ಬೆಂಗಳೂರು: ವಾಮಾಚಾರ ಮಾಡಿ ಕುಟುಂಬಕ್ಕೆ ಜೀವ ಬೆದರಿಕೆ ಹುಟ್ಟಿಸುತ್ತಿರುವ ಪತ್ನಿ ವಿರುದ್ಧ ಉದ್ಯಮಿಯೊಬ್ಬರು ಕಬ್ಬನ್‌ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ನಗರದ ಉದ್ಯಮಿ ದೇವ್ ಕುಮಾರ್(39) ಎಂಬವರು ನೀಡಿದ ದೂರಿನ ಮೇರೆಗೆ ಪತ್ನಿ, ವೈದ್ಯೆ ಎಂ.ಪಿ.ಐಶ್ವರ್ಯ, ಅತ್ತೆ ಮಹಾಲಕ್ಷ್ಮೀ ಮತ್ತು ಮಾವ ಮಂಜುನಾಥ್ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ.
ದೂರುದಾರ ಉದ್ಯಮಿ ದೇವ್ ಕುಮಾರ್ 2022ರ ಜೂ.1ರಂದು ಐಶ್ವರ್ಯ ಅವರನ್ನು ಮದುವೆಯಾಗಿದ್ದು, 2023ರ ಫೆ.22ರಂದು ಬಿಜಿನೆಸ್ ಟ್ರಿಪ್ ಮುಗಿಸಿಕೊಂಡು ಮನೆಗೆ ಬಂದಿದ್ದಾರೆ. ಆಗ, ಮನೆಯ ಶೌಚಾಲಯದಲ್ಲಿ ಬೂದಿ, ಕರ್ಪೂರ ಹರಡಿರುವುದು ಕಂಡು ಬಂದಿದೆ.
ಅಲ್ಲದೆ, ಪತ್ನಿ ಐಶ್ವರ್ಯ ತಮ್ಮ ಎರಡು ಹೆಬ್ಬರಳನ್ನು ಕತ್ತರಿಸಿಕೊಂಡಿದ್ದರು. ಮನೆಯ ಹಲವು ಕಡೆ ನಿಂಬೆಹಣ್ಣಿನ ತಂಡುಗಳು, ಪೂಜೆ ಮಾಡಿದ ತೆಂಗಿನ ಕಾಯಿಗಳು ಪತ್ತೆಯಾಗಿವೆ. ಈ ಬಗ್ಗೆ ಅನುಮಾನಗೊಂಡು ಖಾಸಗಿ ತನಿಖಾ ಸಂಸ್ಥೆಗೆ ಪತ್ನಿಯ ಮಾಹಿತಿ ಸಂಗ್ರಹಿ ಸಲು ಸೂಚಿಸಲಾಗಿತ್ತು. ಈ ಸಂಸ್ಥೆ ನನ್ನ ಪತ್ನಿ ಐಶ್ವರ್ಯ ಮತ್ತು ಅತ್ತೆ ಮಹಾಲಕ್ಷ್ಮೀ ಅತ್ತಿ ಗುಪ್ಪೆಯ ಜ್ಯೋತಿಷಿ ನಾಗೇಂದ್ರ ಮತ್ತು ಸ್ಮಶಾನದಲ್ಲಿ ಪೂಜೆ ಮಾಡುವ ಬಾಬು ಎಂಬವರನ್ನು ಭೇಟಿಯಾಗಿರುವುದು ಗೊತ್ತಾಗಿದೆ ಎಂದು ದೇವ್ ಕುಮಾರ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇನ್ನು ಜೂ.22ರಂದು ಪತ್ನಿ ತವರು ಮನೆಯಿಂದ ವಾಪಸ್ ತಮ್ಮ ಮನೆಗೆ ಬಂದಿದ್ದರು. ಆಗ ತಮಗೆ ಕೊಡುವ ಊಟಕ್ಕೆ ವಿವಿಧ ಎಣ್ಣೆ, ಬೂದಿ, ಉಗುಳು ಬೆರೆಯಿಸಿ ನನಗೆ ಮತ್ತು ನನ್ನ ಕುಟುಂಬದವರಿಗೆ ನೀಡುತ್ತಿದ್ದಳು. ಅದರಿಂದ ಗಾಬರಿಗೊಂಡು ಜು.5ರಂದು ಆಕೆಯನ್ನು ತವರು ಮನೆಗೆ ಕಳುಹಿಸಿದ್ದೆ. ಈ ನಡುವೆ ನಮ್ಮ ತಂದೆ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾರೆ. ನಮ್ಮ ಮನೆಯ ನಾಯಿ ಕೂಡ ಸತ್ತಿದೆ. ವಾಮಾಚಾರ ಮಾಡಿ ನನಗೆ ಮತ್ತು ನನ್ನ ಕುಟುಂಬಕ್ಕೆ ಜೀವಭಯ ಹುಟ್ಟಿಸಿರುವ ಪತ್ನಿ ಐಶ್ವರ್ಯ ಹಾಗೂ ಆಕೆ ಪೋಷಕರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ದೇವ್ ಕುಮಾರ್ ಮನವಿ ಮಾಡಿದ್ದಾರೆ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದರು.