ಹ್ಯಾಂಗ್‌ಝೂ: ಚೀನದ ಹ್ಯಾಂಗ್‌ಝೂನಲ್ಲಿ ನಡೆದ ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಸ್ಪರ್ಧಿಗಳು ಅಭೂತಪೂರ್ವ ದಾಖಲೆ ಮಾಡಿದ್ದು, ಇದೇ ಮೊದಲ ಬಾರಿಗೆ 100 ಪದಕಗಳ ಗಡಿ ದಾಟಿದ್ದಾರೆ. 2018ರಲ್ಲಿ 15 ಚಿನ್ನದೊಂದಿಗೆ 72 ಪದಕ ಗೆದ್ದಿದ್ದೇ ಇದುವರೆಗಿನ ಸಾಧನೆಯಾಗಿತ್ತು. 29 ಚಿನ್ನ, 31 ಬೆಳ್ಳಿ ಮತ್ತು 51 ಕಂಚಿನ ಪದಕಗಳೊಂದಿಗೆ ಒಟ್ಟು 111 ಪದಕ ಗೆದ್ದಿರುವ ಭಾರತ, ಈ ಹಿಂದಿನ ಎಲ್ಲ ಕೂಟಗಳ ದಾಖಲೆಯನ್ನೂ ಮುರಿಯಿತು. ಅಂದರೆ ಇತ್ತೀಚೆಗೆಷ್ಟೇ ಮುಗಿದ ಏಷ್ಯನ್ ಗೇಮ್ಸ್‌ನಲ್ಲಿ 107, 2010ರಲ್ಲಿ ದಿಲ್ಲಿಯಲ್ಲೇ ನಡೆದ ಕಾಮನ್‌ವೆಲ್ತ್ ಕೂಟದಲ್ಲಿ 101 ಪದಕ ಗೆದ್ದಿದ್ದೇ ಭಾರತದ ದೊಡ್ಡ ಸಾಧನೆಯಾಗಿತ್ತು.
ಒಟ್ಟು 303 ಕ್ರೀಡಾಳುಗಳು ಪ್ಯಾರಾ ಏಷ್ಯಾಡ್‌ನಲ್ಲಿ ಭಾಗಿಯಾಗಿದ್ದರು. ಇದರಲ್ಲಿ 191 ಪುರುಷರು ಮತ್ತು 112 ಮಹಿಳೆಯರು ಇದ್ದರು. ಇದು ನಾಲ್ಕನೇ ಬಾರಿಯ ಕ್ರೀಡಾಕೂಟವಾಗಿದ್ದು, ಅ.22ರಿಂದ ಅ.28ರ ವರೆಗೆ ನಡೆಯಿತು. 2018ರ ಕ್ರೀಡಾಕೂಟಕ್ಕೆ ಭಾರತ 190 ಸ್ಪರ್ಧಿಗಳನ್ನು ಕಳುಹಿಸಿತ್ತು.
ಈ ಬಾರಿ 111 ಪದಕಗಳೊಂದಿಗೆ ಭಾರತ 5ನೇ ಸ್ಥಾನ ಗಳಿಸಿಕೊಂಡಿತು. ಮೊದಲ ಸ್ಥಾನದಲ್ಲಿ ಚೀನ, ಬಳಿಕ ಇರಾನ್, ಜಪಾನ್ ಮತ್ತು ರಿಪಬ್ಲಿಕ್ ಆಫ್ ಕೊರಿಯಾ ದೇಶಗಳು ಇವೆ. ಈ ಬಾರಿಯ ಕ್ರೀಡಾಕೂಟದಲ್ಲಿ ಭಾರತೀಯರು ಮೂರು ದಾಖಲೆಗಳನ್ನೂ ಮಾಡಿದ್ದಾರೆ. ಇದರಲ್ಲಿ ಎರಡು ಜಾವೆಲಿನ್ ಥ್ರೋನಲ್ಲೇ ಆಗಿವೆ. ಗುರ್ಜಾರ್ ಸುಂದರ್ ಸಿಂಗ್ ಜಾವೆಲಿನ್‌ನ ಎಫ್-46 ವಿಭಾಗದಲ್ಲಿ 68.60 ಮೀ. ದೂರಕ್ಕೆ ಎಸೆಯುವ ಮೂಲಕ ಜಾಗತಿಕ ದಾಖಲೆ ಮಾಡಿದರು. ಸುಮಿತ್ ಅಂತಿಲ್ ಅವರು ಎಫ್64 ವಿಭಾಗದಲ್ಲಿ 73.29 ಮೀ. ದೂರದ ವರೆಗೆ ಎಸೆದು ವಿಶ್ವ ದಾಖಲೆ ನಿರ್ಮಿಸಿದರು.
ಇನ್ನು ಪುರುಷರ ಕಾಂಪೌಂಡ್ ವಿಭಾಗದಲ್ಲಿ ಮೂರನೇ ವಿಶ್ವ ದಾಖಲೆ ನಿರ್ಮಿಸಿದರು. ಇವರು 158 ಅಂಕ ಗಳಿಕೆಯ ಮೂಲಕ ಈ ದಾಖಲೆ ಮಾಡಿದರು.
ಮೊದಲ ಬಾರಿ 2010ರಲ್ಲಿ ಗ್ಯಾಂಗ್‌ಝೋಲಿನಲ್ಲಿ ಪ್ಯಾರಾ ಏಷ್ಯನ್ ಕ್ರೀಡಾಕೂಟ ನಡೆದಿದ್ದು, ಆಗ ಭಾರತ 14 ಪದಕಗಳೊಂದಿಗೆ 15ನೇ ಸ್ಥಾನ ಗಳಿಸಿತ್ತು.
ಆ್ಯತ್ಲೀಟ್‌ಗಳೇ ಹೆಚ್ಚು
2018ರ ಕೂಟಕ್ಕಿಂತ ಈ ಬಾರಿ 39 ಹೆಚ್ಚು ಪದಕ ಗೆದ್ದಿರುವ ಭಾರತ, ಆ್ಯತ್ಲೆಟಿಕ್ಸ್‌ನಲ್ಲಿ ಉತ್ತಮ ಸಾಧನೆ ಮಾಡಿದೆ. ಇದರಲ್ಲಿ 18 ಬಂಗಾರ, 17 ಬೆಳ್ಳಿ ಮತ್ತು 20 ಕಂಚಿನ ಪದಕ ಸೇರಿ 55 ಪದಕ ಗೆದ್ದಿದೆ. ಎರಡನೇ ಸ್ಥಾನದಲ್ಲಿ ಬ್ಯಾಡ್ಮಿಂಟನ್ ಆಟಗಾರರಿದ್ದಾರೆ. ಒಟ್ಟಾರೆಯಾಗಿ 21 ಪದಕ ಗೆದ್ದಿದ್ದು, ಇದರಲ್ಲಿ ನಾಲ್ಕು ಬಂಗಾರ ಸೇರಿವೆ. ಇನ್ನು ಚೆಸ್‌ನಲ್ಲಿ ಎಂಟು, ಬಿಲ್ಲುಗಾರಿಕೆಯಲ್ಲಿ ಏಳು ಪದಕ ಬಂದಿವೆ. ಶೂಟಿಂಗ್‌ನಲ್ಲಿ ಆರು ಪದಕ ಭಾರತದ ಮುಡಿಗೆ ಸೇರಿವೆ. ಕೂಟದ ಕೊನೆಯ ದಿನವಾದ ಶನಿವಾರ, 12 ಪದಕಗಳು ಬಂದಿವೆ. ಇದರಲ್ಲಿ ನಾಲ್ಕು ಬಂಗಾರ ಸೇರಿವೆ. ಚೆಸ್‌ನಲ್ಲೇ ಏಳು ಪದಕ ಬಂದರೆ, ನಾಲ್ಕು ಆ್ಯತ್ಲೆಟಿಕ್ಸ್‌ನಲ್ಲಿ ಮತ್ತು ರೋವಿಂಗ್‌ನಲ್ಲಿ ಒಂದು ಪದಕ ಬಂದಿದೆ.\
ದಿಲೀಪ್ ಮಹದು ಗಾವಿಯೋಟ್
ಈ ಕೂಟದಲ್ಲಿ ಚಿನ್ನ ಗೆದ್ದಿರುವ ಮತ್ತೂಬ್ಬ ಆಟಗಾರ ಇವರು. ಪುರುಷರ 400 ಮೀ. ಟಿ47ರಲ್ಲಿ ಭಾಗಿಯಾಗಿದ್ದ ದಿಲೀರ್ 49.48 ಸೆಕೆಂಡ್‌ನಲ್ಲಿ ಗುರಿ ಮುಟ್ಟಿ ಚಿನ್ನ ಗೆದ್ದಿದ್ದರು. ನಾಸಿಕ್ ಮೂಲದವರಾದ ಇವರು, ನಾಲ್ಕು ವರ್ಷವಿದ್ದಾಗಲೇ ಅಪಘಾತವೊಂದರಲ್ಲಿ ಬಲಗೈ ಕಳೆದುಕೊಂಡಿದ್ದರು. ಐದು ಮಂದಿಯ ಇವರದ್ದು ಬಡಕುಟುಂಬವಾಗಿದ್ದು, ಶಾಲಾ ದಿನಗಳಲ್ಲಿ ಇವರಿಗಿದ್ದ ಕ್ರೀಡಾಸಕ್ತಿಯನ್ನು ಗುರುತಿಸಿದವರು ತರಬೇತುದಾರ ವೈಜನಾಥ್ ಕಾಳೆ. ಶಹೀದ್ ಭಗತ್ ಸಿಂಗ್ ಶಾಲೆಯಲ್ಲಿ ಕಲಿತ ಇವರು, ಕಳೆದ ವರ್ಷ ನಡೆದ ಪ್ಯಾರಾ ಆ್ಯತ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ನಾಲ್ಕನೇ ಸ್ಥಾನ ಗಳಿಸಿ, ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಕೋಟಾದಡಿ ಅವಕಾಶ ಪಡೆದಿದ್ದಾರೆ.
ಈ ಕ್ರೀಡಾಕೂಟದಲ್ಲಿ ಭಾರತೀಯ ಪ್ಯಾರಾ ಆ್ಯತ್ಲೀಟ್‌ಗಳು ದಾಖಲೆ ನಿರ್ಮಿಸಿ, ಇಡೀ ದೇಶವೇ ಹೆಮ್ಮೆ ಪಡುವಂತೆ ಮಾಡಿದ್ದಾರೆ. ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿಯೂ ಭಾರತೀಯರು ಉತ್ತಮ ಸಾಧನೆ ಮಾಡಲಿದ್ದಾರೆ.
ದೀಪಕ್ ಮಲಿಕ್, ಭಾರತೀಯ ಪ್ಯಾರಾಲಿಂಪಿಕ್ಸ್ ಕಮಿಟಿ ಅಧ್ಯಕ್ಷರು.
ಮೊದಲ ಪದಕ ಗೆದ್ದಿದ್ದ ನೀರಜ್ ಯಾದವ್
ಭಾರತದ ಅಭಿಯಾನ ಆರಂಭವಾಗಿದ್ದೇ ನೀರಜ್ ಯಾದವ್ ಅವರ ಚಿನ್ನದ ಪದಕದೊಂದಿಗೆ. ಇವರು ಜಾವೆಲಿನ್ ಥ್ರೋನ ಎಫ್55 ವಿಭಾಗದಲ್ಲಿ ಚಿನ್ನ ಗೆದ್ದರು. ಇದರಲ್ಲಿ ಅವರು 33.69 ಮೀ. ದೂರ ಎಸೆದು ದಾಖಲೆ ನಿರ್ಮಿಸಿದ್ದರು. ವಿಶೇಷವೆಂದರೆ ನೀರಜ್ ಅವರು ಏಳು ವರ್ಷವಿದ್ದಾಗಲೇ ಪೋಲಿಯೋ ಅನಂತರದ ಪ್ಯಾರಾಲಿಸಿಸ್‌ಗೆ ಒಳಗಾಗಿದ್ದರು. ಆದರೆ ಕ್ರೀಡೆಯಲ್ಲಿ ಅತೀವ ಆಸಕ್ತಿ ಹೊಂದಿದ್ದ ನೀರಜ್, 2005ರಿಂದ 2012ರ ವರೆಗೆ ವೀಲ್‌ಚೇರ್ ಟೆನಿಸ್ ಆಡುತ್ತಿದ್ದರು. ಆದರೆ, 2015ರಲ್ಲಿ ನೀರಜ್ ದಿಲ್ಲಿ ಸ್ಟೇಟ್ ಆ್ಯತ್ಲೆಟಿಕ್ ಮೀಟ್‌ನಲ್ಲಿ ಭಾಗಿಯಾಗಿ ಶಾಟ್‌ಪುಟ್, ಜಾವೆಲಿನ್ ಮತ್ತು ಡಿಸ್ಕಸ್ ಥ್ರೋನಲ್ಲಿ ತಲಾ ಒಂದು ಚಿನ್ನದ ಪದಕ ಗೆದ್ದಿದ್ದರು. ಆಗಿನಿಂದ ಇವರ ಜೀವನವೇ ಬದಲಾಯಿತು. 2018ರಲ್ಲಿ ನಡೆದಿದ್ದ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿಯೂ ಚಿನ್ನದ ಪದಕ ಗೆದ್ದಿದ್ದರು.
ರಕ್ಷಿತಾ ರಾಜು
ಮಹಿಳಾ 1,500 ಮೀ. ಟಿ11 ವಿಭಾಗದಲ್ಲಿ ಸ್ಪರ್ಧಿಸಿದ್ದ ರಕ್ಷಿತಾ ರಾಜು ಅವರು, ಬಂಗಾರದ ಪದಕ ಮೂಲಕ ಭಾರತದ ಕೀರ್ತಿ ಪತಾಕೆ ಹೆಚ್ಚಿಸಿದ್ದಾರೆ. ಚಿಕ್ಕಮಗಳೂರು ಮೂಲದವರಾದ ಇವರು, ಅಂಧ ಕ್ರೀಡಾಪಟು. ಮತ್ತೂಬ್ಬರ ಸಹಾಯದಿಂದ ಇವರು 1,500 ಮೀ. ಓಡಿ ಚಿನ್ನ ಗೆದ್ದಿದ್ದಾರೆ. ಇವರಿಗೆ ರಾಹುಲ್ ಬಾಲಕೃಷ್ಣ ಅವರು ಗೈಡ್ ರನ್ನರ್ ಆಗಿ ಓಡಿದ್ದರು. ಚಿಕ್ಕಮಗಳೂರಿನ ಆಶಾ ಕಿರಣ ಬ್ಲೈಂಡ್ ಶಾಲೆಯಲ್ಲಿ ಓದಿದ್ದಾರೆ. 2017ರಲ್ಲಿ ಇವರು ಓಟದತ್ತ ಗಮನ ನೀಡಿದರು. ಬಾಲಕೃಷ್ಣ ಅವರೇ ಕೋಚ್ ಮತ್ತು ಗೈಡೆನ್ಸ್ ಆಗಿದ್ದಾರೆ. 2018ರ ಜಕಾರ್ತಾ ಪ್ಯಾರಾ ಏಷ್ಯಾಡ್‌ನಲ್ಲೂ ರಕ್ಷಿತಾ ರಾಜುಚಿನ್ನ ಗೆದ್ದಿದ್ದರು.
ಮೊದಲ ಪದಕ ಗೆದ್ದಿದ್ದ ನೀರಜ್ ಯಾದವ್
ಭಾರತದ ಅಭಿಯಾನ ಆರಂಭವಾಗಿದ್ದೇ ನೀರಜ್ ಯಾದವ್ ಅವರ ಚಿನ್ನದ ಪದಕದೊಂದಿಗೆ. ಇವರು ಜಾವೆಲಿನ್ ಥ್ರೋನ ಎಫ್55 ವಿಭಾಗದಲ್ಲಿ ಚಿನ್ನ ಗೆದ್ದರು. ಇದರಲ್ಲಿ ಅವರು 33.69 ಮೀ. ದೂರ ಎಸೆದು ದಾಖಲೆ ನಿರ್ಮಿಸಿದ್ದರು. ವಿಶೇಷವೆಂದರೆ ನೀರಜ್ ಅವರು ಏಳು ವರ್ಷವಿದ್ದಾಗಲೇ ಪೋಲಿಯೋ ಅನಂತರದ ಪ್ಯಾರಾಲಿಸಿಸ್‌ಗೆ ಒಳಗಾಗಿದ್ದರು. ಆದರೆ ಕ್ರೀಡೆಯಲ್ಲಿ ಅತೀವ ಆಸಕ್ತಿ ಹೊಂದಿದ್ದ ನೀರಜ್, 2005ರಿಂದ 2012ರ ವರೆಗೆ ವೀಲ್‌ಚೇರ್ ಟೆನಿಸ್ ಆಡುತ್ತಿದ್ದರು. ಆದರೆ, 2015ರಲ್ಲಿ ನೀರಜ್ ದಿಲ್ಲಿ ಸ್ಟೇಟ್ ಆ್ಯತ್ಲೆಟಿಕ್ ಮೀಟ್‌ನಲ್ಲಿ ಭಾಗಿಯಾಗಿ ಶಾಟ್‌ಪುಟ್, ಜಾವೆಲಿನ್ ಮತ್ತು ಡಿಸ್ಕಸ್ ಥ್ರೋನಲ್ಲಿ ತಲಾ ಒಂದು ಚಿನ್ನದ ಪದಕ ಗೆದ್ದಿದ್ದರು. ಆಗಿನಿಂದ ಇವರ ಜೀವನವೇ ಬದಲಾಯಿತು. 2018ರಲ್ಲಿ ನಡೆದಿದ್ದ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿಯೂ ಚಿನ್ನದ ಪದಕ ಗೆದ್ದಿದ್ದರು.
29 ಚಿನ್ನ
31 ಬೆಳ್ಳಿ
51 ಕಂಚು
111 ಒಟ್ಟಾರೆ ಪದಕ
ರಾಜ್ಯದ ಇಬ್ಬರ ಸಾಧನೆ
ಕರ್ನಾಟಕದಿಂದ ಏಷ್ಯಾಡ್‌ನಲ್ಲಿ ಭಾಗಿಯಾಗಿದ್ದ ಇಬ್ಬರು ಚಿನ್ನದ ಸಾಧನೆ ಮಾಡಿದ್ದಾರೆ. ಬ್ಯಾಡ್ಮಿಂಟನ್‌ನಲ್ಲಿ ಐಎಎಸ್ ಅಧಿಕಾರಿ, ಹಾಸನದ ಯತಿರಾಜ್ ಸುಹಾಸ್ ಚಿನ್ನ ಗೆದ್ದು ದೇಶದ ಕೀರ್ತಿ ಹೆಚ್ಚಿಸಿದ್ದಾರೆ. ಚಿಕ್ಕಮಗಳೂರು ಮೂಲದ ರಕ್ಷಿತಾ ರಾಜು ಅವರು, 1500 ಮೀ. ಓಟದಲ್ಲಿ ಚಿನ್ನ ಗೆದ್ದ ಸಾಧನೆ ಮಾಡಿದ್ದಾರೆ.
ಎರಡು ಚಿನ್ನ ಗೆದ್ದವರು
ನೀರಜ್ ಯಾದವ್ ಅವರು ಡಿಸ್ಕಸ್ ಥ್ರೋ ಮತ್ತು ಜಾವೆಲಿನ್ ಥ್ರೋವಿನಲ್ಲಿ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಹಾಗೆಯೇ, ಚೆಸ್‌ನಲ್ಲಿ ಸತೀಶ್ ಇನಾನಿ ದರ್ಪಣ್ ಅವರೂ ಎರಡು ಚಿನ್ನ ಗೆದ್ದಿದ್ದಾರೆ. ಬಿಲ್ಲುಗಾರಿಕೆಯಲ್ಲಿ ಶೀತಲ್ ದೇವಿ ಅವರಿಗೆ ಎರಡು ಚಿನ್ನ ಒಲಿದಿವೆ. ಒಂದೇ ಕೂಟದಲ್ಲಿ ಎರಡು ಚಿನ್ನ ಗೆಲ್ಲುವ ಮೂಲಕ ಈ ಮೂರು ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಭಾರತಕ್ಕೆ ಐದನೇ ಸ್ಥಾನ
ಇದು ನಾಲ್ಕನೇ ಪ್ಯಾರಾ ಏಷ್ಯಾಡ್ ಆಗಿದ್ದು, ಇದರಲ್ಲಿ ಭಾರತದ್ದು ಇದೇ ಅತ್ಯದ್ಭುತ ಸಾಧನೆ. ಇದೇ ಮೊದಲ ಬಾರಿಗೆ ದೇಶ 100ಕ್ಕೂ ಹೆಚ್ಚು ಪದಕ ಗೆದ್ದಿದ್ದೂ ಅಲ್ಲದೇ, ಐದನೇ ಸ್ಥಾನಕ್ಕೇರಿದ ಸಾಧನೆಯನ್ನೂ ಮಾಡಿದೆ. ಇಲ್ಲಿ ಚೀನಾ(521), ಇರಾನ್(131), ಜಪಾನ್(150), ದಕ್ಷಿಣ ಕೊರಿಯ(103) ಪದಕ ಗೆದ್ದು ಮೊದಲ ನಾಲ್ಕು ಸ್ಥಾನಗಳಲ್ಲಿವೆ. ಈ ದೇಶಗಳು ಕ್ರಮವಾಗಿ 214, 44, 42, 30 ಚಿನ್ನ ಗೆದ್ದಿವೆ. ಹೀಗಾಗಿ, ಇವುಗಳಿಗೆ ಮೊದಲ ನಾಲ್ಕು ಸ್ಥಾನ ಸಿಕ್ಕಿದೆ.
ಯಾವ ವಿಭಾಗದಲ್ಲಿ ಎಷ್ಟು?
ಅಥ್ಲೆಟಿಕ್ಸ್ – 55
ಬ್ಯಾಡ್ಮಿಂಟನ್ – 21
ಚೆಸ್ – 08
ಬಿಲ್ಲುಗಾರಿಕೆ – 7
ಶೂಟಿಂಗ್ – 6
ಕಡೆಯ ದಿನ – 12 ಪದಕ