Advertisement

ಕೇಸ್ ಸ್ಟಡಿ

12:15 PM Jul 06, 2019 | mahesh |

‘ನಿಮಗೆ ಪೊಲೀಸ್‌ ಪಾತ್ರ ಬೋರಾಗಿಲ್ವಾ …’

Advertisement

-ನಟ ಕಿಶೋರ್‌ಗೆ ಈ ಹಿಂದೆ ಅದೆಷ್ಟು ಬಾರಿ ಈ ಪ್ರಶ್ನೆ ಎದುರಾಗಿದೆಯೋ ಗೊತ್ತಿಲ್ಲ. ಆದರೆ, ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮತ್ತೆ ಈ ಪ್ರಶ್ನೆ ಎದುರಾಯಿತು- ಸಾರ್‌ ನಿಮಗೆ ಪೊಲೀಸ್‌ ಪಾತ್ರ ಬೋರಾಗಿಲ್ವಾ …

ಕಿಶೋರ್‌ ಸಣ್ಣ ನಗೆ ಬೀರುತ್ತಾ, ಮೀಸೆ ಮೇಲೆ ಕೈಯಾಡಿಸಿದರು. ಒಬ್ಬ ನಟನಿಗೆ ಮಾಡಿದ ಪಾತ್ರವನ್ನೇ ಮಾಡೋದು ಅಥವಾ ಒಂದೇ ಪಾತ್ರಕ್ಕೆ ಬ್ರಾಂಡ್‌ ಆಗಿಬಿಡೋಕೆ ಖಂಡಿತಾ ಇಷ್ಟವಿರೋದಿಲ್ಲ. ಆದರೆ, ಚಿತ್ರರಂಗವೇ ಹಾಗೆ, ಒಮ್ಮೆ ನೀವು ಯಾವುದಾದರೊಂದು ಪಾತ್ರದಲ್ಲಿ ಕ್ಲಿಕ್‌ ಆಗಿಬಿಟ್ಟರೆ, ಜನ ಆ ಪಾತ್ರದಲ್ಲಿ ನಿಮ್ಮನ್ನು ಇಷ್ಟಪಟ್ಟರೆ ಮುಂದೆ ನಿಮಗೆ ಬೇಡವೆಂದರೂ ಚಿತ್ರರಂಗ ಆಫ‌ರ್‌ ಮಾಡೋದು ಅದೇ ಪಾತ್ರವನ್ನು. ಮುಂದೆ ನೀವು ಅದರಲ್ಲೇ ಹೊಸತನ ಹುಡುಕಬೇಕು. ನಟ ಕಿಶೋರ್‌ಗೂ ಅದೇ ಅನುಭವ ಆಗುತ್ತಿದೆ. ‘ದುನಿಯಾ’ದಿಂದ ಹಿಡಿದು ಹಲವು ಸಿನಿಮಾಗಳಲ್ಲಿ ಖಡಕ್‌ ಪೊಲೀಸ್‌ ಆಫೀಸರ್‌ ಆಗಿ, ಭಿನ್ನ ಮ್ಯಾನರಿಸಂ ಪೊಲೀಸ್‌ ಅಧಿಕಾರಿಯಾಗಿ ಗಮನ ಸೆಳೆದ ಕಿಶೋರ್‌ ಅವರಿಗೆ ಅಂತಹ ಪಾತ್ರಗಳೇ ಹೆಚ್ಚಾಗಿ ಹುಡುಕಿಕೊಂಡು ಬರುತ್ತಿವೆ. ಅದು ಕನ್ನಡ, ತಮಿಳು … ಹೀಗೆ ಪರಭಾಷೆಗಳಲ್ಲೂ. ಹಾಗಂತ ಪೊಲೀಸ್‌ ಪಾತ್ರಗಳೇ ಹೆಚ್ಚು ಸಿಗುತ್ತಿವೆ ಎಂದು ಕಿಶೋರ್‌ ಯಾವತ್ತೂ ಬೇಸರಿಸಿಕೊಂಡವರಲ್ಲ. ಸಿಕ್ಕ ಪಾತ್ರದಲ್ಲೇ ಹೊಸತನ ಹುಡುಕಿದವರು.

ಅದೇ ಮಾತನ್ನು ಕಿಶೋರ್‌ ಹೇಳುತ್ತಾರೆ. ‘ಪೊಲೀಸ್‌ ಪಾತ್ರ ನನಗೆ ಬೋರ್‌ ಅನಿಸಿಲ್ಲ. ಪದೇ ಪದೇ ನಮಗೆ ಅದೇ ಪಾತ್ರ ಸಿಗುವಾಗ ನಾವು ಅದರಲ್ಲೇ ಹೊಸತನ ಹುಡುಕಬೇಕಾಗುತ್ತದೆ. ದಿನಕ್ಕೊಂದು ಹೊಸ ಕೇಸ್‌ ಸಿಗುತ್ತಿದೆ ಎಂದುಕೊಂಡು ಪಾತ್ರ ಒಪ್ಪುತ್ತೇನೆ. ಅದಕ್ಕಿಂತ ಹೆಚ್ಚಾಗಿ ನಿಜ ಜೀವನದಲ್ಲಿ ನಾನೊಬ್ಬ ಪೊಲೀಸ್‌ ಆಫೀಸರ್‌ ಆಗಿದ್ದರೆ ದಿನಕ್ಕೊಂದು ಕೇಸ್‌ನ ಹಿಂದೆ ಬೀಳಬೇಕಿತ್ತು, ಅದಕ್ಕಾಗಿ ತನಿಖೆ, ಚೇಸಿಂಗ್‌ ಎಲ್ಲವೂ ಮಾಡಬೇಕಿತ್ತು. ಇಲ್ಲೂ ನಾನು ಹಾಗೇ ಅಂದುಕೊಂಡು ಬರುವ ಪೊಲೀಸ್‌ ಪಾತ್ರಗಳನ್ನು ಮಾಡುತ್ತಿದ್ದೇನೆ. ಒಬ್ಬ ಪೊಲೀಸ್‌ ಅಧಿಕಾರಿ ತನಗೆ ಸಿಗುವ ಹೊಸ ಹೊಸ ಕೇಸ್‌ಗಳನ್ನು ಬಗೆಹರಿಸಲು ಏನೆಲ್ಲಾ ಮಾರ್ಗಗಳನ್ನು ಹುಡುಕುತ್ತಾನೆ, ಅದಕ್ಕೆ ಬೇಕಾದ ಸಾಕ್ಷ್ಯಗಳನ್ನು ಹೇಗೆ ಸಂಗ್ರಹಿಸುತ್ತಾನೋ, ಹಾಗೇ ನಾನು ಕೂಡಾ ಸಿಗುವ ಪಾತ್ರಗಳನ್ನು ಎಷ್ಟು ಭಿನ್ನವಾಗಿ, ಹೊಸದಾಗಿ, ವಿಭಿನ್ನ ಮ್ಯಾನರಿಸಂನೊಂದಿಗೆ ಮಾಡಬಹುದೆಂದು ಯೋಚಿಸುತ್ತೇನೆ’ ಎಂದು ತಮಗೆ ಸಿಗುವ ಪೊಲೀಸ್‌ ಪಾತ್ರಗಳ ಬಗ್ಗೆ ಹೇಳುತ್ತಾರೆ ಕಿಶೋರ್‌.

ಕಿಶೋರ್‌ಗೆ ಒಂದು ಖುಷಿ ಇದೆ. ಅದೇನೆಂದರೆ ತಮ್ಮಲ್ಲಿ ಪಾತ್ರ ಹಿಡಿದುಕೊಂಡು ಬರುವ ನಿರ್ದೇಶಕರು ಹೊಸ ಕಥೆ ಹಾಗೂ ಪಾತ್ರದೊಂದಿಗೆ ಬರುತ್ತಿರುವುದು. ಅದೇ ಕಾರಣದಿಂದ ಕಿಶೋರ್‌ ಇಷ್ಟಪಟ್ಟು ಪಾತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ‘ಒಂದೇ ಕಥೆಯನ್ನಿಟ್ಟುಕೊಂಡು ಹತ್ತು ಸಿನಿಮಾ ಮಾಡುವ ಬದಲು, ಹತ್ತು ಸಿನಿಮಾಗಳಲ್ಲಿ ಬೇರೆ ಬೇರೆ ಪಾತ್ರ ಮಾಡೋದು ವಾಸಿ’ ಎಂದು ನೇರವಾಗಿ ಹೇಳುತ್ತಾರೆ ಕಿಶೋರ್‌. ಸದ್ಯ ಕಿಶೋರ್‌ ‘ದೇವಕಿ’, ‘ಮಹಿರ’ ಚಿತ್ರಗಳಲ್ಲಿ ನಟಿಸಿದ್ದು, ಈ ಎರಡೂ ಚಿತ್ರಗಳಲ್ಲೂ ಪೊಲೀಸ್‌ ಆಫೀಸರ್‌ ಆಗಿ ಕಾಣಿಸಿಕೊಂಡಿದ್ದಾರೆ. ಈ ನಡುವೆಯೇ ತಮಿಳು ಚಿತ್ರಗಳಲ್ಲೂ ಕಿಶೋರ್‌ ಬಿಝಿಯಾಗಿದ್ದು, ಅಲ್ಲೂ ಭಿನ್ನ ಪಾತ್ರಗಳು ಸಿಗುತ್ತಿವೆಯಂತೆ.

Advertisement

ಒಬ್ಬ ಪೊಲೀಸ್‌ ಅಧಿಕಾರಿ ತನಗೆ ಸಿಗುವ ಹೊಸ ಹೊಸ ಕೇಸ್‌ಗಳನ್ನು ಬಗೆಹರಿಸಲು ಏನೆಲ್ಲಾ ಮಾರ್ಗಗಳನ್ನು ಹುಡುಕುತ್ತಾನೆ, ಅದಕ್ಕೆ ಬೇಕಾದ ಸಾಕ್ಷ್ಯಗಳನ್ನು ಹೇಗೆ ಸಂಗ್ರಹಿಸುತ್ತಾನೋ, ಹಾಗೇ ನಾನು ಕೂಡಾ ಸಿಗುವ ಪಾತ್ರಗಳನ್ನು ಎಷ್ಟು ಭಿನ್ನವಾಗಿ ಮಾಡಬಹುದೆಂದು ಯೋಚಿಸುತ್ತೇನೆ…

•ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next