ಬೆಳಗಾವಿ/ಮೂಡಲಗಿ: ಸಾರ್ವಜನಿಕ ಗಣೇಶ ಮಂಡಳಿಯ ಟೆಂಗಿನಕಾಯಿಗಳ ಹರಾಜು ಅಬ್ಬಬ್ಬಾ ಎಂದರೆ 1, 2, 5 ಸಾವಿರ ರೂ. ವರೆಗೆ ಆಗುವುದು ಸಹಜ. ಆದರೆ ಈ ಗಣಪತಿ ಎದುರು ಇಟ್ಟಿರುವ ತೆಂಗಿನಕಾಯಿ ಬರೋಬ್ಬರಿ 2.65 ಲಕ್ಷ ರೂ.ಗೆ ಹರಾಜು ಆಗುವ ಮೂಲಕ ಅಚ್ಚರಿಗೆ ಕಾರಣವಾಗಿದೆ.
ಮೂಡಲಗಿ ಪಟ್ಟಣದ ವಿಜಯ ನಗರದ ಶ್ರೀ ಗಜಾನನ ಯುವಕ ಮಂಡಳಿಯ 7ನೇ ದಿನದ ಗಣಪತಿ ವಿಸರ್ಜನೆ ವೇಳೆ ಹರಾಜು ಪ್ರಕ್ರಿಯೆ ನಡೆಯಿತು. ಗಣಪತಿ ಮೂರ್ತಿ ಎದುರು ಇಟ್ಟು ಪೂಜಿಸಲ್ಪಟ್ಟಿರುವ ಮೊದಲನೇ ತೆಂಗಿನಕಾಯಿಯನ್ನು ಹರಾಜಿಗೆ ಇಡಲಾಗಿತ್ತು. ರಾಮು ಬಾಪು ಪಾಟೀಲ ಎಂಬವರು 2.65 ಲಕ್ಷ ರೂ.ಗೆ ಆ ತೆಂಗಿನಕಾಯಿ ಹರಾಜಿನ ಮೂಲಕ ಪಡೆಯುವ ಮೂಲಕ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ.
ಐದು ಹಣ್ಣು ಹಾಗೂ ಐದು ಹಣ್ಣಿನ ತಟ್ಟೆ ಸೇರಿದಂತೆ ಇತರೆ ಪೂಜಾ ಸಾಮಗ್ರಿಗಳು ಒಟ್ಟು 6.76 ಲಕ್ಷ ರೂ. ವರೆಗೆ ಹರಾಜು ಆಗಿದೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹರಾಜು ಪ್ರತಿ ವರ್ಷವೂ ನಡೆಯುತ್ತದೆ. ಕಳೆದ ವರ್ಷವೂ ಮೊದಲನೇ ತೆಂಗಿನಕಲಾಯಿಯನ್ನು ರಾಮಾ ಪಾಟೀಲ ಅವರೇ 2.05 ಲಕ್ಷ ರೂ.ಗೆ ಹರಾಜಿನಲ್ಲಿ ಪಡೆದಿದ್ದರು. ಪ್ರತಿ ವರ್ಷ ರಾಮು ಅವರೇ ಮೊದಲನೇ ತೆಂಗಿನಕಾಯಿ ಪಡೆಯುತ್ತಾರೆ. ಒಟ್ಟಾರೆ 5.53 ಲಕ್ಷ ರೂ. ವರೆಗೆ ಹರಾಜು ಆಗಿತ್ತು. ಪ್ರತಿ ಸಲ 2, 3 ಲಕ್ಷ ರೂ. ಆಗುತ್ತಿದ್ದ ಹರಾಜು ಈ ಬಾರಿ ಅತಿ ಹೆಚ್ಚು ಹರಾಜು ನಡೆದಿದ್ದು ವಿಶೇಷವಾಗಿದೆ. 20 ವರ್ಷದಿಂದ ಇಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಲಾಗುತ್ತಿದೆ ಎಂದು ಗಣೇಶ ಮಂಡಳಿ ಪದಾಧಿಕಾರಿಗಳು ತಿಳಿಸಿದ್ದಾರೆ.
ಈ ವರ್ಷ 2ನೇ ಟೆಂಗಿನಕಾಯಿ 81 ಸಾವಿರ ರೂ.ಗೆ ದಾದು ಮಾರುತಿ ಕೋಳಿಗುಡ್ಡ, 3ನೇ ತೆಂಗಿನಕಾಯಿ 31 ಸಾವಿರ ರೂ.ಗೆ ಸಾಯಿರಾಜ ಅಂಕುಶ ಕೋಮಟೆ, 4ನೇ ತೆಂಗಿನಕಾಯಿ 25,101 ರೂ.ಗೆ ಅಶೋಕ ಲಕ್ಷ್ಮಣ ಕೋಮಟೆ, 5ನೇ ತೆಂಗಿನಕಾಯಿ 77,777 ರೂ.ಗೆ ಶ್ರೀಧರ ಬಾಬುರಾವ ಕೋಮಟೆ, ಕುಂಭದ ಮೇಲಿನ ತೆಂಗಿನಕಾಯಿ 51 ಸಾವಿರ ರೂ.ಗೆ ಮುತ್ತಪ್ಪ ಬಾಪು ಪಾಟೀಲ ಹರಾಜು ಮೂಲಕ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ:ಮೂಡಿಗೆರೆ: ಅರಣ್ಯ ಇಲಾಖೆಗೆ ಮುತ್ತಿಗೆ ಹಾಕಲು ಯತ್ನ; ಲಾಠಿ ಚಾರ್ಜ್
ಮೊದಲನೇ ಹಣ್ಣಿನ ತಟ್ಟೆ 31 ಸಾವಿರ ರೂ.ಗೆ ಈರಪ್ಪ ಲಕ್ಷ್ಮಣ ಝಂಡೆಕುರಬರ, 2ನೇ ಹಣ್ಣಿನ ತಟ್ಟೆ 21 ಸಾವಿರ ರೂ.ಗೆ ಮಾಯಪ್ಪ ಲಕ್ಷ್ಮಣ ಲಂಗೋಟಿ, 3ನೇ ಹಣ್ಣಿನ ತಟ್ಟೆ 4,444 ರೂ.ಗೆ ನಾಗೇಶ ರಾಜಾರಾಮ ಪಾಲಕರ, 4ನೇ ಹಣ್ಣಿನ ತಟ್ಟೆ 19,100 ರೂ.ಗೆ ಸದಾಶಿವ ರಾಮು ಝಂಡೆಕುರಬರ, 5ನೇ ಹಣ್ಣಿನ ತಟ್ಟೆ 40.100 ರೂ.ಗೆ ಬಸ್ಸು ರಾಜು ಝಂಡೆಕುರಬರ, ಮಾಲೆ 10,100 ರೂ.ಗೆ ಪರುಶರಾಮ ಲಕ್ಷ್ಮಣ ಝಂಡೆಕುರಬರ, ಕೊಂಜಿಗೆ 8,100 ರೂ.ಗೆ ಮಲೀಕ ನಾಮದೇವ ಝಂಡೆಕುರಬರ, ಚಾದರ 9,999 ರೂ.ಗೆ ರಾವತ ತಮ್ಮಣ್ಣ ಝಂಡೆಕುರಬರ ಹಾಗೂ ಬಾಳೆ ಹಣ್ಣಿನ ಗಿಡ ಮತ್ತು ಹೂವಿನ ಗಿಡಗಳನ್ನು 2100 ರೂ.ಗೆ ಲಕ್ಷ್ಮಣ ಯಲ್ಲಪ್ಪ ಮೊಮ್ಮವಾಡಿ ಹರಾಜಿನಲ್ಲಿ ಪಡೆದಿದ್ದಾರೆ.