Advertisement
2001ರಲ್ಲಿ ವೆಂಕಟಾಚಲ ಅವರು ಕರ್ನಾಟಕ ಲೋಕಾಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಭ್ರಷ್ಟಾಚಾರ ನಿಯಂತ್ರಣಕ್ಕಾಗಿರುವ ಈ ಇಲಾಖೆಯನ್ನು ಜನಸಾಮಾನ್ಯರ ಬಳಿಗೆ ಕೊಂಡೊಯ್ಯುವ ಪ್ರಯತ್ನವನ್ನು ವೆಂಕಟಾಚಲ ಅವರು ಮಾಡಿದ್ದರು. ಮತ್ತು ಈ ಮೂಲಕ ಸರಕಾರಿ ಕಛೇರಿಗಳ ಆಯಕಟ್ಟಿನ ಜಾಗದಲ್ಲಿದ್ದ ಮಾತ್ರವಲ್ಲದೇ ಗ್ರಾಮೀಣ ಪ್ರದೇಶಗಳಲ್ಲೂ ಜನರಿಂದ ಲಂಚ ಪಡೆದುಕೊಳ್ಳುತ್ತಿದ್ದ ಸರಕಾರಿ ಅಧಿಕಾರಿಗಳ ಪಾಲಿಗೆ ವೆಂಕಟಾಚಲ ಎನ್ನುವ ಹೆಸರು ಸಿಂಹಸ್ವಪ್ನವಾಗುತ್ತಾ ಹೋಯಿತು.
Related Articles
Advertisement
ಇನ್ನು ಸರಕಾರಿ ಕಛೇರಿಗಳು ಮಾತ್ರವಲ್ಲದೇ ಜನರಿಗೆ ಸೌಲಭ್ಯ ನೀಡುವ ಸರಕಾರಿ ಆಸ್ಪತ್ರೆಗಳಿಗೂ ದಿಢೀರ್ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆಗಳ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದರು.
ಲೋಕಾಯುಕ್ತ ಕಾನೂನಿನ ಪ್ರಕಾರ ಲೋಕಾಯುಕ್ತರಿಗಿಂತಲೂ ಉಪಲೋಕಾಯುಕ್ತರಿಗೆ ಅಧಿಕಾರ ಹೆಚ್ಚು. ಆದರೆ ವೆಂಕಟಾಚಲ ಅವರು ಲೋಕಾಯುಕ್ತರಾಗಿ ನೇಮಕಗೊಂಡ ಅವಧಿಯಲ್ಲಿ ಸರಕಾರ ಉಪಲೋಕಾಯುಕ್ತರ ನೇಮಕವನ್ನೇ ಮಾಡಿರಲಿಲ್ಲ. ಆದರೆ ಈ ಅಂಶ ವೆಂಕಟಾಚಲ ಅವರಿಗೆ ತಮ್ಮ ಕಾರ್ಯವನ್ನು ನಡೆಸಿಕೊಂಡು ಹೋಗುವಲ್ಲಿ ಯಾವುದೇ ರೀತಿಯಲ್ಲಿ ಅಡ್ಡಿಯಾಗಲಿಲ್ಲ ಎಂಬುದೇ ವಿಶೇಷ. ಕೆಲವು ಅತ್ಯಗತ್ಯ ಸಂದರ್ಭಗಳಲ್ಲಿ ಉಪಲೋಕಾಯುಕ್ತರ ಅಧಿಕಾರವನ್ನೂ ತಾವೇ ಚಲಾಯಿಸುವ ಮೂಲಕ ವೆಂಕಟಾಚಲ ಅವರು ಜನಸಾಮಾನ್ಯರ ದೂರುಗಳಿಗೆ ಸ್ಪಂದಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದ್ದರು.
ಬ್ರಿಟನ್ ನಲ್ಲಿರುವ ಭ್ರಷ್ಟಾಚಾರ ತಡೆ ಕಾನೂನು ನಮ್ಮ ದೇಶದಲ್ಲೂ ಜಾರಿಗೆ ಬರಬೇಕೆಂಬ ಅಭಿಪ್ರಾಯವನ್ನು ವೆಂಕಟಾಚಲ ಅವರು ಪದೇ ಪದೇ ವ್ಯಕ್ತಪಡಿಸುತ್ತಿದ್ದರು. ಭ್ರಷ್ಟಾಚಾರ ಆರೋಪಕ್ಕೆ ಗುರಿಯಾದಲ್ಲಿ ಪ್ರಧಾನಿಯನ್ನೂ ಸಹ ಸ್ವತಂತ್ರ ತನಿಖಾ ಸಂಸ್ಥೆಗಳು ವಿಚಾರಣೆಗೊಳಪಡಿಸುವಂತಹ ಕಾನೂನು ಬ್ರಿಟನ್ ನಲ್ಲಿದೆ ಮತ್ತು ಭ್ರಷ್ಟಾಚಾರ ಪ್ರಕರಣಗಳ ತನಿಖೆಗೆ ಪ್ರತ್ಯೇಕ ನ್ಯಾಯಾಲಯದ ಅಗತ್ಯತೆಯನ್ನೂ ಸಹ ವೆಂಕಟಾಚಲ ಅವರು ಒತ್ತಿಹೇಳುತ್ತಿದ್ದರು.
24X7 ಚಾನೆಲ್ ಗಳು, ಸಾಮಾಜಿಕ ಜಾಲತಾಣಗಳು ಇಲ್ಲದಿದ್ದ 18 ವರ್ಷಗಳ ಹಿಂದೆಯೇ ಲೋಕಾಯುಕ್ತ ನ್ಯಾಯಮೂರ್ತಿಯಾಗಿ ವೆಂಕಟಾಚಲ ಅವರ ಕಾರ್ಯವೈಖರಿ ಕರ್ನಾಟಕದ ಮೂಲೆ ಮೂಲೆಗಳಲ್ಲಿ ಮನೆಮಾತಾಗಿತ್ತು ಎಂದರೆ ಅವರ ಕಾರ್ಯ ಶೈಲಿ ಹೇಗಿದ್ದಿರಬಹುದೆಂದು ನಾವಿಂದು ಊಹಿಸಿಕೊಳ್ಳಬಹುದು.ಕರ್ನಾಟಕ ಲೋಕಾಯುಕ್ತದಲ್ಲಿ ವೆಂಕಟಾಚಲ ಅವರ ಕಾರ್ಯಶೈಲಿಯಿಂದ ಪ್ರೇರಣೆ ಹೊಂದಿ ‘ಲಂಚ ಸಾಮ್ರಾಜ್ಯ’ ಎಂಬ ಕನ್ನಡ ಚಲನಚಿತ್ರವೂ ಸಹ ತೆರೆಕಂಡಿತ್ತು.