Advertisement

ಬಡ ತಾಯಂದಿರ ಕಣ್ಣೀರೊರೆಸಲು ಉಜ್ವಲ ಯೋಜನೆ

11:57 AM Jul 04, 2017 | Team Udayavani |

ಚಿಕ್ಕಮಗಳೂರು: ದೇಶದಲ್ಲಿ ಕಡುಬಡತನದಲ್ಲಿರುವ ಕುಟುಂಬಗಳ ತಾಯಂದಿರ ಕಣ್ಣೀರು ಒರೆಸುವ ಉದ್ದೇಶದಿಂದ ಪ್ರಧಾನಮಂತ್ರಿ ಉಜ್ವಲ ಯೋಜನೆ ಜಾರಿಗೆ ತರಲಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

Advertisement

ನಗರದ ಚಂದ್ರೇಗೌಡ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಉಜ್ವಲ ಯೋಜನೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು
ಮಾತನಾಡಿದರು. ಕಟ್ಟಿಗೆ ಒಲೆ ಮುಂದೆ ಕಣ್ಣೀರು ಹಾಕುತ್ತಿದ್ದ ತಾಯಂದಿರ ಕಷ್ಟ ಅರಿತಿದ್ದ ಪ್ರಧಾನಿ ಮೋದಿ ಅವರು ಉಳ್ಳವರು ಸಬ್ಸಿಡಿ ಬಿಟ್ಟರೆ ಅದರಿಂದ ಬಡವರಿಗೆ ಗ್ಯಾಸ್‌ ಕೊಡುವುದಾಗಿ ಘೋಷಣೆ ಮಾಡಿದ್ದರು. ಅದರಂತೆ ದೇಶದಲ್ಲಿ 1.5 ಕೋಟಿ ಜನ ಶ್ರೀಮಂತರು ಗ್ಯಾಸ್‌ ಸಬ್ಸಿಡಿ ಬಿಟ್ಟಿದ್ದಾರೆ. ದೇಶದಲ್ಲಿರುವ 10 ಕೋಟಿ ಕಡುಬಡವರಿಗೆ ಗ್ಯಾಸ್‌ ಕೊಡಲು ಇದರಿಂದ ಸಾಧ್ಯವಾಗುತ್ತಿದೆ. ರಾಜ್ಯದಲ್ಲಿ 34 ಲಕ್ಷ ಕುಟುಂಬಗಳು ಈ ಯೋಜನೆಯ ಪ್ರಯೋಜನ ಪಡೆಯಲಿದ್ದು, ಜಿಲ್ಲೆಯಲ್ಲಿ 4 ಸಾವಿರ ಮಂದಿ ಸದ್ಯಕ್ಕೆ ಗ್ಯಾಸ್‌ ಸಂಪರ್ಕ ಪಡೆಯಲಿದ್ದಾರೆ. ಇನ್ನೂ 36 ಸಾವಿರ ಜನರಿಗೆ ಉಚಿತ ಗ್ಯಾಸ್‌ ಸೌಲಭ್ಯ ನೀಡುವ ಗುರಿ ಹೊಂದಲಾಗಿದೆ ಎಂದು ಹೇಳಿದರು.

ಈ ಯೋಜನೆಯಡಿ ಗ್ಯಾಸ್‌ ಸಂಪರ್ಕ ಪಡೆಯಲು ಯಾರಿಗೂ ಹಣ ಕೊಡಬೇಕಾಗಿಲ್ಲ. ಹಣ ಕೇಳಿದರೆ ನಮಗೆ ಅಥವಾ ಸಂಬಂಧಿಸಿದ ಇಲಾಖೆಗೆ ತಿಳಿಸಿ. ಗ್ಯಾಸ್‌ ಪಡೆದ ನಂತರ ಸಂರಕ್ಷಣೆ ದೃಷ್ಟಿಯಿಂದ ಫಲಾನುಭವಿಗಳಿಗೆ ಎಚ್‌ಪಿ  
ಕಂಪನಿಯಿಂದಲೇ ತರಬೇತಿ ನೀಡಲಿದ್ದಾರೆ. ಒಂದು ವೇಳೆ ಅವಘಡ ನಡೆದಲ್ಲಿ ಜೀವವಿಮೆ ಕೂಡ ಸಿಗಲಿದೆ ಎಂದು
ಹೇಳಿದರು.

ಶಾಸಕ ಸಿ.ಟಿ.ರವಿ ಮಾತನಾಡಿ, ಮೋದಿ ಸರ್ಕಾರ ಬಡವರ ಕಲ್ಯಾಣದ ಕೆಲಸ ಮಾಡುತ್ತಿದೆ. ಕುರಿ ಕೋಳಿ
ಕೊಟ್ಟು ಮೂಗಿಗೆ ತುಪ್ಪ ಸವರುವವರು ಮಾಡಿದಂತಹ ಯೋಜನೆ ಇದಲ್ಲ. ಬಡವರು ಸ್ವಾವಲಂಬಿಗಳಾಗಬೇಕು
ಎಂಬ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗಿದೆ. ಇದೇ ರೀತಿ ಜನಧನ್‌ ಯೋಜನೆ ತಂದು 24 ಕೋಟಿ ಜನರು
ಖಾತೆ ಹೊಂದುವಂತೆ ಮಾಡಲಾಯಿತು. ಮುದ್ರಾದಲ್ಲಿ ಜಿಲ್ಲೆಯ 9 ಸಾವಿರಕ್ಕೂ ಅಧಿಕ ಮಂದಿ ನಿರುದ್ಯೋಗಿಗಳು
ಸಾಲ ಸೌಲಭ್ಯ ಪಡೆದು ಆರ್ಥಿಕವಾಗಿ ಸಬಲರಾಗಿದ್ದಾರೆ, ದಲಿತರಿಗಾಗಿ ಸ್ಟಾಂಡ್‌ ಅಪ್‌, ಯುವತಿಯರಿಗಾಗಿ ಸ್ಟಾರ್ಟ್‌
ಅಪ್‌ ಯೋಜನೆಗಳ ಮೂಲಕ ಕ್ರಾಂತಿಕಾರಿ ಬದಲಾವಣೆಗೆ ಮುನ್ನುಡಿ ಬರೆಯಲಾಗಿದೆ ಎಂದು ಹೇಳಿದರು.

ಎಚ್‌ಪಿ ಕಂಪನಿಯ ವ್ಯವಸ್ಥಾಪಕ ನವೀನ್‌ ಮಾತನಾಡಿ, ಉಜ್ವಲ ಯೋಜನೆಯಲ್ಲಿ ಉಚಿತವಾಗಿ ಗ್ಯಾಸ್‌ ಸಂಪರ್ಕ
ಮಾತ್ರ ನೀಡಲಾಗುತ್ತಿದೆ. ಗ್ಯಾಸ್‌ ಮತ್ತು ¤ ಒಲೆ ಬೇಕಾದವರು ಅರ್ಜಿಯಲ್ಲಿ ನಮೂದು ಮಾಡಿದರೆ ಅದನ್ನೂ ನೀಡಲಿದ್ದು
ಆ ಹಣವನ್ನು ಸರ್ಕಾರದ ಸಬ್ಸಿಡಿಯಲ್ಲಿ 2 ವರ್ಷಗಳ ಕಾಲ ಕಂಪನಿ ಭರಿಸಿಕೊಳ್ಳಲಿದೆ ಎಂದು ಹೇಳಿದರು.

Advertisement

ಜಿಪಂ ಅಧ್ಯಕ್ಷೆ ಚೈತ್ರಶ್ರೀ ಮಾಲತೇಶ್‌, ಕಾಫಿ ಮಂಡಳಿ ಅಧ್ಯಕ್ಷ ಬೋಜೇಗೌಡ, ಜಿಪಂ ಸದಸ್ಯರಾದ ಸೋಮಶೇಖರ್‌, ಜಸಂತಾ ಅನಿಲ್‌ಕುಮಾರ್‌, ರವೀಂದ್ರ, ನಗರಸಭೆ ಉಪಾಧ್ಯಕ್ಷ ರವೀಂದ್ರ ಪ್ರಭು, ತಾಪಂ ಉಪಾಧ್ಯಕ್ಷ ಸುರೇಶ್‌, ಗ್ಯಾಸ್‌ ವಿತರಕರ ಸಂಘದ ಅಧ್ಯಕ್ಷ ಚಂದ್ರಣ್ಣ, ನಾಗೇಂದ್ರರಾವ್‌ ತೆರದಾಳ್‌ ಮತ್ತಿತರರು ಹಾಜರಿದ್ದರು. ಸಾಂಕೇತಿಕವಾಗಿ ಕೆಲವರಿಗೆ ಉಜ್ವಲ ಸೌಲಭ್ಯ ನೀಡಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next