Advertisement

ಇಪ್ಪತ್ತು ವರ್ಷಗಳ ಸೃಷ್ಟಿಯನ್ನು  ಒಂದು ಮೋಂಬತ್ತಿ ಸುಟ್ಟಿತು!

03:50 AM Feb 26, 2017 | |

ಅದೊಂದು ಕತೆ. ಕತೆಯೋ ವಾಸ್ತವದಲ್ಲಿ ನಡೆದದೋ ಗೊತ್ತಿಲ್ಲ. ಅವನೊಬ್ಬ ಇತಿಹಾಸದ ವಿದ್ಯಾರ್ಥಿ. ಯಾವುದೋ ಗಲಾಟೆಯಲ್ಲಿ ವೃಥಾ ಸಿಕ್ಕಿಕೊಂಡು ಜೈಲು ಸೇರಿದ್ದಾನೆ. ಅವನಿಗೆ ಹಲವು ವರ್ಷಗಳ ಶಿಕ್ಷೆಯಾಗುತ್ತದೆ. ಮೊದಮೊದಲಿಗೆ ಅವನಿಗೆ ಜೀವನವೇ ಮುಗಿದುಹೋಯಿತು ಅನ್ನಿಸುತ್ತಿರುತ್ತದೆ. ಆದರೆ ನಿಧಾನವಾಗಿ ಆತ ಪಕ್ವನಾಗುತ್ತಾನೆ. ಹೇಗೂ ಜೈಲಲ್ಲೆ ಹಲವು ವರ್ಷ ಕೊಳೆಯಲಿದ್ದೇನೆ; ಇಲ್ಲಿದ್ದೇ  ಪ್ರಪಂಚದ ಇತಿಹಾಸ ಎಂಬೊಂದು ಅದ್ಭುತವಾದ ಕೃತಿ ಬರೆದರೆಂತು ಎಂದು ಯೋಚಿಸುತ್ತಾನೆ. ಆಳವಾದ ಅಧ್ಯಯನ, ನೋಟ್ಸ್‌ ಮಾಡಿಕೊಳ್ಳುವುದು, ಬರವಣಿಗೆ, ಬರೆದದ್ದನ್ನು ತಿದ್ದಿತೀಡಿ ಅಂದಗಾಣಿಸುವುದು ಹೀಗೆ ಹಲವು ವರ್ಷಗಳು ಕಳೆಯುತ್ತವೆ. ಪುಸ್ತಕ ಸಾವಿರ ಪುಟಗಳನ್ನೂ ದಾಟಿ ಮುಂದೋಡುತ್ತದೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಕೆಲಸ ಮುಗಿದುಬಿಡುತ್ತದೆ ಎನ್ನುವಷ್ಟರಲ್ಲಿ ಆ ಜೈಲಿನಲ್ಲಿ ಒಂದು ಅನಿರೀಕ್ಷಿತವಾದ ಘಟನೆ ನಡೆದುಹೋಗುತ್ತದೆ. ಆ ಇತಿಹಾಸಕಾರ ಇದ್ದ ಸೆಲ್ಲಿನ ಎದುರಲ್ಲೆ ಒಂದು ಕೊಲೆಯಾಗುತ್ತದೆ. ಘಟನೆಯನ್ನು ನೋಡಿದ್ದೇವೆಂದು ಹೇಳುವ ಮೂವರು ಮುಂದೆ ಬರುತ್ತಾರೆ. ಹಾಗೆ ಬಂದವರು ಜೈಲರ್‌ ಎದುರಿಗೆ ಮೂರು ವಿಭಿನ್ನ ಕತೆಗಳನ್ನು ಹೇಳುತ್ತಾರೆ! ತನ್ನ ಕಣ್ಣೆದುರೇ ನಡೆದುಹೋದ ಒಂದು ಕೊಲೆಗೆ ಹೀಗೆ ಮೂರು ಭಿನ್ನಪಾಠಗಳು ಬಂದದ್ದನ್ನು ಕಂಡು ಇತಿಹಾಸಕಾರ ದಂಗಾಗಿಬಿಡುತ್ತಾನೆ. ಇಲ್ಲಿ ಕಣ್ಣಳತೆಯಲ್ಲಿ ನಡೆದ ಘಟನೆಯೇ ಇಷ್ಟೊಂದು ವಿಚಿತ್ರ ತಿರುವುಗಳನ್ನು ಪಡೆದು ಹೊಸದಾಗಿ ಬಿಂಬಿತವಾಗುವಾಗ ಇನ್ನು ಚರಿತ್ರೆಯಲ್ಲಿ ಅದಿನ್ನೆಷ್ಟು ತಿರುಚುವಿಕೆಗಳು ನಡೆದಿರಬಹುದು! ಇತಿ-ಹಾಸ ಎಂದರೇನೇ ಹೀಗೆ ನಡೆದಿತ್ತು ಎಂದು ಅರ್ಥ. ಅಂದರೆ ನಡೆದ ಸಂಗತಿಗಳನ್ನು ನೋಡಿದವರು, ಅಥವಾ ನೋಡದೆಯೇ ನೋಡಿದಂತೆ ಆಡುವವರು ರೆಕ್ಕೆಪುಕ್ಕ ಕಟ್ಟಿ ಚೆಂದಗಾಣಿಸುವ ಕಲೆಯೇ ಇತಿಹಾಸ. ಇಲ್ಲಿ ನಿಜವಾಗಿಯೂ ನಡೆದ¨ªೆಷ್ಟೋ, ನಡೆದೂ ನಡೆದಿಲ್ಲವೆಂದಿಷ್ಟೋ, ನಡೆಯದೆಯೂ ನಡೆದಿದೆ ಎಂದಿ¨ªೆಷ್ಟೋ! ಹಾಗಿರುವಾಗ ಯಾವ್ಯಾವುದೋ ದಾಖಲೆಗಳನ್ನು ಎದುರಿಟ್ಟುಕೊಂಡು ಅವೇ ಸತ್ಯವೆಂದು ನಂಬಿ ನಾನು ಪ್ರಪಂಚದ ಚರಿತ್ರೆ ಬರೆದೆನಲ್ಲ, ಇದರಲ್ಲಿ ಎಷ್ಟೊಂದು ಸುಳ್ಳುಪಳ್ಳು ತುಂಬಿರಬಹುದು! ದೀರ್ಘ‌ವಾಗಿ ಯೋಚಿಸಿದ ಇತಿಹಾಸಕಾರ ಎದ್ದುಹೋಗಿ ತನ್ನ ಸಾವಿರ ಪುಟಗಳ ಹಸ್ತಪ್ರತಿಯನ್ನು ನಿರ್ಮೋಹದಿಂದ ಬೆಂಕಿಗೆ ಹಾಕಿದ. ಕೆಲಕ್ಷಣಗಳಲ್ಲೆ ಅವನ ವರ್ಷಗಳ ಶ್ರಮ ಬೂದಿಯಾಗಿಹೋಗಿತ್ತು.

Advertisement

ಹೀಗೆ ತಾವೇ ಬರೆದದ್ದನ್ನು ಬೂದಿಗೆ ಹಾಕುವುದು ಬಹುಶಃ ಅತ್ಯಂತ ಉತ್ಕಟವಾದ ದುಃಖ, ದಿಗಮೆ, ಆಕ್ರೋಶ, ನಿರ್ಮೋಹ ಮತ್ತು ಜ್ಞಾನೋದಯಗಳಲ್ಲಿ ಮಾತ್ರ ಸಾಧ್ಯವೆಂದು ಸಾಮಾನ್ಯ ಭಾವನೆ. ನಿಕಲಾಯ್‌ ಗೋಗಲ್‌ ರಷ್ಯದ ಹೆಸರಾಂತ ಸಾಹಿತಿ. ಗವರ್ನ್ ಮೆಂಟ್‌ ಇನ್ಸ್‌ಪೆಕ್ಟರ್‌, ನೋಸ್‌, ಓವರ್‌ಕೋಟ್‌ ಇತ್ಯಾದಿ ಕೃತಿಗಳು ಆತನ ಹೆಸರನ್ನು ರಷ್ಯನ್‌ ಸಾಹಿತ್ಯಚರಿತ್ರೆಯಲ್ಲಿ ಚಿರಸ್ಥಾಯಿಯಾಗಿಸಿವೆ. ಈತ ಹತ್ತು ವರ್ಷಗಳ ಕಾಲ ಯುರೋಪಿನಲ್ಲಿ ಕಳೆದು ತನ್ನ 38ನೆಯ ವಯಸ್ಸಿಗೆ ತಾಯ್ನಾಡಿಗೆ ಮರಳುವ ಹೊತ್ತಿಗೆ ಇಡೀ ದೇಶದಲ್ಲಿ ದೊಡ್ಡ ದಂತಕತೆಯಾಗಿದ್ದ. ದಾಂತೆಯ ಇನ್‌ಫ‌ರ್ನೋ ಕೃತಿಯನ್ನು ಮೀರಿಸುವಂತೆ ಬರೆಯಬೇಕೆಂಬ ಹುಚ್ಚುಹಂಬಲದಲ್ಲಿ ಡೆಡ್‌ ಸೌಲ್ಸ್‌ ಎಂಬ ಮಹಾಕಾವ್ಯ ಬರೆದಿದ್ದ. ಆತನ ಮುಂದಿನ ಗುರಿ ಡಿವೈನ್‌ ಕಾಮಿಡಿಯನ್ನೂ ಮಿರಿಸುವ ಮಹತ್ಕತಿಯನ್ನು ಬರೆಯುವುದಾಗಿತ್ತು. ಆ ಮಹತ್ವಾಕಾಂಕ್ಷೆಯಲ್ಲಿ ಕೈಗೆತ್ತಿಕೊಂಡ ಡೆಡ್‌ ಸೌಲ್ಸ್‌ ಭಾಗ 2 ಅದಿನ್ನೇನು ಅಂತಿಮ ಹಂತಕ್ಕೆ ಬಂದುಮುಟ್ಟಿತ್ತು. ಆದರೆ, ಅದೇ ಸಮಯ ದಲ್ಲಿ ಗೋಗಲ್‌ ನಿಧಾನವಾಗಿ ಅತಿಧಾರ್ಮಿಕ ನಂಬಿಕೆಗಳನ್ನು ನೆಚ್ಚಿಕೊಳ್ಳತೊಡಗಿದ. ಅಷ್ಟರಲ್ಲಿ ಅವನ ಆಪ್ತವಲಯದಲ್ಲಿದ್ದ ಕ್ಯಾಥರಿನ್‌ ಎಂಬ ಹೆಂಗಸು ಜ್ವರ ಬಂದು ತೀರಿಕೊಂಡಳು. ಆ ಸಾವು ಗೋಗಲ್‌ನನ್ನು ಅದೆಷ್ಟು ತೀವ್ರವಾಗಿ ದಿಗ್ಬ್ರಮೆಗೊಳಿಸಿತೆಂದರೆ ಆತ ಸಂಪೂರ್ಣವಾಗಿ ಅಸ್ವಸ್ಥನೇ ಆದ. ತನ್ನ ಧರ್ಮಗುರು ಸಾಹಿತ್ಯ ರಚಿಸುವುದು ಮಹಾಪಾಪ ಎಂದದ್ದನ್ನು ನಂಬಿ ಗೋಗಲ್‌ ತನ್ನ ಹಲವು ವರ್ಷಗಳ ಪರಿಶ್ರಮದ ಫ‌ಲವಾಗಿದ್ದ ಡೆಡ್‌ ಸೌಲ್ಸ್‌ ಕೃತಿಯ ಹಾಳೆಗಳನ್ನು ಒಂದೊಂದಾಗಿ ಹರಿದು ಬೆಂಕಿಗೆ ಹಿಡಿಯುತ್ತಿದ್ದ. ಕೊನೆಗೊಂದು ದಿನ ತಿಂಡಿ-ತೀರ್ಥಗಳನ್ನೆಲ್ಲ ಪರಿತ್ಯಜಿಸಿ ಕಠೊರವಾದ ಉಪವಾಸ ಮಾಡಿ ಎಲ್ಲ ವೈದ್ಯಕೀಯ ಶುಶ್ರೂಷೆಗೂ ಅತೀತನಾಗಿ ತನ್ನ ನಲವತ್ತೆರಡನೆಯ ವಯಸ್ಸಿನಲ್ಲಿ ದಾರುಣ ಮರಣವನ್ನು ಕಂಡ. ಇಂದಿಗೂ ಮಾಸ್ಕೋಗೆ ಭೇಟಿ ನೀಡುವ ರಷ್ಯನ್‌ ಸಾಹಿತ್ಯಾಸಕ್ತರು, ಗೋಗಲ್‌ ತನ್ನ ಪುಸ್ತಕಗಳನ್ನು ಭಸ್ಮ ಮಾಡಿದ ಜಾಗಕ್ಕೆ ಹೋಗಿ ಎರಡು ಹನಿ ಕಣ್ಣೀರು ಹಾಕುತ್ತಾರೆ. 

ಪುಸ್ತಕಗಳನ್ನು ಸುಟ್ಟದ್ದು, ಚಿತ್ತಕ್ಲೇಷದಿಂದ ತನ್ನನ್ನು ತಾನೇ ಹಿಂಸಿಸಿಕೊಂಡು ನೀಗಿದ್ದನ್ನೆಲ್ಲ ಓದಿದರೆ ನಮಗೆ ತಟ್ಟನೆ ಕಣ್ಮುಂದೆ ಮೂಡುವ ಚಿತ್ರ ಸಂಸರದ್ದು. ಎ.ಎನ್‌. ಸ್ವಾಮಿ ವೆಂಕಟಾದ್ರಿ ಅಯ್ಯರ್‌ ಎಂಬ ಈ ವ್ಯಕ್ತಿ ಕಲಿಯದ ಭಾಷೆ ಯಾವುದು, ಮಾಡದ ವೃತ್ತಿ ಯಾವುದು, ತಿರುಗದ ದೇಶ ಯಾವುದು! ಆದರೂ ಕೊನೆಗೆ ಮೈಸೂರಿನ ಸದ್ವಿದ್ಯಾ ಪಾಠಶಾಲೆಯ ಪುಟ್ಟದೊಂದು ಕೊಠಡಿಯಲ್ಲಿ ಕಿಟಕಿ-ಬಾಗಿಲುಗಳನ್ನೆಲ್ಲ ಮುಚ್ಚಿಕೊಂಡು ಅಸಹನೀಯ ಬಾಳ್ವೆ ಬಾಳಿ ಸಂಸ ಆತ್ಮಹತ್ಯೆ ಮಾಡಿಕೊಂಡರು. ಅವರು ಒಟ್ಟು 23 ನಾಟಕಗಳನ್ನು ಬರೆದಿದ್ದರು. ಅದರಲ್ಲಿ ಕೊನೆಗುಳಿದದ್ದು ಸುಗುಣ ಗಂಭೀರ, ವಿಗಡ ವಿಕ್ರಮರಾಯ, ವಿಜಯ ನಾರಸಿಂಹ, ಬಿರುದೆಂತೆಂಬರ ಗಂಡ, ಬೆಟ್ಟದ ಅರಸು ಮತ್ತು ಮಂತ್ರಶಕ್ತಿ – ಇಷ್ಟೇ. ಪ್ರತಿಭೆಯಲ್ಲಿ ಶೇಕ್ಸ್‌ಪಿಯರನಿಗೆ ಭುಜಕ್ಕೆ ಭುಜ ತಾಗಿಸಿ ನಿಲ್ಲಬಲ್ಲಂಥ ಈ ಅದ್ಭುತಶಕ್ತಿ ಮಿಕ್ಕೆಲ್ಲ ಕೃತಿಗಳನ್ನೂ ತಾನೇ ಹರಿದು ಸುಟ್ಟು ಅಡಗಿ ಸಿಟ್ಟು ನಾಶಪಡಿಸಿದರು. ಇದು ಲೇಖಕರಿಗೆ ಮಾತ್ರ ಆವರಿಸುವ ಮಾಯೆಯಲ್ಲ; ತಮ್ಮ ಜೀವಮಾನದ ಸಾಧನೆಯನ್ನೆಲ್ಲ ಹೀಗೆ ಬೂದಿ ಮಾಡಿದವರಲ್ಲಿ ವಿಜ್ಞಾನಿಗಳೂ ಗಣಿತಜ್ಞರೂ ಇ¨ªಾರೆ. ಜಗತ್ತಿನ ಅತ್ಯಂತ ಪ್ರತಿಭಾವಂತ ಗಣಿತಜ್ಞರಿಗೆ ಕೊಡಮಾಡುವ ಪ್ರಶಸ್ತಿಗಳನ್ನೆಲ್ಲ ತನ್ನ ಬದುಕಿನ ಮೊದಲ ನಲವತ್ತು ವರ್ಷಗಳÇÉೇ ಸಂಪಾದಿಸಿದ್ದ ಗ್ರಾಥೆನ್‌ಡೀಕ್‌, ಬದುಕಿನ ಉತ್ತರಾರ್ಧವನ್ನು ಎಲ್ಲರಿಗಿಂತ ದೂರಾಗಿ ಏಕಾಂಗಿಯಾಗಿ ಮೌನಿಯಾಗಿ ಕಳೆದ. ಮಾತ್ರವಲ್ಲ ತಾನು ಬರೆದಿಟ್ಟಿದ್ದ ಸುಮಾರು ಹತ್ತು ಸಾವಿರ ಪುಟಗಳಲ್ಲಿದ್ದ ಗಣಿತಕ್ಕೆ ಅಗ್ನಿಸ್ಪರ್ಶ ಮಾಡಿ ಆಕಾಶಕ್ಕೆ ಕಳಿಸಿಬಿಟ್ಟ! ಅತ್ಯಂತ ದೊಡ್ಡ ತತ್ವಜ್ಞಾನಿಯೂ ಆಗಿದ್ದ ಗ್ರಾಥೆನ್‌ಡೀಕ್‌, ಈ ಜಗತ್ತಿನಲ್ಲಿ ತಾನು ಏನನ್ನೂ ಉಳಿಸಿಹೋಗಬಾರದು ಎಂಬ ತತ್ವಕ್ಕೆ ಅಂಟಿಕೊಂಡಿದ್ದ. ಆತನ ಕೃತಿಗಳೇನೋ ಪಂಚಭೂತಗಳಲ್ಲಿ ಸೇರಿಕೊಂಡವು. ಆದರೆ ಆತನ ಈ ಕೃತ್ಯ ಮಾತ್ರ ಚರಿತ್ರೆಯಲ್ಲಿ ಅಳಿಸಲಾಗದಂತೆ ದಾಖಲಾಗಿ ಹೋಯಿತು!

ತಾವಾಗಿ ತಮ್ಮ ಕೃತಿಗಳಿಗೆ ಬೆಂಕಿ ಹಚ್ಚುವ ಕೃತ್ಯ ಮಾಡಿ ಕೃತಕೃತ್ಯ ರಾದವರು ಕೆಲವರಾದರೆ, ಯಾವುದೋ ಆಕಸ್ಮಿಕದಲ್ಲಿ ಬೆಂಕಿಬಿದ್ದು ತಮ್ಮ ಅಮೂಲ್ಯ ಸಾಹಿತ್ಯ ಸಂಪತ್ತನ್ನು ನಾಶ ಮಾಡಿಕೊಂಡವರೂ ಇ¨ªಾರೆ. ತಟ್ಟನೆ ನೆನಪಿಗೆ ಬರುವ ಹೆಸರು ಗಣಿತಜ್ಞ ಐಸಾಕ್‌ ನ್ಯೂಟನ್‌ನದು. ಒಮ್ಮೆ ನ್ಯೂಟನ್‌ ತನ್ನ ಇಪ್ಪತ್ತು ವರ್ಷಗಳ ಪ್ರಯೋಗ, ಸಂಶೋಧನೆಗಳನ್ನೆಲ್ಲ ಕ್ರೋಢೀಕರಿಸಿ ಮಹಾಗ್ರಂಥವನ್ನು ಬರೆಯುತ್ತಿದ್ದನಂತೆ. ಹಲವು ತಿಂಗಳುಗಳಿಂದ ನಡೆಯುತ್ತಿದ್ದ ಕೆಲಸ ಅದು. ಒಂದು ಸಂಜೆ, ಒಂದಷ್ಟು ಪುಟ ಬರೆದು ಆ ಪುಸ್ತಕವನ್ನು ಮೇಜಿನಲ್ಲಿಟ್ಟು ಹೊರಗೆ ಅಡ್ಡಾಡಲು ಹೋದನಂತೆ. ಮೇಜಿನಲ್ಲಿ ಒಂದು ಮೋಂಬತ್ತಿಯೂ ಉರಿಯುತ್ತಿತ್ತು. ಅದೇನು ಕೆಲಸವಿತ್ತೋ ಏನೋ, ನ್ಯೂಟನ್ನನ ಸಾಕುನಾಯಿ ಡೈಮಂಡ್‌ ಮೇಜು ಹತ್ತಿ ಒಂದಷ್ಟು ಮಕ್ಕಳಾಟವಾಡಿ ಮೋಂಬತ್ತಿಯನ್ನು ಅಡ್ಡ ಹಾಕಿತು. ಬೆಂಕಿ ಅಲ್ಲಿದ್ದ ಹಾಳೆಗಳಿಗೆ ತಾಗಿತು. ರಕ್ತದ ರುಚಿ ಹತ್ತಿದ ಹುಲಿ ನೆಕ್ಕುತ್ತ ಮುಂದೆಮುಂದೆ ಬಂದಂತೆ ಬೆಂಕಿಯ ಕೆನ್ನಾಲಿಗೆ ಮೇಜಿನಲ್ಲಿದ್ದ ಹಾಳೆಗಳನ್ನೆಲ್ಲ ಗುಡಿಸಿಹಾಕುತ್ತ ಹೋಯಿತು. ನ್ಯೂಟನ್‌ ತನ್ನ ವಾಯುವಿಹಾರ ಮುಗಿಸಿ ಬರುವ ಹೊತ್ತಿಗೆ ಆತನ ಇಪ್ಪತ್ತು ವರ್ಷಗಳ ಸಾಧನೆಗಳೆಲ್ಲ ಬೂದಿಯಾಗಿ ಹರಡಿದ್ದವು. ಅದನ್ನು ನೋಡಿ ಆ ಮಹಾನುಭಾವ ಏನೂ ತಿಳಿಯದಂತೆ ಕೂತಿದ್ದ ನಾಯಿಯ ಮೈದಡವಿ, ಅಯ್ಯೋ ಮಗುವೇ, ನೀನೇನು ಮಾಡಿದ್ದೀ ಎಂದೇ ನಿನಗೆ ಗೊತ್ತಿಲ್ಲವಲ್ಲೊ ಎಂದುಬಿಟ್ಟನಂತೆ. ನ್ಯೂಟನ್‌ ನಾಯಿ ಸಾಕಿರಲಿಲ್ಲ. ಆತನ ಮೇಜಿನ ಬಳಿ ಇದ್ದ ಕಿಟಕಿ ತೆರೆದಿತ್ತು. ಹಾಗಾಗಿ, ಗಾಳಿ ಬೀಸಿ ಮೋಂಬತ್ತಿ ಅಡ್ಡಬಿದ್ದು ಹಾಳೆಗೆ ಹತ್ತಿತು ಎಂದೂ ಕೆಲವರು ಹೇಳುತ್ತಾರೆ. ಅದೇನೇ ಇರಲಿ, ದಶಕಗಳ ಸಾಧನೆ ಅಗ್ನಿಲೀನವಾಗಿದ್ದಂತೂ ನಿಜ. ಥಾಮಸ್‌ ಕಾರಲೈಲ್‌ ಎಂಬ ಪಂಡಿತ ತನ್ನ ಸ್ನೇಹಿತ ಜಾನ್‌ ಸ್ಟುವರ್ಟ್‌ ಮಿಲ್‌ನ ಒತ್ತಾಯದ ಮೇರೆಗೆ ಫ್ರೆಂಚ್‌ ಕ್ರಾಂತಿಯ ಇತಿಹಾಸ ಎಂಬ ಮಹಾಗ್ರಂಥವನ್ನು ಬರೆದ. ಬಳಿಕ, ಅಭಿಪ್ರಾಯ ಕೇಳಲೆಂದು ಮಿಲ್‌ನ ಕೈಗೆ ಒಪ್ಪಿಸಿಬಂದ. ಅದಾಗಿ 

ಒಂದು ವಾರದಲ್ಲಿ ಮಿಲ್‌ ಚಳಿಜ್ವರ ಹಿಡಿದಂತೆ ಕಳಾಹೀನ ಮುಖಹೊತ್ತು ಥಾಮಸ್‌ನ ಮನೆಗೆ ಬಂದ. “ಏನಪ್ಪ, ಏನಾಯಿತು? ಮನೆಯಲ್ಲಿ ಎಲ್ಲರೂ ಆರಾಮ ತಾನೆ?’ ಎಂದು ಥಾಮಸ್‌ ವಿಚಾರಿಸಿದಾಗ ಮಿಲ್‌ ಹೇಳಿದ್ದೇನು ಗೊತ್ತೆ? ಮೊದಮೊದಲಿಗೆ ಹೆಣ್ಣುಗಳ ಅಂತರಂಗದ ಪಿಸುಮಾತುಗಳಲ್ಲಿ ಮಾತ್ರ ಚಾಲ್ತಿಯಲ್ಲಿದ್ದ ಬೈರಾನ್‌ನ ಸಾಹಸ ಕತೆಗಳು ಬರುಬರುತ್ತ ಬೀದಿಯ ಎಲ್ಲರೂ ಮಾತಾಡಿಕೊಳ್ಳುವ ಹಂತಕ್ಕೆ ಬಂದಿತು. ಇದರಿಂದ ಮುಖ ಮುಚ್ಚಿಕೊಳ್ಳಲು ಕೊನೆಗೆ ಅವನು ದೇಶವನ್ನೇ ಬಿಟ್ಟು ಹೋಗಬೇಕಾಯಿತು. ಬೈರಾನ್‌ ಗ್ರೀಸ್‌ ದೇಶದಲ್ಲಿ¨ªಾಗ ಅಲ್ಲಿನ ಒಂದು ಯುದ್ಧದಲ್ಲಿ ಭಾಗವಹಿಸಿ ಮರಣವನ್ನಪ್ಪಿದ. ಆದರೆ, ಸಾಯುವ ಮೊದಲು ತನ್ನ ಆತ್ಮಕತೆಯ ಎರಡು ಸಂಪುಟಗಳನ್ನು ಆತ್ಮೀಯನಾಗಿದ್ದ ಜಾನ್‌ ಮರ್ರಿ ಎಂಬವನ ಕೈಯಲ್ಲಿಟ್ಟು ಅದನ್ನು ತನ್ನ ಮರಣಾನಂತರ ಪ್ರಕಟಪಡಿಸುವಂತೆ ಕೇಳಿಕೊಂಡ. ಗೆಳೆಯನ ಮಾತನ್ನು ನಡೆಸಿಕೊಡಬೇಕೆಂದು ಜಾನ್‌ ಲಂಡನ್ನಿಗೆ ಬಂದು ಬೈರಾನ್‌ನ ಹಳೆಯ ಪ್ರಕಾಶಕರ ಬಳಿಹೋಗಿ ಆ ಸಂಪುಟಗಳನ್ನೊಪ್ಪಿಸಿ ಪ್ರಕಟ ಮಾಡುವಂತೆ ಕೇಳಿಕೊಂಡ. ಆದರೆ ಆ ಪುಸ್ತಕಗಳನ್ನು ಓದಿದ್ದೇ ತಡ; ಅದೆಷ್ಟು ದೊಡ್ಡ ಬಿರುಗಾಳಿಯನ್ನು ಇಂಗ್ಲೆಂಡಿನಲ್ಲಿ ಎಬ್ಬಿಸಬಲ್ಲುದು ಎನ್ನುವುದು ಪ್ರಕಾಶಕನಿಗೆ ತಿಳಿದುಹೋಯಿತು. ಬೈರಾನ್‌ ತನ್ನ ಆತ್ಮಕತೆಯಲ್ಲಿ ತನ್ನ ಸಂಬಂಧಗಳ ಬಗ್ಗೆ ನಿರ್ಭಿಡೆಯಿಂದ ಬರೆದುಕೊಂಡಿದ್ದ. ಆ ಕತೆಗಳು ಒಂದೆರಡಲ್ಲ ಇಂಗ್ಲೆಂಡಿನ ನೂರಾರು ಸಂಸಾರಗಳ ತಳ ಒಡೆಯುವಷ್ಟು ತೀಕ್ಷ್ಣವಾಗಿದ್ದವು. ಪುಸ್ತಕಗಳು ಬೈರಾನ್‌ನ ಸಂಸಾರಕ್ಕೆ ಹೋದವು. ಆತನ ಆತ್ಮೀಯ ಗೆಳೆಯರ ಕೈಗೂ ಹೋದವು. ಕೊನೆಗೊಂದು ದಿನ ಅವರೆಲ್ಲರೂ ಪ್ರಕಾಶಕನ ಮನೆಯಲ್ಲಿ ಸೇರಿ, ಆ ಪುಸ್ತಕಗಳ ಒಂದೊಂದು ಹಾಳೆಗಳನ್ನೂ ಹರಿದು ಅಗ್ಗಿಷ್ಟಿಕೆಯ ಬೆಂಕಿಗೆ ಹಾಕಿ ಚಿಮಣಿಯಲ್ಲಿ ಹೊಗೆಯಾಗಿ ಹೋದಮೇಲೆ ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಯುರೋಪಿನ ಅತ್ಯಂತ ಪ್ರಮುಖ ಕವಿಯ ಬಿಸಿಬಿಸಿಯಾದ ಜೀವನಚರಿತ್ರೆ ಹೀಗೆ ಬೆಂಕಿಯ ಬಾಯಿಗೆ ಬಿದ್ದು ಕಾಲಗರ್ಭದಲ್ಲಿ ಲೀನವಾಯಿತು. ಸಿಲ್ವಿಯಾ ಪ್ಲಾತ್‌ ಎಂಬ ಅತ್ಯಂತ ವಿಲಕ್ಷಣ ಕವಯತ್ರಿಯ ಬದುಕಿನ ವಿವರಗಳೂ ಹೀಗೆಯೇ, ಆಕೆಯ ಮರಣಾನಂತರ ಬೆಂಕಿಯ ಬಾಯಿಗೆ ಬಲಿಯಾದವು. ಆಕೆ ಬಿಚ್ಚಿಟ್ಟಿದ್ದ ಕಟು-ಕಠೊರ ಸತ್ಯಗಳು ಎಂದೆಂದೂ ಈ ಜಗತ್ತಿಗೆ ತಿಳಿಯದಂತೆ ಪಾತಾಳದಲ್ಲಿ ಅಡಗಿಕೂತವು.

Advertisement

ಇನ್ನು ಜೀವಮಾನಪೂರ್ತಿ ಬರೆದದ್ದನ್ನು ಮನೆ, ಬಸ್ಸು, ಹೋಟೆಲುಗಳಲ್ಲಿ ಕಳೆದುಕೊಂಡವರೂ ಇದ್ದಾರೆ. ಭಾರತದ ಪ್ರಸಿದ್ಧ ಗಣಿತಜ್ಞರಾಗಿದ್ದ ಶ್ರೀನಿವಾಸ ರಾಮಾನುಜನ್‌ ಇಂಗ್ಲೆಂಡಿನಿಂದ ಮರಳಿಬಂದ ಮೇಲೆ ತಮಿಳುನಾಡಿನ ತಮ್ಮ ಮನೆಯಲ್ಲಿ ಕ್ಷಯದಿಂದ ಹಾಸಿಗೆ ಹಿಡಿದಿದ್ದಾಗ, ಮಲಗಿದ್ದಲ್ಲೆ ಒಂದಷ್ಟು ಗಣಿತ ಲೇಖನಗಳನ್ನು ಬರೆಯುತ್ತಿದ್ದರು. ಹಾಗೆ ಬರೆದದ್ದನ್ನೆಲ್ಲ ಇಂಗ್ಲೆಂಡಿನಿಂದ ತಂದಿದ್ದ ಒಂದು ಚರ್ಮದ ಚೀಲದಲ್ಲಿ ಜೋಪಾನವಾಗಿಡುತ್ತಿದ್ದರು. ಆದರೆ, ರಾಮಾನುಜನ್‌ ತೀರಿಕೊಂಡು ಅವರ ಸಂಸ್ಕಾರ ಮಾಡಿ ಸಂಬಂಧಿಗಳು ಮನೆಗೆ ಮರಳುವ ಹೊತ್ತಿಗೆ ಆ ಚೀಲ ಕಾಣೆಯಾಗಿತ್ತು! ಅದಕ್ಕಾಗಿ ರಾಮಾನುಜನ್‌ ಪತ್ನಿ ಎಷ್ಟೆಷ್ಟು ಹುಡುಕಾಟ ನಡೆಸಿದರೂ ಫ‌ಲ ನೀಡಲಿಲ್ಲ. ರಾಮಾನುಜನ್‌ ಬರೆದ ಅವೆಷ್ಟೊಂದು ಅಮೂಲ್ಯ ಫ‌ಲಿತಾಂಶಗಳು ನಷ್ಟವಾದವಲ್ಲ, ಅವನ್ನು ಮತ್ತೆ ಹುಡುಕಿ ತೆಗೆಯುವುದಾದರೆ ಅದೆಷ್ಟು ಶತಮಾನಗಳು ಕಳೆಯಬೇಕೋ ಎಂದು ಎಲ್ಲರೂ ದುಃಖ ಪಟ್ಟರು. ಅದಾಗಿ ಹಲವು ವರ್ಷಗಳು ಕಳೆದ ಮೇಲೆ, ಅವರ ಕಳೆದುಹೋಗಿದ್ದ ನೋಟ್‌ ಪುಸ್ತಕಗಳು ವಿದೇಶದ ಒಂದು ಕಾಲೇಜಿನ ಧೂಳು ಹಿಡಿದ ಕಪಾಟಿನ ಮೂಲೆಯಲ್ಲಿ ಪತ್ತೆಯಾದವು! ಅವುಗಳನ್ನು ಎತ್ತೂಯ್ದವರು ಯಾರು? ಅದು ಯಾವೆಲ್ಲ ಕೈಗಳನ್ನು ದಾಟಿಹೋಯಿತು? ಭಾರತದಿಂದ ಅವನ್ನು ವಿದೇಶಕ್ಕೆ ಕೊಂಡುಹೋದವರು ಯಾರು? ಕೊನೆಗೆ ಅವೆಲ್ಲ ಕಾಲೇಜಿನ ಗ್ರಂಥಾಲಯ ಸೇರಿದ್ದು ಹೇಗೆ? ರಹಸ್ಯಗಳು ಇದುವರೆಗೆ ಬಯಲಾಗಿಲ್ಲ!

ರಾಮಾನುಜನ್‌ ಅದೃಷ್ಟವಂತ. ಹಲವು ದಶಕಗಳ ನಂತರವಾದರೂ ಅವರ ವಿನಷ್ಟ ಪುಸ್ತಕಗಳು ಮರಳಿ ಸಿಕ್ಕವು ಎನ್ನೋಣ. ಆದರೆ, ಫ್ರಾಂಕ್‌ ಬಾಮ್‌ನಂತಹ ನತದೃಷ್ಟ ಲೇಖಕರು ಜಗತ್ತಿನಲ್ಲಿ ಆಗಿಹೋಗಿರುವುದಕ್ಕೆ ಸಾಧ್ಯವಿಲ್ಲವೇನೋ. ವಿಜಾರ್ಡ್‌ ಆಫ್ ಓಝ್ನಂತಹ ಜಗದ್ವಿಖ್ಯಾತ ಕಾದಂಬರಿಯನ್ನು ಬರೆದ ಬಾಮ್‌ ತನ್ನ ಜೀವಮಾನದಲ್ಲಿ ಒಂದಲ್ಲ ಎರಡಲ್ಲ ಒಟ್ಟು ಎಂಟು ಕೃತಿಗಳನ್ನು ಕಳೆದುಕೊಂಡ! ಅವನ ನಾಲ್ಕು ನಾಟಕಗಳು ಒಂದು ನಾಟಕಮಂದಿರಕ್ಕೆ ಬೆಂಕಿ ಬಿದ್ದಾಗ ಅಲ್ಲಿ ಅಗ್ನಿಗಾಹುತಿಯಾದವು. ಅವರ್‌ ಮ್ಯಾರೀಡ್‌ ಲೈಫ್, ಜಾನ್‌ಸನ್‌, ದ ಮಿಸ್ಟರಿ ಆಫ್ ಬೊನಿಟ ಮತ್ತು ಮಾಲಿ ಊಡಲ್‌ ಎಂಬ ಅವನ ನಾಲ್ಕು ಕಾದಂಬರಿಗಳ ಹಸ್ತಪ್ರತಿಗಳು ಮರಣಾನಂತರ ನಿಗೂಢವಾಗಿ ಕಣ್ಮರೆಯಾದವು. ಯಾರು ಕದ್ದರು, ಎಲ್ಲಿ ಕದ್ದರು ಎನ್ನುವುದೆಲ್ಲ ಇಂದಿಗೂ ಚಿದಂಬರ ರಹಸ್ಯ. 

ಇಂಗ್ಲೀಶ್‌ ಸಾಹಿತ್ಯ ಬಲ್ಲ ಎಲ್ಲರಿಗೂ ಆರ್ನೆಸ್ಟ್‌ ಹೆಮಿಂಗ್ವೇ ಗೊತ್ತು. ಆತನ ದ ಮ್ಯಾನ್‌ ಆಂಡ್‌ ದ ಸೀ ಕೃತಿ ಜಗದ್ವಿಖ್ಯಾತ. ತನ್ನ ಹರೆಯದ ದಿನಗಳಲ್ಲಿ ಹೆಮಿಂಗ್ವೇ ಪತ್ರಕರ್ತನಾಗಿದ್ದ. ಟೊರಾಂಟೋ ಡೈಲಿ ಸ್ಟಾರ್‌ ಎಂಬ ಪತ್ರಿಕೆಗಾಗಿ ಕೆಲಸ ಮಾಡುತ್ತಿದ್ದಾಗ ಒಂದು ಕಾರ್ಯಕ್ರಮದ ವರದಿ ಮಾಡುವುದಕ್ಕಾಗಿ ಸ್ವಿಜರ್‌ಲ್ಯಾಂಡಿಗೆ ಹೋಗಬೇಕಾಗಿ ಬಂತು. ಅಲ್ಲಿ ಆತನಿಗೆ ಲಿಂಕನ್‌ ಸ್ಟೀಫ‌ನ್ಸ್‌ ಎಂಬ ಇನ್ನೋರ್ವ ಪತ್ರಕರ್ತ-ಸಾಹಿತಿಯ ಪರಿಚಯವಾಯಿತು. ಲಿಂಕನ್‌, ಹೆಮಿಂಗ್ವೇಯ ಒಂದಷ್ಟು ಸಾಹಿತ್ಯವನ್ನು ಓದಿನೋಡಿ ನಿಜಕ್ಕೂ ಮನಸೋತಿದ್ದ. “ನಿನ್ನ ಎಲ್ಲ ಬರಹಗಳನ್ನೂ ಕೊಡು, ಅಚ್ಚುಹಾಕಿಸೋಣ’ ಎಂದು ಭರವಸೆಯನ್ನೂ ಕೊಟ್ಟ. ಹೆಮಿಂಗ್ವೇಗೆ ಆಗಿನ್ನೂ ಇಪ್ಪತ್ತೆರಡು ವರ್ಷ ವಯಸ್ಸು. ಅದಾಗಲೇ ಆತ ಒಟ್ಟು 22 ಕತೆಗಳನ್ನು ಬರೆದಿದ್ದ. ಒಂದಷ್ಟು ಕವಿತೆಗಳನ್ನೂ ಹೊಸೆದಿದ್ದ. ತನ್ನ ಮೊದಲ ಕಾದಂಬರಿಯನ್ನು ಅರ್ಧ ಬರೆದು ಮುಗಿಸಿದ್ದ. ಇವೆಲ್ಲವನ್ನೂ ಲಿಂಕನ್‌ಗೆ ತೋರಿಸಿ ಇನ್ನಷ್ಟು ಖುಷಿಪಡಿಸಬೇಕೆಂಬ ಆಸೆಯಲ್ಲಿ ಹೆಮಿಂಗ್ವೇ ಪ್ಯಾರಿಸ್ಸಿನಲ್ಲಿದ್ದ ತನ್ನ ಪತ್ನಿಗೆ ಕಾಗದ ಹಾಕಿ ವಿಷಯ ತಿಳಿಸಿದ. ಆದಷ್ಟು ಬೇಗ, ನನ್ನೆಲ್ಲ ಬರಹಗಳನ್ನೂ ತೆಗೆದುಕೊಂಡು ಜಿನೀವಾಕ್ಕೆ ಬಂದುಬಿಡು ಎಂಬ ಒಕ್ಕಣೆ ಇತ್ತು ಪತ್ರದಲ್ಲಿ. ಆತನ ಹೆಂಡತಿ ಎಲಿಜಬೆತ್‌ ಹ್ಯಾಡ್ಲಿ, ಗಂಡನ ಎಲ್ಲಾ ಬರಹಗಳನ್ನು – ಕಾರ್ಬನ್‌ ಪ್ರತಿಗಳ ಸಮೇತ ಒಂದು ಸೂಟ್‌ಕೇಸಿನಲ್ಲಿ ಹಾಕಿಕೊಂಡು ರೈಲು ಏರಿದಳು. ಪ್ರಯಾಣದ ಮಧ್ಯೆ ಒಂದು ಸ್ಟೇಶನ್ನಿನಲ್ಲಿ ರೈಲು ನಿಂತಾಗ, ಒಂದು ಬಾಟಲು ನೀರು ಕೊಂಡುತರೋಣ ಎನ್ನುತ್ತ ಹ್ಯಾಡ್ಲಿ ಇಳಿದಳು. ನೀರಿನ ಬಾಟಲು ಕೊಂಡು ರೈಲಿಗೆ ವಾಪಸಾಗುವ ಹೊತ್ತಿಗೆ ದುರಂತ ನಡೆದುಹೋಗಿತ್ತು. ಹೆಮಿಂಗ್ವೇಯ ಬರಹಗಳಿದ್ದ ಸೂಟ್‌ಕೇಸ್‌ ಕಾಣೆಯಾಗಿತ್ತು! ಆತ ಅದುವರೆಗೆ ಬರೆದಿದ್ದ ಎಲ್ಲಾ ಕೆಲಸವೂ ಒಂದೇ ಒಂದು ಕ್ಷಣದಲ್ಲಿ ಮರೆಯಾಗಿಹೋಗಿತ್ತು. ಇಷ್ಟಾದರೂ ಎರಡು ಕತೆಗಳು ಬಚಾವಾಗಿ ಉಳಿದುಕೊಂಡವಂತೆ. ಒಂದು – ಅಪ್‌ ಇನ್‌ ಮಿಶಿಗನ್‌. ಅದನ್ನು ಹೆಮಿಂಗ್ವೇ ತನ್ನ ಕಪಾಟಿನ ಕೆಲ ಕಾಗದಪತ್ರಗಳ ಅಡಿಯಲ್ಲಿ ಇಟ್ಟಿದ್ದರಿಂದ ಪತ್ನಿಯ ಕಣ್ಣಿಂದ ಅದು ತಪ್ಪಿಸಿಕೊಂಡಿತ್ತು. ಇನ್ನೊಂದು ಕತೆ ಮೈ ಓಲ್ಡ್‌ ಮ್ಯಾನ್‌ ಪ್ರಕಟಣೆಗಾಗಿ ಒಂದು ಪತ್ರಿಕಾಲಯ ಸೇರಿದ್ದರಿಂದ ಬದುಕುಳಿಯಿತು!

ಪುಸ್ತಕಗಳು, ಜನರ ಕಣ್ಣು ತೆರೆಸುವುದರಿಂದ, ಅವನ್ನು ಸುಡಬೇಕು ಎನ್ನುವವರೂ ಇದ್ದಾರೆ ! ಇರಾಕ್‌ನ ಇಸ್ಲಾಮಿಕ್‌ ರಾಜ್ಯ ಎಂಬ ಉಗ್ರಗಾಮಿಗಳ ಸಂಘಟನೆ ಆ ದೇಶದಲ್ಲಿ ಎಲ್ಲೆಲ್ಲಿ ಲೈಬ್ರರಿಗಳಿಯೋ ಅವೆಲ್ಲವನ್ನೂ ಬಾಂಬ್‌ ಹಾಕಿ ನೆಲಸಮ ಮಾಡುವುದರಲ್ಲಿ ತೊಡಗಿಕೊಂಡಿದೆ. ಇರಾಕ್‌ನ ಅತ್ಯಂತ ಪ್ರಸಿದ್ಧ ಮೊಸುಲ್‌ ಲೈಬ್ರರಿಗೆ ನುಗ್ಗಿದ ಐಸಿಸ್‌ ಉಗ್ರಗಾಮಿಗಳು ಒಟ್ಟು 1,12,000 ಪುಸ್ತಕ, ಹಸ್ತಪ್ರತಿ, ಅಮೂಲ್ಯ ದಾಖಲೆಗಳನ್ನು ಬೆಂಕಿಗೆ ಹಾಕಿದರು. ಈ ಜಗತ್ತಿನ ಎಲ್ಲಾ ಬರಹಗಳನ್ನೂ ಒಟ್ಟು ಸೇರಿಸಿ ಬೆಂಕಿಹಚ್ಚಿ ಬೂದಿ ಮಾಡಿದರೂ ಮನುಷ್ಯರು ಮತ್ತೆ ಅಷ್ಟೇ ಮೊತ್ತದ ಪುಸ್ತಕಗಳನ್ನು ಬರೆಯಬಲ್ಲರು ಎಂಬ ಒಂದು ಹೇಳಿಕೆ ಇದೆ. ಸಂಸ್ಕ್ಟತದಲ್ಲಿ ಕ್ಷರ ಎಂದರೆ ನಾಶವಾಗುವಂಥಾದ್ದು ಎಂದರ್ಥ. ಅಕ್ಷರ – ಅವಿನಾಶಿ. ಅದು ಎಷ್ಟು ಕಡಿದರೂ ಚಿಗುರುವ ಅದಮ್ಯ ಜೀವನೋತ್ಸಾಹದ ವೃಕ್ಷ ಇದ್ದಂತೆ. ಪುಟಗಳನ್ನು ಸುಡಬಹುದು; ಆದರೆ ಚಿಂತನೆಗಳನ್ನು ಸುಡುವುದು ಹೇಗೆ ಸಾಧ್ಯ? ಎರಡೇ ಎರಡು ವಾಕ್ಯಗಳ ಒಂದು ಝೆನ್‌ ಕತೆ ಹೀಗಿದೆ: ಒಬ್ಬ ಸನ್ಯಾಸಿ ಅದೊಂದು ದಿವ್ಯದಿನದಂದು ಬ್ರಹ್ಮಜ್ಞಾನ ಪಡೆದ. ತಕ್ಷಣ ಆತ ತಾನು ಇದುವರೆಗೆ ಓದಿಕೊಂಡಿದ್ದ ಪುಸ್ತಕಗಳನ್ನೆಲ್ಲ ತಂದು ಬೆಂಕಿಹಚ್ಚಿ ಬೂದಿ ಮಾಡಿದ!

ರೋಹಿತ್‌ ಚಕ್ರತೀರ್ಥ

Advertisement

Udayavani is now on Telegram. Click here to join our channel and stay updated with the latest news.

Next