ಬೆಂಗಳೂರು: ಮದ್ಯದ ಅಮಲಿನಲ್ಲಿ ಹಣಕಾಸಿನ ವಿಚಾರಕ್ಕೆ ಸಹೋದ್ಯೋಗಿಯನ್ನು ಕಾಲಿನಲ್ಲಿ ಒದ್ದು ಕೊಲೆಗೈದಿರುವ ಘಟನೆ ಆರ್.ಟಿ.ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಉತ್ತರ ಪ್ರದೇಶದ ಗೋರಖ್‌ಪುರ ನಿವಾಸಿ ಶ್ರವಣ್ ಶರ್ಮಾ(24) ಕೊಲೆಯಾ ದವ. ಕೃತ್ಯ ಎಸಗಿದ ಆತನ ಸಹೋದ್ಯೋಗಿ ಉಪೇಂದ್ರ (25) ಎಂಬಾತನನ್ನು ಬಂಧಿಸಲಾಗಿದೆ. ಆರೋಪಿ ಜ.24ರಂದು ರಾತ್ರಿ ಶ್ರವಣ್ ಶರ್ಮಾನನ್ನು ಕೊಲೆಗೈದು ಉತ್ತರ ಪ್ರದೇಶಕ್ಕೆ ಪರಾರಿಯಾಗಿದ್ದ ಎಂದು ಪೊಲೀಸರು ಹೇಳಿದರು.
ಕೆಲ ವರ್ಷಗಳ ಹಿಂದೆ ಶ್ರವಣ್ ಶರ್ಮಾ ಮತ್ತು ಉಪೇಂದ್ರ ಹಾಗೂ ಇತರೆ ಮೂವರು ಸ್ನೇಹಿತರು ಬೆಂಗಳೂರಿಗೆ ಬಂದಿದ್ದು, ದಿಣ್ಣೂರು ರಸ್ತೆಯಲ್ಲಿರುವ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಶ್ರವಣ್ ಮತ್ತು ಉಪೇಂದ್ರ ಪೇಟಿಂಗ್, ಗಾರೆ ಕೆಲಸಕ್ಕೆ ಹೋಗುತ್ತಿದ್ದರು. ಇತರೆ ಮೂವರು ಕಾರ್ಯನಿಮಿತ್ತ ಬೇರೆ ಊರಿಗೆ ತೆರಳಿದ್ದರು. ಜ.24ರಂದು ರಾತ್ರಿ 11 ಗಂಟೆ ಸುಮಾರಿಗೆ ಇಬ್ಬರು ಪಾರ್ಟಿ ಮಾಡಿದ್ದು, ಕಂಠಪೂರ್ತಿ ಮದ್ಯ ಸೇವಿಸಿದ್ದಾರೆ. ಈ ವೇಳೆ ಕೆಲಸದ ಹಣ ಹಂಚಿಕೊಳ್ಳುವ ವಿಚಾರಕ್ಕೆ ಜಗಳವಾಗಿದೆ. ಈ ವೇಳೆ ಅವಾಚ್ಯ ಶಬ್ದಗಳಿಂದ ಉಪೇಂದ್ರನಿಗೆ ಶ್ರವಣ್ ಶರ್ಮಾ ನಿಂದಿಸಿದ್ದಾನೆ. ಅದರಿಂದ ಕೋಪಗೊಂಡ ಆರೋಪಿ, ಶ್ರವಣ್ ಶರ್ಮಾನಿಗೆ ಹೊಡೆದಿದ್ದು, ಆತ ಪ್ರಜ್ಞೆ ತಪ್ಪಿ ಬಿದ್ದಿದ್ದ. ಆದರೂ ಬಿಡದ ಆರೋಪಿ, ಮೊಣಕಾಲಿನಿಂದ ಶ್ರವಣ್ ಶರ್ಮಾನ ಎದೆ, ಹೊಟ್ಟೆ ಭಾಗಕ್ಕೆ ಮನಸೋ ಇಚ್ಛೆ ಒದ್ದಿದ್ದಾನೆ. ಪರಿಣಾಮ ಶ್ವಾಸಕೋಶಕ್ಕೆ ಹಾನಿಯುಂಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬಳಿಕ ಆರೋಪಿ ಉತ್ತರ ಪ್ರದೇಶಕ್ಕೆ ಪರಾರಿಯಾಗಿದ್ದ.
ಮರುದಿನ ಪಕ್ಕದ ಮನೆಯವರು ಬೆಳಗ್ಗೆ 10 ಗಂಟೆಗೆ ಬಾಗಿಲು ಬಡಿದಾಗ ಶ್ರವಣ್ ಬಾಗಿಲು ತೆರೆದಿಲ್ಲ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.