Advertisement

ಹಾಡುಗಳ ಮೂಲಕ ಮತ ಜಾಗೃತಿಯ ಮೋಡಿ

12:16 AM Apr 08, 2019 | Lakshmi GovindaRaju |

ಪ್ರಜಾಪ್ರಭುತ್ವದ ಮಹಾ ಹಬ್ಬದಲ್ಲೀಗ ಎಲ್ಲೆಡೆ ಸಂಭ್ರಮ, ಸಂಡಗರ. ಗೆಲ್ಲಲೇಬೇಕೆಂದು ಹಠ ತೊಟ್ಟಿರುವ ರಾಜಕೀಯ ಮುಖಂಡರು ತಮ್ಮದೇ ಆದ ತಂತ್ರ ಮತ್ತು ಪ್ರತಿತಂತ್ರದ ಮೂಲಕ ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸುತ್ತಿದ್ದಾರೆ. ಕೂಡಿ-ಕಳೆದು, ಗುಣಾಕಾರ-ಭಾಗಾಕಾರದ ಲೆಕ್ಕದಲ್ಲಿ ರಾಜಕೀಯ ಮುಖಂಡರೊಂದಿಗೆ ಕಾರ್ಯತರೂ ಭಾಗಿಯಾಗಿದ್ದು, ಕದನ ಕಣ ಭರ್ಜರಿ ರಂಗೇರುತ್ತಿದೆ.

Advertisement

ಜತೆಗೆ ತಮ್ಮದೇ ಆದ ಚುನಾವಣೆ ಗೀತೆಗಳ (ಹಿಂದಿ, ಕನ್ನಡ ಹಾಡುಗಳ ರಿಮೇಕ್‌ ಸಾಂಗ್ಸ್‌) ಮೂಲಕ ಮತದಾರನ್ನು ಸೆಳೆಯುವ ಪ್ರಯತ್ನಕ್ಕೆ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳು ಮುಂದಾಗಿವೆ. ಹಾಗೇ ಬೆಂಗಳೂರು ನಗರ ಜಿಲ್ಲಾಡಳಿತ, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಸಂಘ ಸಂಸ್ಥೆಗಳು, ಶಾಲೆ, ಕಾಲೇಜುಗಳು ಮತದಾರರಲ್ಲಿ ಅರಿವಿನ ಬೀಜ ಬಿತ್ತುವಲ್ಲಿ ಯಶಸ್ವಿಯಾಗಿವೆ. ಭಿನ್ನ-ವಿಭಿನ್ನ ಕಾರ್ಯಕ್ರಮಗಳನ್ನು ರೂಪಿಸಿ ನಿರೂಪಿಸುತ್ತಿವೆ.

ಲೈಫ್ ಈಸ್‌ ಫ‌ುಲ್‌ ಪ್ರಾಬ್ಲಿಂ- ಅದ್ಕೆ ಬೇಕಾ ಸೆಲ್ಯೂಷನ್‌.. ರೆಡಿಯಾಗಿ ನೇಷನ್‌ – 5 ವರ್ಷಕ್ಕೊಮ್ಮೆ ಎಲೆಕ್ಷನ್‌.. ಓಟ್‌ನಲ್ಲಿ ಮಜಾ ಇದೆ ಧ್ಯೇಯ ಗೀತೆ, ಮತದಾನ ಕಡ್ಡಾಯವಾಗಿ ಮಾಡಿ, ಮತಗಳನ್ನು ಮಾರಬೇಡಿ, ಆಮಿಷಗಳಿಗೆ ಬಲಿಯಾಗಬೇಡಿ ಎಂಬ ಜಾಗೃತಿ ಸಂದೇಶ ಹೊತ್ತ ಬೀದಿ ನಾಟಕಗಳು ಕೂಡ ಅಲ್ಲಲ್ಲಿ ಗಮನ ಸೆಳೆಯುತ್ತಿವೆ.

ರೇಡಿಯೋ ಜಾಕಿಗಳ ಸಾಂಗ್‌: ಸಿಲಿಕಾನ್‌ ಸಿಟಿಯ ಚುನಾವಣಾ ರಾಯಭಾರಿಗಳಲ್ಲಿ ಒಬ್ಬರಾಗಿರುವ ರೇಡಿಯೋ ಜಾಕಿ ರಜಸ್‌ ಮತ್ತವರ ತಂಡ ರೂಪಿಸಿರುವ ಓಟ್‌ನಲ್ಲಿ ಮಜವಿದೆ ಎಂಬ ಹಾಡು ಬಿಬಿಎಂಪಿಯ ಮತದಾನದ ಧ್ಯೇಯ ಗೀತೆಯಾಗಿದ್ದು, ಇದನ್ನು ಜಾಗೃತಿ ಕಾರ್ಯಕ್ರಮಗಳಲ್ಲಿ ಬಳಸಿಕೊಳ್ಳಲಾಗುತ್ತಿದೆ. ಒಂದು ನಿಮಿಷದ ಈ ಗೀತೆಯನ್ನು ವಿಶ್ವಾಸ್‌ ಕಾಮತ್‌ ರಚಿಸಿದ್ದು, ಅಭಿನಂದನ್‌ ಹಾಡಿದ್ದಾರೆ.

ಇದರಲ್ಲಿ ರೇಡಿಯೋ ಜಾಕಿಗಳಾದ ರಜಸ್‌, ನೇತ್ರಾ, ಸೌಜನ್ಯಾ, ಸೋನು, ನಿಖೀತಾ ಚುನಾವಣಾ ಗುರುತಿನ ಚೀಟಿ ಹಿಡಿದು ನಟಿಸಿದ್ದಾರೆ. ಯೂಟ್ಯೂಬ್‌ನಲ್ಲಿ ಈ ಹಾಡು ಸಖತ್‌ ಸದ್ದು ಮಾಡುತ್ತಿದೆ. ಮತ ಹಾಕಲಿಲ್ಲ ಎಂದರೆ ಬೆಂಗಳೂರಿನಲ್ಲಿ ಯಾವೆಲ್ಲಾ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ತಿಳಿಸುವುದರೊಂದಿಗೆ ನಗರದ ತೊಂದರೆಗಳ ದೃಶ್ಯಗಳು ಈ ಗೀತೆಯ ವಿಡಿಯೋದಲ್ಲಿವೆ.

Advertisement

ವಿದ್ಯಾರ್ಥಿಗಳಲ್ಲಿ ಜಾಗೃತಿ: ಕಳೆದ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರಿನಲ್ಲಿ ಶೇ.52.4ರಷ್ಟು ಮತದಾನವಾಗಿದೆ. ಈ ಬಾರಿ ಶೇ.75ರಷ್ಟು ಮತದಾನದ ಗುರಿ ಹೊಂದಿರುವ ಪಾಲಿಕೆ, ಯುವ ಸಮೂಹದ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸುವುದರಲ್ಲಿ ಮುಂಚೂಣಿಯಲ್ಲಿದೆ. ಈ ಕಾರ್ಯ ಸಾಧನೆಗಾಗಿಯೇ ಕಳೆದ 2 ತಿಂಗಳುಗಳಿಂದ ಶಾಲೆ, ಕಾಲೇಜು ಮಟ್ಟದಲ್ಲಿ ವಿವಿಧ ಚಟುವಟಿಕೆ ಹಮ್ಮಿಕೊಳ್ಳಲಾಗಿತ್ತು.

ವಿದ್ಯಾರ್ಥಿಗಳಲ್ಲಿ ಅರಿವಿನ ಬೀಜ ಬಿತ್ತುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ದಿನವಾದ ಜ.25ರಿಂದಲೇ ಮತದಾನದ ಬಗ್ಗೆ ತಿಳಿವಳಿಕೆ ನೀಡುವ ಕಾರ್ಯವನ್ನು ಪಾಲಿಕೆ ಮಾಡಿದೆ. ಪ್ರಬಂಧ ರಚನೆ, ಚಿತ್ರಕಲಾ ಸ್ಪರ್ಧೆ, ರಸಪ್ರಶ್ನೆ, ಪೋಸ್ಟರ್‌ ಮೇಕಿಂಗ್‌, ಆಶುಭಾಷಣ, ಚರ್ಚೆ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಕೂಡ ಆಯೋಜಿಸಲಾಗಿತ್ತು.

ವಿದ್ಯಾರ್ಥಿ, ಪೋಷಕರಲ್ಲಿ ಅರಿವು: ಜಾಗೃತಿ ಅಭಿಯಾನದ ವೇಳೆ ಸುಗಮ ಚುನಾವಣೆ, ಮತದಾನವನ್ನು ಕಡ್ಡಾಯಗೊಳಿಸಬೇಕೆ? ಪ್ರಜಾಪ್ರಭುತ್ವದಲ್ಲಿ ಭಾರತ ಚುನಾವಣಾ ಆಯೋಗದ ಪಾತ್ರ, ಗಂಭೀರ ಅಪರಾಧ ಆರೋಪ ಎದುರಿಸುತ್ತಿರುವ ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸದಂತೆ ಅನರ್ಹಗೊಳಿಸಬೇಕೆ? ನೋಟಾ ನನ್ನ ಆಯ್ಕೆ ಆಗಬೇಕೆ? ಮತದಾನ ನನ್ನ ಸಾಂವಿಧಾನಿಕ ಹಕ್ಕು ಇಂತಹ ವಿಷಯಗಳ ಕುರಿತು ಸ್ಪರ್ಧಾತ್ಮಕ ಚಟುವಟಿಕೆಗಳನ್ನು ನಡೆಸಿ ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮತದಾನದ ಬಗ್ಗೆ ಅರಿವು ಮೂಡಿಸಲಾಗಿದೆ.

ಚುನಾವಣೆ ಸಾಕ್ಷಾರತಾ ಕ್ಲಬ್‌: ಪಾಲಿಕೆ ವ್ಯಾಪ್ತಿಯ ಶಾಲೆ, ಕಾಲೇಜುಗಳಲ್ಲಿ ಚುನಾವಣೆ ಸಾಕ್ಷಾರತಾ ಕ್ಲಬ್‌ (ಇಎಲ್‌ಸಿ)ಗಳನ್ನು ಪ್ರಾರಂಭಿಸಿ ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಇಎಲ್‌ಸಿಗಳಲ್ಲಿ ಶಾಲೆಯ ಒಬ್ಬ ಶಿಕ್ಷಕ ಹಾಗೂ ವಿದ್ಯಾರ್ಥಿ, ವಿದ್ಯಾರ್ಥಿನಿ ಪ್ರತಿನಿಧಿಯಿಂದ ಒಬ್ಬರನ್ನು ನೋಡಲ್‌ ಅಧಿಕಾರಿ ಆಯ್ಕೆ ಮಾಡಿ ಅವರ ಹೆಸರು, ಮೊಬೈಲ್‌ ನಂಬರ್‌, ವಿಳಾಸವನ್ನು ಸೂಚನಾಫ‌ಲಕದಲ್ಲಿ ಪ್ರದರ್ಶಿಸಲಾಗುತ್ತದೆ. ಈ ನೋಡಲ್‌ ಅಧಿಕಾರಿಗಳು, ಸ್ಪರ್ಧಾತ್ಮಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಮತದಾನದ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.

ಚುನಾವಣಾ ಪ್ರತಿಜ್ಞೆ: ಬಿಬಿಎಂಪಿ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ವಿದ್ಯಾರ್ಥಿಗಳ ಮೂಲಕ ಮನೆಮನೆಗೆ ಚುನಾವಣಾ ಪ್ರತಿಜ್ಞೆ ತಲುಪಿಸುವ ಕೆಲಸ ಮಾಡಿದೆ. ಯಾವುದೇ ಆಮಿಷಗಳಿಗೆ ಬಲಿಯಾಗಬೇಡಿ, ತಪ್ಪದೇ ಮತದಾನ ಮಾಡಿ ಎಂಬಂತಹ ಚುನಾವಣಾ ಪ್ರತಿಜ್ಞೆಯನ್ನು ಸುಮಾರು ಎರಡೂವರೆ ಲಕ್ಷ ಪೋಷಕರಿಗೆ ತಲುಪಿಸಿ ಅವರಿಂದ ಸಹಿ ಪಡೆಯಲಾಗಿದೆ.

ಮಾಲ್‌ಗ‌ಳಲ್ಲಿ ಫ್ಲಾಷ್‌ ಮಾಬ್‌: ಶನಿವಾರ ಮತ್ತು ಭಾನುವಾರ ಜನ ಹೆಚ್ಚಾಗಿ ಸೇರುವಂತಹ ಮಾಲ್‌ಗ‌ಳಲ್ಲಿ, ಉದ್ಯಾನವನಗಳಲ್ಲಿ ಫ್ಲಾಷ್‌ ಮಾಬ್‌ ಮೂಲಕ ಜನರ ಗಮನ ಸೆಳೆಯಲಾಗುತ್ತಿದೆ. ಬಿಎಂಎಸ್‌ ತಾಂತ್ರಿಕ ಕಾಲೇಜು ವಿದ್ಯಾರ್ಥಿಗಳ ಸಹಯೋಗದಲ್ಲಿ ಏ.15ರೊಳಗಾಗಿ ನಗರದಲ್ಲಿರುವ ವಿವಿಧ ಮಾಲ್‌ಗ‌ಳಲ್ಲಿ ಫ್ಲಾಷ್‌ ಮಾಬ್‌ ನಡೆಸಲು ಪಾಲಿಕೆ ತೀರ್ಮಾನಿಸಿದೆ.

ಮೊದಲ ಬಾರಿ ಮತದಾರರಿಗೆ ಅರಿವು: ರೋಟರಿ ಜಂಕ್ಷನ್‌ ಸಿಬಿ ಭಂಡಾರಿ ಜೈನ್‌ ಕಾಲೇಜಿನ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗೆ ಕಡ್ಡಾಯ ಮತದಾನದ ಕುರಿತು ಜಾಗೃತಿ ಮೂಡಿಸಲಾಗಿದೆ. ಕಡ್ಡಾಯ ಮತದಾನದ ಸಂದೇಶವಿರುವ ಬ್ಯಾಗ್‌ಗಳನ್ನು ವಿತರಣೆ ಮಾಡುವ ಮೂಲಕ ಮೊದಲ ಬಾರಿಗೆ ಮತ ಚಲಾಯಿಸುವ 300 ವಿದ್ಯಾರ್ಥಿಗಳಿಗೆ ಇವಿಎಂ, ವಿವಿ ಪ್ಯಾಟ್‌ ಯಂತ್ರಗಳ ಬಗ್ಗೆ ತಿಳಿವಳಿಕೆ ನೀಡಲಾಗಿದೆ.

ಬೀದಿ ನಾಟಕಗಳ ನೋಟ: ಬೀದಿ ನಾಟಕಗಳು ಕೂಡ ಮತದಾರರಲ್ಲಿ ಅರಿವಿನ ಬೀಜ ಬಿತ್ತುತ್ತಿವೆ. ಇದರಲ್ಲಿ ನಗರದ “ಸ್ಪಷ್ಟ ರಂಗ ತಂಡ’ ಬೀದಿ ನಾಟಕಗಳ ಮೂಲಕ ಮತದಾನದ ಕುರಿತು ಅರಿವು ಮೂಡಿಸುತ್ತಿದೆ. “ನಾವು ಇರೋದೆ ಹೀಗೆ’ ಶೀರ್ಷಿಕೆಯಡಿ ಲಾಲ್‌ಬಾಗ್‌, ಜೆಪಿ ನಗರದ ಪಾರ್ಕ್‌ಗಳಲ್ಲಿ ನಾಟಕ ಪ್ರದರ್ಶನಗೊಂಡಿದ್ದು, ಮೆಚ್ಚುಗೆ ಗಳಿಸಿದೆ. 10 ಪ್ರಾತಧಾರಿಗಳಿರುವ ಈ ಬೀದಿ ನಾಟಕದಲ್ಲಿ ಸಮಸ್ಯೆ ಮತ್ತು ಪರಿಹಾರಕ್ಕೆ ಮತದಾನ ಎಷ್ಟು ಪ್ರಮುಖವಾಗುತ್ತದೆ ಎಂಬ ಸಂದೇಶವಿದೆ.

ಹರಿಕಥೆ, ಕಣಿ ಹೇಳುವುದು ಸೇರಿದಂತೆ ವಿವಿಧ ಬಗೆಯ ಸಾಂಪ್ರದಾಯಿಕ ಸಂಗತಿಗಳನ್ನು ಇಟ್ಟುಕೊಂಡು ನಾಟಕ ನಿರೂಪಣೆ ಮಾಡಲಾಗಿದೆ. ನಾಟಕ ಮುಗಿದ ನಂತರ ಬಿಬಿಎಂಪಿ ಅಧಿಕಾರಿಗಳು ಇವಿಎಂ, ವಿವಿ ಪ್ಯಾಟ್‌ಗಳ ಬಗ್ಗೆ ಜನರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ವಾರಾಂತ್ಯದಲ್ಲಿ ನಾಟಕ ಪ್ರದರ್ಶನ ಮಾಡುತ್ತಿದ್ದು, ಮತದಾನ ಸಮೀಪಿಸುತ್ತಿದ್ದಂತೆ ಪ್ರದರ್ಶನ ಹೆಚ್ಚಿಸಲಾಗುವುದು ಎಂದು ಸ್ಪಷ್ಟ ರಂಗ ತಂಡದ ಗಗನ್‌ ತಿಳಿಸಿದ್ದಾರೆ.

ಸೈಕಲ್‌ ಜಾಥಾ: ವಿವಿಧ ಸಂಘಟನೆಗಳ ಸಹಯೋಗದಲ್ಲಿ ಪಾಲಿಕೆ ಏ.14ರಂದು ಜಯನಗರ ಕಾಂಪ್ಲೆಕ್ಸ್‌ನಿಂದ ಸೈಕಲ್‌ ಜಾಥಾ ಹಮ್ಮಿಕೊಂಡು ಮತದಾನದ ಪ್ರಚಾರ ಕಾರ್ಯಕ್ರಮ ನಡೆಸಲು ತೀರ್ಮಾನಿಸಿದೆ.

ಮತದಾನ ಜಾಗೃತಿ ರಾಯಭಾರಿಗಳು: ರೇಡಿಯೋ ಜಾಕಿಗಳಾದ ರಜಸ್‌, ಸೋನು ಹಾಗೂ ಪ್ಯಾರ ಒಲಂಪಿಕ್‌ ಆಟಗಾರರಾದ ಶಾಹಿನಾ ಮತ್ತು ಮನೋಜ್‌ಕುಮಾರ್‌ ಅವರನ್ನು ಬೆಂಗಳೂರಿನ ಮತದಾರರಲ್ಲಿ ಅರಿವು ಮೂಡಿಸುವ ಬಿಬಿಎಂಪಿ ರಾಯಭಾರಿಗಳನ್ನಾಗಿ ನೇಮಿಸಿದೆ.

ಶಿಕ್ಷಕರಿಂದಲೂ ಅರಿವಿನ ಗೀತೆ: ಸಾಮಾಜಿಕ ಜಾಲತಾಣಗಳಲ್ಲೂ ಮತದಾನದ ಬಗ್ಗೆ ಅರಿವು ಮೂಡಿಸುವ ಗೀತೆಗಳು ಎಲ್ಲರ ಗಮನ ಸೆಳೆಯುತ್ತಿವೆ. ಅದರಲ್ಲೂ ಉತ್ತರ ಕರ್ನಾಟಕದ ಜಾನಪದ ಶೈಲಿಯಲ್ಲಿನ ಗೀತೆಗಳು ಖುಷಿ ನೀಡುತ್ತಿವೆ. ಇತ್ತೀಚಿನ ಸಿನಿಮಾ ಗೀತೆಗಳನ್ನು ರಿಮೇಕ್‌ ಮಾಡಿ ಗೀತೆ ರಚನೆ ಮಾಡಲಾಗಿದ್ದು, ಜನರಲ್ಲಿ ಈ ಗೀತೆಗಳು ಮೋಡಿ ಮಾಡುತ್ತಿವೆ.

ಕೊಪ್ಪಳ ಜಿಲ್ಲೆಯ ಶಿಕ್ಷಣ ಇಲಾಖೆ, ಚುನಾವಣಾ ಆಯೋಗದ ಜತೆಗೂಡಿ ಮತಾದನದ ಬಗ್ಗೆ ಅರಿವು ಮೂಡಿಸುವ ಸಂಬಂಧ ಗೀತೆಯಗಳನ್ನು ಯೂಟ್ಯೂಬ್‌ನಲ್ಲಿ ಅಪ್‌ ಲೋಡ್‌ ಮಾಡಿದೆ. ಕಲಿಯಬೇಕು ಪಾಠ… ನೋಟಿಗೆ ಮಾರದಿರು ನೀ ಓಟ… (“ಒಳಿತು ಮಾಡು ಮನುಸ’ ಗೀತೆಯ ರಿಮೇಕ್‌) ಕೂಡ ಸಾಮಾಜಿಕ ಜಾಲ ತಾಣದಲ್ಲಿ ಸದ್ದು ಮಾಡುತ್ತಿದೆ. ಇದರ ಜತೆಗೆ “ರಾಜಕುಮಾರ’ ಸಿನಿಮಾದ “ನೀನೇ ರಾಜಕುಮಾರ’ ಹಾಡನ್ನು ರಿಮೇಕ್‌ ಮಾಡಿ, “ಓಟು ಹಾಕಿ ನೀವು… ನಮ್ಮಯ ನಾಡ ಜನರೆ, ತಪ್ಪದೇ ಒಂದು ಮತವ,’ ಗೀತೆಯನ್ನು ರಚನೆ ಮಾಡಲಾಗಿದ್ದು, ಇದು ಕೂಡ ಜನರ ಮನ ಮುಟ್ಟುವಲ್ಲಿ ಯಶಸ್ವಿಯಾಗಿದೆ.

ಉತ್ತರ ಕರ್ನಾಟಕದ ಹಾವೇರಿ, ಕೊಪ್ಪಳ, ಬೀದರ್‌, ಸವಣೂರು ಸೇರಿದಂತೆ ಇನ್ನಿತರ ಭಾಗದ ಶಿಕ್ಷಕರು ತಾವೇ ರಚಿಸಿದ ಚುನಾವಣಾ ಅರಿವಿನ ಗೀತೆಗಳನ್ನು ಯೂಟ್ಯೂಬ್‌ನಲ್ಲಿ ಅಪ್‌ ಲೋಡ್‌ ಮಾಡಿದ್ದು, ಮತದಾರ ಮನ ಮುಟ್ಟುವಲ್ಲಿ ಸಫ‌ಲವಾಗಿವೆ. ಈಗಾಗಲೇ ಸೂಪರ್‌ ಹಿಟ್‌ ಆಗಿರುವ ಸಿನಿಮಾದ ಹಾಡುಗಳ ಟ್ಯೂನ್‌ ಬಳಸಿ ಗೀತೆ ರಚನೆ ಮಾಡಲಾಗಿದೆ. ಕೆಲವು ಗೀತೆಗಳನ್ನು ಮಕ್ಕಳಿಂದಲೂ ಹಾಡಿಸಲಾಗಿದೆ.

ಪಕ್ಷಗಳ ಪ್ರಚಾರ ಗೀತೆ: ಇನ್ನೂ ವಿವಿಧ ಪಕ್ಷಗಳ ಚುನಾವಣಾ ಗೀತೆಗಳು ಕೂಡ ಒಂದಕ್ಕಿಂತ ಒಂದು ಸೂಪರ್‌ ಡೂಪರ್‌ ಆಗಿ ಮೂಡಿ ಬಂದಿದ್ದು, ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತಿದೆ. ಆಟೋಗಳ ಮೂಲಕ ಮಾಡಲಾಗುವ ಪ್ರಚಾರದ ವೇಳೆ ಈ ಗೀತೆಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಸಿನಿಮಾ ಹಾಡುಗಳ ರಿಮೇಕ್‌ ಸಾಂಗ್‌ಗಳು ಸಾರ್ವಜನಿಕರನ್ನು ಗುನು ಗುವಂತೆ ಮಾಡುತ್ತಿವೆ.

ಬಿಜೆಪಿ ವಿಭಿನ್ನ ರೀತಿಯ ಗೀತೆಗಳನ್ನು ಸಿದ್ಧಪಡಿಸಿದ್ದು, ಇದು ಕಾರ್ಯಕರ್ತರಲ್ಲಿ ಹರ್ಷ ಉಂಟುಮಾಡಿದೆ. “ಮನೆಗ್‌ ಬಂದಿಲ್ಲಾ ಅಂತ ಬೈ ಬೇಡಿ ನೀವು, ಮೋದಿ ಪ್ರಚಾರಕ್ಕೆ ಇಳಿದೇವು ನಾವು… (ರ್‍ಯಾಂಬೋ-2 ಸಿನಿಮಾದ ಹಾಡಿನ ರಿಮೇಕ್‌) ಗೀತೆ ಬಿಜೆಪಿ ಕಾರ್ಯಕರ್ತರ ಪಾಳಯದಿಂದ ಮೊಳಗುತ್ತಿದೆ.

ಇನ್ನೂ ಕಾಂಗ್ರೆಸ್‌ ಕೂಡ ಪ್ರಚಾರ ಗೀತೆಗಳಲ್ಲಿ ಹಿಂದೆ ಬಿದ್ದಿಲ್ಲ, ಕಾಂಗ್ರೆಸ್‌ ಕೂಡ ಉತ್ತರ ಕರ್ನಾಟಕ ಜಾನಪದ ಶೈಲಿಯಲ್ಲಿ ಗೀತೆಗಳನ್ನು ಸಿದ್ಧಪಡಿಸಿದೆ. “ಕಾಂಗ್ರೆಸ್‌ ಕೆಲಸ ಬಲು ಚೊಕ್ಕ, ಹಸ್ತದ ಗುರುತಿಗೆ ಹೊಡಿ ಸಿಕ್ಕಾ’ ಸೇರಿ ಹಲವು ಗೀತೆಗಳು ಕಾಂಗ್ರೆಸ್‌ ಕಾರ್ಯಕರ್ತರನ್ನು ಹುರಿದುಂಬಿಸುತ್ತಿವೆ.

* ಶ್ರುತಿ ಮಲೆನಾಡತಿ/ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next