Advertisement

BBMP: ಮೈದಾನದ ಗೇಟ್‌ಗೆ ಬಾಲಕ ಬಲಿ

11:44 AM Sep 23, 2024 | Team Udayavani |

ಬೆಂಗಳೂರು: ಮಲ್ಲೇಶ್ವರ ಬಿಬಿಎಂಪಿ ಆಟದ ಮೈದಾನದ ಕಬ್ಬಿಣದ ಗೇಟ್‌ ಮುರಿದು ಬಿದ್ದು 10 ವರ್ಷದ ಬಾಲಕ ಮೃತಪಟ್ಟಿರುವ ದಾರುಣ ಘಟನೆ ಭಾನುವಾರ ಸಂಜೆ ನಡೆದಿದೆ.

Advertisement

ಪ್ಯಾಲೇಸ್‌ ರಸ್ತೆಯ ವಿವೇಕಾನಂದ ಬ್ಲಾಕ್‌ ನಿವಾಸಿ ವಿಜಯ್‌ಕುಮಾರ್‌ ಮತ್ತು ಪ್ರಿಯಾ ದಂಪತಿ ಪುತ್ರ ಮಗ ನಿರಂಜನ್‌ ಮೃತ ಬಾಲಕ. ‌

ಗದಗ ಮೂಲದ ವಿಜಯ್‌ ಕುಮಾರ್ ದಂಪತಿಗೆ ಇಬ್ಬರು ಮಕ್ಕಳು. ಈ ಪೈಕಿ ನಿರಂಜನ್‌ ಹಿರಿಯ ಮಗ. ಬಿಬಿಎಂಪಿ ಶಾಲೆಯಲ್ಲಿ 4ನೇ ತರಗತಿ ಓದುತ್ತಿದ್ದ ಆತ ಸ್ನೇಹಿತನೊಂದಿಗೆ ಆಟವಾಡಲು ಸೈಕಲ್‌ನಲ್ಲಿ ಮಲ್ಲೇಶ್ವರದ ಚಿತ್ರನಟ ದಿ. ರಾಜಾಶಂಕರ್‌ ಆಟದ ಮೈದಾನಕ್ಕೆ ಬಂದಿದ್ದಾಗ ದುರ್ಘ‌ಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ನಿರಂಜನ್‌, ಆಟದ ಮೈದಾನದ ಪ್ರವೇಶ ದ್ವಾರದ ಗೇಟ್‌ ತೆಗೆದು ಒಳ ಹೋಗಲು ಮುಂದಾಗಿದ್ದಾನೆ. ಈ ವೇಳೆ ಗೇಟ್‌ ಏಕಾಏಕಿ ಕಳಚಿ ಆತನ ಮೇಲೆ ಬಿದ್ದಿದೆ. ಘಟನೆಯಲ್ಲಿ ಆತನ ತಲೆಗೆ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವವಾಗಿದೆ. ಆಗ ಮೈದಾನದಲ್ಲೇ ಇದ್ದ ಸಾರ್ವಜನಿಕರು ಬಾಲಕನನ್ನು ಸಮೀಪದ ಕೆ.ಸಿ.ಜನರಲ್‌ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆಗೆ ಸ್ಪಂದಿಸದ ನಿರಂಜನ್‌ ಸ್ವಲ್ಪ ಸಮಯದ ಬಳಿಕ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದರು. 4 ವರ್ಷದ ಹಿಂದೆ ಅಳವಡಿಸಿದ್ದ 8 ಅಡಿ ಎತ್ತರದ ಗೇಟ್‌ನ ಒಂದು ಬದಿಯಲ್ಲಿ ತುಕ್ಕು ಹಿಡಿದಿತ್ತು. ಆ ಭಾಗದಲ್ಲೇ ಗೇಟ್‌ ತುಂಡಾಗಿ ನಿರಂಜನ್‌ ಮೇಲೆ ಬಿದ್ದಿದೆ. ನಿರಂಜನ್‌ ಸ್ನೇಹಿತ ಪಾರಾಗಿದ್ದಾನೆ.

ಮಗ ಸೈಕಲ್‌ ಶಾಪ್‌ಗೆ ಹೋಗಿದ: ಪಾಲಕರು: ಸೈಕಲ್‌ ಚೈನ್‌ ತುಂಡಾಗಿದ್ದರಿಂದ ಅದನ್ನು ಹಾಕಿ ಸಿಕೊಂಡು ಬರಲು ಮಗ, ಪಕ್ಕದ ಮನೆಯ ಸ್ನೇಹಿತನ ಜತೆ ಸೈಕಲ್‌ ಶಾಪ್‌ಗೆ ಹೋಗಿದ್ದ. ನಂತರ ಅಲ್ಲಿಂದ ಆಟದ ಮೈದಾನಕ್ಕೆ ಹೋಗಿ ದ್ದಾನೆ. ಆತ ಆಗಾಗ್ಗೆ ಅದೇ ಮೈದಾನಕ್ಕೆ ಹೋಗಿ ಆಟವಾಡುತ್ತಿದ್ದ. ಬಿಬಿಎಂಪಿ ನಿರ್ಲಕ್ಷ್ಯವೇ ಮಗನ ಸಾವಿಗೆ ಕಾರಣ ಎಂದು ಮೃತ ನಿರಂಜನ್‌ ತಾಯಿ ಪ್ರಿಯಾ ಕಣ್ಣೀರಿಟ್ಟರು. ಘಟನೆ ಸಂಬಂಧ ಮಲ್ಲೇಶ್ವರ ಠಾಣೆ ಪೊಲೀ ಸರು, ಬಿಬಿಎಂಪಿ ವಿರುದ್ಧ ನಿರ್ಲಕ್ಷ್ಯ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next