Advertisement

ಮೂರು ದಿನಗಳ “ಬಸವ ಉತ್ಸವ’ಕ್ಕೆ ವರ್ಣರಂಜಿತ ತೆರೆ

01:28 PM Feb 12, 2018 | |

ಬಸವಕಲ್ಯಾಣ(ಬೀದರ): ಮಳೆಯ ಸಿಂಚನದ ನಡುವೆ ನೇಸರ ರವಿವಾರ ಸಂಜೆ ಬಾನಂಗಳದಲ್ಲಿ ಜಾರುತ್ತಿದ್ದಂತೆ ಬಸವಕಲ್ಯಾಣ ತೇರು ಮೈದಾನದ ಝಗಮಗಿಸುವ ವಿದ್ಯುತ್‌ ಬೆಳಕಿನ ವಿಶಾಲ ವೇದಿಕೆಯಲ್ಲಿ ನೃತ್ಯ ವೈಭವದ ಗತ್ತು, ನಾದಸ್ವರದ ಝೇಂಕಾರ ಹೊರಹೊಮ್ಮಿತು. ಇದರೊಂದಿಗೆ ಮೂರು ದಿನಗಳ ವೈಭವದ “ಬಸವ ಉತ್ಸವ-2018′ ವರ್ಣರಂಜಿತ ತೆರೆ ಕಂಡಿತು.

Advertisement

ಬಸವಣ್ಣನ ಕರ್ಮಭೂಮಿಯಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿದ್ದ ಐದನೇ ಬಸವ
ಉತ್ಸವ ಸಮಾರೋಪ ಸಮಾರಂಭಕ್ಕೆ ಬಸವಾನುಯಾಯಿಗಳು ಸಾಕ್ಷಿಯಾದರು. ತುಂತುರು ಮಳೆ, ತಣ್ಣನೆ ಗಾಳಿಯ ನಡುವೆಯೂ ಗಾನ ಸುಧೆ ಹರಿಯಿತು. ತಡರಾತ್ರಿ ವರೆಗೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಾವಿರಾರು ಜನ ಉತ್ಸುಕತೆಯಿಂದ ಪಾಲ್ಗೊಂಡಿದ್ದು ವಿಶೇಷವಾಗಿತ್ತು. 

ಉತ್ಸವ ಚಿಂತನ ಮಂಥನಕ್ಕೆ ಸಾಕ್ಷಿ: ಪ್ರತಿ ವರ್ಷದಂತೆ ಉತ್ಸವ ಕೇವಲ ಮನರಂಜನೆಗೆ ಮಾತ್ರ ಸೀಮಿತವಾಗಿರದೆ ಚಿಂತನ ಮಂಥನಕ್ಕೆ ಸಾಕ್ಷಿಯಾಯಿತು. ಇವ ನಮ್ಮವನೆಂಬುದು ಶರಣ ಧರ್ಮ, ಹೆಣ್ಣು ಸಾûಾತ್‌ ಕಪಿಲಸಿದ್ದ ಮಲ್ಲಿಕಾರ್ಜುನ, ಕೊಲಬೇಡವೆಂಬುದು ಮಾತಲ್ಲ- ಆಚರಣೆ, ಶರಣಧರ್ಮ- ಸಹನಾ ಧರ್ಮ, ಕಾಯಕ ಕಂಪಿತ ನಮ್ಮ ಕೂಡಲಸಂಗಮದೇವ, ಸಕಲರ ಲೇಸು ಮತ್ತು ವಚನ ಸಾಹಿತ್ಯ, ಹೀಗೆ ವಿವಿಧ ಗೋಷ್ಠಿಗಳಲ್ಲಿ ಶ್ರೀಗಳು, ಚಿಂತಕರು ತಮ್ಮ ಅನುಭಾವ ಹಂಚಿಕೊಂಡರು.

ವಿಶೇಷವಾಗಿ ಉತ್ಸವ ಎರಡನೇ ದಿನದಂದು 770 ಅಮರಗಣಂಗಳ ಸ್ಮರಣಾರ್ಥ ಅನುಭಾವ ಮಂಥನ ಸಮಾವೇಶ ಆಯೋಜನೆ 12ನೇ ಶತಮಾನದ ಶರಣ ಸಂಸ್ಕೃತಿ, ಅನುಭವ ಮಂಟಪದ ಪರಿಕಲ್ಪನೆಯನ್ನು ನೆನಪಿಗೆ ತಂದಿತು. ಅಮರಗಣಂಗಳ ಪ್ರತಿನಿ ಧಿಗಳಾಗಿ ಭಾಗವಹಿಸಿದ್ದ ಚಿಂತಕರು ಮತ್ತು ಶರಣರು ವಿವಿಧ ಪ್ರಚಲಿತ ವಿಷಯಗಳ ಮೇಲೆ ಚರ್ಚೆ ನಡೆಸಿ ಪರಿಹಾರಕ್ಕೆ ಸಲಹೆ ನೀಡಿದರು.

ಮೊದಲ ದಿನವಾದ ಶುಕ್ರವಾರ ವಚನ ಗಾಯನ, ಜಾನಪದ ಗಾಯನ ಭಕ್ತಿಮಯ ವಾತಾವರಣ ಸೃಷ್ಟಿಸಿತು. ಧಾರವಾಡದ
ಇಮಾಮಸಾಬ್‌ ವಲ್ಲೇಪನೂರ್‌ ತತ್ವಪದ ಸಂಗೀತ ಬಸವ ಚಿಂತನೆಯ ಮೇಲೆ ಬೆಳಕು ಚೆಲ್ಲಿತು. ಮತ್ತೂಂದೆಡೆ ಬೆಂಗಳೂರಿನ ಸಂಗೀತಾ ಕಟ್ಟಿ ಮತ್ತು ಪಂಡಿತ ಫಯಾಜ್‌ ಖಾನ್‌ ಅವರ ವಚನ ಸಂಗೀತ ಸಭಿಕರ ಮನ ತಣಿಸಿತು. ವಿಜಯಕುಮಾರ ಸೋನಾರೆ ಮತ್ತು ತಂಡದವರು ನಡೆಸಿಕೊಟ್ಟ ಸೌಹಾರ್ದತೆ ನಾಟಕ ಪ್ರದರ್ಶನ ಜನಮನ ಸೆಳೆಯಿತು. 

Advertisement

ಸಾಧನಾ-ಅರ್ಚನಾ ಉಡುಪ ರಂಗು: ಎರಡನೇ ದಿನವಾದ ಶನಿವಾರ ಬಾಲಿಬುಡ್‌ನ‌ ಖ್ಯಾತ ಗಾಯಕಿ ಸಾಧನಾ ಸರಗಮ್‌ ಅವರ ಭಕ್ತಿ ಗೀತೆ, ವಚನ ಗಾಯನ ಸಭಿಕರನ್ನು ಧ್ಯಾನದಲ್ಲಿ ತೇಲುವಂತೆ ಮಾಡಿತು. ಬಳಿಕ ರಮೀಂದರ್‌ ಖುರಾನಾ ಅವರ ಓಡಿಸ್ಸಾ ನೃತ್ಯ ರೋಮಾಂಚನಗೊಳಿಸಿದರೆ, ಕಲ್ಕತ್ತದ ಶುದ್ದಶೀಲ ಚಟರ್ಜಿ ಅವರ ಸಂತೂರ ವಾದನ ಚಪ್ಪಾಳೆಯ ಸುರಿ ಮಳೆಗೈಯುವಂತೆ ಮಾಡಿತು. ಧಾರವಾಡದ ವಿದುಷಿ ರೇಣುಕಾ ನಾಕೋಡ್‌ ಅವರ ಸುಗಮ ಸಂಗೀತ ಮೆರಗು ಹೆಚ್ಚಿಸಿದರೆ, ಅಂಧ ಕಲಾವಿದ ನರಸಿಂಹಲು ಡಪ್ಪೂರ ಸೇರಿದಂತೆ ಸ್ಥಳೀಯ ತಂಡಗಳ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಉತ್ಸವದ ಸಂಭ್ರಮ ಕಟ್ಟಿಕಟ್ಟಿತು.

ಕೊನೆ ದಿನವಾದ ರವಿವಾರ ಖ್ಯಾತ ಗಾಯಕಿ ಅರ್ಚನಾ ಉಡುಪ ಮತ್ತು ಕ್ಲ್ಯಾರಿಯೋನೇಟ್‌ ವಾದಕ ಡಾ| ಪಂ| ನರಸಿಂಹಲು ವಡವಟ್ಟಿ ಅವರ ಸಂಗೀತ ಜನರನ್ನು ಹಿಡಿದಿಟ್ಟಿತು. ನಂತರ ಬೆಂಗಳೂರಿನ ಕಾವ್ಯಶ್ರೀ ನಾಗರಾಜ ತಂಡದ ಕುಚಿಪುಡಿ ನೃತ್ಯ ಆಕರ್ಷಿತು. ರೇಖಾ ಸೌದಿ ಅವರ ದೇಶ ಭಕ್ತಿ- ವಚನ ಗಾಯನ, ನೆಲಮಂಗಲದ ಅರ್ಚನಾ ಕುಲಕರ್ಣಿ, ಹಂಪಿಯ ಡಾ| ಜೈದೇವಿ ಜಂಗಮಶೆಟ್ಟಿ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
 
„ಶಶಿಕಾಂತ ಬಂಬುಳಗೆ 

Advertisement

Udayavani is now on Telegram. Click here to join our channel and stay updated with the latest news.

Next