Advertisement

ಸಂಪೂರ್ಣ ಸಾಕ್ಷರತಾ ಜಿಲ್ಲೆಗಾಗಿ ಸಂಕಲ್ಪ

04:53 PM Sep 05, 2022 | Team Udayavani |

ಧಾರವಾಡ: ಸಂಪೂರ್ಣ ಸಾಕ್ಷರತಾ ಜಿಲ್ಲೆಗಾಗಿ ಸಂಕಲ್ಪ ಮಾಡೋಣ. ಇದಕ್ಕೆ ಅಗತ್ಯವಿರುವ ಎಲ್ಲ ಪೂರ್ವಸಿದ್ಧತೆಗಳನ್ನು ಕೈಗೊಂಡು, 15 ದಿನಗಳೊಳಗಾಗಿ ಅನಕ್ಷರಸ್ಥರ ಸಮೀಕ್ಷಾ ಕಾರ್ಯವನ್ನು ಪೂರ್ಣಗೊಳಿಸಬೇಕು ಎಂದು ಜಿಪಂ ಸಿಇಒ ಡಾ|ಸುರೇಶ ಇಟ್ನಾಳ ಹೇಳಿದರು.

Advertisement

ನಗರದ ಜಿಪಂ ಸಭಾಭವನದಲ್ಲಿ ಲೋಕಶಿಕ್ಷಣ ನಿರ್ದೇಶನಾಲಯ, ಜಿಲ್ಲಾಡಳಿತ, ಜಿಪಂ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಸಹಯೋಗದಲ್ಲಿ 2022-23ನೇ ಸಾಲಿನ ವಿನೂತನ ಸಾಕ್ಷರತಾ ಕಾರ್ಯಕ್ರಮ ಅನುಷ್ಠಾನ ಪೂರ್ವ ವಿವಿಧ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಪಿಡಿಒಗಳ ಸಭೆಯಲ್ಲಿ ಅವರು ಮಾತನಾಡಿದರು.

ಅ. 2ರಂದು ಗಾಂಧಿ ಜಯಂತಿ ದಿನದಂದೇ ಮಹಾತ್ಮಾ ಗಾಂಧೀಜಿಯವರ ಸಂಪೂರ್ಣ ಸಾಕ್ಷರತೆಯ ದೂರದೃಷ್ಟಿಯ ಅಪೇಕ್ಷೆಯಂತೆ ಪ್ರತಿ ಗ್ರಾಮಗಳಲ್ಲಿ ಕಲಿಕಾ ಕೇಂದ್ರಗಳನ್ನು ಪ್ರಾರಂಭಿಸಬೇಕು ಎಂದು ಪಿಡಿಒಗಳಿಗೆ ಸೂಚಿಸಿದರು.

2022-23ನೇ ಸಾಲಿಗೆ ಪಂಚಾಯತಿ ಅನುದಾನದಲ್ಲಿ ಒಟ್ಟು 10,360 ಅನಕ್ಷರಸ್ಥರನ್ನು ಸಾಕ್ಷರಸ್ಥರನ್ನಾಗಿ ಮಾಡಲು 10 ಪಂಚಾಯತಿಗಳನ್ನು ಗುರುತಿಸಲಾಗಿದೆ. ಧಾರವಾಡ ಜಿಲ್ಲೆಗೆ ಎರಡು ವರ್ಷದ ಅವಧಿಯಲ್ಲಿ 38 ಗ್ರಾಪಂಗಳ ವ್ಯಾಪ್ತಿಯ 28,900 ಅನಕ್ಷರಸ್ಥರನ್ನು ಸಾಕ್ಷರರನ್ನಾಗಿ ಮಾಡುವ ಗುರಿ ನೀಡಿದ್ದಾರೆ.

ಜಿಲ್ಲೆಗೆ ಈ ವರ್ಷ 20,070 ಅನಕ್ಷರಸ್ಥರನ್ನು ಸಾಕ್ಷರರನ್ನಾಗಿ ಮಾಡುವ ಗುರಿ ಹೊಂದಲಾಗಿದೆ. ಪಪಂ, ಪುರಸಭೆ ಹಾಗೂ ಮಹಾನಗರ ಪಾಲಿಕೆಗಳ ಎಲ್ಲಾ ಅನಕ್ಷರಸ್ಥ ಪೌರಕಾರ್ಮಿಕರು, ಮಾಜಿ ದೇವದಾಸಿಯರು, ತೃತೀಯ ಲಿಂಗಿಗಳು, ಕಟ್ಟಡ ಕೂಲಿ ಕಾರ್ಮಿಕರು ಹಾಗೂ ಕೊಳಚೆ ಪ್ರದೇಶದ ಅನಕ್ಷರಸ್ಥರಿಗೆ, ವಿಶೇಷವಾಗಿ ಪರಿಶಿಷ್ಟ ಜಾತಿ-ಪಂಗಡ, ಅಲ್ಪಸಂಖ್ಯಾತರನ್ನು ಸಾಕ್ಷರನ್ನಾಗಿಸಲು ಆದ್ಯತೆ ನೀಡಬೇಕು ಎಂದರು.

Advertisement

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪಿಡಿಒಗಳು, ಗ್ರಾಮದ ಶಾಲೆಗಳ ಮುಖ್ಯಾಧ್ಯಾಪಕರು, ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರನ್ನು ಒಳಗೊಂಡ ತಂಡಗಳನ್ನು ರಚಿಸಿ ಅನಕ್ಷರಸ್ಥರ ಸಮೀಕ್ಷಾ ಕಾರ್ಯ ಪೂರ್ಣಗೊಳಿಸಬೇಕು. ತಾಪಂ ಇಒಗಳು, ಕ್ಷೇತ್ರ ಶಿಕ್ಷಣಾ ಧಿಕಾರಿಗಳು ಜಂಟಿಯಾಗಿ ತಾಲೂಕಿನಲ್ಲಿ ಸಭೆ ಮಾಡಿ ಸಮೀಕ್ಷೆ ಕಾರ್ಯ ಪ್ರಾರಂಭಿಸಲು ಸೂಚಿಸಿದರು.

ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಮಾತನಾಡಿ, ಗ್ರಾಪಂಗಳ ಮಾದರಿಯಲ್ಲಿ ನಗರ, ಪಪಂ ಹಾಗೂ ಮಹಾನಗರ ಪಾಲಿಕೆಯಲ್ಲಿ ನವ ಭಾರತ ಸಾಕ್ಷರತಾ ಕಾರ್ಯಕ್ರಮದ ಪರಿಣಾಮಕಾರಿ ಅನುಷ್ಠಾನ ಮಾಡಲು ಸಂಬಂಧಪಟ್ಟ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಿ ಸಮೀಕ್ಷಾ ಕಾರ್ಯ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದರು.

ಜಿಲ್ಲಾ ಮುಖ್ಯ ಯೋಜನಾಧಿಕಾರಿಗಳಾದ ದೀಪಕ ಮಡಿವಾಳರ, ಡಯಟ್‌ ಪ್ರಾಚಾರ್ಯರಾದ ಎನ್‌. ಕೆ. ಸಾಹುಕಾರ, ಉಪಯೋಜನಾಧಿಕಾರಿ ಜಿ.ಎನ್‌. ಮಠಪತಿ, ಜಿಲ್ಲಾ ಸಾಕ್ಷರತಾ ನೋಡಲ್‌ ಅಧಿಕಾರಿ ಪಿ.ಕೆ.ಚಿಕ್ಕಮಠ ಇನ್ನಿತರರಿದ್ದರು.

ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಎ.ಎ.ಖಾಜಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಡಾ|ರಾಮು ಮೂಲಗಿ ಸಾಕ್ಷರ ಗೀತೆ ಹಾಡಿದರು. ಕಾರ್ಯಕ್ರಮ ಸಹಾಯಕ ಎಸ್‌. ಆರ್‌.ರಾಚಣ್ಣವರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next