ರಾಯಚೂರು: ಒಂದು ದೇಶದ ಸರ್ವಾಂಗೀಣ ಪ್ರಗತಿಗೆ ಅಲ್ಲಿನ ಶೈಕ್ಷಣಿಕ ವ್ಯವಸ್ಥೆ ಬಹಳ ಮಹತ್ವದ ಪಾತ್ರ ನಿರ್ವಹಿಸುತ್ತದೆ ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ತಿಳಿಸಿದರು.
ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಅಂಜುಮನ್ ಎ ರಾಯಚೂರು ಸಂಸ್ಥೆಯಿಂದ ಶಿಕ್ಷಕರ ದಿನಾಚರಣೆ ನಿಮಿತ್ತ ಹಮ್ಮಿಕೊಂಡಿದ್ದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ದೇಶ ಹಾಗೂ ಉತ್ತಮ ವ್ಯಕ್ತಿಯನ್ನು ರೂಪಿಸುವುದು ಶಿಕ್ಷಣ ಮಾತ್ರ. ಉತ್ತಮ ನಾಗರಿಕತೆ ಅಡಿಪಾಯವೇ ಶಿಕ್ಷಣ. ಇಂಥ ಶಿಕ್ಷಣವನ್ನು ಅತ್ಯುತ್ತಮ ಶಿಕ್ಷಕರಿಂದ ನೀಡಲು ಮಾತ್ರ ಸಾಧ್ಯ. ಶಿಕ್ಷಣವೆಂದರೆ ಕೇವಲ ಅಕ್ಷರದ ಜ್ಞಾನವಲ್ಲ. ಉತ್ತಮ ಸಂಸ್ಕಾರ ರೂಢಿಸಿಕೊಳ್ಳುವುದಾಗಿದೆ. ಶಿಕ್ಷಣದಲ್ಲಿ ಧಾರ್ಮಿಕತೆ ಹಾಗೂ ಪ್ರಾದೇಶಿಕತೆ ಅತ್ಯಂತ ಮಹತ್ವದ್ದಾಗಿದೆ ಎಂದರು.
ಧಾರ್ಮಿಕ ಶಿಕ್ಷಣ ಸಂಸ್ಥೆಗಳು ಮೂಲ ಶಿಕ್ಷಣ ಸಂಸ್ಥೆಗಳಾಗಿವೆ. ಆದರೆ, ಈಚೆಗೆ ಗುರುಕುಲ, ಕಾನ್ವೆಂಟ್ ಹಾಗೂ ಮದರಸಾಗಳಲ್ಲಿ ಉತ್ತಮ ಶಿಕ್ಷಣ ಸಿಗುತ್ತಿಲ್ಲ ಎನ್ನುವ ದೂರುಗಳು ಕೇಳಿಬರುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. ಯಾವುದೇ ಶಿಕ್ಷಣ ಸಂಸ್ಥೆಗಳಲ್ಲಿ ಭಯೋತ್ಪಾದನೆ ಹಾಗೂ ಇತರೆ ಕೆಟ್ಟ ವಿಚಾರಗಳನ್ನು ಹೇಳಿಕೊಡುವುದಿಲ್ಲ. ಆದರೆ, ಧರ್ಮಾಧಾರಿತ ವಿಚಾರದಲ್ಲಿ ಜನರನ್ನು ಎತ್ತಿ ಕಟ್ಟುವ ಮೂಲಕ ಸಮಾಜದ ಸ್ವಾಸ್ಥ್ಯ ಹಾಳು ಮಾಡಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕುಷ್ಟಗಿ ಶಾಸಕ ಅಮರೇಗೌಡ ಬಯ್ನಾಪುರ ಮಾತನಾಡಿ, ಸರ್ಕಾರಿ ಶಾಲೆಗಳ ಬಗ್ಗೆ ಮಧ್ಯಮ ವರ್ಗ, ಶ್ರೀಮಂತರಿಗೆ ಅಸಡ್ಡೆ ಭಾವನೆ ಇದೆ. ಇದರಿಂದ ಬಡವರು ಮಾತ್ರ ಸರ್ಕಾರಿ ಶಾಲೆಗಳಿಗೆ ಹೋಗಬೇಕು ಎನ್ನುವ ವ್ಯವಸ್ಥೆ ನಿರ್ಮಾಣಗೊಂಡಿರುವುದು ಶೈಕ್ಷಣಿಕ ತಾರತಮ್ಯಕ್ಕೆ ಕಾರಣವಾಗುತ್ತಿದೆ. ಮಧ್ಯಮ ವರ್ಗ, ಶ್ರೀಮಂತರು ಖಾಸಗಿ ಶಾಲೆಗೆ ಮಕ್ಕಳನ್ನು ಸೇರಿಸುವುದರಿಂದ ಇದರಿಂದ ಸರ್ಕಾರಿ ಶಾಲೆಗಳ ಶಿಕ್ಷಣದ ಗುಣಮಟ್ಟದ ಕುಸಿಯುವಂತಾಗಿದೆ ಎಂದರು.
ಅಂಜುಮನ್ ಎ ಸಂಸ್ಥೆಯ ಅಧ್ಯಕ್ಷ ರಝಾಕ್ ಉಸ್ತಾದ್, ಮಹ್ಮದ್ ರಫಿ, ಫಿರೋಜ್ ಹಾಗೂ ವಿವಿಧ ಶಾಲೆಗಳ ಶಿಕ್ಷಕರು ಸೇರಿ ಇತರರಿದ್ದರು.