Advertisement

ಅಷ್ಟಾಂಗಗಳನ್ನೂ ಅಭ್ಯಸಿಸಿದಾಗಲೇ ಯೋಗ‌ ಪರಿಪೂರ್ಣ

11:15 AM Jul 02, 2019 | keerthan |

ಬಂಟ್ವಾಳ: ಪ್ರಸ್ತುತ ಆಸನ-ಪ್ರಾಣಾಯಾಮ ಮಾತ್ರ ಯೋಗ ಎಂಬ ಭಾವನೆ ಇದೆ. ಇದನ್ನು ಗುರುಗಳು ಕಲಿಸುವ ಕಾರಣ ಯೋಗ ಎಂದರೆ ಅಷ್ಟೇ ಎಂದು ಬಹುತೇಕರು ತಿಳಿದು ಕೊಂಡಿರುವುದು. ಆದರೆ ಹಾಗಲ್ಲ; ಯೋಗಾಭ್ಯಾಸ ಪೂರ್ಣ ಎಂದೆನಿಸಿಕೊಳ್ಳುವುದು ಅಷ್ಟಾಂಗ ಯೋಗವನ್ನು ಅಭ್ಯಾಸ ಮಾಡಿದಾಗಲಷ್ಟೇ.

Advertisement

ಅಷ್ಟಾಂಗ ಯೋಗ ಎಂದರೆ ಯೋಗದ ಎಂಟು ಅಂಗಗಳು ಅಥವಾ ಹಂತಗಳು- ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿ. ಇವಿಷ್ಟನ್ನು ನಮ್ಮ ಜೀವನದಲ್ಲಿ ಅಳವಡಿಸಿ ಅನುಷ್ಠಾನಗೊಳಿಸಿದಾಗ ಯೋಗ ಜೀವನವಾಗುತ್ತದೆ, ಯೋಗಾಭ್ಯಾಸವೂ ಪರಿಪೂರ್ಣವಾಗುತ್ತದೆ. ಪ್ರಾಣಾಯಾಮ-ಧ್ಯಾನ ಯೋಗಾಂಗ ಮಾತ್ರ.

ಈ ಎಂಟು ಹಂತಗಳನ್ನು ಕ್ರಮಪ್ರಕಾರವಾಗಿ ಅಧ್ಯಯನ-ಅನುಷ್ಠಾನ ಮಾಡುತ್ತ ಬರಬೇಕು. ಪ್ರಾರಂಭಿಕ ಹಂತಗಳಾದ ಯಮ-ನಿಯಮ ಇಡಿಯ ಜೀವನಕ್ಕೇನೇ ಚೌಕಟ್ಟು ಹಾಕಿಕೊಡುವಂಥವು. ಸಮಾಜದ ಜತೆ ನಾವು ಹೇಗೆ ವರ್ತಿಸಬೇಕು, ನಮ್ಮನ್ನು ನಾವು ಹೇಗೆ ಬೆಳೆಸಬೇಕು ಎಂಬುದೇ ಯಮ-ನಿಯಮ.

ಅಷ್ಟಾಂಗ ಯೋಗದ ಮೂರನೇ ಹಂತ ಆಸನ- ಪ್ರಾಣಾಯಾಮ. ಇದು ಗುರುಮುಖೇನ ಕಲಿಯುವಂಥದ್ದು. ಇವುಗಳ ಅಭ್ಯಾಸ ಸಂದರ್ಭದಲ್ಲಿ ಬಹಳ ಶ್ರದ್ಧೆ-ಭಕ್ತಿಯಿಂದ ಗುರುವಿನ ಮಾರ್ಗದರ್ಶನವನ್ನು ಪಾಲಿಸಬೇಕಾಗುತ್ತದೆ. ಆದರೆ ಈಚೆಗಿನ ದಿನಗಳಲ್ಲಿ ಯೋಗ ಎಂದರೆ ಇಷ್ಟೇ ಎಂಬ ಭಾವನೆ ಹೆಚ್ಚಿನವರಲ್ಲಿದೆ.

ಇಷ್ಟನ್ನು ಕಲಿತು ಯೋಗಾಭ್ಯಾಸ ಪರಿಪೂರ್ಣವಾಯಿತು ಎಂದು ಭಾವಿಸುವವರೂ ಇದ್ದಾರೆ. ಅಷ್ಟಾಂಗ ಯೋಗದ ಅನಂತರದ ಎರಡು ಹಂತ
ಗಳು ಪ್ರತ್ಯಾಹಾರ, ಧಾರಣ. ಇವು ತಾವಾಗಿ ಬರುವಂಥವು. ಇದು ನಮ್ಮ ಮನಸ್ಸು ಬೆಳವಣಿಗೆ ಹೊಂದಿ ಯೌಗಿಕ ಸಂಸ್ಕಾರ ಪಡೆಯುವ ಹಂತ. ಇಲ್ಲಿ ಗುರುಗಳಿಂದ ಮಾರ್ಗದರ್ಶನ ಪಡೆಯಬಹುದು. ಇದನ್ನು ಅಂತರಂಗ ಯೋಗ ಎಂದು ಕರೆಯುತ್ತಾರೆ.

Advertisement

ಯೋಗಾಭ್ಯಾಸ ಪೂರ್ಣಗೊಳ್ಳಬೇಕಾದರೆ ನಾವು ಯೋಗದ ಸಮಾಧಿ ಹಂತವನ್ನು ತಲುಪಬೇಕಾಗುತ್ತದೆ. ನಾವು ಈ ಹಂತಕ್ಕೆ ತಲುಪಿದಾಗ ಮನಸ್ಸು ಸಮತ್ವಕ್ಕೆ ಬರುತ್ತದೆ. ಸುಖ-ದುಃಖವನ್ನು ಸಮಾನವಾಗಿ ಸ್ವೀಕರಿಸುವ ಶಕ್ತಿಯನ್ನು ಸಮಾಧಿ ನೀಡುತ್ತದೆ. ಈ ಸ್ಥಿತಿಯನ್ನು ತಲುಪಿದಾಗ ಜೀವನದ ಯಾವುದೇ ಸವಾಲು ಎದುರಿಸುವ ಶಕ್ತಿ ಒದಗುತ್ತದೆ.

ನಾವು ಪುನರ್‌ಜನ್ಮವನ್ನು ನಂಬುತ್ತೇವೆ. ಅದರಂತೆ ಹಿಂದಿನ ಜನ್ಮದಲ್ಲಿ ಮಾಡಿದ ಯೋಗಾಭ್ಯಾಸದ ಫಲ ಉಳಿದಿದ್ದರೆ ಅಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿದರೂ ಅದು ಪರಿಪೂರ್ಣವಾಗಲೂಬಹುದು. ರಮಣ ಮಹರ್ಷಿಗಳು, ರಾಮಕೃಷ್ಣ ಪರಮಹಂಸರೇ ಮೊದಲಾದವರು ತಮ್ಮ ಪೂರ್ವಜನ್ಮದ ಸಾಧನೆ, ಸಂಸ್ಕಾರದ ಫಲದಿಂದ ಯೋಗ ಸಮಾಧಿ ಹಂತಕ್ಕೆ ತಲುಪಿದವರು. ಹೀಗಾಗಿ ಪ್ರಾಣಾಯಾಮ-ಧ್ಯಾನದ ಜತೆಗೆ ಇತರ ಹಂತಗಳು ಕೂಡ ಪ್ರಮುಖ. ಅವನ್ನು ಅಭ್ಯಾಸ ಮಾಡಿ ಅನುಷ್ಠಾನಕ್ಕೆ ತಂದಾಗಲಷ್ಟೇ ಅಷ್ಟಾಂಗ ಯೋಗ ಸಿದ್ಧಿಯಾಗುತ್ತದೆ.

ಡಾ| ರಘುವೀರ್‌ ಅವಧಾನಿ
ಬಾಲ್ಯದಿಂದಲೇ ಯೋಗಾಭ್ಯಾಸದಲ್ಲಿ ತೊಡಗಿರುವ ಡಾ| ರಘುವೀರ್‌ ಅವಧಾನಿಯವರು 15 ವರ್ಷಗಳಿಂದ ಯೋಗವನ್ನು ಕಲಿಸುತ್ತಿದ್ದಾರೆ. ಮೂಲತಃ ಉಡುಪಿಯ ಕಲ್ಯಾಣಪುರದವರಾಗಿರುವ ಅವರು 30 ವರ್ಷಗಳಿಂದ ಮಂಗಳೂರಿನಲ್ಲಿ ನೆಲೆಸಿದ್ದಾರೆ. ಆಯುರ್ವೇದ ವೈದ್ಯರೂ ಆಗಿದ್ದು, ಶ್ರೀ ಯೋಗನಿಧಿ ಪತಂಜಲಿ ಪ್ರತಿಷ್ಠಾನದ ಪ್ರಧಾನ ಯೋಗ ಸಂವಾಹಕರಾಗಿ ಸೇವೆ ಮಾಡುತ್ತಿದ್ದಾರೆ. 2015ರಿಂದ ಬಂಟ್ವಾಳದಲ್ಲಿಯೂ ಯೋಗ ಕಲಿಸುತ್ತಿದ್ದು, ಜತೆಗೆ ಹಲವಾರು ಊರುಗಳಿಗೆ ತೆರಳಿ ಯೋಗ ಶಿಬಿರಗಳನ್ನು ಏರ್ಪಡಿಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next