Advertisement

IND V/s AFG: ಉದ್ಯಾನ ನಗರಿಯಲ್ಲಿ ಕ್ಲೀನ್‌ಸ್ವೀಪ್‌ ಗುರಿ

11:49 PM Jan 16, 2024 | Team Udayavani |

ಬೆಂಗಳೂರು: ಅಫ್ಘಾನಿಸ್ಥಾನ ವಿರುದ್ಧದ ಟಿ20 ಸರಣಿಯನ್ನು ಈಗಾಗಲೇ ವಶಪಡಿಸಿಕೊಂಡಿರುವ ಭಾರತ ವಿನ್ನು ಕ್ಲೀನ್‌ಸ್ವೀಪ್‌ ಗುರಿಯೊಂದಿಗೆ ಅಂತಿಮ ಪಂದ್ಯ ಆಡಲಿಳಿಯಲಿದೆ. ಬುಧವಾರದ ಈ ಮುಖಾಮುಖೀಯ ತಾಣ ಬೆಂಗಳೂರಿನ “ಎಂ. ಚಿನ್ನಸ್ವಾಮಿ ಸ್ಟೇಡಿಯಂ”.

Advertisement

ಅಂದಹಾಗೆ ಇದು ಟಿ20 ವಿಶ್ವಕಪ್‌ಗೂ ಮುನ್ನ ಭಾರತ ಆಡಲಿರುವ ಕೊನೆಯ ಟಿ20 ಅಂತಾರಾಷ್ಟ್ರೀಯ ಪಂದ್ಯ. ವಿಶ್ವಕಪ್‌ ಆರಂಭಗೊಳ್ಳಲು ಇನ್ನೂ 6 ತಿಂಗಳಿದೆ!

ಅಮೋಘ ಚೇಸಿಂಗ್‌
ಮೊಹಾಲಿ ಮತ್ತು ಇಂದೋರ್‌ನಲ್ಲಿ ನಡೆದ ಎರಡೂ ಪಂದ್ಯಗಳಲ್ಲಿ ಭಾರತ ಚೇಸಿಂಗ್‌ ಅವಕಾಶ ಪಡೆದಿತ್ತು. ಎರಡೂ ಪಂದ್ಯಗಳನ್ನು 6 ವಿಕೆಟ್‌ಗಳಿಂದ ಜಯಿಸಿತ್ತು. ಆಕ್ರಮಣಕಾರಿ ಬ್ಯಾಟಿಂಗ್‌ ನಡೆಸಿದ ಕಾರಣ ಕೆಲವು ಓವರ್‌ ಉಳಿದಿರುವಾಗಲೇ ಗುರಿ ಮುಟ್ಟಿತ್ತು. ಮೊಹಾಲಿಯಲ್ಲಿ 17.3 ಓವರ್‌ಗಳಿಂದ 159 ರನ್‌, ಇಂದೋರ್‌ನಲ್ಲಿ 15.4 ಓವರ್‌ಗಳಿಂದ 173 ರನ್‌ ಬಾರಿಸಿತ್ತು. ಹೀಗಾಗಿ ಮೊದಲು ಬ್ಯಾಟಿಂಗ್‌ ನಡೆಸಿದರೆ ಭಾರತದ ಬ್ಯಾಟಿಂಗ್‌ ನಿರ್ವಹಣೆ ಯಾವ ಮಟ್ಟದಲ್ಲಿದ್ದೀತು ಎಂಬುದೊಂದು ಕುತೂಹಲ.

ಎರಡೂ ಪಂದ್ಯಗಳಲ್ಲಿ ಭಾರತದ ಬ್ಯಾಟಿಂಗ್‌ ಅಮೋಘ ಮಟ್ಟದಲ್ಲಿತ್ತು. ಶಿವಂ ದುಬೆ ಸತತ 2 ಅರ್ಧ ಶತಕ ಬಾರಿಸಿ ಮ್ಯಾಚ್‌ ವಿನ್ನರ್‌ ಆಗಿದ್ದನ್ನು ಮರೆಯುವಂತಿಲ್ಲ. ಇವರ ಆಲ್‌ರೌಂಡ್‌ ಪ್ರದರ್ಶನ ಮುಂದೆ ಹಾರ್ದಿಕ್‌ ಪಾಂಡ್ಯ ಅವರ ಹಾದಿಗೆ ತೊಡಕಾಗಲೂಬಹುದು.

ರೋಹಿತ್‌ ಬರಗಾಲ
ಹಾಗೆಯೇ 14 ತಿಂಗಳ ಬಳಿಕ ಟಿ20ಗೆ ಮರಳಿ ನಾಯಕತ್ವ ವಹಿಸಿಕೊಂಡ ರೋಹಿತ್‌ ಶರ್ಮ ಎರಡೂ ಪಂದ್ಯಗಳಲ್ಲಿ ಸೊನ್ನೆ ಸುತ್ತಿ ಹೋಗಿದ್ದಾರೆ. ಇದರಲ್ಲೊಂದು ಗೋಲ್ಡನ್‌ ಡಕ್‌. ಟಿ20 ವಿಶ್ವಕಪ್‌ಗೆ ಇವರನ್ನು ನಾಯಕರನ್ನಾಗಿ ನೇಮಿಸಲೇಬೇಕು ಎಂದು ಬಿಸಿಸಿಐ ಪಣತೊಟ್ಟಿದೆಯೋ ಏನೋ, ರೋಹಿತ್‌ ಬ್ಯಾಟ್‌ ಮುಷ್ಕರ ಹೂಡಲಾರಂಭಿಸಿದೆ! ನಾಯಕತ್ವ ಬಿಡಿ, ತಂಡದಲ್ಲಿ ಸ್ಥಾನ ಪಡೆಯುವುದೇ ಅನುಮಾನ ಎಂಬಂತಾಗಿದೆ ರೋಹಿತ್‌ ಸ್ಥಿತಿ. ಬೆಂಗಳೂರಿನಲ್ಲಾದರೂ ರನ್‌ ಬರಗಾಲದಿಂದ ಮುಕ್ತರಾಗಬೇಕಿದೆ. ಇದು ಅವರ ಮುಂದಿರುವ ಕೊನೆಯ ಅವಕಾಶ. ಬಳಿಕ ಐಪಿಎಲ್‌ ಸಾಧನೆಯನ್ನೇ ನಂಬಿ ಕೂರಬೇಕು.

Advertisement

ಕೊಹ್ಲಿ ಬ್ಯಾಟಿಂಗ್‌ ಟಚ್‌
ರೋಹಿತ್‌ ಅವರಂತೆ 14 ತಿಂಗಳ ಬಳಿಕವೇ ಟಿ20 ಆಡಿದ ವಿರಾಟ್‌ ಕೊಹ್ಲಿ ಉತ್ತಮ “ಬ್ಯಾಟಿಂಗ್‌ ಟಚ್‌’ನಲ್ಲಿದ್ದಾರೆ. ಮೊದಲ ಪಂದ್ಯದಿಂದ ಹೊರಗುಳಿದು ಇಂದೋರ್‌ನಲ್ಲಿ ಕ್ರೀಸ್‌ ಇಳಿದ ಕೊಹ್ಲಿ 16 ಎಸೆತಗಳಿಂದ 29 ರನ್‌ ಬಾರಿಸಿದ್ದಾರೆ. ಅಫ್ಘಾನ್‌ ತಂಡದ ಪ್ರಧಾನ ಸ್ಪಿನ್ನರ್‌ ಮುಜೀಬ್‌ ಉರ್‌ ರೆಹಮಾನ್‌ ಅವರನ್ನು ಟಾರ್ಗೆಟ್‌ ಮಾಡಿದಂತಿದ್ದ ಕೊಹ್ಲಿ, ಇವರ 7 ಎಸೆತಗಳಿಂದ 18 ರನ್‌ ಹೊಡೆದುದನ್ನು ಮರೆಯುವಂತಿಲ್ಲ. ಸ್ಪಿನ್ನರ್‌ಗಳೆದುರು ಕೊಹ್ಲಿ ನಿಧಾನ ಗತಿಯ ಆಟವಾಡುತ್ತಾರೆ ಎಂಬ ಅನಿಸಿಕೆ ಇಲ್ಲಿ ಸುಳ್ಳಾಗಿತ್ತು.

ಜೈಸ್ವಾಲ್‌, ದುಬೆ ಯಶಸ್ಸು
ಎಡಗೈ ಆರಂಭಕಾರ ಯಶಸ್ವಿ ಜೈಸ್ವಾಲ್‌ ಇಂದೋರ್‌ನಲ್ಲಿ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದಾರೆ. ಒಮ್ಮೆ ಸಿಡಿಯಲಾರಂಭಿಸಿದರೆ ಇವರನ್ನು ತಡೆಯುವುದು ಸುಲಭವಲ್ಲ ಎಂಬುದು ಈಗ ಪ್ರತಿಯೊಂದು ತಂಡಕ್ಕೂ ಅರಿವಾಗತೊಡಗಿದೆ.

ಮಧ್ಯಮ ಕ್ರಮಾಂಕದ ಎಡಗೈ ಬ್ಯಾಟ್ಸ್‌ಮನ್‌ ಶಿವಂ ದುಬೆ ಮರಳಿ ಅವಕಾಶ ಪಡೆದ ಬಳಿಕ ಹೊಡಿಬಡಿ ಅವತಾರ ಎತ್ತಿದಂತಿದೆ. 3 ವರ್ಷಗಳ ಬ್ರೇಕ್‌ ಬಳಿಕ ಐರ್ಲೆಂಡ್‌ ಸರಣಿ, ಏಷ್ಯಾಡ್‌ ತಂಡದಲ್ಲಿ ಸ್ಥಾನ ಪಡೆದ ದುಬೆ ಉಪಯುಕ್ತ ಆಟಗಾರನಾಗಿ ರೂಪುಗೊಂಡಿದ್ದಾರೆ. ಬಹುಶಃ ಟಿ20 ವಿಶ್ವಕಪ್‌ಗೆ ಇವರ ಸ್ಥಾನ ಪಕ್ಕಾ.

ಸ್ಯಾಮ್ಸನ್‌ಗೆ ಅವಕಾಶ?
ಅಂತಿಮ ಪಂದ್ಯಕ್ಕೆ ಭಾರತದ ಬ್ಯಾಟಿಂಗ್‌ ಸರದಿಯಲ್ಲಿ ಯಾವುದೇ ಬದಲಾವಣೆ ನಡೆಯುವ ಸಾಧ್ಯತೆ ಇಲ್ಲ. ಆದರೆ ವಿಕೆಟ್‌ ಕೀಪರ್‌ ಜಿತೇಶ್‌ ಶರ್ಮ ಬದಲು ಸಂಜು ಸ್ಯಾಮ್ಸನ್‌ಗೆ ಅವಕಾಶ ಕೊಡುವುದು ಸೂಕ್ತ.

ಬೌಲಿಂಗ್‌ ವಿಭಾಗದಲ್ಲಿ ಎರಡು ಬದಲಾವಣೆ ಸಂಭವಿಸುವ ಸಾಧ್ಯತೆ ಇದೆ. ಕುಲದೀಪ್‌ ಯಾದವ್‌ ಮತ್ತು ಆವೇಶ್‌ ಖಾನ್‌ ಹನ್ನೊಂದರ ಬಳಗ ಪ್ರವೇಶಿ ಸಬಹುದು. ಕುಲದೀಪ್‌ಗಾಗಿ ರವಿ ಬಿಷ್ಣೋಯಿ ಅಥವಾ ವಾಷಿಂಗ್ಟನ್‌ ಸುಂದರ್‌ ಹೊರಗುಳಿಯಬಹುದು. ಮುಕೇಶ್‌ ಕುಮಾರ್‌ ಸ್ಥಾನ ಆವೇಶ್‌ ಖಾನ್‌ ಪಾಲಾಗಬಹುದು.

ಅಫ್ಘಾನ್‌ ನಿರೀಕ್ಷೆ ಹುಸಿ
ಅಪಾಯಕಾರಿ ಎಂದೇ ಗುರುತಿಸಲ್ಪಡುವ ಅಫ್ಘಾನ್‌ ಈವರೆಗೆ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ತಂಡದ ಹಿನ್ನಡೆಗೆ ಪ್ರಧಾನ ಸ್ಪಿನ್ನರ್‌ ರಶೀದ್‌ ಖಾನ್‌ ಗೈರು ಮುಖ್ಯ ಕಾರಣ. ತಂಡದಿಂದ ಇನ್ನೂ “ಮ್ಯಾಚ್‌ ವಿನ್ನಿಂಗ್‌” ಸಾಧನೆ ಕಂಡುಬಂದಿಲ್ಲ. ಆರಂಭಕಾರ ಗುರ್ಬಜ್‌ ಸಿಡಿದು ನಿಲ್ಲಬೇಕಾದ ಅಗತ್ಯವಿದೆ.

“ಚಿನ್ನಸ್ವಾಮಿ ಸ್ಟೇಡಿಯಂ” ಟ್ರ್ಯಾಕ್‌ ಬೌಲರ್‌ಗಳಿಗೆ ಹೆಚ್ಚು ನೆರವು ನೀಡುತ್ತದಾದರೂ ಇಲ್ಲಿನ ಸಣ್ಣ ಅಂತರದ ಬೌಂಡರಿಗಳು ಬ್ಯಾಟರ್‌ಗಳಿಗೆ ಲಾಭ ತಂದುಕೊಡುವ ಸಾಧ್ಯತೆಯಂತೂ ಇದೆ. ಈ ಸರಣಿಯಲ್ಲಷ್ಟೇ ಅಲ್ಲ, ಭಾರತದೆದುರಿನ ಟಿ20 ಪಂದ್ಯಗಳಲ್ಲಿ ಗೆಲುವಿನ ಖಾತೆ ತೆರೆಯಲು ಅಫ್ಘಾನ್‌ ಯಶಸ್ವಿ ಆದೀತೇ ಎಂಬುದು ಬೆಂಗಳೂರು ಪಂದ್ಯದ ಕುತೂಹಲ.

Advertisement

Udayavani is now on Telegram. Click here to join our channel and stay updated with the latest news.

Next