Advertisement

ಉತ್ತಮ ಸೇವೆಯ ಮೂಲಕ ಹಾಲು ಉತ್ಪಾದನೆ ಹೆಚ್ಚಿಸಿಕೊಂಡ ಸಂಸ್ಥೆ

11:45 PM Feb 22, 2020 | mahesh |

ಸಾಸ್ತಾನ ಸಮೀಪದ ಮೂಡಹಡು ಹಾಗೂ ಗುಂಡ್ಮಿ ಗ್ರಾಮಗಳ ಹೈನುಗಾರರ ಸಂಸ್ಥೆಯಾಗಿರುವ ಚೇಂಪಿ ಹಾಲು ಉತ್ಪಾದಕರ ಸಂಘ ಸಣ್ಣ ವ್ಯಾಪ್ತಿಯನ್ನು ಹೊಂದಿದ್ದರೂ ಕೋಟ ಹೋಬಳಿಯಲ್ಲಿ ಅತಿ ಹೆಚ್ಚು ಹಾಲು ಉತ್ಪಾದನೆ ಮಾಡುವ ಸಂಘಗಳಲ್ಲಿ ಮುಂಚೂಣಿಯಲ್ಲಿದೆ.

Advertisement

ಕೋಟ: ರೈತರನ್ನು ಹೈನುಗಾರಿಕೆಯ ಮೂಲಕ ಸ್ವಾವಲಂಬಿಗಳನ್ನಾಗಿಸುವ ನಿಟ್ಟಿನಲ್ಲಿ ಹುಟ್ಟಿಕೊಂಡ ಚೇಂಪಿ ಹಾಲು ಉತ್ಪಾದಕರ ಸಂಘ ಇದೀಗ ಮಾದರಿ ಸಂಘವಾಗಿ ರೂಪುಗೊಂಡಿದ್ದು ಸುತ್ತಲಿನ ನೂರಾರು ಹೈನುಗಾರರಿಗೆ ದಾರಿದೀಪವಾಗಿದೆ.

1977ರಲ್ಲಿ ಸ್ಥಾಪನೆ
ಈ ಸಂಸ್ಥೆ 1977 ಜು.17ರಂದು ಕೆನರಾ ಮಿಲ್ಕ್ ಯೂನಿಯನ್‌ನ ಅಧೀನದಲ್ಲಿ ಸ್ಥಾಪನೆಯಾಗಿತ್ತು. ಸ್ಥಳೀಯ ಮುಂದಾಳು ವೈ.ಎಸ್‌.ರಾಮಚಂದ್ರ ಹೊಳ್ಳರು ಈ ಸಂಘದ ಸ್ಥಾಪಕಾಧ್ಯಕ್ಷರು. ರಾಷ್ಟ್ರೀಯ ಹೆದ್ದಾರಿಯ ಪೂರ್ವ ದಿಕ್ಕಿನ ಕಟ್ಟಡದಲ್ಲಿ 60-70 ಮಂದಿ ಸದಸ್ಯರು, 50 ಲೀ. ಹಾಲು ಸಂಗ್ರಹದೊಂದಿಗೆ ಸಂಸ್ಥೆ ಆರಂಭವಾಗಿತ್ತು. ಅನಂತರ 1992ರಲ್ಲಿ ಸ್ವಂತ ಜಾಗ ಖರೀದಿಸಿ ಸ್ವಂತ ಕಟ್ಟಡ ರಚಿಸಿತು ಹಾಗೂ 2014ರಲ್ಲಿ ಶೀತಲೀಕರಣ ಕೇಂದ್ರವನ್ನು ಸ್ಥಾಪಿಸಲಾಯಿತು.

ಊರಿನ ಜನರಿಗೆ ಪ್ರೇರಣೆ
ಇಲ್ಲಿ ಹಾಲು ಉತ್ಪಾದಕರ ಸಂಘ ಸ್ಥಾಪನೆಯಾಗುವ ಮೊದಲು ಕೇವಲ ಗೃಹಬಳಕೆ ಹಾಲಿಗಾಗಿ ಹಸು ಸಾಕುತ್ತಿದ್ದರು. ಡೈರಿ ಸ್ಥಾಪನೆಯಾದ ಬಳಿಕ ನೂರಾರು ಮಂದಿ ಹೈನುಗಾರರು ಸೃಷ್ಟಿಯಾದರು. ಸಂಘದ ಮೂಲಕ ಅವರಿಗೆ ಅಗತ್ಯ ತರಬೇತಿ, ಮಾಹಿತಿ ಹಾಗೂ ಹಾಲು ಉತ್ಪಾದನೆಗೆ ಹೆಚ್ಚಿನ ಸಹಕಾರ ನೀಡಲಾಯಿತು ಮತ್ತು ಹಲವರು ಉಪಕಸುಬಾಗಿ ಇದನ್ನು ಸ್ವೀಕರಿಸಿದರು. ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿ ಬಳಸಿಕೊಂಡರು.

ಪ್ರಸ್ತುತ ಸ್ಥಿತಿಗತಿ
ಪ್ರಸ್ತುತ ಸಂಘದಲ್ಲಿ 210ಮಂದಿ ಮಂದಿ ಸದಸ್ಯರಿದ್ದು 1,100-1,200 ಲೀಟರ್‌ ಹಾಲು ಸಂಗ್ರಹವಾಗುತ್ತಿದೆ. ಹಾಲಿ ಅಧ್ಯಕ್ಷರಾಗಿ ಆಸ್ತಿಕ ಶಾಸ್ತ್ರಿ ಹಾಗೂ ಕಾರ್ಯದರ್ಶಿಯಾಗಿ ವೈ.ಕೃಷ್ಣಮೂರ್ತಿ ಐತಾಳ ಸೇವೆ ಸಲ್ಲಿಸುತ್ತಿದ್ದಾರೆ. ಶೀತಲೀಕರಣ ಘಟಕವನ್ನು ಹೊಂದಿದ್ದು 6 ಸಂಘಗಳ ಹಾಲು ಘಟಕದಲ್ಲಿ ಸಂಗ್ರಹಿಸಲಾಗುತ್ತದೆ. ಸದಸ್ಯರಾದ ಶ್ರೀರಾಮ ಮಧ್ಯಸ್ಥ ಅತೀ ಹೆಚ್ಚು ಹಾಲು ಪೂರೈಕೆ ಮಾಡುತ್ತಿದ್ದಾರೆ.

Advertisement

ಮಾದರಿ ಸಂಘ
ಸಣ್ಣ ವ್ಯಾಪ್ತಿಯನ್ನು ಹೊಂದಿದ್ದರೂ ಅತೀ ಹೆಚ್ಚು ಹಾಲು ಉತ್ಪಾದನೆ ಹಾಗೂ ಶೀತಲೀಕರಣ ಘಟಕ ಸ್ಥಾಪಿಸುವ ಮೂಲಕ ಸಂಘ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಸಂಸ್ಥೆಯ ಬೆಳವಣಿಗೆಯ ಹಿಂದೆ ಹಿರಿಯರ ಕೊಡುಗೆ ದೊಡ್ಡದಿದೆ. ಅದನ್ನು ಮುಂದುವರಿಸಿಕೊಂಡು ಹೋಗಬೇಕಾದ ಜವಾಬ್ದಾರಿ ನಮ್ಮದಾಗಿದೆ.
ಆಸ್ತಿಕ ಶಾಸ್ತ್ರಿ, ಅಧ್ಯಕ್ಷರು

ಅಧ್ಯಕ್ಷರು
ರಾಮಚಂದ್ರ ಹೊಳ್ಳ, ಲಕ್ಷ್ಮೀನಾರಾಯಣ ಐತಾಳ,ಯಜ್ಞನಾರಾಯಣ ಸೋಮಯಾಜಿ, ಎಂ.ರಾಮದೇವ ಐತಾಳ, ಜಿ.ಸುಬ್ರಾಯ ಭಟ್‌, ಆಸ್ತಿಕ ಶಾಸ್ತಿ (ಹಾಲಿ)

ಕಾರ್ಯದರ್ಶಿ
ವನಜಾಕ್ಷಿ, ನಾಗರಾಜ ಎಂ.,ವೈ.ಕೃಷ್ಣಮೂರ್ತಿ ಐತಾಳ (ಹಾಲಿ)

ಯಶಸ್ಸಿನ ಹಾದಿ
ತಮ್ಮ ಸದಸ್ಯರೊಂದಿಗೆ ಇರಿಸಿಕೊಂಡ ನಿಕಟ ಸಂಪರ್ಕ, ಜಾನುವಾರುಗಳಿಗೆ ಕೃತಕ ಗರ್ಭಧಾರಣೆ ಹಾಗೂ ಅನಾರೋಗ್ಯದ ಸಂದರ್ಭ ಸಂಘದ ಸಿಬಂದಿ ಉತ್ತಮವಾಗಿ ಸ್ಪಂದಿಸುವ ಕ್ರಮದಿಂದಾಗಿ ಹೈನಗಾರರು ಮತ್ತು ಸಂಘದ ನಡುವೆ ಉತ್ತಮ ಬಾಂಧವ್ಯ ಬೆಳೆದಿದೆ. ಹೀಗಾಗಿ ಹಾಲು ಉತ್ಪಾದಕರ ಸಂಘಗಳಿಗೆ ಖಾಸಗಿ ಪೈಪೋಟಿ ಅಸಾಧ್ಯವಾಗಿದೆ. ಅದೇ ರೀತಿ ಚಿಕ್ಕ ವ್ಯಾಪ್ತಿಯನ್ನು ಹೊಂದಿರುವ ಚೇಂಪಿ ಹಾಲು ಉತ್ಪಾದಕರ ಸಂಘವು ಆರಂಭದಿಂದ ತನ್ನ ಉತ್ತಮ ಸೇವೆಯ ಮೂಲಕ ದೊಡ್ಡ ಡೈರಿಗಳಿಗೆ ಕಡಿಮೆ ಇಲ್ಲದಂತೆ ಸಾಧನೆ ಮಾಡಿದೆ.

ಪ್ರಶಸ್ತಿ-ಪುರಸ್ಕಾರ
1993ರಲ್ಲಿ ಜಿಲ್ಲಾ ಮಟ್ಟದ ಉತ್ತಮ ಸಂಘ ಪ್ರಶಸ್ತಿ ಹಾಗೂ ಒಕ್ಕೂಟದ ಬೆಳ್ಳಿ ಹಬ್ಬದ ಸಂದರ್ಭ ಜಿಲ್ಲಾ ಅತ್ಯುತ್ತಮ ಸಂಘವೆಂಬ ಪ್ರಶಸ್ತಿ ದೊರೆತಿದೆ.

- ರಾಜೇಶ್‌ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next