ನಾಯಕಿ – “ನಿನ್ನ ನಂಬದೆ ಯಾರನ್ನ ನಂಬಲಿ..’
ನಾಯಕ – “ಇನ್ನು ಮೂರು ಗಂಟೆಯಲ್ಲಿ ಚೈನ್ ತಂದುಕೊಡ್ತೀನಿ…’
ನಾಯಕ ಮತ್ತು ನಾಯಕಿ ನಡುವೆ ಈ ಮಾತುಕತೆ ನಡೆಯುವ ಹೊತ್ತಿಗೆ, ನಾಯಕಿಯ ಬರ್ತ್‌ಡೇಗೆ ಅವಳಮ್ಮ ಕೊಟ್ಟ ಗೋಲ್ಡ್ ಚೈನ್ ಘಟನೆಯೊಂದರಲ್ಲಿ ಕಳೆದಿರುತ್ತೆ. ಅಂಥದ್ಧೇ ಚೈನ್ ತಂದು ಕೊಡ್ತೀನಿ ಅಂತ ಹೊರಡುವ ನಾಯಕ, ಒಂದಷ್ಟು ಇಕ್ಕಟ್ಟಿಗೆ ಸಿಲುಕುತ್ತಾನೆ. ಆ ಇಕ್ಕಟ್ಟಿನಲ್ಲಿರುವ “ಮಜ’ ಅನುಭವಿಸಬೇಕಾದರೆ, ಸಿನಿಮಾ ನೋಡುವ “ಅವಕಾಶ’ ಮಿಸ್ ಮಾಡಿಕೊಳ್ಳಬೇಡಿ. ಇಷ್ಟು ಹೇಳಿದ ಮೇಲೆ ಇದೊಂದು ಪಕ್ಕಾ ಮನರಂಜನೆ ಸಿನಿಮಾ ಅಂತ ಪ್ರತ್ಯೇಕವಾಗಿ ಹೇಳಬೇಕಿಲ್ಲ.
Advertisement
ಹೌದು, ಒಂದು ಸರಳ ಕಥೆಯನ್ನು ಎಷ್ಟು ಸೊಗಸಾಗಿ ಹೆಣೆಯಬಹುದೋ, ಎಷ್ಟು ಹಾಸ್ಯಮಯವಾಗಿ ತೋರಿಸಬಹುದೋ, ಎಷ್ಟು ಎಮೋಷನ್ಸ್‌ಗೆ ಜಾಗ ಕೊಡಬಹುದೋ ಅದೆಲ್ಲವನ್ನೂ ಅಚ್ಚುಕಟ್ಟಾಗಿ ನಿರ್ವಹಿಸಿ, ರುಚಿಕಟ್ಟಾದ ಚಿತ್ರ ಕಟ್ಟಿಕೊಡಲಾಗಿದೆ. ಚಿತ್ರಕಥೆಯೊಂದಿಗೆ ಸರಾಗವಾಗಿ ಸಾಗುವ ಚಿತ್ರದಲ್ಲಿ ಒಂದಷ್ಟು ಎಡವಟ್ಟುಗಳು ಕಾಣಸಿಗುತ್ತವೆ. ಆದರೆ, ಆಗಾಗ ಮಜವೆನಿಸುವ ಹಾಸ್ಯ ದೃಶ್ಯಗಳು, ಡೈಲಾಗ್‌ಗಳು ಮತ್ತು ಹಾಡುಗಳು ಆ ಎಡವಟ್ಟುಗಳನ್ನು ಪಕ್ಕಕ್ಕಿಡುವಂತೆ ಮಾಡುತ್ತವೆ.
Related Articles
Advertisement
ಅಳು ನೋಡಲಾಗದೆ, ತಾನು ಚೈನ್ ತಂದುಕೊಡ್ತೀನಿ ಎಂದು ಮಾತು ಕೊಟ್ಟು ತನ್ನ ಸ್ನೇಹಿತನ ಜೊತೆ ಒಂದು ಕ್ರಿಕೆಟ್ ಬೆಟ್ಟಿಂಗ್ ದಂಧೆಯ ಅಡ್ಡಕ್ಕೆ ಹೋಗುತ್ತಾನೆ. ಆ ಬೆಟ್ಟಿಂಗ್‌ನಲ್ಲಿ ಸೋತು, ಅಲ್ಲೂ ಸಾಲದ ಹೊರೆ ಹೊರುತ್ತಾನೆ. ಬೆಳಗ್ಗೆ ಆ ಸಾಲ ತೀರಿಸಲೇಬೇಕು, ಅತ್ತ ತನ್ನ ಹುಡುಗಿಯ ಚೈನ್ ತಂದುಕೊಡ ಬೇಕು, ಇಕ್ಕಟ್ಟಿನಲ್ಲೇ ಸಿಗುವ ನಾಯಕನಿಗೆ ಒಂದಷ್ಟು ಪಾತ್ರಗಳು ಜೊತೆಯಾಗುತ್ತವೆ. ಆಮೇಲೆ ಏನಾಗುತ್ತೆ ಅನ್ನೋದೇ ಮಜವಾದ ಟ್ವಿಸ್ಟು. ಅದನ್ನು ನೋಡುವ ಕುತೂಹಲವಿದ್ದರೆ, “ಸುವರ್ಣಾವಕಾಶ’ ಮಿಸ್ ಮಾಡ್ಕೊಬೇಡಿ.
ರಿಷಿ ಇಲ್ಲಿ ತನ್ನ ಲವಲವಿಕೆಯ ನಟನೆ ಜೊತೆ ಇಷ್ಟವಾಗುತ್ತಾರೆ. ಫೈಟ್‌ನಲ್ಲಿ ಅಷ್ಟಾಗಿ ಗಮನ ಸೆಳೆಯದಿದ್ದರೂ, ಚೇಸಿಂಗ್ ದೃಶ್ಯಗಳಲ್ಲಿ ಇಷ್ಟವಾಗುತ್ತಾರೆ. ಅಸಹಾಯಕ ತಂದೆಯಾಗಿ, ಸಾಲವಿದ್ದರೂ ತಲೆಕೆಡಿಸಿಕೊಳ್ಳದ ವ್ಯಕ್ತಿಯಾಗಿ ದತ್ತಣ್ಣ ಸೈ ಎನಿಸಿಕೊಂಡಿದ್ದಾರೆ. ಸಿಂಗಲ್ ಹ್ಯಾಂಡ್ ಶಿವ ಪಾತ್ರದಲ್ಲಿ ರಂಗಾಯಣ ರಘು ಮಿಂಚಿದರೆ, ಯೇಸಪ್ಪ ಪಾತ್ರ ಮೂಲಕ ಮಿತ್ರ ಕಚಗುಳಿ ಇಡುತ್ತಾರೆ. ಸಿದ್ದು ಮೂಲಿಮನೆ, ಧನ್ಯಾ, ಶಾಲಿನಿ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಮಿಥುನ್ ಮುಕುಂದನ್ ಸಂಗೀತದ ಎರಡು ಹಾಡು ಚೆನ್ನಾಗಿದೆ. ವಿಘ್ನೇಶ್‌ರಾಜ್ ಛಾಯಾಗ್ರಹಣ ಪರವಾಗಿಲ್ಲ.
ಚಿತ್ರ: ಸಾರ್ವಜನಿಕರಿಗೆ ಸುವರ್ಣಾವಕಾಶನಿರ್ಮಾಣ: ದೇವರಾಜ, ಪ್ರಶಾಂತ್ ರೆಡ್ಡಿ, ಜನಾರ್ದನ್ ಚಿಕ್ಕಣ್ಣ
ನಿರ್ದೇಶನ: ಅನೂಪ್ ರಾಮಸ್ವಾಮಿ
ತಾರಾಗಣ: ರಿಷಿ, ಧನ್ಯಾ, ರಂಗಾಯಣ ರಘು, ದತ್ತಣ್ಣ, ಮಿತ್ರ, ಸಿದ್ದು ಮೂಲಿಮನೆ, ಶಾಲಿನಿ ಇತರರು. * ವಿಜಯ್ ಭರಮಸಾಗರ