವುದೇ ವಸ್ತು ಇರಲಿ ಅದನ್ನು ಪೊಲೀಸರು ವಶಪಡಿಸಿಕೊಳ್ಳುತ್ತಿದ್ದರು. ಪರದೆ ಮರೆಯ ಚಿಕ್ಕ ತಾತ್ಕಾಲಿಕ ಕೋಣೆಯಲ್ಲಿ ಮಹಿಳೆಯರ ತಪಾಸಣೆ ಮಾಡಿ ಒಳಗೆ ಬಿಡಲಾಗುತ್ತಿತ್ತು. ಸಮಾವೇಶಕ್ಕೆ ಬರುವ ನಾಲ್ಕು ರಸ್ತೆಗಳಲ್ಲಿ ಪಾರ್ಕಿಂಗ್‌, ಜನರ ಓಡಾಟದಲ್ಲಿ ಸಂಚಾರಿ ಪೊಲೀಸರ ಪಾತ್ರವೂ ಪ್ರಶಂಸನೀಯ. ಪ್ರಮುಖವಾಗಿ ಮುಖ್ಯ ವೇದಿಕೆಗೆ 150 ಜನರಿಗೆ ಆಸನಗಳಿತ್ತು. ಅದಕ್ಕಿಂತ ಹೆಚ್ಚು ಒಳಗೆ ಬಂದಿದ್ದರೆ ತೊಂದರೆ ಮತ್ತು ಆಭಾಸ ಖಂಡಿತ ಆಗುತ್ತಿತ್ತು. ಆದರೆ, ಪಿಐ ತಿಗಡಿ, ಮಹಿಳಾ ಅಧಿಕಾರಿಗಳ ಬಿಗಿ ಕ್ರಮ ನಿಜಕ್ಕೂ ಶ್ಲಾಘನೀಯ.
*ಸೂರ್ಯಕಾಂತ ಎಂ.ಜಮಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next