Advertisement

ಎಎಸ್‌ಐ ವರದಿ ಬಗ್ಗೆ ಹಗುರ ಮಾತು ಸಲ್ಲ

11:47 PM Sep 27, 2019 | mahesh |

ಹೊಸದಿಲ್ಲಿ: ರಾಮಜನ್ಮಭೂಮಿ- ಬಾಬರಿ ಮಸೀದಿಯ ವಿವಾದಿತ ಪ್ರದೇಶದ ಕುರಿತು 2003ರಲ್ಲಿ ಭಾರತೀಯ ಪುರಾತತ್ವ ಸರ್ವೇ (ಎಎಸ್‌ಐ) ಸಲ್ಲಿಸಿದ ವರದಿಯು “ಸಾಮಾನ್ಯ ಅಭಿಪ್ರಾಯ’ವಲ್ಲ. ಏಕೆಂದರೆ, ಆ ಸಮಿತಿಯಲ್ಲಿದ್ದ ಪುರಾತತ್ವ ತಜ್ಞರು ಅಲಹಾಬಾದ್‌ ಹೈಕೋರ್ಟ್‌ನ ನ್ಯಾಯ ಮೂರ್ತಿಗಳ ಆದೇಶದ ಮೇರೆಗೆ ಈ ವರದಿ ನೀಡಿದ್ದರು ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯ ಪಟ್ಟಿದೆ.

Advertisement

ಅಯೋಧ್ಯೆ ಪ್ರಕರಣದ ವಿಚಾರಣೆ ವೇಳೆ ಶುಕ್ರವಾರ ಮುಸ್ಲಿಂ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರಾದ ಮೀನಾಕ್ಷಿ ಅರೋರಾ ಅವರು, “ಎಎಸ್‌ಐ ವರದಿಯು ಕೇವಲ ಬೆರಳೆಣಿಕೆಯ ಪುರಾತತ್ವ ತಜ್ಞರ ಅಭಿಪ್ರಾಯವಷ್ಟೆ. ಅಯೋ ಧ್ಯೆಯ ವಿವಾದಿತ ಜಾಗದಲ್ಲಿ ರಾಮಮಂದಿರ ಇತ್ತು ಎನ್ನುವುದನ್ನು ಸಾಬೀತುಪಡಿಸಲು ಸಾಕಷ್ಟು ಪುರಾವೆಗಳು ಬೇಕಾಗುತ್ತದೆ. ಹಾಗಾಗಿ, ಈ ವರದಿಯನ್ನೇ “ಪುರಾವೆ’ ಎಂದು ಪರಿಗಣಿಸಲಾಗದು. 2003ರ ಎಎಸ್‌ಐ ವರದಿಯು ಒಂದು ದುರ್ಬಲ ರಿಪೋರ್ಟ್‌ ಆಗಿದ್ದು, ಅದನ್ನು ಪುಷ್ಟೀಕರಿಸುವಂಥ ದಾಖಲೆಗಳನ್ನು ನೀಡ ಲಾಗಿಲ್ಲ’ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ ರಂಜನ್‌ ಗೊಗೋಯ್‌ ನೇತೃತ್ವದ ಸಂವಿಧಾನ ಪೀಠ, “ಎಎಸ್‌ಐ ವರದಿ ಯನ್ನು “ಸಾಮಾನ್ಯ’ ಎಂದು ಹೇಳಿ ಕಡೆಗಣಿಸಲಾಗದು. ಏಕೆಂದರೆ, ಬಹಳ ಅಧ್ಯಯನ ಮಾಡಿರುವ ಮತ್ತು ಆಳವಾದ ಜ್ಞಾನ ಇರುವವರಿಂದಲೇ ಸಮಿತಿಯು ಮಾಹಿತಿಗಳನ್ನು ಸಂಗ್ರಹಿಸಿದೆ’ ಎಂದು ಹೇಳಿತು.

ನ.17ರಂದು ಅಯೋಧ್ಯೆ ತೀರ್ಪು?: ಅಯೋಧ್ಯೆಯ ಭೂವಿವಾದದ ತೀರ್ಪು ನವೆಂಬರ್‌ 17ರಂದು ಪ್ರಕಟವಾಗುವ ಸಾಧ್ಯತೆಯಿದ್ದು, ಸ್ವತಃ ಸರ್ವೋಚ್ಚ ನ್ಯಾಯಾಲಯವೇ ಈ ಸುಳಿವು ನೀಡಿದೆ. ಅ. 18ರೊಳಗೆ ವಿಚಾರಣೆ ಮುಗಿಸಲೇ ಬೇಕು ಎಂದು ದೃಢ ನಿರ್ಧಾರವನ್ನು ನ್ಯಾಯಾಲಯ ಕೈಗೊಂಡಿದೆ. ವಿಚಾರಣೆ ಮುಗಿದ 4 ವಾರಗಳಲ್ಲಿ ತೀರ್ಪು ಪ್ರಕಟವಾಗುವುದು ಇನ್ನು ಕೂಡ ಒಂದು ದೊಡ್ಡ ಅಚ್ಚರಿಯೇ ಸರಿ ಎನ್ನುವ ಮೂಲಕ ಕೋರ್ಟ್‌, ನ.17ರಂದೇ ತೀರ್ಪು ಬರುವ ಸಾಧ್ಯತೆ ಬಗ್ಗೆ ತಿಳಿಸಿದೆ. ಅದೇ ದಿನ ಸಿಜೆಐ ಗೊಗೋಯ್‌ ಅವರೂ ನಿವೃತ್ತರಾಗಲಿದ್ದಾರೆ.

ಕಲ್ಯಾಣ್‌ ಸಿಂಗ್‌ಗೆ ಜಾಮೀನು
ಬಾಬರಿ ಮಸೀದಿ ಧ್ವಂಸ ಪ್ರಕರಣ ಸಂಬಂಧ ರಾಜಸ್ಥಾನದ ಮಾಜಿ ರಾಜ್ಯಪಾಲ, ಬಿಜೆಪಿ ನಾಯಕ ಕಲ್ಯಾಣ್‌ ಸಿಂಗ್‌ ಅವರು ಶುಕ್ರವಾರ ಲಕ್ನೋದ ವಿಶೇಷ ಸಿಬಿಐ ಕೋರ್ಟ್‌ಗೆ ಹಾಜರಾಗಿದ್ದು, ಅವರ ವಿರುದ್ಧ ವಿಚಾರಣೆಗೆ ಕೋರ್ಟ್‌ ಆದೇಶಿಸಿದೆ. ಕೋರ್ಟ್‌ ಸಮನ್ಸ್‌ ಹಿನ್ನೆಲೆಯಲ್ಲಿ ಸಿಂಗ್‌ ಅವರು ಹಾಜರಾಗಿದ್ದು, ಅವರಿಗೆ ವಿಶೇಷ ನ್ಯಾಯಾಧೀಶ ಎಸ್‌.ಕೆ.ಯಾದವ್‌ ಅವರು ಜಾಮೀನು ನೀಡಿದ್ದು, ಖುದ್ದು ಹಾಜರಾತಿಯಿಂದ ವಿನಾಯ್ತಿಯನ್ನೂ ನೀಡಿದ್ದಾರೆ. ಇದೇ ಪ್ರಕರಣ ಸಂಬಂಧ ಕೋರ್ಟ್‌ ಈಗಾಗಲೇ ಬಿಜೆಪಿ ನಾಯಕರಾದ ಎಲ್‌.ಕೆ.ಅಡ್ವಾಣಿ, ಮುರಳಿ ಮನೋಹರ ಜೋಷಿ, ಉಮಾಭಾರತಿ ಮತ್ತಿತರರ ವಿರುದ್ಧ ವಿಚಾರಣೆ ನಡೆಸುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next