ಬೆಂಗಳೂರು: ಸರ್ಕಾರಿ ಶಾಲೆ ಮಕ್ಕಳಿಗೆ ಸರಿಯಾದ ಸಮಯಕ್ಕೆ ಪುಸ್ತಕ ನೀಡುತ್ತಿಲ್ಲ ಎಂಬ ಪ್ರತಿ ವರ್ಷದ ಅಪವಾದ ತೆಗೆದುಹಾಕುವ ನಿಟ್ಟಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, 2019-20ರ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳಿಗೆ ಶಾಲೆಯ ಆರಂಭದ ದಿನವೇ ಪುಸ್ತಕ ನೀಡಲು ತಯಾರಿ ಮಾಡಿಕೊಂಡಿದೆ.
ಒಂದರಿಂದ 10ನೇ ತರಗತಿಯ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ 6.70 ಕೋಟಿ ಪುಸ್ತಕಗಳ ಅವಶ್ಯಕತೆ ಇದೆ. ಜತೆಗೆ ಕಳೆದ ಸಾಲಿನಲ್ಲಿ ಹಂಚಿಕೆಯಾಗದೇ ಉಳಿದಿದ್ದ ಸುಮಾರು 33 ಸಾವಿರ ಪುಸ್ತಕಗಳನ್ನು ಮುಂದಿನ ಸಾಲಿನ ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಲಾಗುತ್ತದೆ ಎಂದು ಕರ್ನಾಟಕ ಪಠ್ಯಪುಸ್ತಕ ಸಂಘದ ಮೂಲಗಳು ‘ಉದಯವಾಣಿ’ಗೆ ಖಚಿತಪಡಿಸಿವೆ.
ಬೇಕಿರುವ 6.33 ಕೋಟಿ ಪುಸ್ತಕಗಳಲ್ಲಿ ಶೇ.80ರಷ್ಟು ಮುದ್ರಣ ಕಾರ್ಯ ಪೂರ್ಣಗೊಂಡಿದೆ. ಉಳಿದ ಶೇ.20ರಷ್ಟು ಪುಸ್ತಕಗಳನ್ನು ಮೇ ಎರಡನೇ ವಾರದೊಳಗೆ ಪೂರ್ಣಗೊಳಿಸಲಾಗುತ್ತದೆ. ಮುದ್ರಣಗೊಂಡಿರುವ ಪುಸ್ತಕಗಳಲ್ಲಿ ಶೇ.50ರಷ್ಟು ಪುಸ್ತಕಗಳ ವಿಲೇವಾರಿ ಪ್ರಕ್ರಿಯೆಯೂ ಮುಗಿದಿದೆ.
ಪುಸ್ತಕಗಳ ವಿಲೇ ಹೇಗೆ?: ಕರ್ನಾಟಕ ಪಠ್ಯಪುಸ್ತಕ ಸಂಘದಿಂದ ಜಿಲ್ಲಾ ಉಪನಿರ್ದೇಶಕರಿಗೆ ಅಥವಾ ಡಯಟ್‌ಗೆ ಪುಸ್ತಕ ಕಳುಹಿಸಲಾಗುತ್ತದೆ. ಅಲ್ಲಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಪುಸ್ತಕ ಹೋಗಲಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯ ಶಾಲೆಗಳಿಗೆ ಮೇ ಅಂತ್ಯದೊಳಗೆ ಹಂಚಿಕೆ ಮಾಡಲಿದ್ದಾರೆ.
ಶಿಕ್ಷಣ ಇಲಾಖೆಯಿಂದ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಪಠ್ಯಪುಸ್ತಕ ಸಂಘಕ್ಕೆ ಮುದ್ರಿಸಬೇಕಿರುವ ಪುಸ್ತಕದ ಮಾಹಿತಿ ನೀಡಲಾಗುತ್ತದೆ. ಅದರಂತೆ ಸಂಘದಿಂದ ಟೆಂಡರ್ ಕರೆದು, ನಿರ್ದಿಷ್ಟ ಮಾಧ್ಯಮದ ಎಷ್ಟು ಪುಸ್ತಕ ಬೇಕು ಮತ್ತು ಯಾವ ಅವಧಿಯೊಳಗೆ ಪೂರೈಕೆ ಮಾಡಬೇಕು ಎಂಬಿತ್ಯಾದಿಗಳನ್ನು ಟೆಂಡರ್ ಪಡೆದವರಿಗೆ ಸೂಚಿಸುತ್ತಾರೆ. ಬೇಡಿಕೆಗೆ ತಕ್ಕ ಹಾಗೆ ಪುಸ್ತಕ ಮುದ್ರಣವಾಗಲಿದೆ ಎಂದು ಅಧಿಕಾರಿಯೊಬ್ಬರು ವಿವರಿಸಿದರು.
ಕಳೆದ ಬಾರಿ ಸಮಸ್ಯೆ: ಕಳೆದ ಸಾಲಿನಲ್ಲಿ ಮುದ್ರಣಕ್ಕೆ ಕಾಗದದ ಕೊರತೆಯಾಗಿತ್ತು. ಇದರಿಂದಾಗಿ ಸೂಕ್ತ ಸಮಯದಲ್ಲಿ ಪಠ್ಯಪುಸ್ತಕ ಸಿಕ್ಕಿರಲಿಲ್ಲ.