ಕಲಬುರಗಿ: ರಾಜ್ಯದಲ್ಲಿರುವ ಎಲ್ಲ ಕೆರೆಗಳನ್ನು ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೊಳಪಡಿಸಿ ಅಭಿವೃದ್ಧಿಗೊಳಿಸಲು ಕೆರೆ ಅಭಿವೃದ್ಧಿ ಪ್ರಾಕಾರ ರಚನೆಗೆ ಒಂದು ವಾರದಲ್ಲಿ ಸಮಗ್ರ ಕಾನೂನು ತಿದ್ದುಪಡಿ ಮಾಡಲಾಗುವುದು ಎಂದು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಖಾತೆ ಸಚಿವ ಟಿ.ಬಿ. ಜಯಚಂದ್ರ ಹೇಳಿದರು.
ಆಳಂದ ತಾಲೂಕು ಮಾದನ ಹಿಪ್ಪರಗಾ ಗ್ರಾಮದಲ್ಲಿ ಅಂತರ್ಜಲ ಅಭಿವೃದ್ಧಿಪಡಿಸುವ ವಿಶೇಷ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಕೆರೆ ಅಭಿವೃದ್ಧಿ ಪ್ರಾಧಿಕಾರ ರಚಿಸಿದ್ದು ಐತಿಹಾಸಿಕ ಮತ್ತು ದಿಟ್ಟ ನಿರ್ಧಾರವಾಗಿದೆ. ಕೆರೆಗಳ ಜೀರ್ಣೋದ್ಧಾರ, ಒತ್ತುವರಿ ತೆರವುಗೊಳಿಸಿ ಕೆರೆ ಉಳಿಸಬೇಕಾಗಿದೆ.
ಇದಕ್ಕಾಗಿ ಕೆರೆ ಅಭಿವೃದ್ಧಿಗಾಗಿ ಸಲಹಾ ಸಮಿತಿ ರಚಿಸಲಾಗುವುದು. ಕೆರೆ ಅಭಿವೃದ್ಧಿ ಸಂಘಗಳಿಗೆ ಕೆರೆ ಹೂಳೆತ್ತುವ ಜವಾಬ್ದಾರಿ ವಹಿಸಲಾಗುವುದು. ರಾಜ್ಯದಲ್ಲಿ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೊಳಪಡುವ 1251 ಕೆರೆಗಳ ಹೂಳು ತೆಗೆಯಲು 60 ಕೋಟಿ ರೂ. ಈಗಾಗಲೇ ನೀಡಲಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಈ ಹಿಂದೆ ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ ಒಟ್ಟು 36,000 ಕೆರೆಗಳಿದ್ದವು. ಎಲ್ಲ ಗ್ರಾಪಂಗಳಿಂದ ಕೆರೆಗಳ ವರದಿ
ತರಿಸಿಕೊಂಡು ಕ್ರೂಢೀಕರಿಸಿದಾಗ ಕೇವಲ 29,000 ಕೆರೆಗಳು ಆಸ್ತಿತ್ವದಲ್ಲಿವೆ. ಇನ್ನೂಳಿದ 7000 ಕೆರೆಗಳ ಮಾಹಿತಿ ಲಭ್ಯವಾಗುತ್ತಿಲ್ಲ. ಕೆರೆ ಉಳಿದರೆ ಮಾತ್ರ ಮನುಷ್ಯನಿಗೆ ಉಳಿವಿದೆ ಎಂದು ಹೇಳಿದರು.