Advertisement

ಶರಾವತಿಗೆ ಕನ್ನ ಹಾಕಿದ್ದವರಿಗೆ ಬೆಂಡೆತ್ತಿದ್ದ ಬ್ರಿಟಿಷ್‌ ಅಧಿಕಾರಿ

12:08 AM Jun 27, 2019 | Lakshmi GovindaRaj |

ಶಿವಮೊಗ್ಗ: ಶರಾವತಿ ನದಿಯ ನೀರು ಬಳಸಿ ಬೆಂಗಳೂರಿನ ದಾಹ ನೀಗಿಸಲು ಸರ್ಕಾರ ಸಿದ್ಧವಾಗಿದೆ. ಇದಕ್ಕೆ ಪರ-ವಿರೋಧ ಧ್ವನಿ ಮೊಳಗುತ್ತಿದೆ. ಆದರೆ, ಶರಾವತಿ ನದಿಯಿಂದ ಬೆಳಗುವ ಜೋಗದ ಸಿರಿ ಸೊಬಗು ಅಂದಗೆಡಿಸುವ ಯೋಜನೆಗೆ ಬ್ರಿಟಿಷರ ಕಾಲದಲ್ಲೇ ವಿರೋಧ ವ್ಯಕ್ತವಾಗಿತ್ತು.

Advertisement

1899, ಜ.6ರಿಂದ 1905, ನ.18ರವರೆಗೆ ಲಾರ್ಡ್‌ ಕರ್ಜನ್‌, ಭಾರತದ ವೈಸ್‌ರಾಯ್‌ ಆಗಿದ್ದರು. 1903ರ ವೇಳೆಗೆ ಜೋಗ ಜಲಪಾತದಲ್ಲಿ ವಿದ್ಯುತ್‌ ಉತ್ಪಾದಿಸಲು ಮೆಸರ್ಸ್‌ ಸ್ಟೆವಾರ್ಟ್‌ ಆ್ಯಂಡ್‌ ಕಂಪನಿ, ಮೆಸರ್ಸ್‌ ರಿಚ್‌ ಆ್ಯಂಡ್‌ ಕಂಪನಿ ಮೊದಲಾದ ಕೆಲವರು ಮೈಸೂರು ಆಡಳಿತದ ಅನುಮತಿ ಬೇಡಿದ್ದರು. ಆಗ ನಾಲ್ವಡಿ ಕೃಷ್ಣರಾಜ ಒಡೆಯರ್‌ ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದರು.

ಪೂರ್ಣಯ್ಯನವರ ಮೊಮ್ಮಗ ಪಿ.ಎನ್‌.ಕೃಷ್ಣಮೂರ್ತಿ ರಾಜ್ಯದ ದಿವಾನರಾಗಿದ್ದರು. ಮೈಸೂರು ದರ್ಬಾರ್‌ ವಿದ್ಯುತ್‌ ಉತ್ಪಾದನೆಗೆ ಅನುಮತಿ ನೀಡುವ ಮೊದಲು ಬಾಂಬೆ ಸರ್ಕಾರದ ಒಪ್ಪಿಗೆಯ ಅಗತ್ಯವಿತ್ತು. ಏಕೆಂದರೆ ಜಲಪಾತದ ಒಂದು ಬದಿ ಮತ್ತು ಕೆಳಹರಿವಿನ ಬಹಳಷ್ಟು ಪ್ರದೇಶ ಬಾಂಬೆ ಪ್ರಾಂತ್ಯದ ಸ್ವಾಮ್ಯದಲ್ಲಿತ್ತು.

ಬಾಂಬೆ ಸರ್ಕಾರದ ಅನುಮತಿ ಕೊಡಿಸುವಂತೆ ಮೈಸೂರು ದರ್ಬಾರ್‌ ಆಗಿನ ಭಾರತ ಸರ್ಕಾರದ ವೈಸ್‌ರಾಯ್‌ ಲಾರ್ಡ್‌ ನಥೇನಿಯಲ್‌ ಕರ್ಜನ್‌ ಅವರನ್ನು ಕೋರಿ ಪತ್ರ ಬರೆದಿದ್ದರು. ಆಗ ಜೋಗಕ್ಕೆ ಬಂದು ಜಲಪಾತವನ್ನು ಸ್ವತ: ವೀಕ್ಷಿಸಿದ ಕರ್ಜನ್‌, ಅದರ ಅದ್ಭುತ ಸೌಂದರ್ಯಕ್ಕೆ ಮಾರು ಹೋಗಿದ್ದರು. ಅಲ್ಲಿಂದ ಹಿಂದಿರುಗಿದ ಅವರು, ಜೋಗದ ಜಲಪಾತವನ್ನು ಅಂದಗೆಡಿಸುವ ವಿದ್ಯುತ್‌ ಯೋಜನೆಗೆ ಅನುಮತಿ ಕೊಡಲು ನಿರಾಕರಿಸಿದ್ದರು.

ಅಷ್ಟಕ್ಕೂ ಪತ್ರದಲ್ಲೇನಿದೆ?: “ನಾನು ಭಾರತದಲ್ಲಿ ಇರುವವರೆಗೂ ಉದ್ದಿಮೆದಾರ ಮೆಸರ್ಸ್‌ ರಿಚಿ, ಮೆಸರ್ಸ್‌ ಸ್ಟಿವಾರ್ಟ್‌ ಆ್ಯಂಡ್‌ ಕಂಪನಿ ಅಥವಾ ಇನ್ಯಾರದೋ ಲಾಭಕ್ಕಾಗಿ ವಿಶ್ವದ ಸುಂದರ ನಿಸರ್ಗ ತಾಣಗಳಲ್ಲಿ ಒಂದಾಗಿರುವ ಗೇರುಸೊಪ್ಪ ಜಲಪಾತವನ್ನು ವಿನಾಶಕ್ಕೆ ದೂಡುವ ಮೂರ್ಖ ನಿರ್ಣಯಕ್ಕೆ ಪಾಲುಗಾರನಾಗಲಾರೆ.

Advertisement

ಜಲಪಾತದ ನೀರನ್ನು ಬಳಸುವುದಕ್ಕೆ ಯಾರು ಎಂತಹ ಕಾರಣವನ್ನೇ ಕೊಡಲಿ, ಎಂತಹ ಕರಾರು ಅಥವಾ ಪಂಥವನ್ನೊಡ್ಡಲಿ ಜಲಪಾತವನ್ನು ಕಣ್ಣಾರೆ ಕಂಡ ಯಾರೊಬ್ಬರೂ ಅದಕ್ಕೆ ಸಮ್ಮತಿ ನೀಡುವುದು ಅಸಾಧ್ಯ. ಏಕೆಂದರೆ ವರ್ಷದ ಬಹುತೇಕ ಸಮಯ ನದಿಯ ಪಾತ್ರದಲ್ಲಿ ಹರಿಯುವ ನೀರು ಅತ್ಯಲ್ಪವಾಗಿದ್ದು, ಅದರಲ್ಲಿ ತುಸು ನೀರನ್ನು ತಿರುವಿದರೂ ಜಲಪಾತದ ನೈಸರ್ಗಿಕ ಚೆಲುವು ಸಂಪೂರ್ಣ ನಾಶವಾಗುತ್ತದೆ.

ಮಳೆಗಾಲದಲ್ಲಿ ಮಾತ್ರ ಸಮೃದ್ಧವಾಗಿ ಸುರಿಯುವ ಜಲರಾಶಿ ನವೆಂಬರ್‌ ಹೊತ್ತಿಗೇ ಕುಸಿದು, ಅದರ ಮೇಲ್ಭಾಗದ ಯಾವುದೇ ಸ್ಥಳದಲ್ಲಿ ನದಿಯ ಹರಿವಿನ ಮಟ್ಟ ಆರರಿಂದ ಎಂಟು ಇಂಚಿಗಿಂತ ಹೆಚ್ಚು ಇರುವುದಿಲ್ಲ. ಬಾಂಬೆ ಪ್ರಾಂತ್ಯದಲ್ಲೇ ಇರುವ ಗೋಕಾಕ ಜಲಪಾತವನ್ನು ಅದರ ಮಡಿಲಿನಲ್ಲೇ ನಿರ್ಮಾಣಗೊಂಡ ಕೆಲವು ಗಿರಣಿಗಳು ಅದರ ಬಹುತೇಕ ಪಾಲಿನ ನೀರನ್ನು ಬಳಸುವ ಮೂಲಕ ಈಗಾಗಲೇ ನಾಶಗೈದಿವೆ ಎಂಬುದನ್ನು ನಾನಿಗಾಗಲೇ ಕೇಳಲ್ಪಟ್ಟಿದ್ದೇನೆ.’

“ಹಾಗೆಂದು ಕೋಲಾರದ ಚಿನ್ನದ ಗಣಿಗೆ ವಿದ್ಯುತ್‌ ಸರಬರಾಜು ಮಾಡುವ ಕಾವೇರಿಯ ಶಿವನಸಮುದ್ರಕ್ಕೂ ಜೋಗ ಜಲಪಾತಕ್ಕೂ ಹೋಲಿಕೆ ಸಲ್ಲದು. ಏಕೆಂದರೆ, ಸೌಂದರ್ಯದ ದೃಷ್ಟಿಯಿಂದ ಕಾವೇರಿ ಜಲಪಾತ ಗೇರುಸೊಪ್ಪೆಯ ಜಲಪಾತಕ್ಕೆ ಕಿಂಚಿತ್ತೂ ಸಾಟಿಯಾಗಲಾರದು ಮತ್ತು ನೀರಿನ ಪ್ರಮಾಣದ ದೃಷ್ಟಿಯಿಂದ ಕಾವೇರಿಯ ಅಪಾರ ಜಲರಾಶಿಗೆ ಜೋಗ ಸರಿದೂಗದು.

ಇಷ್ಟಾಗಿಯೂ ಅಲ್ಲಿ ಕೂಡ ಬಹಳಷ್ಟು ನೀರನ್ನು ವಿದ್ಯುತ್‌ ಉತ್ಪಾದನೆಗೆ ಬಳಸಿರುವುದರಿಂದ ಜಲಪಾತದ ಚೆಲುವು ನಷ್ಟವಾಗಿಯೇ ಇರುತ್ತದೆ ಎಂಬುದು ನನ್ನ ಖಚಿತ ಅಭಿಪ್ರಾಯ. ಪ್ರಸ್ತುತ ಈ ಯೋಜನೆಯ ವಿಚಾರದಲ್ಲೂ, ದೇಶದ ಅಭಿವೃದ್ಧಿಗೆ ಬೃಹತ್‌ ಕೈಗಾರಿಕೆಗಳ ಸ್ಥಾಪನೆ ಅಗತ್ಯವೆಂಬ ಸ್ಥೂಲ ವಿಚಾರದ ಹೊರತಾಗಿ ಯಾವುದೇ ಸ್ಪಷ್ಟ ಉದೇಶವನ್ನು ನಮಗೆ ಮೈಸೂರು ತಿಳಿಯಪಡಿಸಿಲ್ಲ.

ಪ್ರಸ್ತುತ ಭಾರತ ಸರ್ಕಾರವು ಬಾಂಬೆ ಸರ್ಕಾರ ಮತ್ತು ಮೈಸೂರು ದರ್ಬಾರ್‌ಗಳಿಗೆ ಸ್ಪಷ್ಟಪಡಿಸುವುದೇನೆಂದರೆ, ಈ ಸಂದರ್ಭದಲ್ಲಿ ಎರಡೂ ರಾಜ್ಯಗಳ ಗಡಿ ವಿಚಾರವನ್ನು ಚರ್ಚಿಸುವುದು ಅಸಂಗತ. ಏಕೆಂದರೆ, ಗೇರುಸೊಪ್ಪ ಜಲಪಾತದ ಮೇಲ್ದಂಡೆಯಲ್ಲಿ ಶರಾವತಿ ನದಿಯಿಂದ ನೀರನ್ನು ಬಳಸುವ ಯಾವುದೇ ಯೋಜನೆಗೆ ಭಾರತ ಸರ್ಕಾರವು ಅನುಮತಿಯನ್ನು ನಿರಾಕರಿಸುತ್ತಿದೆ.

ಜಲಪಾತದ ನೀರಿನ ಬಳಕೆಯನ್ನು ನಿರ್ಬಂಧಿ ಸುವ ಕುರಿತು ಮೈಸೂರು ದರ್ಬಾರ್‌ ಅಧ್ಯಾದೇಶವೊಂದನ್ನು ಜಾರಿಗೊಳಿಸುವ ಸ್ಪಂದನೆಯನ್ನು ತೋರಿದ ಪಕ್ಷದಲ್ಲಿ ಭಾರತ ಸರ್ಕಾರವೂ ಸ್ವತ: ಇಂತಹದ್ದೊಂದು ಅಧ್ಯಾದೇಶವನ್ನು ಜಾರಿಗೊಳಿಸಲು ಹಿಂಜರಿಯಲಾರದು’ ಎಂದು ಎಚ್ಚರಿಕೆ ನೀಡಿದ್ದರು.

ಮಾಹಿತಿ: ಗಜಾನನ ಶರ್ಮ,ಲೇಖಕರು.

Advertisement

Udayavani is now on Telegram. Click here to join our channel and stay updated with the latest news.

Next