ಬಂಟ್ವಾಳ: ಸರಪಾಡಿಯ ಹಂಚಿಕಟ್ಟೆಯಲ್ಲಿ ಮೇ 14ರಂದು ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ 3 ವರ್ಷದ ಮಗುವೊಂದು 30 ಅಡಿ ಆಳದ ಬಾವಿಗೆ ಬಿದ್ದಿದ್ದು, ತತ್‌ಕ್ಷಣ ತನ್ನ ಪ್ರಾಣವನ್ನೂ ಲೆಕ್ಕಿಸದೆ ಬಾವಿಗಿಳಿದು ರಕ್ಷಿಸಿದ ಯುವಕನ ಸಾಹಸದ ಕುರಿತು ಇದೀಗ ಪ್ರಶಂಸೆ ವ್ಯಕ್ತವಾಗಿದೆ.
ಹಂಚಿಕಟ್ಟೆ ನಿವಾಸಿ ನೋಣಯ್ಯ ನಾಯ್ಕ್ ಅವರ ಪುತ್ರ ಅಭಿಷೇಕ್ ಬಾವಿಗೆ ಬಿದ್ದ ಬಾಲಕ. ಮಠದಬೆಟ್ಟು ನಿವಾಸಿ ಉಮೇಶ್ ನಾಯ್ಕ್ ರಕ್ಷಿಸಿದ ಯುವಕ.
ಅಂಗಳದಲ್ಲಿ ಆಡುತ್ತಿದ್ದ ಮಗು ಬಾವಿಯ ದಂಡೆಯ ಮೇಲೇರಿ ಕಸ ಬೀಳುತ್ತದೆ ಎಂದು ಅಡ್ಡಲಾಗಿ ಹಾಕಿದ್ದ ಬಲೆಯ ಮೇಲೆ ಹೋಗಿದ್ದು, ಆಗ ಬಲೆ ಹರಿದು ಮಗು ಬಾವಿಗೆ ಬಿದ್ದಿತು. ಮನೆಯೊಳಗೆ ಮಗುವಿನ ತಾಯಿ ಹಾಗೂ ಆಕೆಯ ಸಹೋದರಿ ಮಾತ್ರ ಇದ್ದು, ನೀರಿಗೆ ಏನೋ ಬಿದ್ದ ಶಬ್ದ ಕೇಳಿಸಿತೆಂದು ಹೊರಗೆ ಬಂದು ನೋಡಿದಾಗ ಮಗು ಬಾವಿಗೆ ಬಿದ್ದಿರುವುದು ಗೋಚರಿಸಿತು. ಅವರ ಮನೆ ರಸ್ತೆ ಬದಿಯಲ್ಲೇ ಇದ್ದು, ತಾಯಿಯ ಆಕ್ರಂದನ ಆಲಿಸಿದ ಬೈಕಿನಲ್ಲಿ ಸಾಗುತ್ತಿದ್ದ ಯುವಕ ಉಮೇಶ್ ನಾಯ್ಕ್ ನೆರವಿಗೆ ಧಾವಿಸಿ ಬಂದರು. ತುಂಡಾಗುವ ಸ್ಥಿತಿಯಲ್ಲಿ ಇದ್ದ ಹಳೆಯ ಹಗ್ಗವನ್ನು ಬಳಸಿ ಬಾವಿಗೆ ಇಳಿದು ಮಗುವನ್ನು ಎತ್ತಿ ಹಿಡಿದು ರಕ್ಷಿಸಿದರು. ಅಷ್ಟರಲ್ಲಿ ಹೊರಗೆ ಹೋಗಿದ್ದ ಮಗುವಿನ ತಂದೆ ನೋಣಯ್ಯ ನಾಯ್ಕ್ ಹಾಗೂ ಮತ್ತಿಬ್ಬರು ಬಂದಿದ್ದು, ಅವರು ಬೇರೆ ಹಗ್ಗದ ಸಹಾಯದಿಂದ ಮಗುವನ್ನು ಮೇಲಕ್ಕೆ ಎತ್ತಿದರು. ಬಳಿಕ ಉಮೇಶ್ ಮೇಲೆ ಬಂದರು.
ಮಗುವಿನ ಕುತ್ತಿಗೆಯ ವರೆಗೂ ಬಾವಿಯಲ್ಲಿ ನೀರಿದ್ದು, ನೀರು ಹೆಚ್ಚಿದ್ದರೂ ಅಥವಾ ಉಮೇಶ್ ಬರುವುದು ಸ್ವಲ್ಪ ತಡವಾಗುತ್ತಿದ್ದರೂ ಅಪಾಯ ಸಂಭವಿಸುವ ಸಾಧ್ಯತೆ ಇತ್ತು ಎನ್ನಲಾಗಿದೆ. ಬಾವಿಯ ಬೀಳುವಾಗ ಬದಿಯ ಭಾಗ ಮಗುವಿಗೆ ತಾಗಿದ್ದರೂ ನೀರಿಲ್ಲದೇ ಇರುತ್ತಿದ್ದರೂ ಮಗುವಿಗೆ ಗಾಯವಾಗುವ ಸಾಧ್ಯತೆ ಇತ್ತು. ಆದರೆ ಅದೃಷ್ಟವಶಾತ್ ಹಾಗೇನೂ ಆಗದೆ ಮಗು ಕ್ಷೇಮವಾಗಿದೆ.
ಮಗು ಅಭಿಷೇಕ್ ಯಾವತ್ತೂ ಬಾವಿಯ ಬಳಿಗೆ ಹೋದವನಲ್ಲ. ಯಾಕೆ ಹೋಗಿದ್ದಾನೆ ಎಂಬುದು ಗೊತ್ತಿಲ್ಲ. ಮಗು ಬೀಳುವ ಹೊತ್ತಿಗೆ ದೇವರೇ ಉಮೇಶ್ ಅವರನ್ನು ಕಳುಹಿಸಿದ್ದು, ಅಷ್ಟು ಆಳಕ್ಕೆ ಬಿದ್ದ ಮಗು ಯಾವುದೇ ಗಾಯಗಳಿಲ್ಲದೆ ಮೇಲೆ ಬಂದಿರುವುದು ದೇವರ ದಯೆಯೇ ಸರಿ ಎಂದು ಮಗುವಿನ ತಂದೆ ನೋಣಯ್ಯ ಉದಯವಾಣಿಗೆ ತಿಳಿಸಿದ್ದಾರೆ.
ಉಮೇಶ್ ಅವರ ಸಾಹಸದ ಕುರಿತು ಇದೀಗ ಊರಿನಲ್ಲಿ ಪ್ರಶಂಸೆ ವ್ಯಕ್ತವಾಗಿದೆ.