Advertisement

ಉದ್ಯಮ ಸ್ನೇಹಿ ವಾತಾವರಣ ಆತ್ಮನಿರ್ಭರ ಭಾರತಕ್ಕೆ ಪೂರಕ

12:37 AM Sep 07, 2022 | Team Udayavani |

ಕೋವಿಡ್‌ -19 ಸಾಂಕ್ರಾಮಿಕ ರೋಗದೊಂದಿಗೆ ಬಂದ ಅಭೂತಪೂರ್ವ ಬಿಕ್ಕಟ್ಟನ್ನು ಯಶಸ್ವಿಯಾಗಿ ನಿಭಾಯಿಸುವ ಮೂಲಕ ಭಾರತವು ಪ್ರಮುಖ ಪ್ರಜಾಪ್ರಭುತ್ವ ಮತ್ತು ಆರ್ಥಿಕತೆಯಾಗಿ ಜಗತ್ತಿನ ಭರವಸೆಯ ವಲಯಗಳಲ್ಲಿ ಒಂದಾಗಿದೆ ಎಂದು ಸಾಬೀತುಪಡಿಸಿರುವುದು ನಿಜಕ್ಕೂ ಹರ್ಷದಾಯಕವಾಗಿದೆ. ಭಾರತದಲ್ಲಿ ಜೀವನ ಮತ್ತು ಜೀವನೋಪಾಯಗಳು “ಹಳೆಯ ಸಾಮಾನ್ಯ ಸ್ಥಿತಿ’ಗೆ ಮರಳುತ್ತಿವೆ ಮತ್ತು ಬೇಡಿಕೆಯ ಹೆಚ್ಚಳವು ಕಡಿಮೆ ಅವಧಿಯಲ್ಲಿ ಅತ್ಯಂತ ಭರವಸೆಯ ಆರ್ಥಿಕ ಬೆಳವಣಿಗೆಯನ್ನು ನಡೆಸುತ್ತಿದೆ ಎಂಬುದು ಸ್ಪಷ್ಟವಾಗಿದೆ. ನೆರೆಹೊರೆಯ ಆರ್ಥಿಕತೆಗಳು ಎದುರಿಸುತ್ತಿರುವ ಸಮಸ್ಯೆಗಳ ಹೊರತಾಗಿಯೂ ಭಾರತದ ಬೆಳವಣಿಗೆಯ ಮೂಲಭೂತ ಅಂಶಗಳು ದಕ್ಷಿಣ ಏಷ್ಯಾವನ್ನು ಪ್ರಗತಿಶೀಲ ಆರ್ಥಿಕ ಕಾರ್ಯಕ್ಷಮತೆಯ ಪ್ರದೇಶವಾಗಿ ವಿಶ್ವ ಭೂಪಟದಲ್ಲಿ ಇರಿಸುತ್ತಿವೆ.

Advertisement

ಈಸ್‌ ಆಫ್ ಡೂಯಿಂಗ್‌ ಬ್ಯುಸಿನೆಸ್‌
ವ್ಯವಹಾರ ಮಾಡುವುದನ್ನು ಸುಲಭಗೊಳಿಸಲು (ಈಸ್‌ ಆಫ್ ಡೂಯಿಂಗ್‌ ಬ್ಯುಸಿನೆಸ್‌) ಕೈಗೊಂಡ ಸ್ಥೂಲ ಆರ್ಥಿಕ ನೀತಿಗಳು ಮತ್ತು ಸಮಯೋಚಿತ ಸುಧಾರಣೆಗಳು ವ್ಯವಹಾರಗಳಿಗೆ ಸವಾಲುಗಳನ್ನು ಎದುರಿಸಲು ಮತ್ತು ಭಾರತದ ಬೆಳವಣಿಗೆಗೆ ಅಪಾರ ಕೊಡುಗೆ ನೀಡಲು ಸಾಧ್ಯವಾಗಿಸಿದೆ. ಆಡಳಿತದ ಪರಿಸರವು ಉದ್ಯಮದ ಅಗತ್ಯಗಳಿಗೆ ಹೆಚ್ಚು ಸಂವೇದನಶೀಲ ವಾಗುತ್ತಿರುವುದು ಉದ್ಯಮಿಗಳ ವಿಶ್ವಾಸವನ್ನು ಹೆಚ್ಚಿಸಿದೆ.

ಭಾರತವು ಹೂಡಿಕೆಗೆ ಮಾತ್ರವಲ್ಲದೆ ವ್ಯಾಪಾರ ಮಾಡಲು ಕೂಡ ಅತ್ಯಂತ ಆಕರ್ಷಕ ತಾಣಗಳಲ್ಲಿ ಒಂದಾಗಿ ಹೊರ ಹೊಮ್ಮಿದೆ. ವಿಶ್ವ ಬ್ಯಾಂಕ್‌ನ ಈಸ್‌ ಆಫ್ ಡೂಯಿಂಗ್‌ ಬ್ಯುಸಿನೆಸ್‌ ಶ್ರೇಯಾಂಕ 2020ರಲ್ಲಿ ಭಾರತವು 142ನೇ (2014) ಸ್ಥಾನದಿಂದ 63ನೇ (2019) ಸ್ಥಾನಕ್ಕೆ ಅಂದರೆ, 79 ಸ್ಥಾನಗಳಷ್ಟು ಜಿಗಿತವನ್ನು ಸಾಧಿಸಿದೆ.

ವ್ಯವಹಾರವನ್ನು ಸರಳಗೊಳಿಸುವುದು ಕೇಂದ್ರ ಸರಕಾರದ ಆಡಳಿತ ಮತ್ತು ಆರ್ಥಿಕ ಯೋಜನಾ ಚೌಕಟ್ಟಿನ ಪ್ರಮುಖ ಕಾರ್ಯಸೂಚಿಯಾಗಿದ್ದು, ಹಂತಹಂತವಾಗಿ ಗ್ರಾಮ ಮಟ್ಟ ದವರೆಗೆ ಉದ್ಯಮಸ್ನೇಹಿ ವಾತಾವರಣ ಸೃಷ್ಟಿಸುವತ್ತ ಆಡಳಿತ ಯಂತ್ರ ಬದ್ಧವಾಗಿದೆ. ಭಾರತದಲ್ಲಿ ಉದ್ಯಮಸ್ನೇಹಿ ವಾತಾವರಣವನ್ನು ಸುಧಾರಿಸುವ ಗುರಿಯೊಂದಿಗೆ ಅನೇಕ ಅನುಸರಣೆಗಳನ್ನು ಕಡಿಮೆ ಮಾಡಲಾಗಿದೆ. ಧನಾತ್ಮಕ ಬದಲಾವಣೆಗಳು ಭಾರತದ ಶ್ರೇಯಾಂಕದಲ್ಲಿ ಈ ಪ್ರಭಾವಶಾಲಿ ಸುಧಾರಣೆಗೆ ಕಾರಣವಾಗಿವೆ.

ಕೃಷಿಯನ್ನು ಉತ್ತೇಜಿಸುವ ನೀತಿ ಆಯೋಗದ ಕ್ರಿಯಾ ಯೋಜನೆ ಹಾಗೂ ಆಧುನಿಕ ಚಟುವಟಿಕೆಗಳಲ್ಲಿ ಉದ್ಯೋಗ ಸೃಷ್ಟಿಯ ಹೆಜ್ಜೆಗಳು ಹೆಚ್ಚು ಸಂಚಲನವನ್ನು ಮೂಡಿಸಿವೆ.

Advertisement

ಭಾರತವನ್ನು ಉನ್ನತ ಸುಧಾರಕರಲ್ಲಿ ಒಂದೆಂದು ವಿಶ್ವಬ್ಯಾಂಕ್‌ ಗುರುತಿಸಿರುವುದು ಹೊಸ ಕಾಲದಲ್ಲಿ ವ್ಯವಹಾರಗಳು ಕಾರ್ಯನಿರ್ವಹಿಸುವ ವಿಧಾನಗಳನ್ನು ಮರುವ್ಯಾಖ್ಯಾನಿಸಲು ಭಾರತದ ನಿರಂತರ ಪ್ರಯತ್ನಗಳ ಬಗ್ಗೆ ಜಗತ್ತಿಗೆ ಭರವಸೆ ನೀಡುತ್ತದೆ.

500ಕ್ಕೂ ಹೆಚ್ಚು ಸಂಶೋಧಕರ ಜಾಗತಿಕ ಒಕ್ಕೂಟದ ವರದಿಯ ಪ್ರಕಾರ, ಹೊಸ ವ್ಯವಹಾರವನ್ನು ಪ್ರಾರಂಭಿಸಲು ಸುಲಭವಾದ ಐದು ಆರ್ಥಿಕತೆಗಳಲ್ಲಿ ಭಾರತವೂ ಸೇರಿದೆ. ವಿಭಿನ್ನ ಉದ್ಯಮಶೀಲತೆಯ ಚೌಕಟ್ಟಿನ ಪರಿಸ್ಥಿತಿಗಳಲ್ಲಿ ಕಡಿಮೆ ಆದಾಯದ ಆರ್ಥಿಕತೆಗಳಲ್ಲಿ ದೇಶವನ್ನು ಅಗ್ರಸ್ಥಾನದಲ್ಲಿ ಇರಿಸಿದೆ.

ಈಸ್‌ ಆಫ್ ಡೂಯಿಂಗ್‌ ಬ್ಯುಸಿನೆಸ್‌ ಸೂಚ್ಯಂಕವು ವ್ಯವಹಾ ರಗಳಿಗೆ ಉತ್ತಮ, ಸರಳ ನಿಯಮಗಳು ಮತ್ತು ಉದ್ಯಮಿಗಳ ಆಸಕ್ತಿಗೆ ಪೂರಕವಾದ ವಾತವರಣವನ್ನು ಒದಗಿಸಲು ಸಹಕಾರಿಯಾಗುತ್ತದೆ. ಇದು ವ್ಯಾಪಾರ ಮಾಡುವಲ್ಲಿ ಇರುವ ಸಂಕೀರ್ಣ ನಿರ್ಬಂಧಗಳನ್ನು ಸರಳಗೊಳಿಸಿ ಆರ್ಥಿಕತೆಯ ಬೆಳವಣಿಗೆಗೆ ಕಾರಣವಾಗುತ್ತದೆ.

ಉದ್ಯಮ ಸುಧಾರಣೆಗಳ ಕ್ರಿಯಾ ಯೋಜನೆಯ ವರದಿ
ಉದ್ಯಮ ಸುಧಾರಣೆಗಳ ಕ್ರಿಯಾ ಯೋಜನೆ (2020) ವರದಿಯು ಹೂಡಿಕೆದಾರರ ವಿಶ್ವಾಸವನ್ನು ಸುಧಾರಿಸಲು ಮತ್ತು ನಾಗರಿಕರಿಗೆ ಸರಕಾರಿ ಸೇವೆಗಳಿಗೆ ಪ್ರವೇಶಕ್ಕಾಗಿ ಕೇಂದ್ರ ಸರಕಾರವು ಗುರುತಿಸಿರುವ ಸುಧಾರಣೆಗಳ ದೀರ್ಘ‌ ಪಟ್ಟಿ ಯನ್ನು ಪೂರ್ಣಗೊಳಿಸುವಲ್ಲಿ ರಾಜ್ಯಗಳ ಬದ್ಧತೆ ಹಾಗೂ ಸಾಧನೆಗಳ ಆಧಾರದ ಮೇಲೆ ಸಾಧಕರ ಪಟ್ಟಿಯನ್ನು ಬಿಡುಗಡೆ ಮಾಡುತ್ತಿದೆ. ಕೇಂದ್ರ ಸರಕಾರವು ಡಿಜಿಟಲೀಕರಣದ ಪ್ರಗತಿ, ಪಾರದರ್ಶಕತೆ ಮತ್ತು ದೇಶದಲ್ಲಿ ಹೂಡಿಕೆದಾರರ ವಿಶ್ವಾಸವನ್ನು ಆಧರಿಸಿ ರಾಜ್ಯಗಳಿಗೆ 2015ರಲ್ಲಿ ಶ್ರೇಯಾಂಕ ನೀಡಲು ಪ್ರಾರಂಭಿಸಿತು. ವರದಿಯು ಸುಧಾರಣ ಕ್ರಿಯಾ ಯೋಜನೆಯ ಅನುಷ್ಠಾನದಲ್ಲಿ ಕೆಲವು ನಿಯತಾಂಕಗಳ ಮೇಲೆ ರಾಜ್ಯಗಳ ಕಾರ್ಯಕ್ಷಮತೆಯನ್ನು ನಿರ್ಣಯಿಸುವ ಮೂಲಕ ಆರೋಗ್ಯಕರ ಸ್ಪರ್ಧೆಯು ಗುರಿಯನ್ನು ತಲುಪಲು ಸಹಕಾರಿ ಯಾಗಿದೆ. ಈ ಪ್ರಕ್ರಿಯೆಯು ವ್ಯಾಪಾರದ ವಾತಾವರಣವನ್ನು ಸುಧಾರಿಸುವುದರೊಂದಿಗೆ ಭಾರತವು ಹೂಡಿಕೆಗೆ ಹೆಚ್ಚು ಒಲವುಳ್ಳ ತಾಣವಾಗಿ ಬೆಳೆಯುವ ಆಶಯವನ್ನು ಹೊಂದಿದೆ.

ಸುಲಭ ವ್ಯವಹಾರ: ರಾಜ್ಯಗಳ ಪಟ್ಟಿ ಬಿಡುಗಡೆ
ಸುಗಮ ವ್ಯವಹಾರ ಪೂರಕ ಪರಿಸರವು ಉದ್ಯಮಗಳ ಬೆಳವಣಿಗೆ ಹಾಗೂ ವಾಣಿಜ್ಯ ಹೂಡಿಕೆಗಳ ಏರಿಕೆಯಲ್ಲಿ ಮಹತ್ತರ ಸ್ಥಾನವನ್ನು ಪಡೆದಿದೆ. ಕಳೆದ ವರ್ಷದ ಪಟ್ಟಿಯಲ್ಲಿ ಸುಲಭ ವಹಿವಾಟಿಗೆ ಪೂರಕವಾದ ರಾಜ್ಯಗಳ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಆಂಧ್ರಪ್ರದೇಶ ಮತ್ತು ತೆಲಂಗಾಣ ಪಡೆದಿತ್ತು. ಈ ಪಟ್ಟಿ ಬಿಡುಗಡೆ ಬಳಿಕ ರ್‍ಯಾಂಕಿಂಗ್‌ನಲ್ಲಿ ಉತ್ತಮ ಸ್ಥಾನ ಗಳಿಸಲು ಎಲ್ಲ ರಾಜ್ಯಗಳಲ್ಲೂ ಸ್ಪರ್ಧೆ ಹೆಚ್ಚಾಗಿತ್ತು.

ಈ ಕ್ರಮವು ರಾಜ್ಯದಲ್ಲಿ ವಾಣಿಜ್ಯ ಮತ್ತು ಕೈಗಾರಿಕೆಗಳ ಮೇಲೆ ಹೂಡಿಕೆಯ ಏರಿಕೆಗೆ ಕಾರಣವಾಗುತ್ತದೆ. ಈ ವರ್ಷ ಸುಲಭ ವಹಿವಾಟಿನ ಅಭಿವೃದ್ಧಿಗೆ ರಾಜ್ಯ ಸರಕಾರಗಳು ಏಕ ಗವಾಕ್ಷಿ ಸೇವೆಯಂತಹ ಹಲವಾರು ಉನ್ನತ ಮಟ್ಟದ ಕ್ರಮಗಳನ್ನು ಅಳವಡಿಸಿಕೊಂಡಿವೆ. ಈ ಪಟ್ಟಿಯಲ್ಲಿ ಸುಲಭ ವಹಿವಾಟಿಗೆ ರಾಜ್ಯದಲ್ಲಿರುವ ತೆರಿಗೆ, ಪರಿಸರ, ಕಾರ್ಮಿಕ ಹಾಗೂ ತಪಾಸಣ ಕ್ಷೇತ್ರ, ಭೂಮಿ ಖರೀದಿ, ಕಟ್ಟಡ ನಿರ್ಮಾಣ, ವ್ಯವಹಾರ ಆರಂಭಿಸಲು ಪರವಾನಿಗೆಯಂಥ ಈ ಎಲ್ಲ ಮಾನದಂಡಗಳನ್ನು ಪರಿಶೀಲನೆ ಮಾಡಲಾಗುತ್ತದೆ.

ನಾವೀನ್ಯ ಸೂಚ್ಯಂಕ
ಭಾರತದಲ್ಲಿ ನಾವೀನ್ಯ ಸೂಚ್ಯಂಕದ ಮೂರನೇ ಆವೃತ್ತಿಯನ್ನು ನೀತಿ ಆಯೋಗವು ಈಚೆಗೆ ಬಿಡುಗಡೆ ಮಾಡಿದೆ. ಈ ಸೂಚ್ಯಂಕವನ್ನು ಸಿದ್ಧಪಡಿಸುವಲ್ಲಿ ಸೂಚಕಗಳ ಸಂಖ್ಯೆಯು 36ರಿಂದ (2020) 66ಕ್ಕೆ (2022) ಏರಿದೆ ಹಾಗೂ ಜಾಗತಿಕವಾಗಿ ಹೋಲಿಕೆ ಮಾಡಬಹುದಾಗಿದೆ.

ಸುಸ್ಥಿರ ಮತ್ತು ಸೇರ್ಪಡೆಯುಳ್ಳ ಬೆಳವಣಿಗೆಗೆ ನೂತನ ಆವಿಷ್ಕಾರಗಳು ಹಾಗೂ ಅದರ ಅಳವಡಿಕೆ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಆವಿಷ್ಕಾರಗಳ ವಾಣಿಜ್ಯ ಬಳಕೆಯ ಅಂದರೆ, ನಾವೀನ್ಯದ ಸೂಚ್ಯಂಕದಲ್ಲಿ ಕರ್ಣಾಟಕ ಸತತವಾಗಿ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ. ಕರ್ನಾಟಕ, ತೆಲಂಗಾಣ, ಹರಿಯಾಣ, ಛತ್ತೀಸ್‌ಗಢ, ಒಡಿಶಾ ಮುಂಚೂಣಿ ಯಲ್ಲಿದ್ದರೆ ಬಿಹಾರ ಕೊನೆಯಲ್ಲಿದೆ.

ಆತ್ಮನಿರ್ಭರ ಭಾರತ
ಪ್ರಧಾನಿಯವರ ಆತ್ಮನಿರ್ಭರ ಅಂದರೆ ಸಶಕ್ತ, ಸ್ವಾವಲಂಬಿ ಭಾರತದ ಪರಿಕಲ್ಪನೆ ಸಂಚಲನವನ್ನುಂಟು ಮಾಡಿದೆ. ಇದ ರೊಂದಿಗೆ ಸ್ಥಳೀಯವಾಗಿ ದೊರಕುವ ವಸ್ತುಗಳ ಹುಡುಕಾಟ ಹೆಚ್ಚಿದೆ ಮತ್ತು ಸ್ವದೇಶೀ ಉತ್ಪಾದನೆಗೂ ಬೆಂಬಲ ದೊರೆಯುತ್ತಿದೆ. ಬೇಡಿಕೆಯ ಮಟ್ಟಕ್ಕೆ ಪುಷ್ಟಿ ಸಿಗಬೇಕಾದರೆ ನಮ್ಮ ಉತ್ಪನ್ನಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಾತ್ಮಕವಾಗಿರ ಬೇಕು. ಆತ್ಮನಿರ್ಭರತೆ ಎಂದರೆ ಕೇವಲ ಸ್ವಾವಲಂಬನೆಯ ಆಕಾಂಕ್ಷೆಗಿಂತ ಹೆಚ್ಚಾಗಿ ನಮ್ಮ ಉತ್ಪಾದಕರು ಜಾಗತಿಕ ಪೂರೈಕೆ ಸರಪಳಿಯ ಭಾಗವಾಗಬೇಕಾಗಿದೆ. ಈ ನಿಟ್ಟಿನಲ್ಲಿ ಈಗ ಸೃಷ್ಟಿಯಾಗಿರುವ ಉದ್ಯಮಸ್ನೇಹಿ ವಾತಾವರಣ ನಮ್ಮ ಉದ್ಯಮ ಗಳಿಗೆ ಉತ್ತೇಜನ ನೀಡುವುದರೊಂದಿಗೆ ಹೆಚ್ಚು ಸ್ಪರ್ಧಾತ್ಮಕ ವಾಗಲು ಅನುವು ಮಾಡಿಕೊಡಬೇಕು.

“ಶಿಶುವನ್ನು ಪೋಷಿಸಿ, ಮಗುವನ್ನು ರಕ್ಷಿಸಿ ಮತ್ತು ವಯಸ್ಕರನ್ನು ಮುಕ್ತಗೊಳಿಸಿ’ ಎಂಬ ಸಾರ್ವಕಾಲಿಕ ಸಿದ್ಧಾಂತದ ಆಧಾರದ ಮೇಲೆ ನೂತನ ಉದ್ಯಮವು ದಕ್ಷತೆಯನ್ನು ಪಡೆದುಕೊಳ್ಳಲು ಅನುಕೂಲಕರವಾಗುವ ಹಾಗೆ ಸರಕಾರಗಳು ಉತ್ತೇಜಕಗಳನ್ನು ಆರಂಭಿಕ ಹಂತದಲ್ಲಿ ನೀಡಬೇಕು ಎಂದು ರಕ್ಷಣಾತ್ಮಕ ನೀತಿಯ ಬಹುದೊಡ್ಡ ಪ್ರತಿಪಾದನೆಯಾದ ಶೈಶಾ ವಸ್ಥೆಯ ಕೈಗಾರಿಕೆಗಳ ವಾದ. ಈ ನಿಟ್ಟಿನಲ್ಲಿ ನಮ್ಮ ಸರಕಾರಗಳು ಉದ್ಯಮಸ್ನೇಹಿ ವಾತಾವರಣದ ನಿರ್ಮಾಣದಲ್ಲಿ ತಮ್ಮ ಬದ್ಧತೆ ಯನ್ನು ಪ್ರದರ್ಶಿಸುವಲ್ಲಿ ಸ್ಪರ್ಧೆಗಿಳಿದುದು ಆಶಾದಾಯಕ.

ನಮ್ಮ ಗಮನ “ಕೋರ್‌ ಕಾಂಪಿಟೆನ್ಸಿ’ ಕಡೆಗಿರಲಿ
ಪ್ರಹ್ಲಾದ್‌ ಸಿ.ಕೆ. ಮತ್ತು ಗ್ಯಾರಿ ಹ್ಯಾಮೆಲ್‌ ಪರಿಚಯಿಸಿದ ಉದ್ಯಮಿಗಳ ಸ್ಪರ್ಧಾತ್ಮಕತೆಯ ಅಡಿಪಾಯವಾದ “ಕೋರ್‌ ಕಾಂಪಿಟೆನ್ಸಿ ಅಥವಾ “ಪ್ರಮುಖ ಸಾಮರ್ಥ್ಯ’ದ ಪರಿಕಲ್ಪನೆ ಬಹಳ ಪ್ರಸ್ತುತವಾಗಿದೆ. ಜಾಗತಿಕ ಮಾರುಕಟ್ಟೆ ಹೆಚ್ಚು ಹೆಚ್ಚು ಸ್ಪರ್ಧಾತ್ಮಕವಾಗುತ್ತಿದ್ದಂತೆ ಭಾರತೀಯ ಉದ್ಯಮಿಗಳು ತಮ್ಮ ವಿಶಿಷ್ಟ ಸಾಮರ್ಥ್ಯಗಳು ಹಾಗೂ ಮೌಲ್ಯವರ್ಧನೆಯತ್ತ ಗಮನ ನೀಡಬೇಕಾಗಿದೆ. ಆತ್ಮನಿರ್ಭರ ಭಾರತ ಆಶಯದ ಚೌಕಟ್ಟಿನಲ್ಲಿ ಉದ್ಯಮಸ್ನೇಹಿ ವಾತಾವರಣದೊಂದಿಗೆ ನಮ್ಮಲ್ಲಿ ಸುಪ್ತವಾಗಿರುವ ಸಾಮರ್ಥ್ಯ ಅನಾವರಣಗೊಳ್ಳಲಿ ಎಂಬುದೇ ನಮ್ಮ ಹಾರೈಕೆ.
ನಮ್ಮ ಪ್ರಯತ್ನಗಳು ಕೇವಲ ಉದ್ಯಮಸ್ನೇಹಿ ವಾತಾವರಣ ವನ್ನು ನಿರ್ಮಿಸಲು ಅಗತ್ಯವಾದ ಬದ್ಧತೆಯ ಪ್ರದರ್ಶನಕ್ಕೆ ಮಾತ್ರ ಸೀಮಿತವಾಗದೆ ಉದ್ಯಮಗಳ ಬೆಳವಣಿಗೆ ನಮ್ಮ ಆರ್ಥಿಕತೆಯ ಸದೃಢ ಬೆಳವಣಿಗೆಗೆ ಪೂರಕವಾಗುವಂತಾಗಲಿ. ಕೊರೊನಾ, ಉಕ್ರೇನ್‌ ಯುದ್ಧ ಜಗತ್ತಿನ ಆರ್ಥಿಕತೆಯನ್ನೇ ನಲುಗಿಸಿಬಿಟ್ಟಿದೆ. ಮಹಾಸಂಕಟದ ನಡುವೆಯೂ ನಮ್ಮ ಮನದಲ್ಲೀಗ ಗೆದ್ದೇ ಗೆಲ್ಲುವೆವು ಎಂಬ ಆತ್ಮಸ್ಥೈರ್ಯ ಮೊಳಕೆಯೊಡೆದು ಸ್ವಾವಲಂಬನೆಯ ಕಹಳೆ ಮೊಳಗಲು ಆರಂಭಿಸಿರುವುದು ಸ್ವಾಗತಾರ್ಹ.

ಕರ್ನಾಟಕ-ಟಾಪ್‌ ಅಚೀವರ್‌
ಜೂನ್‌ 30ಕ್ಕೆ ಕೇಂದ್ರ ಹಣಕಾಸು ಸಚಿವೆ ಬಿಡುಗಡೆ ಮಾಡಿದ ಪ್ರಕಟನೆಯ ಪ್ರಕಾರ ಆಂಧ್ರಪ್ರದೇಶ, ಗುಜರಾತ್‌, ಹರಿಯಾಣ, ಕರ್ನಾಟಕ, ಪಂಜಾಬ್‌, ತಮಿಳುನಾಡು ಮತ್ತು ತೆಲಂಗಾಣ ರಾಜ್ಯಗಳು ವ್ಯಾಪಾರ ಸುಧಾರಣ ಕ್ರಿಯಾ ಯೋಜನೆ ಅನುಷ್ಠಾನದ ವಿಷಯದಲ್ಲಿ ಅಗ್ರ (ಶೇ. 90ಕ್ಕಿಂತ ಹೆಚ್ಚು) ಸಾಧಕವಾಗಿವೆ. ಕರ್ನಾಟಕವು 17ನೇ ಸ್ಥಾನದಿಂದ ಟಾಪ್‌ ಅಚೀವರ್‌ ಸ್ಥಾನಕ್ಕೆ ಏರಿದೆ. ಕರ್ನಾಟಕ ನಾವೀನ್ಯದ ಸೂಚ್ಯಂಕದಲ್ಲಿ ಕೂಡ ಮಂಚೂಣಿಯಲ್ಲಿದೆ.

80-90 ಪ್ರತಿಶತ ಅಂಕಗಳನ್ನು ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ಉತ್ತರಾಖಂಡ ಮತ್ತು ಉತ್ತರ ಪ್ರದೇಶ ರಾಜ್ಯಗಳು ಪಡೆದಿವೆ. ಅಸ್ಸಾಂ, ಛತ್ತೀಸ್‌ಗಢ, ಗೋವಾ, ಝಾರ್ಖಂಡ್‌, ಕೇರಳ, ರಾಜಸ್ಥಾನ ಮತ್ತು ಪಶ್ಚಿಮ ಬಂಗಾಲದಂತಹ ರಾಜ್ಯಗಳು 50-80ರಷ್ಟು ಅಂಕಗಳೊಂದಿಗೆ ಮೂರನೇ ಪಟ್ಟಿಯಲ್ಲಿ ಸೇರಿವೆ.

– ಡಾ| ಎ. ಜಯಕುಮಾರ್‌ ಶೆಟ್ಟಿ , ಪ್ರೊಫೆಸರ್‌, ಎಸ್‌ಡಿಎಂ ಕಾಲೇಜು, ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next