ಭೋಪಾಲ: ಅವರಿಬ್ಬರೂ ಮಧ್ಯಪ್ರದೇಶದ ಮಾಜಿ ಸಿಎಂಗಳು. ಒಬ್ಬರು – ದಿಗ್ವಿಜಯ್ ಸಿಂಗ್, ಮತ್ತೊಬ್ಬರು – ಕಮಲ್‌ನಾಥ್. ಇಬ್ಬರಿಗೂ ಹಾಲಿ ಸಿಎಂ ಶಿವರಾಜ್ ಸಿಂಗ್ ಚೌಹಾನ್‌ರನ್ನು ಪ್ರತ್ಯೇಕವಾಗಿ ಭೇಟಿಗಾಗಿ ಸಮಯದ ಅವಕಾಶ ಕೋರಿದ್ದರು. ದಿಗ್ವಿಜಯ್ ಸಿಂಗ್ ಅವರಿಗೆ ಭೇಟಿ ನಿಗದಿಗೆ ಅವಕಾಶ ನೀಡಿದ್ದ ಸಿಎಂ ಚೌಹಾನ್, ಕೊನೆ ಕ್ಷಣದಲ್ಲಿ ಅದನ್ನು ರದ್ದು ಮಾಡಿ, ಕಮಲ್‌ನಾಥ್‌ರನ್ನು ಭೇಟಿಯಾಗಿದ್ದಾರೆ!
ಇದು, ಮಧ್ಯಪ್ರದೇಶದ ರಾಜಕೀಯ ಕ್ಷೇತ್ರದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದ್ದು, ಇದು ಮಾಸ್ಟರ್ ಸ್ಟ್ರೋಕ್ ಎಂದು ಬಣ್ಣಿಸಲಾಗಿದೆ.
ಇಬ್ಬರು ಮಾಜಿ ಸಿಎಂಗಳೂ ರೈತರ ಸಮಸ್ಯೆಗಳನ್ನು ಮುಂದಿಟ್ಟುಕೊಂಡೇ ಸಿಎಂ ಭೇಟಿಗೆ ಅವಕಾಶ ಕೋರಿದ್ದರು. ತಮ್ಮ ಭೇಟಿಯನ್ನು ರದ್ದುಗೊಳಿಸಿದ್ದಕ್ಕೆ ದಿಗ್ವಿಜಯ್ ಸಿಂಗ್, ಸಿಎಂ ನಿವಾಸದ ಮುಂದೆ ರೈತರೊಂದಿಗೆ ಧರಣಿ ಕುಳಿತರು. ಅತ್ತ, ಸಿಎಂರನ್ನು ಭೇಟಿ ಮಾಡಿದ ಕಮಲ್‌ನಾಥ್, ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ಧಾವಿಸಿ ಬಂದು ರೈತರಿಗೆ ಸಿಎಂ ಅಭಯ ನೀಡಿರುವ ವಿಚಾರ ತಿಳಿಸಿದರು. ಜತೆಗೆ ಮಾಜಿ ಸಿಎಂ ದಿಗ್ವಿಜಯ ಸಿಂಗ್ ಅವರನ್ನು ಶೀಘ್ರವೇ ಭೇಟಿಯಾಗಲಿದ್ದಾರೆ ಎಂದೂ ಕಮಲ್‌ನಾಥ್ ತಿಳಿಸಿದ್ದಾರೆ.
ಇದನ್ನೂ ಓದಿ:ರಾತ್ರಿ ಕರ್ಫ್ಯೂನಿಂದ ವಿನಾಯಿತಿ ನೀಡಲು ರಂಗಭೂಮಿ ಕಲಾವಿದರ ವೇದಿಕೆಯಿಂದ ಸಚಿವರಿಗೆ ಮನವಿ
ದಿಗ್ವಿಜಯ್ ಅವರನ್ನು ನಿರ್ಲಕ್ಷಿಸಿ ಕಮಲ್‌ನಾಥ್‌ರನ್ನು ಭೇಟಿ ಮಾಡಿರುವುದು ಉಭಯ ನಾಯಕರು ಹಾಗೂ ಅವರ ಬೆಂಬಲಿಗರಲ್ಲಿ ಬಿರುಕು ಮೂಡಿಸುವ ಪ್ರಯತ್ನ ಎಂದು ಹೇಳಲಾಗುತ್ತಿದೆ.