ಬೆಂಗಳೂರು: ನಗರದ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಗುರುವಾರ ರಾತ್ರಿ ಪ್ಲಾಟ್‌ಫಾರ್ಮ್ನಲ್ಲಿ ಆಟವಾಡುತ್ತಿದ್ದ 4 ವರ್ಷದ ಮಗು ಆಯತಪ್ಪಿ ಹಳಿ ಮೇಲೆ ಬಿದ್ದಿದ್ದು, ಕೂಡಲೇ ಎಚ್ಚೆತ್ತ ಭದ್ರತಾ ಹಾಗೂ ನಿಲ್ದಾಣ ನಿಯಂತ್ರಕ ಸಿಬ್ಬಂದಿ ರೈಲು ಹಳಿಯ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗುರುವಾರ ರಾತ್ರಿ 9.08 ನಿಮಿಷಕ್ಕೆ ತಾಯಿ ಮತ್ತು ಇಬ್ಬರು ಮಕ್ಕಳು ಬೈಯಪ್ಪನಹಳ್ಳಿ ರೈಲ್ವೆ ನಿಲ್ದಾಣಕ್ಕೆ ಬಂದಿದ್ದು, ಪ್ಲಾಟ್‌ಫಾರ್ಮ್ 2ರಲ್ಲಿ ನಿಂತಿದ್ದರು. ಆಗ ತನ್ನ ಸಹೋದರನ ಜತೆ ಆಟವಾಡುತ್ತಿದ್ದ ಮಗು, ರೈಲು ಹಳಿ ಸಮೀಪ ತೆರಳಿದ್ದು, ಆಯತಪ್ಪಿ ಕೆಳಗೆ ಬಿದ್ದಿದ್ದೆ. ಅದೇ ವೇಳೆ ನಿಲ್ದಾಣದಲ್ಲಿದ್ದ ಭದ್ರತಾ ಸಿಬ್ಬಂದಿ ಕೂಡಲೇ ನಿಲ್ದಾಣ ನಿಯಂತ್ರಕರಿಗೆ ಮಾಹಿತಿ ನೀಡಿದ್ದಾರೆ.
ಬಳಿಕ ಪ್ಲಾಟ್‌ಫಾರ್ಮ್ ನಲ್ಲಿರುವ ತುರ್ತು ರೈಲು ನಿಲುಗಡೆ(ಎಮರ್ಜೆನ್ಸಿ ಬಟನ್) ಬಟನ್ ಒತ್ತಿ ಕೆಲ ಕ್ಷಣಗಳಲ್ಲೇ ಹಳಿ ಮೇಲಿನ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿದ್ದಾರೆ. ನಂತರ ಹಳಿ ಮೇಲೆ ಇಳಿದು ಮಗುವನ್ನು ರಕ್ಷಣೆ ಮಾಡಿದ್ದಾರೆ.
ಮೆಟ್ರೋ ಸಿಬ್ಬಂದಿ ಬಾಲಕನನ್ನು ಹಳಿಯಿಂದ ಎತ್ತಿ ಪ್ಲಾಟ್‌ಫಾರ್ಮ್ಗೆ ತಂದು ಪರೀಕ್ಷಿಸಿದ್ದಾರೆ. ಆಗ ಮಗುವಿನ ಎಡಕಿವಿಯ ಹಿಂದೆ ಸಣ್ಣ ಗಾಯಗಳಾಗಿದ್ದವು. ಬೇರೆ ಯಾವುದೇ ಗಾಯಗಳಾಗಿರಲಿಲ್ಲ. ಕೂಡಲೇ ಸರ್ ಸಿ.ವಿ. ರಾಮನ್ ಆಸ್ಪತ್ರೆಗೆ ಮೆಟ್ರೋ ಸಿಬ್ಬಂದಿಯೇ ಕರೆದೊಯ್ದು ಪರೀಕ್ಷೆ ಮಾಡಿಸಿದರು. ಯಾವುದೇ ಗಂಭೀರ ಸ್ವರೂಪದ ಗಾಯಗಳು ಆಗಿರಲಿಲ್ಲ. ಬಳಿಕ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲು ವೈದ್ಯರು ಸೂಚಿಸಿದರು.
ಆ ನಂತರ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮಾಡಿಸಲಾಗಿದ್ದು, ಯಾವುದೇ ಸಮಸ್ಯೆ ಕಂಡು ಬಾರದ ಕಾರಣ ಮಗುವನ್ನು ತಾಯಿ ಜತೆಗೆ ಕಳುಹಿಸಿಕೊಡಲಾಯಿತು. ಈ ಘಟನೆಯಿಂದಾಗಿ ರಾತ್ರಿ 9.08ರಿಂದ 9.15ರವರೆಗೆ ಮೆಟ್ರೊ ರೈಲು ಸಂಚಾರ ಸ್ಥಗಿತಗೊಳಿಸಲಾಯಿತು. ಬಳಿಕ ಎಂದಿನಂತೆ ಕಾರ್ಯಾಚರಣೆ ನಡೆಯಿತು ಎಂದು ಬಿಎಂಆರ್ ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಗು ಉಳಿಸಿದ ಇಬ್ಬರು ಸೆಕ್ಯೂರಿಟಿ ಗಾರ್ಡ್‌ಗಳು:
ಮಗು ರೈಲು ಹಳಿಗೆ ಬೀಳುತ್ತಿದ್ದಂತೆ ಎಚ್ಚೆತ್ತ ಪ್ಲಾಟ್‌ಫಾರ್ಮ್ಗಳಲ್ಲಿದ್ದ ಇಬ್ಬರು ಸೆಕ್ಯೂರಿಟಿ ಗಾರ್ಡ್‌ಗಳು ಕೂಡಲೇ ಎಮರ್ಜೆನ್ಸಿ ಬಟನ್ ಒತ್ತಿ, ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ಅದರಿಂದ ಮಗುವಿನ ಪ್ರಾಣ ಉಳಿದಿದೆ. ಇಲ್ಲವಾದರೆ ಮಗುವಿನ ಪ್ರಾಣ ಹೋಗುತ್ತಿದ್ದ ಎಂದು ಮೂಲಗಳು ತಿಳಿಸಿವೆ.
ಆಗಿದ್ದೇನು?
ಇಬ್ಬರು ಮಕ್ಕಳ ಜತೆ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣಕ್ಕೆ ಬಂದಿದ್ದ ತಾಯಿ
ಈ ವೇಳೆ ಸಹೋದರನ ಜತೆ ಆಟವಾಡುತ್ತಾ ಹಳಿಗೆ ಬಿದ್ದ 4 ವರ್ಷದ ಮಗು
ಕೂಡಲೇ ನಿಲ್ದಾಣದ ನಿಯಂತ್ರಕರಿಗೆ ಮಾಹಿತಿ ನೀಡಿದ ಭದ್ರತಾ ಸಿಬ್ಬಂದಿ
ಎಮರ್ಜೆನ್ಸಿ ಬಟನ್ ಒತ್ತಿ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿದ ಸೆಕ್ಯೂರಿಟಿ
ಬಳಿಕ ಹಳಿ ಮೇಲೆ ಇಳಿದು ಮಗುವನ್ನು ಮೇಲಕ್ಕೆ ಎತ್ತಿ ರಕ್ಷಿಸಿದ ನೌಕರ
ಹಳಿಗೆ ಜಿಗಿದ ಘಟನೆಗಳು
2012ರ ಮಾ. 5ರಂದು ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣದಲ್ಲಿ ವಿದ್ಯಾರ್ಥಿಯೊಬ್ಬ ಮೆಟ್ರೋ ರೈಲಿನೆದುರು ಜಿಗಿದು ಆತ್ಮಹತ್ಯೆಗೆ ಪ್ರಯತ್ನಿಸಿದ್ದ. ಇದು ಮೊದಲ ಘಟನೆಯಾಗಿದೆ.
2019ರಲ್ಲಿ ವಿದ್ಯಾರ್ಥಿಯೊಬ್ಬ ಬಸವನಗುಡಿ ನ್ಯಾಷನಲ್ ಕಾಲೇಜು ಮೆಟ್ರೋ ನಿಲ್ದಾಣದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ. ಅದೃಷ್ಟವಶಾತ್ ಬದುಕಿದ್ದ.
ಈ ವರ್ಷದ ಹೊಸ ವರ್ಷದ ಮೊದಲ ದಿನವೇ ಇಂದಿರಾನಗರ ಮೆಟ್ರೋ ನಿಲ್ದಾಣದಲ್ಲಿ ಮೊಬೈಲ್ ಬಿತ್ತು ಎಂಬ ಕಾರಣಕ್ಕೆ ಮಹಿಳೆ ಟ್ರಾಕ್‌ಗೆ ಇಳಿದಿದ್ದರು. ತಕ್ಷಣ ಎಚ್ಚೆತ್ತ ಸಿಬ್ಬಂದಿ ಹಳಿಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದರಿಂದ ಮಹಿಳೆ ಅಪಾಯದಿಂದ ಪಾರಾಗಿದ್ದರು.