Advertisement

ಸೂಜಿಗಲ್ಲಿನಂತೆ ಸೆಳೆಯುವ “ಹೇಳದೆ ಹೋದ ಮಗಳಿಗೆ’

11:23 PM Oct 13, 2020 | Karthik A |

ಮೂಲತಃ ಉಪನ್ಯಾಸಕರಾಗಿರುವ ನರೇಂದ್ರ ಎಸ್‌. ಗಂಗೊಳ್ಳಿ ಬರಹಗಾರರಾಗಿ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡವರು.

Advertisement

ಈ ವರೆಗೆ ಸಾವಿರಕ್ಕೂ ಅಧಿಕ ಲೇಖನ, ಕಥೆ, ಕವನಗಳು ರಾಜ್ಯಮಟ್ಟದ ವಿವಿಧ ದಿನಪತ್ರಿಕೆ, ಮ್ಯಾಗಜೀನ್‌ಗಳಲ್ಲಿ ಪ್ರಕಟವಾಗಿವೆ. ಅವರ ಪ್ರಥಮ ಕೃತಿ ಬಿಡುಗಡೆಯ ಸುದ್ದಿ ನಮ್ಮಲ್ಲಿ ಬಹಳಷ್ಟು ಕಾತುರತೆ ಹುಟ್ಟಿಸಿತ್ತು.

ಬಿಡುಗಡೆಯ ದಿನ ಗುರುಗಳ ಮುಖದಲ್ಲಿ ಕಾಣಿಸುತ್ತಿದ್ದ ಆತ್ಮ ವಿಶ್ವಾಸವೇ ನಮ್ಮೊಳಗಿದ್ದ ಓದುಗನನ್ನು ಬಡಿದೆಬ್ಬಿಸಿತ್ತು. ಅಂತೂ ಪುಸ್ತಕ ಕೈಗೆ ದೊರೆತಾಗಲೇ ಸಮಾಧಾನವಾಗಿದ್ದು. ಪುಸ್ತಕದ ಓದು ಮನಸ್ಸಿಗೆ ಮುದ, ಬದುಕಿಗೆ ಪ್ರೇರಣೆ ನೀಡಿತ್ತು. ಹಾಗಾಗಿ ಆ ಪುಸ್ತಕದ ಬಗ್ಗೆ ನಿಮಗೂ ಕೊಂಚ ಹೇಳಬೇಕೆನ್ನಿಸಿತು.

ಶೀರ್ಷಿಕೆಯಿಂದಲೇ ಗಮನ ಸೆಳೆಯುವ ಈ ಪುಸ್ತಕದಲ್ಲಿ, ಕಡು ಬಡತನದ ಬೇಗೆಯಲ್ಲಿ ಬೆಂದು ವಿಶ್ವ ಮಟ್ಟದಲ್ಲಿ ರಾರಾಜಿಸಿದ ಆ್ಯತ್ಲೆàಟ್‌ ಹಿಮಾದಾಸ್‌, ಬೋಯಿಂಗ್‌ ಕಮಾಂಡರ್‌ ದಿವ್ಯಾ, ಸರ್‌ ಎಂ. ವಿಶ್ವೇಶ್ವರಯ್ಯ ಮೊದಲಾದವರ ಕಥನಗಳು ಹೃದಯಸ್ಪರ್ಶಿಯಾಗಿವೆ.

ಇನ್ನು ಅಂಗವೈಕಲ್ಯವನ್ನು ಮೆಟ್ಟಿನಿಂತು ಮೌಂಟ್‌ ಎವರೆಸ್ಟ್‌ ಹತ್ತಿದ ಅರುಣಿಮಾ ಸಿನ್ಹಾ, ನಾಲ್ಕೇ ಬೆರಳುಗಳಲ್ಲಿ ಅದ್ಭುತವಾಗಿ ಪಿಯಾನೋ ನುಡಿಸುವ ಹೀ ಲೀ ಆಹ್‌, ಪ್ಯಾರಾ ಬ್ಯಾಡ್ಮಿಂಟನ್‌ ಚಾಂಪಿಯನ್‌ ಮಾನಸಿ ಜೋಷಿ, ಶ್ರವಣ ಮತ್ತು ವಾಕ್‌ ದೋಷವಿದ್ದೂ ಚಿತ್ರ ನಟಿಯಾಗಿ ಮಿಂಚಿದ ಮಾರ್ಲಿ ಮಾರ್ಟಿನ್‌, ಅಂಧ ಈಜು ಪಟು ಕಾಂಚನಾ ಮಾಲಾ ಇವರ ಬಗೆಗೆ ಓದಿದಾಗ ಎಲ್ಲ ಸರಿಯಿದ್ದೂ ನಾನೇನೂ ಮಾಡಿಲ್ಲವಲ್ಲ ಛೇ ಎಂದುಕೊಂಡಿದ್ದೆ. ವಿಶ್ವ ಚಾಂಪಿಯನ್‌ ಪಿ.ವಿ. ಸಿಂಧು, ಮಿಥಾಲಿ ರಾಜ್‌, ಪ್ರೀತಿಕಾ ಇವರೆಲ್ಲರ ಸಾಧನೆ ಅನುಕರಣೀಯ.

Advertisement

ಲಕ್ಷ್ಮೀ ಸೆಹಗಲ್‌, ಅಮೃತಾ ಖರವಂದೆ, ಸುದೇವಿ ದಾಸಿ ಮೊದಲಾದವರ ಬಗೆಗಿನ ಬರಹಗಳನ್ನು ಓದಿದಾಗ ಇವರೇ ಈ ಜಗದ ನಿಜವಾದ ಸ್ತ್ರೀ ಶಕ್ತಿ ಎಂದೆನಿಸಿದ್ದು ಸುಳ್ಳಲ್ಲ. ಭಗತ್‌ಸಿಂಗ್‌, ಶಾಸ್ತ್ರೀಜಿ ಕುರಿತಾದ ಲೇಖನಗಳು ನಮ್ಮೊಳಗಿನ ದೇಶಭಕ್ತಿಯನ್ನು ಬಡಿದೆಬ್ಬಿಸುತ್ತವೆ. ಈ ಎಲ್ಲ ಬರಹಗಳಲ್ಲೂ ಲೇಖಕರು ನಮಗೆ ತಿಳಿದಿರದ ಅನೇಕ ಸಂಗತಿಗಳ ಮೇಲೆ ಬೆಳಕು ಚೆಲ್ಲಿರುವುದು ವಿಶೇಷ. ಸಾಧಕರ ಜೀವನವನ್ನು ವಿವರಿಸುವ ಮನಮೋಹಕ ಶೈಲಿಯಲ್ಲೇ ಲೇಖಕರು ಓದುಗರ ಹೃದಯವನ್ನು ಗೆದ್ದಿದ್ದಾರೆ.

ಶೀರ್ಷಿಕೆ ಮತ್ತು ಹಾಚಿಕೊ ಎನ್ನುವ ನಾಯಿಯ ನಿಷ್ಠೆಯ ಕುರಿತಾದ ಬರಹವನ್ನು ಓದಿದಾಗ ಯಾರ ಕಣ್ಣಾಲಿಗಳೂ ತುಂಬದಿರಲು ಸಾಧ್ಯವಿಲ್ಲ. ಒಂಟಿ ಮರದ ಕತೆ ರೋಚಕತೆ ಹುಟ್ಟಿಸುತ್ತದೆ. ಶಂಕರ್‌ನಾಗ್‌ ಓದುಗರಿಗೆ ಮತ್ತಷ್ಟು ಹತ್ತಿರವಾಗುತ್ತಾರೆ. ಗೊಂಬೆ, ನಯಾಗಾರ, ಸೇರಿದಂತೆ ಅನೇಕ ಸಾಮಾಜಿಕ ಕಳಕಳಿಯ ಬರಹಗಳು ಮನಮುಟ್ಟುತ್ತವೆ.

ಪುಸ್ತಕದಲ್ಲಿನ ಆಕರ್ಷಕ ತಲೆಬರಹಗಳು ಲೇಖನ ಓದುವಂತೆ ಪ್ರಚೋದಿಸುತ್ತವೆ. ಇನ್ನುಳಿದಂತೆ ಪುಸ್ತಕದ ವಿನ್ಯಾಸ, ಪ್ರತಿ ಲೇಖನದ ಜತೆ ನೀಡಿರುವ ಚಿತ್ರಗಳು, ಚಂದದ ರೂಪದರ್ಶಿಯ ಮುಖಪುಟ ವಿನ್ಯಾಸವೆಲ್ಲವೂ ಬಹಳ ಸೊಗಸಾಗಿದೆ. ಹಿರಿಯ ಸಾಹಿತಿ ಡಾ| ಪಾರ್ವತಿ ಜಿ. ಐತಾಳ್‌ ಈ ಪುಸ್ತಕಕ್ಕೆ ಮುನ್ನುಡಿ ಬರೆದಿರುವುದು ವಿಶೇಷ.

“ಹೇಳದೆ ಹೋದ ಮಗಳಿಗೆ’ ಲೇಖನವು ತಂದೆ ಮಗಳ ಸಂಬಂಧವನ್ನು ಒಂದುಗೂಡಿಸಿದ ಘಟನೆ ಹೇಳುತ್ತಾ ಇದಕ್ಕಿಂತ ಸಾರ್ಥಕತೆ ಲೇಖಕನಿಗೆ ಇನ್ನೇನಿದೆ ಎನ್ನುವ ಲೇಖಕರ ಮಾತಿನಲ್ಲಿ ಅವರ ಸರಳತೆ ಸಂತೃಪ್ತಿ ವ್ಯಕ್ತವಾಗುತ್ತದೆ. ಈ ಸರಳತೆಯಿಂದಾಗಿಯೇ ಲೇಖಕರು ಇಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯವಾಗಿದೆಯೇನೋ ಎನಿಸುತ್ತದೆ.


ಚೈತ್ರಾ ವೈದ್ಯ, ಉಪ್ಪುಂದ, ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು, ಗಂಗೊಳ್ಳಿ, ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next