ಬೆಂಗಳೂರು: ನಿಜಶರಣ ಅಂಬಿಗರ ಚೌಡಯ್ಯ ರಚಿಸಿರುವ ವಚನಗಳನ್ನು ಕ್ರೋಢೀಕರಿಸಿ ಸರ್ಕಾರದಿಂದಲೇ ಸಮಗ್ರ ಸಂಪುಟ ಪ್ರಕಟಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎನ್.ಆರ್.ವಿಶುಕುಮಾರ್ ಹೇಳಿದ್ದಾರೆ.
ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಉದ್ಘಾಟಿಸಿ ಮಾತನಾಡಿ, ಅಂಬಿಗರ ಚೌಡಯ್ಯ ಸಾವಿರಕ್ಕೂ ಅಧಿಕ ವಚನಗಳನ್ನು ರಚಿಸಿದ್ದು, ಅದರಲ್ಲಿ 350ಕ್ಕೂ ಅಧಿಕ ವಚನಗಳು ಲಭ್ಯವಿದೆ.
ಸುಮಾರು 500 ವಚನಗಳನ್ನು ಕ್ರೋಢೀಕರಿಸಿ, ಒಂದು ವರ್ಷದೊಳಗೆ ಸಮಗ್ರ ಸಂಪುಟವನ್ನು ಪ್ರಕಟಿಸಲಾಗುವುದು. ಅಂಬಿಗರ ಚೌಡಯ್ಯರ ಆಧ್ಯಾತ್ಮಿಕ ಮತ್ತು ವೈಚಾರಿಕ ಚಿಂತನೆಗಳನ್ನು ದಾಖಲಿಸಲಾಗುವುದು. ಇದಕ್ಕಾಗಿ ಅಂಬಿಗರ ವಚನದ ಬಗ್ಗೆ ಅಧ್ಯಯನ ಮಾಡಿದವರ ಸಭೆ ಕರೆದು ಚರ್ಚೆ ಮಾಡಲಿದ್ದೇವೆ ಎಂದರು.
ಅಂಬಿಗರ ಚೌಡಯ್ಯನವರು ಹೇಳಿದಂತೆ ಆಂತರ್ಯದಲ್ಲಿ ಕೀಳು ಭಾವನೆ ಬಿಟ್ಟು, ಸ್ವಾಭಿಮಾನದಿಂದ ಬದುಕಬೇಕು. ಅಂಬಿಗರ ಚೌಡಯ್ಯನವರು ಸಮಾಜದ ತೊಡಕನ್ನು ನಿರ್ಭೀತವಾಗಿ ಗಟ್ಟಿತನದಿಂದ ಹೇಳಿದ್ದಾರೆ ಎಂದು ತಿಳಿಸಿದರು.
ಹಾವೇರಿ ನರಸೀಪುರದ ನಿಜಶರಣ ಅಂಬಿಗರ ಚೌಡಯ್ಯ ಪೀಠದ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಮಾತನಾಡಿ, ಹೆಣ್ಣು, ಹೊನ್ನು ಮತ್ತು ಮಣ್ಣಿಗಾಗಿ ಜಗತ್ತಿನಾದ್ಯಂತ ಕ್ರಾಂತಿ ನಡೆದಿದೆ. ಆದರೆ, 12ನೇ ಶತಮಾನದ ಕನ್ನಡ ಸಂತರು ವಚನಗಳ ಮೂಲಕ ಸಮಾಜ ಸುಧಾರಣೆ, ಕಾಯಕ, ದಾಸೋಹ ಮತ್ತು ಸಮಾನತೆಯ ಕ್ರಾಂತಿ ಮಾಡಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೂ ಮುನ್ನ, ಅಂಬಿಗರ ಚೌಡಯ್ಯ ಜಯಂತಿಯ ಅಂಗವಾಗಿ ಸ್ವಾತಂತ್ರ್ಯ ಉದ್ಯಾನವನದಿಂದ ರವೀಂದ್ರಕಲಾ ಕ್ಷೇತ್ರದವರೆಗೆ ಅಂಬಿಗರ ಚೌಡಯ್ಯ ಅವರ ಭಾವಚಿತ್ರದೊಂದಿಗೆ ಜಾನಪದ ತಂಡಗಳ ಮೆರವಣಿಗೆ ನಡೆಯಿತು.
ಸಚಿವರ ಅನುಪಸ್ಥಿತಿಗೆ ಅಸಮಾಧಾನ: ಅಂಬಿಗರ ಚೌಡಯ್ಯ ಕುರಿತು ಉಪನ್ಯಾಸ ಮಾಡಿದ ಲೇಖಕ ಡಾ.ಎಸ್.ಕೆ.ಮೇಲಕಾರ್, ಗಂಗಾಮತಸ್ಥರಿಗೆ ಕೃಷಿ ಮಾಡಲು ಜಾಗವಿಲ್ಲ, ಸತ್ತರೆ ಮಣ್ಣು ಮಾಡಲು ಅಂಗೈ ಅಗಲ ಜಾಗ ಕೊಟ್ಟಿಲ್ಲ. ಸರ್ಕಾರದಿಂದ ಕಾರ್ಯಕ್ರಮ ಆಯೋಜಿಸಿರುವುದು ಸ್ವಾಗತಾರ್ಹ. ಆದರೆ, ನಮ್ಮ ಮನವಿ ಕೇಳಲು ಸಚಿವರೇ ಬಂದಿಲ್ಲ ಎಂದು ಸಚಿವೆ ಉಮಾಶ್ರೀ ಗೈರು ಹಾಜರಿಗೆ ಬೇಸರ ವ್ಯಕ್ತಪಡಿಸಿದರು.