Advertisement

ತೆರಿಗೆ ವಂಚನೆ ವಹಿವಾಟುಗಳಿಗೆ ಬ್ರೇಕ್‌: ಅಕ್ರಮ ವ್ಯವಹಾರಗಳಿಗೆ ಕಡಿವಾಣ ಹಾಕಿದ ಚುನಾವಣೆ!

12:03 AM Apr 05, 2023 | Team Udayavani |

ಮಂಗಳೂರು: ಚುನಾವಣೆ ಹಿನ್ನೆಲೆಯಲ್ಲಿ ಸೂಕ್ತ ದಾಖಲೆಗಳಿಲ್ಲದೆ ಸಾಗಿಸುವ 50 ಸಾವಿರ ರೂ. ಗಿಂತ ಹೆಚ್ಚಿನ ಮೊತ್ತವನ್ನು ವಶಪಡಿಸಿಕೊಳ್ಳಲಾಗುತ್ತಿದ್ದು, ಅಕ್ರಮ ವ್ಯವಹಾರಗಳಿಗೆ ಕಡಿವಾಣ ಬೀಳುತ್ತಿದೆ.

Advertisement

ಮತದಾರರಿಗೆ ಪಕ್ಷಗಳು ಹಣ, ವಸ್ತುಗಳನ್ನು ಹಂಚಬಹುದು, ಚುನಾವಣ ಆಯೋಗ ನಿಗದಿಪಡಿಸಿದ ಮಿತಿಗಿಂತ ಹೆಚ್ಚಿನ ಮೊತ್ತವನ್ನು ಅಭ್ಯರ್ಥಿಗಳು ಅನ್ಯಮಾರ್ಗದಲ್ಲಿ ವೆಚ್ಚ ಮಾಡಬಹುದು ಎಂಬ ಕಾರಣಕ್ಕೆ ದಾಖಲೆಗಳಿಲ್ಲದ ಹಣ, ಉಡುಗೊರೆ ವಸ್ತುಗಳ (10 ಸಾವಿರ ರೂ. ಗಳಿಗಿಂತ ಹೆಚ್ಚು ಮೌಲ್ಯದ) ಸಾಗಣೆಗೆ ಅವಕಾಶ ನೀಡುತ್ತಿಲ್ಲ. ಹಣ ಸಾಗಣೆಗೆ ನಿರ್ಬಂಧ ಇರುವುದರಿಂದ ತೆರಿಗೆ ತಪ್ಪಿಸಿ ವ್ಯವಹಾರ ನಡೆಸುತ್ತಿದ್ದ ಕೆಲವು ವ್ಯವಹಾರಸ್ಥರೂ ಈಗ “ಸಂಕಷ್ಟ’ಕ್ಕೀಡಾಗಿದ್ದಾರೆ. ಈಗಾಗಲೇ ಪತ್ತೆಯಾಗಿರುವ ಹಣ ಅಕ್ರಮ ಸಾಗಣೆ ಪ್ರಕರಣಗಳಲ್ಲಿ ಅಕ್ರಮ ವ್ಯವಹಾರದವರ ಪಾಲಿರುವುದೂ ಪತ್ತೆಯಾಗಿದೆ.

ನೀತಿಸಂಹಿತೆಗಿಂತ ಮೊದಲೇ ಪತ್ತೆ
ದ.ಕ. ಜಿಲ್ಲೆಯಲ್ಲಿ ಕೆಲವು ದಿನಗಳಲ್ಲಿ ಸೂಕ್ತ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಒಟ್ಟು 23 ಲ.ರೂ.ಗಳ ಪೈಕಿ ಹೆಚ್ಚಿನ ಮೊತ್ತವನ್ನು ನೀತಿಸಂಹಿತೆ ಜಾರಿಯಾಗುವ ಕೆಲವು ದಿನಗಳ ಮೊದಲೇ (ಮಾ.29) ವಶಪಡಿಸಿಕೊಳ್ಳಲಾಗಿತ್ತು. ಹಾಗಾಗಿ ಇದು ಚುನಾವಣ ಉದ್ದೇಶಕ್ಕೆ ಸಾಗಿಸುವ ಹಣಕ್ಕಿಂತಲೂ ಬೇರೆ ಅಕ್ರಮ ವ್ಯವಹಾರಗಳಿಗೆ ಸಾಗಿಸುವ ಹಣ ಎಂಬ ಸಂದೇಹ ಹೆಚ್ಚಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹವಾಲಾ ಜಾಲ ಸಕ್ರಿಯ?
ಚುನಾವಣೆ ವೇಳೆ ಮಂಗಳೂರು ನಗರ ಹಾಗೂ ಕೇರಳ ಗಡಿಭಾಗ ಕೇಂದ್ರೀಕರಿಸಿ ಹವಾಲಾ ಹಣ ಸಾಗಾಟ ನಡೆಯಬಹುದು ಎಂಬ ಮಾಹಿತಿ ಲಭ್ಯವಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ವಿಶೇಷ ನಿಗಾ ವಹಿಸಿದ್ದಾರೆ. ಜತೆಗೆ ಹಳೆಯ ಪ್ರಕರಣಗಳ ಅಧ್ಯಯನ ನಡೆಸುತ್ತಿದ್ದಾರೆ. ಹವಾಲಾ ವ್ಯವಹಾರ ಹತ್ತಿಕ್ಕಲು ಪ್ರತ್ಯೇಕ ತಂಡ ರಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮಂಗಳೂರಿನ ಹಳೆಯ ಪ್ರಕರಣಗಳು
- 2021 ಮಾರ್ಚ್‌ – ಹವಾಲಾ ಏಜೆಂಟರಲ್ಲಿ 16.20 ಲ.ರೂ. ಪತ್ತೆ
- 2022 ನವೆಂಬರ್‌ – ಬಸ್‌ ನಿಲ್ದಾಣದ ಬಳಿ ಸುಮಾರು 10 ಲ.ರೂ. ಪತ್ತೆ
- 2023 ಜನವರಿ – ನೆಲದಡಿ ಹುದುಗಿಸಿಟ್ಟಿದ್ದ 8.50 ಲ.ರೂ. ಪತ್ತೆ

Advertisement

ಜಿಎಸ್‌ಟಿ ಸಂಖ್ಯೆಯ ರಶೀದಿ ಬೇಕು
ಮಾ.29ರಿಂದ ಮೇ 15ರ ವರೆಗೆ ನೀತಿ ಸಂಹಿತೆ ಜಾರಿಯಲ್ಲಿದ್ದು ಈ ಅವಧಿಯಲ್ಲಿ ವಿಶೇಷ ತಪಾಸಣೆ ನಡೆಸಲಾಗುತ್ತಿದೆ. ಕೃಷಿ ಉತ್ಪನ್ನಗಳನ್ನು ಮಾರಿದರೂ ಜಿಎಸ್‌ಟಿ ಸಂಖ್ಯೆ ಇರುವ ರಶೀದಿಗಳಿರಬೇಕು. ಪೊಲೀಸರು ಇತ್ತೀಚೆಗೆ ವಶಪಡಿಸಿಕೊಂಡಿರುವ ಹಣದ ಪೈಕಿ ಒಂದು ಪ್ರಕರಣವನ್ನು ಸಮಿತಿಗೆ ವಹಿಸಲಾಗಿತ್ತು. ವಿಚಾರಣೆ ನಡೆಸಿದ ವೇಳೆ ಅಗತ್ಯ ದಾಖಲೆ ನೀಡಿದ ಹಿನ್ನೆಲೆಯಲ್ಲಿ ಹಣ ವಾಪಸ್‌ ನೀಡಲಾಗಿದೆ.
– ಡಾ| ಕುಮಾರ್‌ ಅಧ್ಯಕ್ಷರು, ಹಣ ಸ್ವಾಧೀನ ಇತ್ಯರ್ಥ ಸಮಿತಿ

ತೊಂದರೆ ನೀಡುವ ಉದ್ದೇಶವಲ್ಲ
ಚುನಾವಣ ಅಕ್ರಮ ತಡೆಗಟ್ಟಲು ತಪಾಸಣೆ ನಡೆಸಲಾಗುತ್ತಿದ್ದು ಸಾರ್ವಜನಿಕರಿಗೆ ಯಾವುದೇ ತೊಂದರೆ ನೀಡುವ ಉದ್ದೇಶವಿಲ್ಲ. ತಪಾಸಣೆ ವೇಳೆ ಸಮರ್ಪಕ ದಾಖಲೆಗಳಿದ್ದರೆ ಯಾವುದೇ ಸಮಸ್ಯೆಯಾಗದು.
– ಡಾ| ವಿಕ್ರಮ್‌ ಅಮಟೆ, ಎಸ್‌ಪಿ, ದ.ಕ ಜಿಲ್ಲೆ

Advertisement

Udayavani is now on Telegram. Click here to join our channel and stay updated with the latest news.

Next