ಮಹಾಲಿಂಗಪುರ: ರೈತ ದೇಶದ ಬೆನ್ನೆಲುಬಾದರೆ, ರೈತನ ಬೆನ್ನಲುಬು ಎತ್ತು. ಆದರೆ ಇತ್ತಿಚಿಗೆ ಯಾಂತ್ರಿಕ ಉಪಕರಣಗಳು ಹೆಚ್ಚಾಗಿದ್ದರಿಂದ ರೈತರು ಕೃಷಿ ಚಟುವಟಿಕೆಗಳಿಗೆ ಎತ್ತುಗಳನ್ನು ಬಳಸುವುದು ಕಡಿಮೆಯಾಗಿದೆ.
ಗ್ರಾಮೀಣ ಭಾಗದ ರೈತರು ಎತ್ತು ಮತ್ತು ಹೋರಿಗಳನ್ನು ಇಂದಿಗೂ ಸಾಕುತ್ತಿದ್ದಾರೆ. ಪಟ್ಟಣದ ಪುರಸಭೆಯ ಹಿರಿಯ ಸದಸ್ಯರು, ಪ್ರಗತಿಪರ ರೈತ ಯಲ್ಲನಗೌಡ ಪಾಟೀಲ ಅವರು ಇಂದಿಗೂ ತಮ್ಮ ಮನೆಯಲ್ಲಿ ಎತ್ತು ಮತ್ತು ಹೋರಿಗಳನ್ನು ಸಾಕುತ್ತಾ, ಗ್ರಾಮೀಣ ಭಾಗದಲ್ಲಿ ನಡೆಯುವ ಪ್ರತಿಯೊಂದು ಜಾತ್ರೆ ಉತ್ಸವಗಳಲ್ಲಿ ನಡೆಯುವ ತೆರಬಂಡಿ, ಕಲ್ಲು ಜಗ್ಗುವುದು ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದಾರೆ.
10.10 ಲಕ್ಷಕ್ಕೆ ಹೋರಿ ಖರೀದಿ:
ಇತ್ತಿಚಿಗೆ ಒಂಟಗೋಡಿ, ಚನ್ನಾಳ ಗ್ರಾಮಗಳಲ್ಲಿ ನಡೆದ ತೆರಬಂಡಿ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ಮುಧೋಳ ತಾಲೂಕಿನ ಶಿರೋಳ ಕಾಡಪ್ಪ ಭೀಮನಗೌಡ ಪಾಟೀಲ ಎಂಬ ರೈತರ ಒಂದೇ ಹೋರಿಯನ್ನು ದಾಖಲೆಯ 10.10 ಲಕ್ಷಕ್ಕೆ ಖರೀದಿಸಿದ್ದಾರೆ.
ಕಳೆದ 30-40 ವರ್ಷಗಳಿಂದ ನಾವು ಗ್ರಾಮೀಣ ಸ್ಪರ್ಧೆಯಲ್ಲಿ ಭಾಗವಹಿಸುವುದಕ್ಕಾಗಿ ಎತ್ತು ಮತ್ತು ಹೋರಿಗಳನ್ನು ಸಾಕುವ ಹವ್ಯಾಸವಿದ್ದು, ನಮ್ಮ ಮನೆಯಲ್ಲಿ ಇರುವ ಹೋರಿಗೆ ಸರಿಸಮನಾಗಿರುವ ಹೋರಿಯ ಹುಡುಕಾಟದಲ್ಲಿದ್ದಾಗ, ಶಿರೋಳ ಗ್ರಾಮದ ಕಾಡಪ್ಪ ಭೀಮನಗೌಡ ಪಾಟೀಲ ಅವರ ಮನೆಯಲ್ಲಿದ್ದ ತೆರಬಂಡಿ ಸ್ಪರ್ಧೆಯ ಒಂದೇ ಹೋರಿಗೆ 10 ಲಕ್ಷ 10 ಸಾವಿರ ಕೊಟ್ಟು ಖರೀದಿಸಿದ್ದೇವೆ. ಗ್ರಾಮೀಣ ಸ್ಪರ್ಧೆಗಳಲ್ಲಿ ಭಾಗವಹಿಸಿ ಮುಂದಿನ 2-3 ವರ್ಷಗಳಲ್ಲಿ ಖಂಡಿತವಾಗಿಯೂ ಆ ಹೋರಿಯು ನಮಗೆ ಲಾಭವನ್ನು ತಂದುಕೊಡುತ್ತದೆ ಎಂದು ರೈತ ಯಲ್ಲನಗೌಡ ಪಾಟೀಲ ಉದಯವಾಣಿಯೊಂದಿಗೆ ಸಂತಸ ಹಂಚಿಕೊಂಡಿದ್ದಾರೆ.
ಉದಯವಾಣಿ ಸಮಾಚಾರ