ಗಂಗಾವತಿ: ಶೈಕ್ಷಣಿಕ ಬದಲಾವಣೆಗಾಗಿ ರಾಜ್ಯ ಸರಕಾರ ಹಲವು ಯೋಜನೆಗಳನ್ನು ಅನುಷ್ಠಾನ ಮಾಡುತ್ತಿದ್ದು, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗೆ ಭರ್ತಿ ಮಾಡಲಾಗುತ್ತಿದೆ. ಶೈಕ್ಷಣಿಕ ವ್ಯವಸ್ಥೆಯನ್ನು ಪೂರ್ವಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗವಾಗಿ ವಿಂಗಡಿಸಿ ಆಯಾ ವಿಭಾಗದಲ್ಲಿ ಖಾಲಿ ಇರುವ ಹುದ್ದೆ ಭರ್ತಿಗೆ ಕ್ರಮಕೈಗೊಳ್ಳಲಾಗಿದೆ. 2016-17ರಲ್ಲಿ ಖಾಲಿ ಇದ್ದ 3000 ಕಲಾ, ವಿಜ್ಞಾನ ಭಾಷಾ ವಿಷಯ ಶಿಕ್ಷಕರ ನೇಮಕಾತಿಗಾಗಿ ಪ್ರಕಟಣೆ ಹೊರಡಿಸಲಾಗಿತ್ತು. ಸಿಇಟಿ ಪರೀಕ್ಷೆಯಲ್ಲಿ ಕಡಿಮೆ ಅಭ್ಯರ್ಥಿಗಳು ಉತ್ತೀರ್ಣರಾಗಿದ್ದರಿಂದ 2017-18ರಲ್ಲಿ ಉಳಿದ ಹುದ್ದೆಗಳನ್ನು ಸೇರ್ಪಡೆ ಮಾಡಿ 10,700 ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಹೊರಡಿಸಲಾಯಿತು. ಸಿಇಟಿ ಪರೀಕ್ಷೆಯಲ್ಲಿ 2,700 ಜನ ಕಲಾ ಮತ್ತು ಕನ್ನಡ ವಿಷಯದ ಅಭ್ಯರ್ಥಿಗಳು ಅರ್ಹತೆ ಪಡೆದು 8000 ಹುದ್ದೆಗಳು ಪುನಃ ಖಾಲಿ ಉಳಿದವು. ಇದರಲ್ಲಿ ಕಲ್ಯಾಣ (ಹೈಕ) ಕರ್ನಾಟಕದಲ್ಲಿ ಸುಮಾರು 5000 ಹುದ್ದೆಗಳು ಭರ್ತಿಯಾಗದೇ ಉಳಿದಿವೆ. ಮೂರು ವರ್ಷಗಳಿಂದ ಟಿಜಿಟಿ ಅರ್ಹತೆ ಪಡೆದ ಶಿಕ್ಷಕರು ಖಾಲಿ ಇರುವ ವಿಜ್ಞಾನ ಮತ್ತು ಆಂಗ್ಲಭಾಷೆ ಹುದ್ದೆಗಳಿಗೆ ನೇಮಕವಾಗುತ್ತಿಲ್ಲ. ಇದರಿಂದ ರಾಜ್ಯದ ಬಹುತೇಕ ಪ್ರೌಢಶಾಲೆಗಳಲ್ಲಿ ವಿಜ್ಞಾನ ಮತ್ತು ಇಂಗ್ಲಿಷ್ ಶಿಕ್ಷಕರ ಹುದ್ದೆಗಳು ಖಾಲಿ ಇವೆ.
ಆಯ್ಕೆ ವಿಧಾನ ಅವೈಜ್ಞಾನಿಕ: 6-8ನೇ ತರಗತಿ ಶಿಕ್ಷಕರ ನೇಮಕ ಪ್ರಕ್ರಿಯೆ ಅವೈಜ್ಞಾನಿಕವಾಗಿದೆ ಎಂದು ಅಭ್ಯರ್ಥಿಗಳ ಆರೋಪವಾಗಿದೆ. ಟಿಇಟಿ ಪರೀಕ್ಷೆ ಬರೆದು ಅರ್ಹರಾದವರು ಮಾತ್ರ ಶಿಕ್ಷಕ ಹುದ್ದೆಗಳ ನೇಮಕಾತಿಯ ಸಿಇಟಿಗೆ ಪರೀಕ್ಷೆಗೆ ಅರ್ಜಿ ಸಲ್ಲಿಸಿರುತ್ತಾರೆ. ಪ್ರಸ್ತುತ ಸಿಇಟಿ ಪರೀಕ್ಷೆಯ ಪಠ್ಯ ಎನ್‌ಸಿಆರ್‌ಟಿ ವಿಷಯಗಳನ್ನೊಳಗೊಂಡಿದೆ. ಬಹು ಆಯ್ಕೆಯ 50 ಅಂಕಗಳ ಪ್ರಶ್ನೆ, ವಿವರಣಾತ್ಮಕ 100 ಅಂಕಗಳ ಪ್ರಶ್ನೆಗಳಿದ್ದು, ಅಭ್ಯರ್ಥಿಗಳು ಸಿಇಟಿ ಪರೀಕ್ಷೆಯಲ್ಲಿ ಶೇ. 50ಕ್ಕಿಂತ (75 ಅಂಕಕ್ಕಿಂತ) ಕಡಿಮೆ ಅಂಕ ಪಡೆದರೆ ಅವರು ನೇಮಕಾತಿ ಆಗುವುದಿಲ್ಲ. ಇದರಿಂದ 2016ರಿಂದ ಇಲ್ಲಿಯ ತನಕ 10700 ಹುದ್ದೆಗಳ ಪೈಕಿ ಕೇವಲ 2700 ಹುದ್ದೆ ಮಾತ್ರ ಭರ್ತಿಯಾಗಿವೆ.
ಹುಸಿಯಾದ ಭರವಸೆ: 6-8ನೇ ತರಗತಿ ಬೋಧನೆ ಮಾಡಲು ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಅವೈಜ್ಞಾನಿಕವಾಗಿದ್ದು ಇದನ್ನು ಬದಲಿಸುವಂತೆ 2016ರಿಂದ ಸಿಇಟಿ ಪರೀಕ್ಷೆ ಬರೆದ ಅಭ್ಯರ್ಥಿಗಳು ರಾಜ್ಯ ಸರಕಾರವನ್ನು ಒತ್ತಾಯಿಸುತ್ತ ಬಂದಿದ್ದಾರೆ. 2018ರಲ್ಲಿ ಅಂದಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸಿಇಟಿ ಪರೀಕ್ಷೆ ಅರ್ಹತೆ ಬದಲಿಗೆ ಟಿಇಟಿ ಮತ್ತು ಸಿಇಟಿ ಮೇರಿಟ್ ಆಧಾರದಲ್ಲಿ ನೇಮಕಾತಿ ಮಾಡುವ ಭರವಸೆ ನೀಡಿ ನಂತರ ಅದನ್ನು ಅನುಷ್ಠಾನಗೊಳಿಸಲು ಮರೆತರು.
2016ರಿಂದ ಕಲ್ಯಾಣ(ಹೈದ್ರಾಬಾದ್)ಕರ್ನಾಟಕದಲ್ಲಿ ವಿಜ್ಞಾನ ಮತ್ತು ಆಂಗ್ಲಭಾಷೆ ವಿಷಯದ ಸುಮಾರು 5000 ಹುದ್ದೆಗಳು ಖಾಲಿ ಇದ್ದು, ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಸರಕಾರ ವಿಫಲವಾಗುತ್ತಿದೆ. ಸರಕಾರ ಮಾನವೀಯತೆ ಆಧಾರದಲ್ಲಿ ಕೂಡಲೇ ಟಿಇಟಿ ಉತ್ತೀರ್ಣರಾಗಿ ಸಿಇಟಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿದ ಅಭ್ಯರ್ಥಿಗಳನ್ನು ನೇಮಕ ಮಾಡುವ ಮೂಲಕ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮಕೈಗೊಳ್ಳಬೇಕು.
•ಕೆ. ನಿಂಗಜ್ಜ