Advertisement

ಬಡ ಮಕ್ಕಳಿಗೆ ಆಸರೆಯಾದ ಪುಸ್ತಕ ಭಂಡಾರ

12:13 PM Nov 24, 2019 | Suhan S |

ಚಿಕ್ಕೋಡಿ: ಗ್ರಾಮೀಣ ಭಾಗದ ಯುವಕರು ಕೆಎಎಸ್‌, ಐಎಎಸ್‌ನಂತ ಮುಂತಾದ ನಾಗರಿಕ ಸೇವೆಗಳಲ್ಲಿ ಕೆಲಸ ಮಾಡಬೇಕೆಂಬ ಉದ್ದೇಶದಿಂದ ಸ್ನಾತಕೋತ್ತರ ಪದವೀಧರು ಹುಟ್ಟು ಹಾಕಿದ ಉಚಿತ ಗ್ರಂಥಾಲಯದಲ್ಲಿ ಇಂದು ನೂರಾರು ಬಡ ಯುವಕರು ಅಧ್ಯಯನದಲ್ಲಿ ತೊಡಗಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಣಿಯಾಗುತ್ತಿದ್ದಾರೆ.

Advertisement

ಚಿಕ್ಕೋಡಿಯಿಂದ 10 ಕಿ.ಮೀ. ದೂರದಲ್ಲಿರುವ ಕೇರೂರ ಗ್ರಾಮದಲ್ಲಿ ಉಚಿತ ಗ್ರಂಥಾಲಯ ಗ್ರಾಮೀಣ ಭಾಗದ ಬಡ ಯುವಕರಿಗೆ ಅನುಕೂಲವಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಗ್ರಾಮೀಣ ಭಾಗದ ಮಕ್ಕಳು ಉತ್ತಮ ಸಾಧನೆ ಮಾಡಬೇಕೆನ್ನುವ ಸದುದ್ದೇಶದಿಂದ ಸ್ನಾತಕೋತ್ತರ ಪದವೀಧರ ಯುವಕರ ಗುಂಪೊಂದು ಸ್ವಂತ ಖರ್ಚಿನಲ್ಲಿ ಗ್ರಂಥಾಲಯ ತೆರೆದಿದೆ. ಗ್ರಾಮೀಣ ಯುವಕರಿಗೆ ಉಚಿತವಾಗಿ ಜ್ಞಾನ ಭಂಡಾರ ಒದಗಿಸುವ ಮೂಲಕ ನೂರಾರು ಯುವಕರಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ನಿರ್ಮಾಣ ಸಂಘ ಸ್ಥಾಪನೆ: ಈ ಸ್ಪರ್ಧಾತ್ಮಕ ಪರೀಕ್ಷಾಗ್ರಂಥಾಲಯದಲ್ಲಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಅಗತ್ಯ ತಯಾರಿ ನಡೆಸಲು ಪೂರಕವಾದ ದಿನಪತ್ರಿಕೆ, ಪಠ್ಯ-ಪುಸ್ತಕ, ಸಾಮಾನ್ಯ ಜ್ಞಾನ, ಕಾದಂಬರಿಗಳು ಸೇರಿದಂತೆ ಸಾವಿರಾರು ಪುಸ್ತಕಗಳು ದೊರೆಯುತ್ತವೆ.  ತಮ್ಮ ವೃತ್ತಿ, ನಿತ್ಯ ಕೆಲಸ ಕಾರ್ಯಗಳೊಂದಿಗೆ ಸಮಾಜ ಸೇವೆ ಮಾಡುವ ಹಂಬಲದೊಂದಿಗೆ ಸಮಾನ ಮನಸ್ಕರ ಸ್ನಾತಕೋತ್ತರ ಪದವೀಧರ ಯುವಕರು ಸೇರಿ ಕಟ್ಟಿಕೊಂಡಿರುವ ನಿರ್ಮಾಣ ಸಂಘದ ಮೂಲಕ ಕಳೆದ ಮೂರು ವರ್ಷಗಳಿಂದ ಸಮಾಜಮುಖೀ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ.

ಇದೀಗ ಕೇರೂರ ಗ್ರಾಮ ಮತ್ತು ಸುತ್ತಮುತ್ತ ಹಳ್ಳಿಯ ಯುವ ಜನಾಂಗ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಣಿಯಾಗಲು ಗ್ರಂಥಾಲಯ ಸ್ಥಾಪಿಸಿದ್ದಾರೆ. ಇಂದಿನ ದಿನಗಳಲ್ಲಿ ಅಧ್ಯಯನಕ್ಕಾಗಿ ದೂರದ ಬೆಳಗಾವಿ, ಧಾರವಾಡ, ಬೆಂಗಳೂರು, ವಿಜಯಪುರ ತೆರಳಿ ಸಾವಿರಾರು ರೂಪಾಯಿ ವ್ಯಯಿಸಬೇಕು. ಆದರೆ, ಅನೇಕ ಬಡ ಮಕ್ಕಳಿಗೆ ಇದು ಕಷ್ಟಸಾಧ್ಯ. ಹೀಗಾಗಿ ಬಡ ಯುವಕರಿಗೆ ಅನುಕೂಲವಾಗುವ ಭವಿಷ್ಯದ ದೃಷ್ಟಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನೆರವಾಗಬಲ್ಲ ಅಧ್ಯಯನಕ್ಕಾಗಿ ಒಂದೇ ಸೂರಿನಡಿ ಬಡ ಮಕ್ಕಳಿಗೆ ಅನುಕೂಲ ಕಲ್ಪಿಸಲು ರವೀಂದ್ರ ಪಾಟೀಲ, ವಿಠಲ ಕೇಸ್ತಿ, ಸಿದ್ದಪ್ಪ ನಾವಿ, ನಿರ್ಮಲಾ ಹೊಸಪೇಟಿ, ತಮ್ಮಣ್ಣ ಗಡದೆ, ಸುರೇಶ ಬಾಡಕರ, ಮಾಧುರಿ ಶಿಂಧೆ, ಜನಾರ್ದನ ಸಾಳುಂಕೆ, ರಾಜಾಸಾಬ್‌ ತಾಜಿನ್‌ ಮೊದಲಾದ ಸ್ನಾತಕೋತ್ತರ ಪದವೀಧರರು ಗ್ರಂಥಾಲಯ ಸ್ಥಾಪಿಸಿದ್ದಾರೆ.

15 ಸಾವಿರ ಪುಸ್ತಕಗಳ ಸಂಗ್ರಹ: ಈ ಗ್ರಂಥಾಲಯದಲ್ಲಿ ವಿಶ್ವದ ಇತಿಹಾಸ, ಭಾರತದ ಇತಿಹಾಸ, ಕರ್ನಾಟಕ ಇತಿಹಾಸ, ರಾಜ್ಯಶಾಸ್ತ್ರ , ಭಾರತದ ಸಂವಿಧಾನ, ರಾಜಕೀಯ, ಭೂಗೋಳ ಶಾಸ್ತ್ರ, ಅರ್ಥಶಾಸ್ತ್ರ, ಆರ್ಥಿಕ ಅಭಿವೃದ್ಧಿ, ವಿಜ್ಞಾನ ತಂತ್ರಜ್ಞಾನ, ವ್ಯಾಕರಣ ಪುಸ್ತಕಗಳು, ಶಬ್ದಕೋಶಗಳು, ಅಟ್ಲಾಸ್‌ಗಳು ಸೇರಿದಂತೆ ಐಎಎಸ್‌, ಐಪಿಎಸ್‌, ಕೆಎಎಸ್‌, ಕೆಇಎಸ್‌, ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಕ, ಎಫ್‌ಡಿಸಿ, ಎಸ್‌ಡಿಸಿ, ಪೊಲೀಸ್‌ ಅಧಿಕಾರಿ, ಕೆಪಿಟಿಸಿಎಲ್‌, ತಾಂತ್ರಿಕೇತರ ಹುದ್ದೆಗಳ ನೇಮಕಾತಿ ಪರೀಕ್ಷೆಗಳನ್ನು ಎದುರಿಸಲು ನೆರವಾಗ ಬಲ್ಲ 500 ಪುಸ್ತಕದಿಂದ ಆರಂಭವಾದ ಗ್ರಂಥಾಲಯ ಇಂದು ಸುಮಾರು 15 ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಇರಿಸಲಾಗಿದೆ. ನೌಕರಿಗೆ ಹೋಗಿರುವ ಯುವಕರು ತಾವು ಅಧ್ಯಯನ ಮಾಡಿದ ಪುಸ್ತಕಗಳನ್ನು ಗ್ರಂಥಾಲಯಕ್ಕೆ ಒಪ್ಪಿಸುತ್ತಿದ್ದಾರೆ. ಗ್ರಂಥಾಲಯದಲ್ಲಿಂದು 500ರಿಂದ 600 ಜನ ಯುವಕರು ಅಧ್ಯಯನ ಮಾಡುತ್ತಿದ್ದಾರೆ.

ಮೂಲ ಸೌಲಭ್ಯ: ಸುಸಜ್ಜಿತವಾದ ಕಟ್ಟಡವನ್ನು ಬಾಡಿಗೆ ಪಡೆದು ಆಸನ, ಕುಡಿಯುವ ನೀರು, ವಿದ್ಯುತ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಒಬ್ಬ ಗ್ರಂಥಪಾಲಕರನ್ನೂ ನಿಯೋಜನೆ ಮಾಡಲಾಗಿದ್ದು, ನಿತ್ಯ ಬೆಳಿಗ್ಗೆ 8ರಿಂದ 11 ಮತ್ತು ಸಂಜೆ 4ರಿಂದ ರಾತ್ರಿ 8ರವರೆಗೆ ಗ್ರಂಥಾಲಯ ತೆರೆದಿರುತ್ತದೆ.ಶುಲ್ಕರಹಿತ ಸದಸ್ಯರಾಗಿ ನಿಗದಿತ ದಿನಗಳವರೆಗೆ ಪುಸ್ತಕಗಳನ್ನು ಓದಲು ಮನೆಗೂ ತೆಗೆದುಕೊಂಡು ಹೋಗುವ ವ್ಯವಸ್ಥೆ ಮಾಡಲಾಗಿದೆ ಎನ್ನುತ್ತಾರೆ ಸಂಸ್ಥೆಯ ಯುವಕರ ಗುಂಪಿನ ಸದಸ್ಯರು.

Advertisement

 

-ಮಹಾದೇವ ಪೂಜೇರಿ

Advertisement

Udayavani is now on Telegram. Click here to join our channel and stay updated with the latest news.

Next