Advertisement

ಮರಳ ರಾಶಿಯಲ್ಲಿ ಹುದುಗಿದ ಅನ್ನದ ಬಟ್ಟಲು

12:00 PM Jun 08, 2020 | mahesh |

ಬೆಳ್ತಂಗಡಿ: ಕಳೆದ ಆಗಸ್ಟ್‌ನಲ್ಲಿ ಪ್ರವಾಹದಿಂದಾಗಿ ನಲುಗಿದ್ದ ಇಲ್ಲಿನ ಪ್ರದೇಶಗಳು ಇನ್ನೂ ಚೇತರಿಸಿಕೊಂಡಿಲ್ಲ. ಕೃಷಿ ಪ್ರದೇಶ ಮರಳಿನ ರಾಶಿಯೊಳಗಿದೆ. ಭತ್ತ ಸಾಗುವಳಿಗೆ ಸಕಾಲವಾದರೂ ಗದ್ದೆಗಳು ಮರಳು, ಹೂಳಿನಲ್ಲಿ ಹುದುಗಿವೆ. ತೆರವುಗೊಳಿಸಲು ಅನುಮತಿ ನೀಡಬೇಕಿದ್ದ ಜಿಲ್ಲಾಡಳಿತ ನಿಯಮಾವಳಿ ಹೇರಿ ಮೌನವಾಗಿದೆ.

Advertisement

ಬೆಳ್ತಂಗಡಿ ತಾಲೂಕಿನಲ್ಲಿ ಪ್ರವಾಹ ಅಪ್ಪಳಿಸಿದ 16 ಗ್ರಾಮಗಳ ಸರ್ವೇ ನಡೆಸಿ ಕಂದಾಯ ಇಲಾಖೆಗೆ ವರದಿ ನೀಡಲಾಗಿದೆ. 256 ಮನೆಗಳು ಸಂಪೂರ್ಣ ಮತ್ತು ಭಾಗಶಃ ಹಾನಿಗೀಡಾಗಿವೆ ಎಂದು ಗುರುತಿಸಲಾಗಿದೆ. ತೋಟಗಾರಿಕೆ ಇಲಾಖೆ ವರದಿಯಂತೆ ತಾಲೂಕಿನಲ್ಲಿ 1,246 ರೈತ ಕುಟುಂಬಗಳ 1,400 ಎಕ್ರೆ ಕೃಷಿ ಪ್ರದೇಶ ಹಾನಿಯಾಗಿದೆ. ಹೋಬಳಿವಾರು ಒಟ್ಟು 54.776 ಹೆಕ್ಟೇರ್‌ ಗದ್ದೆ ಹಾನಿಯಾಗಿರುವ ವರದಿ ಕೃಷಿ ಇಲಾಖೆಯಲ್ಲಿದೆ. ಪ್ರತಿ ಎಕ್ರೆಗೆ 11,200 ರೂ., ಹೆಕ್ಟೇರ್‌ಗೆ 28 ಸಾವಿರ ರೂ.ಗಳಂತೆ 2020ರ ಫೆಬ್ರವರಿಯ ವರೆಗೆ ಸರಕಾರದಿಂದ 1,56,89,590 ಕೋ.ರೂ. ಪರಿಹಾರ ಸಂದಾಯವಾಗಿದೆ. ಈ ಮೊತ್ತ ಉಳ್ಳವರ ಪಾಲಾಗಿದೆ ಎಂಬ ಆರೋಪವಿದೆ. ನಿಜವಾಗಿ ನಷ್ಟ ಅನುಭವಿಸಿದ ರೈತ ಆರ್‌ಟಿಸಿ, ಆಧಾರ್‌ ತಿದ್ದುಪಡಿ, ಮರಣ ಪ್ರಮಾಣಪತ್ರ, ಮ್ಯುಟೇಶನ್‌ ಆಗಿದ್ದರೂ ಆನ್‌ಲೈನ್‌ ಸಮಸ್ಯೆಯಿಂದ ಅಲ್ಪ ಮೊತ್ತದ ಪರಿಹಾರದಲ್ಲಿ ತೃಪ್ತಿ ಪಡುವಂತಾಗಿದೆ.

ಮನೆ ನಿರ್ಮಾಣಕ್ಕೆ ಜಿಪಿಎಸ್‌ ಅಡ್ಡಿ
ಹಾನಿಯಾಗಿರುವ ಮನೆಗಳಿಗೆ ಮೊದಲ ಹಂತದಲ್ಲಿ ತಲಾ 1.30 ಲಕ್ಷ ರೂ.ಗಳನ್ನು ಪ್ರವಾಹದ ಸಂದರ್ಭದಲ್ಲೇ ಖಾತೆಗೆ ಜಮೆ ಮಾಡಲಾಗಿತ್ತು. ಮಿತ್ತಬಾಗಿಲು ಗ್ರಾ.ಪಂ. ವ್ಯಾಪ್ತಿಯಲ್ಲೇ 120 ಮನೆಗಳಿಗೆ ಹಾನಿಯಾಗಿದೆ. 89 ಮನೆಗಳು ನಿರ್ಮಾಣದ ಹಂತದಲ್ಲಿದ್ದರೆ ಉಳಿದವು ಜಿಪಿಎಸ್‌ ಸಮಸ್ಯೆಯಿಂದ ಬಾಕಿ ಉಳಿದಿವೆ. ನಾಲ್ಕು ಹಂತಗಳಲ್ಲಿ ಜಿಪಿಎಸ್‌ ಮಾಡಬೇಕಿದೆ. ಆದರೆ ಕೆಲವರು ಬೇರೆಡೆ ಮನೆ ನಿರ್ಮಾಣಕ್ಕೆ ಮುಂದಾಗಿದ್ದರಿಂದ ಮೂಲ ಸ್ಥಳದ ಜಿಪಿಎಸ್‌ ನಡೆಸಿ ಪ್ರಸಕ್ತ ಮನೆ ನಿರ್ಮಾಣವಾಗುತ್ತಿರುವಲ್ಲಿಗೆ ತೆರಳುವಾಗ ನೆಟ್‌ವರ್ಕ್‌ ಸಮಸ್ಯೆಯಾದಲ್ಲಿ ಮತ್ತೆ ಜಿಪಿಎಸ್‌ ನಡೆಸಬೇಕಾಗುತ್ತದೆ. ಜಿಲ್ಲಾಡಳಿತ ನೂತನ ಮನೆ ನಿರ್ಮಾಣ ಸ್ಥಳದಲ್ಲಿ ಮಾತ್ರ ಜಿಪಿಎಸ್‌ ನಡೆಸಲು ಅನುಮತಿ ನೀಡಿದಲ್ಲಿ ಇದಕ್ಕೆ ಪರಿಹಾರ ಸಾಧ್ಯ.

ಮರದ ದಿಮ್ಮಿಗಳು ಅಲ್ಲಲ್ಲೇ
ಪ್ರವಾಹದಲ್ಲಿ ತೇಲಿಬಂದ ದಿಮ್ಮಿಗಳು ಅಲ್ಲಲ್ಲಿ ರಾಶಿ ಬಿದ್ದಿವೆ. ಅರಣ್ಯ ಇಲಾಖೆ ಮೊದಲಿಗೆ 1,063 ದಿಮ್ಮಿಗಳ ಪಟ್ಟಿ ತಯಾರಿಸಿತ್ತು. ಎರಡನೇ ಬಾರಿ ನೆರೆಯ ಬಳಿಕ 666 ದಿಮ್ಮಿಗಳನ್ನು ಗುರುತಿಸಿದೆ. ತೆರವಿಗೆ ಟೆಂಡರ್‌ ಕರೆಯಲು ಸರಕಾರಕ್ಕೆ ವರದಿ ಸಲ್ಲಿಸಿದರೂ ಆಗಿಲ್ಲ. ಈ ವರ್ಷದ ಮಳೆಗೆ ಇವುಗಳಿಂದ ಮತ್ತೆ ಹಾನಿಯಾದರೆ ಯಾರು ಹೊಣೆ ಎಂಬುದು ಪ್ರಶ್ನೆ.

ಪ್ರವಾಹದಿಂದ ಹಾನಿಗೊಳ
ಗಾದ ಕೃಷಿ ಪ್ರದೇಶದಲ್ಲಿ ಮರಳು ತೆರವಿಗೆ ಅನುಮತಿ ಇದೆ. ಅರ್ಜಿ ಸಲ್ಲಿಸಿದಲ್ಲಿ ಅವಕಾಶ ನೀಡಲಾಗುವುದು. ಕೃಷಿ ಪ್ರದೇಶ ಹಾನಿಗೂ ಪರಿಹಾರ ಒದಗಿಸಲಾಗಿದೆ. ಮನೆ ನಿರ್ಮಾಣ ಜಿಪಿಎಸ್‌ ಸಮಸ್ಯೆಗೆ ಹೊಸ ಮಾರ್ಗಸೂಚಿ ಬರಲಿದೆ.
– ಗಣಪತಿ ಶಾಸ್ತ್ರಿ, ತಹಶೀಲ್ದಾರ್‌

Advertisement

ಸರಕಾರ ಮಾರ್ಗಸೂಚಿಯಂತೆ ಫ‌ಲಾನುಭವಿಗಳ ಖಾತೆಗೆ ನೇರ ಪರಿಹಾರ ಮೊತ್ತ ಪಾವತಿಯಾಗಿದೆ. ಕಳೆದ ಬಾರಿ ಹಾನಿಗೊಳಗಾದ ಸೇತುವೆಗಳಿಗೆ ಕಾಂಕ್ರೀಟ್‌ ತಡೆಗೋಡೆ ರಚಿಸಲಾಗಿದೆ. ದಾನಿಗಳಿಂದ ಬಂದ ಶ್ರಮಿಕ ನೆರವು ವಿತರಿಸಲಾಗುವುದು.
– ಹರೀಶ್‌ ಪೂಂಜ, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next