ಬೆಂಗಳೂರು: ನಕಲಿ ದಾಖಲೆಗಳನ್ನು ತಯಾರಿಸಿ ಸುಮಾರು 70 ಕೋಟಿ ರೂ. ಮೌಲ್ಯದ ಆಸ್ತಿಗೆ ಪರಿಹಾರ ಪಡೆಯಲು ಯತ್ನಿಸಿದ ಪ್ರಕರಣ ಸಂಬಂಧ ಐವರು ಆರೋಪಿಗಳನ್ನು ಶೇಷಾದ್ರಿಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಚಲ್ಲಘಟ್ಟ ನಿವಾಸಿಗಳಾದ ಶ್ರೀನಿವಾಸ್ (32), ನಾಗರಾಜ್ (34), ರವಿಕುಮಾರ್ (32), ಭರತ್ (31) ಹಾಗೂ ಸ್ವಾಮಿ (30) ಬಂಧಿತರು. ಆರೋಪಿಗಳು ಬಿಡಿಎ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಜತೆ ಸೇರಿ ಚಲ್ಲಘಟ್ಟದಲ್ಲಿರುವ ಸುಮಾರು 70 ಕೋಟಿ ರೂ. ಮೌಲ್ಯದ ಆಸ್ತಿಗೆ ಪರಿಹಾರ ಪಡೆಯಲು ಯತ್ನಿಸಿದ್ದರು.
ಈ ಸಂಬಂಧ ಬಿಡಿಎನ ವಿಚಕ್ಷಣ ದಳದ ಡಿವೈಎಸ್ಪಿ ಮಲ್ಲೇಶ್ ಎಂಬುವರು ದೂರು ನೀಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಸರ್ಕಾರಿ ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ಹೆಚ್ಚಿನ ವಿಚಾರಣೆಗಾಗಿ ಆರೋಪಿಗಳ ಪೈಕಿ ನಾಗರಾಜ್‌ನನ್ನು ಪೊಲೀಸ್ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಇದೇ ಪ್ರಕರಣದಲ್ಲಿ ಬಿಡಿಎ ಭೂಸ್ವಾಧೀನ ಅಧಿಕಾರಿ ಸುಧಾ, ಬೆಂಗಳೂರು ದಕ್ಷಿಣ ವಿಭಾಗದ ಉಪ ವಿಭಾಗಾ ಧಿಕಾರಿ ಶಿವಣ್ಣ, ಬಿಡಿಎ ಸರ್ವೇಯರ್ ರವಿಪ್ರಕಾಶ್, ಕೆ.ಜಿ.ರಸ್ತೆ ಕಚೇರಿಯ ವಿಶೇಷ ತಹಶೀಲ್ದಾರ್, ಕಂದಾಯ ಇಲಾಖೆ ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಇತರೆ ಅಧಿಕಾರಿಗಳು, ಸಿಬ್ಬಂದಿ ವಿರುದ್ಧವೂ ಎಫ್ಐಆರ್ ದಾಖಲಾಗಿದೆ.
ಸರ್ಕಾರಿ ಅಧಿಕಾರಿಗಳು ಸೇರಿದಂತೆ 19 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದರು. ಎಲ್ಲ ಆರೋಪಿಗಳು ಚಲ್ಲಘಟ್ಟದ ಸರ್ವೇ ನಂ 13 ಹಾಗೂ 58ರಲ್ಲಿನ 6 ಎಕರೆಗೆ ನಕಲಿ ದಾಖಲೆ ಸೃಷ್ಟಿಸಿದ್ದರು. ಜಮೀನಿನ ಮೂಲ ಮಾಲಿಕ ಮೂಡ್ಲಪ್ಪ ಅವರಿಗೂ ಆರೋಪಿಗಳಿಗೂ ಯಾವುದೇ ಸಂಬಂಧ ಇಲ್ಲದಿದ್ದರೂ ಅಧಿಕಾರಿಗಳ ಜತೆ ಶಾಮೀಲಾಗಿ ಕಂದಾಯ ಇಲಾಖೆಯಿಂದ ನಕಲಿ ದಾಖಲೆ ಪಡೆದುಕೊಳ್ಳಲಾಗಿತ್ತು. ನಕಲಿ ದಾಖಲೆಗಳನ್ನು ಬಿಡಿಎಗೆ ಸಲ್ಲಿಸಿ, ಆಸ್ತಿಯ ಮಾಲೀಕರು ತಾವೇ ಎಂದು ಹೇಳಿಕೊಂಡು 70 ಕೋಟಿ ರೂ. ಮೌಲ್ಯದ ಆಸ್ತಿಗೆ ಪರಿಹಾರ ಕೋರಿದ್ದರು. ಈ ಹಿನ್ನೆಲೆಯಲ್ಲಿ ಗೋವಿಂದರಾಜು ಎಂಬವರು ಬಿಡಿಎ ವಿಚಕ್ಷಣ ದಳಕ್ಕೆ ದೂರು ನೀಡಿದ್ದರು. ಬಳಿಕ ಪ್ರಾಥಮಿಕ ತನಿಖೆ ನಡೆಸಿದಾಗ ವಂಚನೆ ಗೊತ್ತಾಗಿ, ಡಿವೈಎಸ್ಪಿ ಮಲ್ಲೇಶ್ ದೂರು ನೀಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.