Advertisement

ಈಕೆ ಖಾಕಿ ತೊಟ್ಟ ಖಡಕ್ ಆಫೀಸರ್, ಮಾದಕ ನೋಟದ ರೂಪದರ್ಶಿ, ಬಾಕ್ಸರ್ ..!

02:01 PM Nov 17, 2021 | Team Udayavani |

ಕೆಲವರು ಸಾಧಕರಾಗುತ್ತಾರೆ. ಕೆಲವರು ಸಾಧಕರಾಗಿ ಸಾವಿರಾರು ಮಂದಿಗೆ ಸ್ಪೂರ್ತಿಯ ಸೆಲೆಯಾಗುತ್ತಾರೆ. ಇಂದಿನ ಕಾಲದಲ್ಲಿ ಎಲ್ಲರೂ ಶಿಕ್ಷಿತರಾಗಲು ಬಯಸುತ್ತಾರೆ. ಗಂಡು  ಹೆಣ್ಣು ಎನ್ನುವ ಭೇದ ಭಾವದ ಬೇಲಿಯನ್ನು ಮುರಿದು ಸಮಾಜದಲ್ಲಿ ಶಿಕ್ಷಿತರಾಗಿ ಬೆಳೆಯೋದು ಈ ಕಾಲದ ಯುವಜನರ ಉದ್ದೇಶ ಹಾಗೂ ಕನಸು. ಈ ಕನಸಿಗೆ ಪೋಷಕರ ಬೆಂಬಲ ಸಿಕ್ಕರೆ, ಎಲ್ಲರೂ ಸಾಧಕರೇ ಆಗುತ್ತಾರೆ.

Advertisement

ಸಿಕ್ಕಿಂನ ರುಂಬಕ್ ನಲ್ಲಿ ಜನಿಸಿದ ಈಕ್ಷಾ ಹ್ಯಾಂಗ್ ಮಾ ಸುಬ್ಬಾ. ಬಾಲ್ಯದಿಂದಲೇ ಅಪ್ಪನ ಪ್ರೀತಿಯಲ್ಲಿ, ಬೆಳೆಯುತ್ತಾ ಹೋದ ಹಾಗೆ ಅಪ್ಪನ ಪ್ರೋತ್ಸಾಹದೊಂದಿಗೆ ಗಂಡು  ಹೆಣ್ಣಿನ ವ್ಯತ್ಯಾಸವನ್ನೇ ಮರೆತು ಬೆಳೆದವಳು.

ಶಾಲೆಯಲ್ಲಿ ಎಲ್ಲರೊಂದಿಗೆ ಬೆರೆತು, ಎಲ್ಲರಂತೆ ಆಡುತ್ತಾ, ಸಮಯವನ್ನು ವ್ಯರ್ಥ ಮಾಡದೆ ಸದಾ ಏನಾದರೂ ಸಾಹಸದ ಕೆಲಸವನ್ನು ಮಾಡುವ ಉತ್ಸಾಹದ ತರುಣಿಯಾಗಿ ಇರುತ್ತಿದ್ದಳು.

ಈಕ್ಷಾ ಹರೆಯದ ವಯಸ್ಸಿನಲ್ಲಿ ಇರುವ ವೇಳೆ, ಅದೊಂದು ದಿನ ಅಪ್ಪ, ಆಕೆಗೆ ನೀನು ಫಿಟ್ ನೆಸ್ ನ್ನು ಕಾಪಿಟ್ಟುಕೊಳ್ಳಲು ಬಾಕ್ಸಿಂಗ್‌ ಸೇರಿಕೋ ಎನ್ನುವ ಸಲಹೆಯನ್ನು ನೀಡುತ್ತಾರೆ. ಅಪ್ಪನ ಸಲಹೆಯನ್ನು ಸ್ವೀಕರಿಸಿದ ಈಕ್ಷಾ, ಬಾಕ್ಸಿಂಗ್ ಗೆ ಸೇರಿ, ಪ್ರಯತ್ನ, ಪರಿಶ್ರಮ, ಎರಡನ್ನೂ ರಿಂಗ್ ನಲ್ಲಿ ತೋರಿಸಿ, ಒಳ್ಳೆಯ ಬಾಕ್ಸರ್ ಆಗುತ್ತಾರೆ. ಇಷ್ಟು ಮಾತ್ರವಲ್ಲದೇ ಜಿಲ್ಲೆ,ತಾಲೂಕು ಕೇಂದ್ರ ಸೇರಿದಂತೆ ಸಿಕ್ಕಿಂನಿಂದ ರಾಷ್ಟ್ರ ಮಟ್ಟದ ಹಂತದವರೆಗೆ ಸ್ಪರ್ಧಿಸುತ್ತಾರೆ.

Advertisement

ಹೀಗೆ ಬೆಳೆಯುತ್ತಾ ಹೋದ ಈಕ್ಷಾಳಿಗೆ ತನ್ನ ಅಣ್ಣ ರಸ್ತೆಯಲ್ಲಿ ಹಾಯಾಗಿ ಬಿಡುತ್ತಿದ್ದ ಬೈಕ್ ಸವಾರಿ ಮಾಡುವ ಆಸೆ ಮನಸ್ಸಲ್ಲಿ ಮೂಡುತ್ತದೆ. ಈಕೆಯ ಆಸೆಗೆ ಅಪ್ಪ ಮತ್ತೆ ಬೆಂಬಲವಾಗಿ ಈಕ್ಷಾಳಿಗೆ ಬೈಕ್ ಚಲಾಯಿಸಲು ಕಲಿಸುತ್ತಾರೆ. ಬೈಕ್  ಮೇಲಿನ ವ್ಯಾಮೋಹ ಈಕ್ಷಾಳಿಗೆ ಹೆಚ್ಚಾದಾಗ, ಆಕೆಗೆ ಸವಾರಿಯ ಹುಚ್ಚು ಕೂಡ ಹತ್ತಿಕೊಳ್ಳುತ್ತದೆ.

ಇಷ್ಟಾದರೂ ಆಕೆಯಲ್ಲಿ ರೂಪದರ್ಶಿಯಾಗಿ ವೇದಿಕೆಯಲ್ಲಿ ಹೆಜ್ಜೆ ಹಾಕಬೇಕೆನ್ನುವ ಕನಸು ಹಾಗೆಯೇ ಉಳಿದುಕೊಂಡು, ಬೆಳೆಯುತ್ತಾ ಹೋದ ಹಾಗೆ ಮನಸ್ಸಿನೊಳಗೆ ಅವಿತುಕೊಂಡಿತ್ತು.

ಪದವಿಯಿಂದಲೇ ಪೊಲೀಸ್ ಸೇವೆಗೆ ತಯಾರಿ ನಡೆಸುತ್ತಿದ್ದ ಈಕ್ಷಾಳ ಅದೃಷ್ಟವೆಂಬಂತೆ, ಪೊಲೀಸ್ ಸೇವೆಗೆ ಆಯ್ಕೆ ಆಗಿ 14 ತಿಂಗಳ ಕಠಿಣ ತರಬೇತಿಯ ಅನುಭವ ಪಡೆದುಕೊಂಡು, 2019 ರಲ್ಲಿ ಪೊಲೀಸ್ ಅಧಿಕಾರಿಯಾಗಿ ಸಿಕ್ಕಿಂನಲ್ಲಿ ಕಾರ್ಯನಿರ್ವಹಿಸುತ್ತಾರೆ. ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚಿ ವೇದಿಕೆಯ ಮೇಲೆ ಹೆಜ್ಜೆ ಹಾಕಬೇಕೆನ್ನುವ ಮೊದಲ‌ ಕನಸನ್ನು ಮರೆಯದ ಈಕ್ಷಾಳ ಇಚ್ಛೆಗೆ ಜತೆಯಾದದ್ದು ಪೊಲೀಸ್ ಇಲಾಖೆಯಲ್ಲಿದ್ದ ಅಕೆಯ ಸಹೋದ್ಯೋಗಿಗಳು.

ಮಾಡೆಲ್ ಕನಸಿನ ಮಾತಿಗೆ ಸಹೋದ್ಯೋಗಿಗಳು ಪ್ರೋತ್ಸಾಹ ಕೊಟ್ಟ ಮೇಲೆ, ಪೊಲೀಸ್ ಇಲಾಖೆಯ ಅಧಿಕಾರಿಯಾಗಿದ್ದ ಈಕ್ಷಾ ಆಯ್ಕೆಯಾಗುತ್ತೇನೆ ಎನ್ನುವ ನಂಬಿಕೆಯಿಂದ ರಿಯಾಲಿಟಿ ಶೋ ಒಂದರಲ್ಲಿ ಭಾಗವಹಿಸಲು ಮುಂಬಯಿಗೆ ತೆರೆಳುತ್ತಾರೆ. ಈಕ್ಷಾ ‘ಎಂಟಿವಿ ಸೂಪರ್ ಮಾಡೆಲ್ ಸೀಸನ್ 2’ ಕಾರ್ಯಕ್ರಮದಲ್ಲಿ ಮಾಡೆಲ್ ಆಗಿ ವೇದಿಕೆಯ ಮೇಲೆ ಬಂದು ಹೆಜ್ಜೆ ಹಾಕಿ, ಆಕೆಯ ಜರ್ನಿಯನ್ನು ಹೇಳಿದಾಗ ಎಲ್ಲರು ಎದ್ದು ನಿಂತು ಚಪ್ಪಾಳೆ ತಟ್ಟಿ ಪ್ರಶಂಶಿಸಿದ್ದರು. ಸದ್ಯ ಈಕ್ಷಾ ಈ ರಿಯಾಲಿಟಿ ಶೋನಲ್ಲಿ ಟಾಪ್  ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದಾರೆ.

ಅಂದುಕೊಂಡದ್ದನ್ನು ಯಾರೂ ಬೇಕಾದರೂ ಸಾಧಿಸಬಹುದೆನ್ನುವುದಕ್ಕೆ ಈಕೆಯೇ ಸಾಕ್ಷಿ ಅಲ್ಲವೇ..?

*ಸುಹಾನ್ ಶೇಕ್

Advertisement

Udayavani is now on Telegram. Click here to join our channel and stay updated with the latest news.

Next