ಬೆಂಗಳೂರು: ವಾಣಿವಿಲಾಸ ಆಸ್ಪತ್ರೆಯಲ್ಲಿ ತಾಯಿ ಪಕ್ಕದಲ್ಲಿ ಮಲಗಿದ್ದ ಎಂಟು ದಿನಗಳ ಹಸುಗೂಸು ಕಳವು ಪ್ರಕರಣ ಕೊನೆಗೆ ಸುಖಾಂತ್ಯ ಕಂಡಿದ್ದು, ವಿ.ವಿ.ಪುರಂ ಪೊಲೀಸರು ಮಗುವನ್ನು ತಾಯಿ ಮಡಿಲು ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಗು ಕಳವು ಮಾಡಿದ್ದ ರಾಮನಗರ ಮೂಲದ ದಿವ್ಯಾರಶ್ಮಿ (29) ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಏ.15ರಂದು ತುಮಕೂರು ಜಿಲ್ಲೆಯ ತಿಪಟೂರಿನ ಕಾರ್ಮಿಕ ಪ್ರಸನ್ನ ಹಾಗೂ ಸುಮಾ ದಂಪತಿಯ ಮಗುವನ್ನು ದಿವ್ಯಾರಶ್ಮಿ ಕಳವು ಮಾಡಿದ್ದಳು. ರಾಮನಗರದ ಜಿಲ್ಲೆ ಮಾಗಡಿ ತಾಲೂಕಿನ ಐಜೂರಿನ ನಿವಾಸಿ ಆರೋಪಿ ದಿವ್ಯಾರಶ್ಮಿ ಪತಿ ಒಂದು ವರ್ಷದ ಹಿಂದೆ ಮೃತಪಟ್ಟಿದ್ದಾರೆ. ಜತೆಗೆ, ಕೆಲ ತಿಂಗಳ ಹಿಂದಷ್ಟೇ ಗರ್ಭಪಾತವಾಗಿ ಮಗು ಕೂಡ ಮೃತಪಟ್ಟಿತ್ತು. ಹೀಗಾಗಿ ಮಗುವಿನ ಹಂಬಲದಲ್ಲಿದ್ದ ದಿವ್ಯಾರಶ್ಮಿ ಮಗು ಕಳವು ಮಾಡಲು ತೀರ್ಮಾನಿಸಿದ್ದಳು.
ಹೀಗಾಗಿ ಏ.14ರಂದು ಈಕೆ ವಾಣಿವಿಲಾಸ ಆಸ್ಪತ್ರೆಗೆ ದಾಖಲಾಗಿರುವ ಮಹಿಳೆಯರ ಸಂಬಂಧಿಕರ ಸೋಗಿನಲ್ಲಿ ಬೆಳಗ್ಗೆ ಒಳಗಡೆ ಬಂದಿದ್ದಳು. ಆದರೆ, ಹೊರಗಡೆ ಹೋಗಿರಲಿಲ್ಲ. ಏ.15ರಂದು ಮುಂಜಾನೆ ತಾಯಿ, ಮಗು ವಾರ್ಡ್ ನಲ್ಲಿ ಎಲ್ಲರೂ ಮಲಗಿದ್ದ ವೇಳೆ ಸುಮಾ ಪಕ್ಕದಲ್ಲಿದ್ದ ಮಗುವನ್ನು ತೆಗೆದುಕೊಂಡು ಬ್ಯಾಗ್ ನಲ್ಲಿ ಇರಿಸಿಕೊಂಡು ಹೊರಹೋಗಿದ್ದಳು. ಬಸ್ ಮೂಲಕ ಐಜೂರು ತಲುಪಿದ್ದಳು ಎಂಬುದು ಆಸ್ಪತ್ರೆ ಆವರಣ ಹಾಗೂ ಹೊರಗಡೆ ಅಳವಡಿಸಿದ್ದ ಸಿಸಿ ಕ್ಯಾಮೆರಾಗಳ ದೃಶ್ಯಾವಳಿಯಲ್ಲಿ ಪತ್ತೆಯಾಗಿತ್ತು. ಗಂಡ ಮೃತಪಟ್ಟ ಬಳಿಕ ದಿವ್ಯಾ ಒಬ್ಬಳೇ ವಾಸಿಸುತ್ತಿದ್ದು, ತನ್ನದೇ ಮಗು ಎಂದು ಅಕ್ಕ-ಪಕ್ಕದ ಮನೆಯವರಿಗೆ ಹೇಳಿಕೊಂಡಿದ್ದಳು. ಅಲ್ಲದೆ, ಮಗುವಿಗೆ ತಾನೇ ಹಾಲುಣಿಸಿ ಆರೈಕೆ ಮಾಡುತ್ತಿದ್ದಳು. ಮಗು ಸಾಕುವ ಉದ್ದೇಶಕ್ಕಾಗಿಯೇ ಕಳವು ಮಾಡಿದ್ದೇನೆ ಎಂದು ಆಕೆ ಒಪ್ಪಿಕೊಂಡಿದ್ದಾಳೆ.
ಹೆಚ್ಚಿನ ಮಾಹಿತಿ ಆಕೆಯ ವಿಚಾ ರಣೆ ನಡೆಯ ಬೇಕಿದೆ ಎಂದು ಪೊಲೀಸರು ಹೇಳಿದರು.
600ಕ್ಕೂ ಹೆಚ್ಚು ಸಿಸಿ ಕ್ಯಾಮೆರಾ ಪರಿಶೀಲನೆ: ತಿಪಟೂರು ತಾಲೂಕಿನ ಮಡೇನೂರು ಸುಮಾ ಏ.15ರಂದು ಬೆಳಗಿನ ಜಾವ 4 ಗಂಟೆ ಸುಮಾರಿಗೆ ಮಗುವಿಗೆ ಹಾಲುಣಿಸಿ ತನ್ನ ಪಕ್ಕದಲ್ಲಿಯೇ ಮಲಗಿಸಿಕೊಂಡು ನಿದ್ರೆಗೆ ಜಾರಿದ್ದರು. ಅರ್ಧ ಗಂಟೆ ಬಳಿಕ ಎಚ್ಚೆತ್ತುಕೊಂಡಾಗ ಮಗು ಕಂಡಿರಲಿಲ್ಲ. ಈ ಕುರಿತು ಮಗುವಿನ ತಂದೆ ಪ್ರಸನ್ನ ನೀಡಿದ್ದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡ ಇನ್‌ಸ್ಪೆಕ್ಟರ್ ಮಿರ್ಜಾ ಅಲಿ, ಪಿಎಸ್‌ಐಗಳಾದ ಸಿ.ರಾಜೇಂದ್ರ ಪ್ರಸಾದ್, ಅಕ್ಷತಾ ಎಫ್. ಕುರಕುಂದಿ ನೇತೃತ್ವದ ತಂಡ ಮಗುವಿನ ರಕ್ಷಣೆಗೆ ಕಾರ್ಯಾಚರಣೆ ಆರಂಭಿಸಿತ್ತು. ಆಸ್ಪತ್ರೆಯಲ್ಲಿನ ಸಿಸಿ ಕ್ಯಾಮೆರಾವೊಂದರಲ್ಲಿ ಮಗುವನ್ನು ಬ್ಯಾಗ್‌ನಲ್ಲಿ ಹಾಕಿಕೊಂಡು ಹೋಗುತ್ತಿರುವ ದೃಶ್ಯ ಸಿಕ್ಕಿತ್ತು. ಅದನ್ನು ಆಧರಿಸಿ ವಾಣಿವಿಲಾಸ, ವಿಕ್ಟೋರಿಯಾ ಆಸತ್ರೆಗಳ ಸುತ್ತಮುತ್ತ ಕೆ.ಆರ್.ಮಾರ್ಕೆಟ್ ಸೇರಿ 600ಕ್ಕೂ ಅಧಿಕ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿತ್ತು. ಜತೆಗೆ, ಏ.15ರಂದು ಮುಂಜಾನೆ ಆಸ್ಪತ್ರೆಯಲ್ಲಿ ಬಳಕೆಯಾಗಿದ್ದ ಮೊಬೈಲ್ ಕರೆಗಳ ಸಿಡಿಆರ್ ಪರಿಶೀಲಿಸಿದಾಗ ಅಂತಿಮವಾಗಿ ಅನುಮಾನದ ಮೇರೆಗೆ ಒಂದು ನಂಬರ್ ಸುಳಿವು ನೀಡಿತ್ತು. ಅದರ ಬಗ್ಗೆ ಸಂಪೂರ್ಣ ಮಾಹಿತಿ ಶೋಧಿಸಿದಾಗ ದಿವ್ಯಾರಶ್ಮಿ ಮನೆ ವಿಳಾಸ ಪತ್ತೆಯಾಗಿತ್ತು.
ಬಳಿಕ ಆಕೆಯ ಹಿನ್ನೆಲೆಯಲ್ಲಿ ಆಕೆಯ ಐಜೂರಿನ ಮನೆ ಬಳಿ ತೆರಳಿ, ಸ್ಥಳೀಯರಿಂದ ಕೆಲವೊಂದು ಮಾಹಿತಿ ಸಂಗ್ರಹಿಸಲಾಗಿತ್ತು. ಬಳಿಕ ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು.
ಮಚ್ಚೆ ನೋಡಿ ಮಗು ಗುರುತಿಸಿದ ತಾಯಿ: ಜನಿಸುವ ವೇಳೆ ಮಗುವಿನ ಎಡ ಕೈಯಲ್ಲಿ ಮಚ್ಚೆ ಇತ್ತು. ಮತ್ತೂಂದೆಡೆ ದಿವ್ಯಾರಶ್ಮಿಯಿಂದ ಮಗುವನ್ನು ರಕ್ಷಿಸಿ, ತಾಯಿಗೆ ಒಪ್ಪಿಸಲಾಗಿತ್ತು. ಆಗ ತಾಯಿ ಸುಮಾ ತನ್ನ ಮಗುವಿನ ಕೈಯಲ್ಲಿದ್ದ ಮಚ್ಚೆಯನ್ನು ಗುರುತಿಸಿ ತನ್ನದೆ ಮಗು ಎಂದು ಪೊಲೀಸರಿಗೆ ತಿಳಿಸಿದರು. ಮಗು ಕೈಗೊಪ್ಪಿಸುತ್ತಿದ್ದಂತೆ ಪೋಷಕರ ಕಣ್ಣಾಲಿಗಳು ಒದ್ದೆಯಾದವು.