ಬೆಂಗಳೂರು: ಕೊಲಂಬಿಯಾ ಮೂಲದ ಯುವತಿ ತಾನು ವಾಸವಿದ್ದ ಅಪಾರ್ಟ್‌ಮೆಂಟ್‌ನ ಮೂರನೇ ಮಹಡಿಯಿಂದ ಅನುಮಾನಾಸ್ಪದ ರೀತಿಯಲ್ಲಿ ಕೆಳಗೆ ಬಿದ್ದು ಮೃತಪಟ್ಟ ಘಟನೆ ಹಳೆ ವಿಮಾನ ನಿಲ್ದಾಣ ರಸ್ತೆಯ ಸಮೀಪ ಭಾನುವಾರ ಮುಂಜಾನೆ ನಡೆದಿದೆ.
ಕರೆನ್ ಡ್ಯಾನಿಯಲ್ (25) ಮೃತರು. ಈ ಕುರಿತು ಮಾರಿಯಾ ಎಂಬುವವರು ನೀಡಿರುವ ದೂರಿನ ಅನ್ವಯ ಜೀವನ್ ಭೀಮಾ ನಗರ ಠಾಣೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಕಳೆದ ಒಂದು ವರ್ಷದಿಂದ ಪ್ರತಿಷ್ಠಿತ ಹೋಟೆಲ್ ಒಂದರಲ್ಲಿ ಭಾಷಾಂತರಕಾರರಾಗಿ ಕಾರ್ಯನಿರ್ವಹಿಸುತ್ತಿದ್ದ ಕರೆನ್ ಹಳೇ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ವೈಲ್ಡ್ ಫ್ಲವರ್ ಅಪಾರ್ಟ್ ಮೆಂಟ್‌ನ ಎರಡನೇ ಫ್ಲೋರ್‌ನ ಫ್ಲ್ಯಾಟ್‌ನಲ್ಲಿ ಸ್ನೇಹಿತೆ ಜತೆ ವಾಸವಿದ್ದರು. ಶನಿವಾರ ರಾತ್ರಿ ಸ್ಪೇನ್ ಮೂಲದ ಮಾರಿಯಾ ಹಾಗೂ ಇತರೆ ಸ್ನೇಹಿತರ ಜತೆಗೂಡಿ ವೈಟ್‌ಫಿಲ್ಡ್‌ನಲ್ಲಿ ತಡರಾತ್ರಿಯವರೆಗೂ ಪಾರ್ಟಿ ಮಾಡಿದ್ದಾರೆ. ಮೂರು ಗಂಟೆ ಸುಮಾರಿಗೆ ಮಾರಿಯಾ ಜತೆ ಫ್ಲ್ಯಾಟ್‌ಗೆ ಆಗಮಿಸಿದ್ದಾರೆ.
ಕೆಲ ಹೊತ್ತಿನ ಬಳಿಕ ಕರೆನ್ ಮೂರನೇ ಮಹಡಿಗೆ ತೆರಳಿದ್ದು, ಕೆಲವೇ ನಿಮಿಷಗಳಲ್ಲಿ ಕೂಗಿ ಕೊಂಡಿದ್ದಾರೆ. ಕೂಗು ಕೇಳಿ ಕೊಠಡಿಯಿಂದ ಹೊರಗೆ ಬಂದ ಮಾರಿಯಾ, ನೋಡು ನೋಡುತ್ತಿದ್ದಂತೆ ಕರೆನ್ ಕೆಳಗೆ ಬಿದ್ದಿದ್ದಾರೆ. ಕೆಳಗಡೆ ಇಳಿದು ಬಂದು ನೋಡುವಷ್ಟರಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಕರೆನ್ ಡ್ಯಾನಿಯಲ್ ಸ್ಥಳದಲ್ಲೇ ಮೃತ ಪಟ್ಟಿದ್ದರು ಎಂದು ಮಾರಿಯಾ ದೂರಿನಲ್ಲಿ ತಿಳಿಸಿದ್ದಾರೆ ಎಂದು ಹಿರಿಯ ಪೊಲೀಸ್ ಆಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಕರೆನ್ ಯಾವ ಉದ್ದೇಶಕ್ಕೆ ಮೂರನೇ ಮಹಡಿಗೆ ತೆರಳಿದ್ದರು ಎಂಬ ಬಗ್ಗೆ ಇನ್ನೂ ಗೊತ್ತಾಗಿಲ್ಲ. ಪ್ರಾಥಮಿಕ ತನಿಖೆಯಲ್ಲಿ ಆಯತಪ್ಪಿ ಕೆಳಗೆ ಬಿದ್ದಿರುವುದು ಗೊತ್ತಾಗಿದೆ. ಆಕೆಯ ಸ್ನೇಹಿತರನ್ನು ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಳ್ಳಬೇಕಿದೆ. ಮೃತ ಯುವತಿಯ ಮರಣೋತ್ತರ ಪರೀಕ್ಷಾ ವರದಿ ಬರಬೇಕಿದೆ ಎಂದು ಅಧಿಕಾರಿ ಹೇಳಿದರು.
ವಿದೇಶಿಯರ ಪ್ರಾದೇಶಿಕ ನೋಂದಣಿ (ಎಫ್ಆರ್‌ಆರ್‌ಒ) ಕಚೇರಿ ಮೂಲಕ ಕೆರನ್ ಪೋಷಕರಿಗೆ ಮಾಹಿತಿ ನೀಡಲಾಗಿದೆ. ಅವರು ಬಂದ ಬಳಿಕ ಮರಣೋತ್ತರ ಪರೀಕ್ಷೆ ನಡೆಯಲಿದೆ ಎಂದು ಅಧಿಕಾರಿ ಹೇಳಿದರು.