ಬೆಂಗಳೂರು: ಕಾರು ಮಾರಾಟ ಮಾಡುವುದಾಗಿ ಮನೆಯಿಂದ ಹೋದ ಅಜೀತಾಬ್ ಕುಮಾರ್ ನಾಪತ್ತೆ ಪ್ರಕರಣದ ತನಿಖೆಯನ್ನು ಸಿಐಡಿ ಮುಂದುವರಿಸಲು ಹೈಕೋರ್ಟ್ ಸೋಮವಾರ ಅನುಮತಿ ನೀಡಿದೆ.
ಒಂದೂವರೆ ತಿಂಗಳಿನಿಂದ ತನಿಖೆ ನಡೆಸುತ್ತಿದ್ದ ಎಸ್‌ಐಟಿ ತಂಡದಲ್ಲಿರುವ ಪೊಲೀಸ್ ಸಿಬ್ಬಂದಿ, ಚುನಾವಣಾ ಕಾರ್ಯಕ್ಕೆ ಅಗತ್ಯವಿದ್ದು, ಸಿಬ್ಬಂದಿ ಕೊರತೆ ಎದುರಾಗಲಿದೆ. ಈ ನಿಟ್ಟಿನಲ್ಲಿ ಪ್ರಕರಣದ ತನಿಖೆಯನ್ನು ಸಿಐಡಿ ಮುಂದುವರಿಸಲು ಅನುಮತಿ ನೀಡುವಂತೆ ಕೋರಿರುವ ನಗರ ಪೊಲೀಸ್ ಆಯುಕ್ತರ ಮನವಿಯನ್ನು ಹೈಕೋರ್ಟ್ ಪುರಸ್ಕರಿಸಿದೆ.
ಈ ಕುರಿತ ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿದ್ದ ನ್ಯಾಯಮೂರ್ತಿ ವಿನೀತ್ ಕೊಠಾರಿ ಅವರಿದ್ದ ಏಕಸದಸ್ಯ ಪೀಠದ ಮುಂದೆ, ಹೆಚ್ಚುವರಿ ಅಡ್ವೋಕೆಟ್ ಜನರಲ್ ಶಿವಣ್ಣ, ಪ್ರಕರಣದ ತನಿಖೆಯನ್ನು ಸಿಐಡಿ ಮುಂದುವರಿಸಲು ಅನುಮತಿ ನೀಡುವಂತೆ ಮನವಿ ಮಾಡಿದರು. ಮನವಿ ಮಾನ್ಯ ಮಾಡಿದ ನ್ಯಾಯಪೀಠ, ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿ, ಮಾ.12ರಂದು ತನಿಖಾ ಪ್ರಗತಿ ವರದಿ ಸಲ್ಲಿಸುವಂತೆ ನಿರ್ದೇಶಿಸಿ ವಿಚಾರಣೆ ಮುಂದೂಡಿತು.
ಸಿಗದ ಸುಳಿವು: ಪುತ್ರನ ನಾಪತ್ತೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ಕೋರಿ ಅಜೀತಾಬ್ ತಂದೆ ಅಶೋಕ್ ಕುಮಾರ್ ಸಿನ್ಹಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ಟೆಕ್ಕಿ ಪತ್ತೆಗೆ ವಿಶೇಷ ತನಿಖಾ ತಂಡ ರಚಿಸುವಂತೆ ನಿರ್ದೇಶಿಸಿತ್ತು. ಈ ಹಿನ್ನೆಲೆಯಲ್ಲಿ ವೈಟ್ ಫೀಲ್ಡ್ ಡಿಸಿಪಿ ನೇತೃತ್ವದಲ್ಲಿ ರಚಿಸಿದ್ದ 80 ಸಿಬ್ಬಂದಿಯ ಎಸ್‌ಐಟಿ, ಹಲವು ಆಯಾಮಗಳಲ್ಲಿ ತನಿಖೆ ನಡೆಸಿದರೂ, ಇದುವರೆಗೂ ಟೆಕ್ಕಿಯ ಸುಳಿವು ಸಿಕ್ಕಿಲ್ಲ.
ವೈಟ್‌ಫೀಲ್ಡ್‌ನ ಖಾಸಗಿ ಕಂಪನಿಯೊಂದರ ಉದ್ಯೋಗಿಯಾಗಿದ್ದ, ಪಾಟ್ನಾ ಮೂಲದ ಅಜೀತಾಬ್ ಕುಮಾರ್ (29) ಕೊಲ್ಕತ್ತಾದ ಐಎಂಎಂನಲ್ಲಿ ಉನ್ನತ ವ್ಯಾಸಂಗ ಮಾಡಲು ಯೋಚಿಸಿದ್ದ. ಇದಕ್ಕಾಗಿ ತನ್ನ ಬಳಿಯಿದ್ದ ಮಾರುತಿ ಸಿಯಾಜ್ ಕಾರನ್ನು ಮಾರಾಟ ಮಾಡಲು ತೀರ್ಮಾನಿಸಿ ಓಎಲ್‌ಎಕ್ಸ್‌ನಲ್ಲಿ ಕಾರು ಮಾರಾಟಕ್ಕೆ ಪ್ರಕಟಣೆ ನೀಡಿದ್ದ.
ಮರು ದಿನ ಅಪರಿಚಿತ ವ್ಯಕ್ತಿಯೊಬ್ಬರು ಕಾರು ಖರೀದಿಗಾಗಿ ಕರೆ ಮಾಡಿದ್ದು, ಕಾರನ್ನು ಟ್ರಯಲ್ ನೋಡಬೇಕು ಎಂದು ಹೇಳಿದ್ದಾರೆ ಎಂದು ಡಿ.18ರಂದು ಸ್ನೇಹಿತರಿಗೆ ಹೇಳಿ ಹೋದ ಅಜೀತಾಬ್ ವಾಪಾಸ್ ಬಂದಿಲ್ಲ. ಇದರಿಂದ ಗಾಬರಿಗೊಂಡ ಆತನ ಸ್ನೇಹಿತರು ವೈಟ್‌ಫೀಲ್ಡ್ ಠಾಣೆಗೆ ದೂರು ನೀಡಿದ್ದರು.