Advertisement
ಕಾಂಗರೂ ಆರೈಕೆಯ ವಿಧಗಳು
- ನಿಮ್ಮ ಕೈಗಳನ್ನು ತೊಳೆದುಕೊಳ್ಳಿ: ಯಾವುದೇ ಸಂಭಾವ್ಯ ಸೋಂಕಿನ ಅಪಾಯದಿಂದ ಪಾರಾಗಲು ನಿಮ್ಮ ಕೈಗಳನ್ನು ಸ್ವತ್ಛವಾಗಿ ತೊಳೆದುಕೊಳ್ಳಬೇಕು.
- ಶಿಶುವಿನ ಬಟ್ಟೆಗಳನ್ನು ಕಳಚಿ: ಮಗುವಿಗೆ ಡಯಾಪರ್ ಮಾತ್ರವಷ್ಟೇ ಇರಿಸಿ ಉಳಿದ ಬಟ್ಟೆ ತೆಗೆಯಿರಿ. ಶಿಶುವಿನ ದೇಹೋಷ್ಣ ಕಾಪಾಡಿಕೊಳ್ಳುವುದಕ್ಕಾಗಿ ಕೊಠಡಿ ಬೆಚ್ಚಗೆ ಇರಲಿ.
- ನಿಮ್ಮ ಶಿಶುವನ್ನು ಮಲಗಿಸಿಕೊಳ್ಳಿ: ಮಗುವನ್ನು ನಿಮ್ಮ ಎದೆಯ ಮೇಲೆ ನೇರ ದೇಹಸಂಪರ್ಕ ಇರುವಂತೆ ಮಲಗಿಸಿಕೊಳ್ಳಿ. ಶಿಶುವಿನ ತಲೆ ನಿಮ್ಮ ಎದೆಯ ಮೇಲಿದ್ದು, ಕಾಲುಗಳು ಕೆಳಗೆ ಇರುವಂತೆ ನೇರವಾಗಿ ಮಲಗಿಸಿಕೊಳ್ಳಬೇಕು. ಉಸಿರಾಟ ನಡೆಸಲು ಅನುವಾಗುವಂತೆ ಮಗುವಿನ ತಲೆ ಒಂದು ಪಾರ್ಶ್ವಕ್ಕಿರಬೇಕು.
- ಶಿಶುವನ್ನು ಸ್ಥಿತಗೊಳಿಸಿ: ಮೃದುವಾದ ಬಟ್ಟೆ ಅಥವಾ ಬ್ಲಾಂಕೆಟ್‌ನ್ನು ಶಿಶುವಿನ ಮೇಲೆ ಹೊದೆಸಿ ಸರಿಯಾಗಿ ಮಲಗಿಸಿಕೊಳ್ಳಿ ಮತ್ತು ಅದರ ದೇಹೋಷ್ಣ ಕಾಪಾಡಿಕೊಳ್ಳಿ.
- ನಿಮ್ಮ ಬಟ್ಟೆ ಹೊಂದಿಸಿಕೊಳ್ಳಿ: ಸಡಿಲವಾದ ಅಂಗಿ ಅಥವಾ ಕುಪ್ಪಸ ಧರಿಸಿ. ಬೇಬಿ ಸ್ಲಿಂಗ್ ಅಥವಾ ರ್ಯಾಪ್ ಉಪಯೋಗಿಸಿ ಶಿಶುವನ್ನು ಸರಿಯಾಗಿ ಮಲಗಿಸಿಕೊಳ್ಳಬಹುದು.
- ಚರ್ಮದ ನೇರ ಸಂಪರ್ಕ ಇರಲಿ: ಎಷ್ಟು ಸಾಧ್ಯವೋ ಅಷ್ಟು ಸಮಯ ಶಿಶುವಿಗೆ ನಿಮ್ಮ ದೇಹದ ನೇರ ಸಂಪರ್ಕ ಸಿಗಬೇಕು. ಕಾಂಗರೂ ತಾಯಿ ಆರೈಕೆಯನ್ನು ಸತತವಾಗಿ ಹಲವು ತಾಸುಗಳ ಕಾಲ ಒದಗಿಸಬಹುದಾಗಿದೆ. ಈ ಅವಧಿಯಲ್ಲಿ ಶಿಶುವಿನ ಜತೆಗೆ ಮಾತನಾಡುವುದು, ಮುದ್ದಿಸುವುದರ ಮೂಲಕ ಆತ್ಮೀಯ ಸಂಬಂಧವನ್ನು ಬೆಸೆಯಬಹುದು.
- ಎದೆಹಾಲು ಉಣಿಸುವುದು: ನಿಮ್ಮ ಶಿಶು ಸಿದ್ಧವಾಗಿದ್ದು, ಎದೆಹಾಲು ಕುಡಿಯಲು ಶಕ್ತವಾಗಿದ್ದಲ್ಲಿ ಕಾಂಗರೂ ತಾಯಿ ಆರೈಕೆ ಒದಗಿಸುತ್ತಿರುವಾಗಲೇ ಎದೆಹಾಲು ಕುಡಿಸಬಹುದು. ದೇಹದ ನೇರ ಸಂಪರ್ಕವು ಎದೆಹಾಲು ಕುಡಿಯಲು ಉತ್ತೇಜನ ಒದಗಿಸುತ್ತದೆ ಮತ್ತು ಇದರಿಂದ ಶಿಶುವಿಗೆ ಜೀವಾಧಾರವಾಗಿರುವ ಪೋಷಕಾಂಶಗಳು ಲಭ್ಯವಾಗುತ್ತವೆ.
- ಶಿಶುವಿನ ಮೇಲೆ ನಿಗಾ ಇರಿಸಿ: ಶಿಶುವಿನ ದೇಹೋಷ್ಣ, ಉಸಿರಾಟ ಮತ್ತು ಒಟ್ಟಾರೆ ಕ್ಷೇಮದ ಬಗ್ಗೆ ನಿಕಟವಾಗಿ ಗಮನ ಇರಿಸಿ. ಶಿಶು ಆರಾಮವಾಗಿ ಉಸಿರಾಟ ನಡೆಸುತ್ತಿದೆ ಮತ್ತು ದೇಹೋಷ್ಣವು ಸ್ಥಿರವಾಗಿದೆ ಎಂಬುದನ್ನು ಖಾತರಿಪಡಿಸಿಕೊಳ್ಳಿ. ಶಿಶು ಸೌಖ್ಯವಾಗಿದ್ದರೆ ಕಾಂಗರೂ ತಾಯಿ ಆರೈಕೆಯನ್ನು ಮುಂದುವರಿಸಿ.
- ಶಿಶುವಿನ ಜತೆಗೆ ಬಂಧ ಮತ್ತು ಸಂಬಂಧ: ಕಾಂಗರೂ ತಾಯಿ ಆರೈಕೆಯು ತಾಯಿ (ಅಥವಾ ಆರೈಕೆದಾರರು) ಮತ್ತು ಶಿಶುವಿನ ನಡುವೆ ಬಲವಾದ ಭಾವನಾತ್ಮಕ ಬಂಧ ಬೆಳೆಯಲು ಕಾರಣವಾಗುತ್ತದೆ. ದೇಹ -ದೇಹಗಳ ನಡುವೆ ನಿಕಟವಾದ ಸಂಪರ್ಕದಿಂದ ತಾಯಿ-ಮಗುವಿನ ಸಂಬಂಧ ಬಲವತ್ತರಗೊಳ್ಳುತ್ತದೆ, ಇದರಿಂದ ಸಂಬಂಧ ಮತ್ತು ಆತ್ಮೀಯತೆಯ ಭಾವ ಬಿಗಿಯಾಗುತ್ತದೆ.
- ಆತ್ಮವಿಶ್ವಾಸ ವರ್ಧನೆ: ಕಾಂಗರೂ ತಾಯಿ ಆರೈಕೆಯ ಮುಖಾಂತರ ಶಿಶುವಿನ ಆರೈಕೆ ಮಾಡುವುದರಿಂದ ತಾಯಿಗೆ ತನ್ನ ಶಿಶುವಿನ ಅದರಲ್ಲೂ ಅವಧಿಪೂರ್ವ ಜನಿಸಿದ ಮತ್ತು ಕಡಿಮೆ ದೇಹತೂಕ ಹೊಂದಿರುವ ಶಿಶುವಿನ ಆರೈಕೆ ಮಾಡಬಲ್ಲೆ, ಚೆನ್ನಾಗಿ ನೋಡಿಕೊಳ್ಳಬಲ್ಲೆ ಎಂಬ ಆತ್ಮವಿಶ್ವಾಸ ವರ್ಧಿಸುತ್ತದೆ.
- ಎದೆಹಾಲೂಡುವಿಕೆಗೆ ಹೆಚ್ಚು ಒತ್ತು: ಕಾಂಗರೂ ತಾಯಿ ಆರೈಕೆಯು ಎದೆಹಾಲೂಡುವಿಕೆಯನ್ನು ಪ್ರೋತ್ಸಾಹಿಸುತ್ತದೆ ಮತ್ತು ಬೆಂಬಲಿಸುತ್ತದೆ. ತಾಯಿಯ ಸ್ತನಗಳಿಗೆ ನಿಕಟ ಸಂಪರ್ಕ ಹೊಂದಿರುವುದರಿಂದ ಎದೆಹಾಲೂಡುವಿಕೆಯ ಆರಂಭ ಮತ್ತು ಉತ್ತಮ ಎದೆಹಾಲು ಸರಬರಾಜು ಸಾಧ್ಯವಾಗುತ್ತದೆ. ಇದರಿಂದ ಯಶಸ್ವಿಯಾದ ಮತ್ತು ಹೆಚ್ಚು ದೀರ್ಘವಾದ ಎದೆಹಾಲು ಊಡುವ ಅನುಭವ ಒದಗುತ್ತದೆ.
- ಎದೆಹಾಲು ಉತ್ಪಾದನೆ ಉತ್ತಮಗೊಳ್ಳುತ್ತದೆ: ತಾಯಿ ಮತ್ತು ಶಿಶು ದೇಹಗಳ ನಡುವೆ ನಿಕಟ ಸಂಪರ್ಕ ಮತ್ತು ಶಿಶುವಿನ ಇರುವಿಕೆಯು ಒದಗಿಸುವ ಪ್ರಚೋದನೆಗಳಿಂದಾಗಿ ಎದೆಹಾಲು ಉತ್ಪಾದನೆ ಸುಗಮ ಮತ್ತು ಸರಾಗವಾಗುತ್ತದೆ, ಇದು ಶಿಶುವಿಗೆ ವಿಶ್ವಾಸಾರ್ಹ ಪೌಷ್ಟಿಕಾಂಶ ಮೂಲವಾಗಿರುತ್ತದೆ.
- ಆರೋಗ್ಯ ಸೇವಾ ವೆಚ್ಚ ಇಳಿಕೆ: ಕಾಂಗರೂ ತಾಯಿ ಆರೈಕೆಯಿಂದ ಅವಧಿಪೂರ್ವ ಮತ್ತು ಕಡಿಮೆ ದೇಹತೂಕದೊಂದಿಗೆ ಜನಿಸಿದ ಶಿಶುಗಳ ಆಸ್ಪತ್ರೆವಾಸದ ಅವಧಿ ಕಡಿಮೆಯಾಗುವುದು ಸಾಧ್ಯ. ಇದರಿಂದ ಕುಟುಂಬಗಳು ಮತ್ತು ಆರೋಗ್ಯ ಸೇವಾ ವ್ಯವಸ್ಥೆಗಳ ಮೇಲೆ ಆರ್ಥಿಕ ಹೊರೆ ಕಡಿಮೆಯಾಗುತ್ತದೆ. ನಿಯೋನೇಟಲ್ ಇಂಟೆನ್ಸಿವ್ ಕೇರ್ ಘಟಕಗಳಲ್ಲಿ ಇರಬೇಕಾದ ಅವಧಿ ಕಡಿಮೆಯಾಗುವುದು ಹಾಗೂ ವೈದ್ಯಕೀಯ ಚಿಕಿತ್ಸೆ ಹಾಗೂ ಔಷಧಗಳ ವೆಚ್ಚ ಕಡಿಮೆಯಾಗುವುದರಿಂದ ಇದು ಸಾಧ್ಯವಾಗುತ್ತದೆ.
- ಸಂಕೀರ್ಣ ಸಮಸ್ಯೆಗಳು ಕಡಿಮೆಯಾಗುತ್ತವೆ: ಅವಧಿಪೂರ್ವ ಶಿಶುಗಳಲ್ಲಿ ಸಾಮಾನ್ಯ ಸಂಕೀರ್ಣ ಆರೋಗ್ಯ ಸಮಸ್ಯೆಗಳಾಗಿರುವ ರೆಸ್ಪಿರೇಟರಿ ಡಿಸ್ಟ್ರೆಸ್ ಸಿಂಡ್ರೋಮ್, ಸೋಂಕುಗಳು ಮತ್ತು ಸೆಪ್ಸಿಸ್ ತಲೆದೋರುವ ಸಾಧ್ಯತೆಗಳು ಕಾಂಗರೂ ತಾಯಿ ಆರೈಕೆಯಿಂದಾಗಿ ಕಡಿಮೆಯಾಗುತ್ತವೆ. ಇದರಿಂದಲೂ ವೈದ್ಯಕೀಯ ವೆಚ್ಚ ಕಡಿಮೆಯಾಗುತ್ತದೆಯಲ್ಲದೆ, ಆರೋಗ್ಯ ಸೇವಾ ವ್ಯವಸ್ಥೆಗಳ ಮೇಲೆ ಹೊರೆ ತಗ್ಗುತ್ತದೆ.
- ದೀರ್ಘಕಾಲೀನವಾಗಿ ಮಿತವ್ಯಯಿ: ಉತ್ತಮ ನರಶಾಸ್ತ್ರೀಯ ಬೆಳವಣಿಗೆ ಮತ್ತು ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳ ಇಳಿಕೆ ಸಹಿತ ಕಾಂಗರೂ ತಾಯಿ ಆರೈಕೆಯಿಂದಾಗಿ ತಾಯಿ ಮತ್ತು ಶಿಶುವಿನ ಮೇಲೆ ಉಂಟಾಗುವ ಧನಾತ್ಮಕ ಪರಿಣಾಮಗಳು ಕಡಿಮೆ ವೈದ್ಯಕೀಯ ಸೇವಾ ವೆಚ್ಚ, ವಿಶೇಷ ಶಿಕ್ಷಣ ಮತ್ತು ಸಾಮಾಜಿಕ ನೆರವು ಸೇವೆಗಳಂತಹ ಅಗತ್ಯಗಳನ್ನು ಕಡಿಮೆಗೊಳಿಸುವ ಮೂಲಕ ದೀರ್ಘಕಾಲೀನವಾಗಿ ಕುಟುಂಬ ಮತ್ತು ಸಮಾಜದ ಮೇಲೆ ಹೊರೆಯನ್ನು ತಗ್ಗಿಸುತ್ತದೆ.
Related Articles
Advertisement
ಕಾಂಗರೂ ತಾಯಿ ಆರೈಕೆಯನ್ನು ಯಾವಾಗ ಆರಂಭಿಸಬೇಕು ಮತ್ತು ಇದನ್ನು ಎಷ್ಟು ಕಾಲ ಮುಂದುವರಿಸಬೇಕು?
- ಶೀರ್ಘ ಆರಂಭ: ಜನನವಾದ ಮೇಲೆ ಶಿಶುವಿನ ಆರೋಗ್ಯ ಸ್ಥಿರಗೊಂಡ ಹಾಗೂ ಅದು ವೈದ್ಯಕೀಯವಾಗಿ ದೃಢವಾದ ಬಳಿಕ ಕಾಂಗರೂ ತಾಯಿ ಆರೈಕೆಯನ್ನು ಆರಂಭಿಸಬಹುದು.
- ಸ್ಥಿರಗೊಳ್ಳುವ ತನಕ ಮುಂದುವರಿಸಬೇಕು: ಕಾಂಗರೂ ತಾಯಿ ಆರೈಕೆಯು ಶಿಶುವಿಗೆ ಪ್ರಯೋಜನಪೂರ್ಣವಾಗಿರುವ ತನಕವೂ ಇದನ್ನು ಮುಂದುವರಿಸಬೇಕು. ಶಿಶು 2,000 ಗ್ರಾಂ (ಸುಮಾರು 4.4 ಪೌಂಡ್) ದೇಹತೂಕ ಹೊಂದುವ ವರೆಗೆ ಮತ್ತು ಚೆನ್ನಾಗಿ ಎದೆಹಾಲು ಕುಡಿಯುತ್ತಿರುವ ವರೆಗೆ ಕಾಂಗರೂ ತಾಯಿ ಆರೈಕೆಯನ್ನು ಮುಂದುವರಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯು ಶಿಫಾರಸು ಮಾಡುತ್ತದೆ. ಆದರೆ ಸಾಮಾನ್ಯವಾಗಿ ತಾಯಿ ಮತ್ತು ಶಿಶುವಿಗೆ ಕಾಂಗರೂ ತಾಯಿ ಆರೈಕೆಯು ಪ್ರಯೋಜನಪೂರ್ಣವಾಗಿದ್ದರೆ ಶಿಶು ಇಷ್ಟು ದೇಹ ತೂಕ ಗಳಿಸಿದ ಬಳಿಕವೂ ಇದನ್ನು ಮುಂದುವರಿಸಬಹುದು.
- ಕ್ರಮೇಣ ಹೆಚ್ಚಳ: ಶಿಶು ಬೆಳವಣಿಗೆ ಹೊಂದುತ್ತಿದ್ದಂತೆ ಮತ್ತು ಸದೃಢಗೊಳ್ಳುತ್ತಿದ್ದಂತೆ ಕ್ರಮೇಣ ಕಾಂಗರೂ ತಾಯಿ ಆರೈಕೆಯ ಅವಧಿಯನ್ನು ಹೆಚ್ಚಳ ಮಾಡಿಕೊಳ್ಳಬಹುದು. ಆರಂಭಿಕವಾಗಿ ಕಿರು ಅವಧಿ (ಉದಾಹರಣೆಗೆ 1-2 ತಾಸುಗಳು)ಯ ಕಾಂಗರೂ ತಾಯಿ ಆರೈಕೆ ಮಾಡಬಹುದು, ಆ ಬಳಿಕ ಶಿಶು ಹೊಂದಿಕೊಂಡಂತೆ ಮತ್ತು ಹೆಚ್ಚು ಸ್ಥಿರವಾದಂತೆ ಕಾಲಾವಧಿಯನ್ನು ವಿಸ್ತರಿಸಿಕೊಳ್ಳಬಹುದು.
- ದೇಹೋಷ್ಣ ನಿಯಂತ್ರಣ: ಕಾಂಗರೂ ತಾಯಿ ಆರೈಕೆಯು ಶಿಶುವಿನ ದೇಹೋಷ್ಣವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ತಾಯಿಯ ದೇಹವು ಶಿಶುವಿನ ದೇಹಕ್ಕೆ ನೈಸರ್ಗಿಕ ಇನ್‌ಕ್ಯುಬೇಟರ್ ಆಗಿ ಕೆಲಸ ಮಾಡುವ ಮೂಲಕ ಶಿಶುವನ್ನು ಬೆಚ್ಚಗಿರಿಸಿ ಅವಧಿಪೂರ್ವ ಜನಿಸುವ ಶಿಶುಗಳಲ್ಲಿ ಒಂದು ಸಾಮಾನ್ಯ ಅಪಾಯ ಸಾಧ್ಯತೆಯಾಗಿರುವ ಹೈಪೊಥರ್ಮಿಯಾ ಉಂಟಾಗುವುದನ್ನು ತಡೆಯುತ್ತದೆ.
- ಉತ್ತಮ ದೇಹ ತೂಕ ಗಳಿಕೆ ಸಾಧ್ಯವಾಗುತ್ತದೆ: ಕಾಂಗರೂ ತಾಯಿ ಆರೈಕೆಯನ್ನು ಪಡೆಯುವ ಶಿಶುಗಳು ಹೆಚ್ಚು ಪರಿಣಾಮಕಾರಿಯಾಗಿ ದೇಹತೂಕ ಗಳಿಸುತ್ತವೆ. ತ್ವಚೆಯ ನೇರ ಸಂಪರ್ಕದ ಜತೆಗೆ ತಾಯಿಯ ಎದೆಹಾಲು ಸೇರಿ ಶಿಶುವಿಗೆ ಗರಿಷ್ಠ ಪೌಷ್ಟಿಕಾಂಶ ಒದಗಿಸುತ್ತವೆ ಮತ್ತು ಆರೋಗ್ಯಪೂರ್ಣ ಬೆಳವಣಿಗೆಗೆ ಕಾರಣವಾಗುತ್ತವೆ.
- ಸ್ಥಿರ ಜೀವಾಧಾರ ದೈಹಿಕ ಕ್ರಿಯೆಗಳು: ಕಾಂಗರೂ ತಾಯಿ ಆರೈಕೆಯು ಹೃದಯ ಬಡಿತ, ಉಸಿರಾಟ ದರ ಮತ್ತು ರಕ್ತದಲ್ಲಿ ಆಮ್ಲಜನಕ ಮಟ್ಟದಂತಹ ಜೀವಾಧಾರ ದೈಹಿಕ ಕ್ರಿಯೆಗಳು ಸ್ಥಿರವಾಗಿರಲು ಸಹಾಯ ಮಾಡುತ್ತದೆ. ಇದರಿಂದ ಅವಧಿಪೂರ್ವ ಜನಿಸಿದ ಶಿಶುಗಳಲ್ಲಿ ಸಾಮಾನ್ಯವಾಗಿರುವ ಆಪ್ನಿಯಾ ಮತ್ತು ಬ್ರಾಡಿಕಾರ್ಡಿಯಾ ಅಪಾಯಗಳು ಕಡಿಮೆಯಾಗುತ್ತವೆ.
- ಎದೆಹಾಲು ಉಣ್ಣುವುದಕ್ಕೆ ಗರಿಷ್ಠ ಒತ್ತು: ಕಾಂಗರೂ ತಾಯಿ ಆರೈಕೆಯು ಎದೆಹಾಲು ಉಣ್ಣುವುದಕ್ಕೆ ಒತ್ತು ನೀಡುತ್ತದೆ ಮತ್ತು ನೆರವಾಗುತ್ತದೆ. ತಾಯಿಯ ಸ್ತನಗಳ ಜತೆಗೆ ನಿಕಟ ಸಂಪರ್ಕ ಮತ್ತು ಸ್ಪರ್ಶವು ಶಿಶು ಎದೆಹಾಲನ್ನು ಹೆಚ್ಚು ಪರಿಣಾಮಕಾರಿಯಾಗಿ ಉಣ್ಣುವುದಕ್ಕೆ ಪ್ರೋತ್ಸಾಹ ನೀಡುತ್ತದೆ. ಇದರಿಂದ ಶಿಶುವಿಗೆ ಅಗತ್ಯ ಪೌಷ್ಟಿಕಾಂಶಗಳು ಮತ್ತು ರೋಗನಿರೋಧಕ ಶಕ್ತಿಯ ರಕ್ಷಣೆ ಒದಗುತ್ತದೆ.
- ಉತ್ತಮ ನರಶಾಸ್ತ್ರೀಯ ಬೆಳವಣಿಗೆ: ಅವಧಿಪೂರ್ವ ಶಿಶುಗಳಿಗೆ ಕಾಂಗರೂ ತಾಯಿ ಆರೈಕೆಯಿಂದ ಮಿದುಳಿನ ಬೆಳವಣಿಗೆ ಮತ್ತು ಬೌದ್ಧಿಕ ಬೆಳವಣಿಗೆ ಚೆನ್ನಾಗಿ ಆಗುತ್ತದೆ. ಕಾಂಗರೂ ತಾಯಿ ಆರೈಕೆಯ ವೇಳೆ ಶಿಶು ಹೊಂದುವ ಸೌಖ್ಯ ಮತ್ತು ಭದ್ರತೆಯ ಭಾವ ಮಿದುಳಿನ ಬೆಳವಣಿಗೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.
- ಒತ್ತಡ ಮತ್ತು ನೋವು ಇಳಿಕೆ: ತಾಯಿ ತನ್ನ ಎದೆಗೆ ನಿಕಟವಾಗಿ, ಒತ್ತಿಕೊಂಡು ಹಿಡಿದುಕೊಳ್ಳುವುದರಿಂದ ಶಿಶುವಿನ ಒತ್ತಡ ಮತ್ತು ಅನನುಕೂಲಗಳು ಕಡಿಮೆಯಾಗುತ್ತವೆ, ಇದರಿಂದ ಅಳು ಕಡಿಮೆಯಾಗುತ್ತದೆಯಲ್ಲದೆ ಭಾವನಾತ್ಮಕ ಸೌಖ್ಯ ಚೆನ್ನಾಗಿರುತ್ತದೆ.
- ಆಸ್ಪತ್ರೆ ವಾಸ ಕಡಿಮೆ: ಕಾಂಗರೂ ತಾಯಿ ಆರೈಕೆಯನ್ನು ಪಡೆಯುವ ಶಿಶುಗಳಿಗೆ ಆಸ್ಪತ್ರೆ ವಾಸದ ಅವಧಿ ಕಡಿಮೆ ಸಾಕಾಗುತ್ತದೆ, ಇದರಿಂದ ವೆಚ್ಚ ಕಡಿಮೆಯಾಗುತ್ತದೆ, ಆಸ್ಪತ್ರೆ ವಾಸದ ಅವಧಿಯಲ್ಲಿ ತಗಲುವ ಸೋಂಕುಗಳ ಅಪಾಯ ಕಡಿಮೆಯಾಗುತ್ತದೆ.