Advertisement

NEP ಹಿಂಪಡೆದರೆ ಭವಿಷ್ಯಕ್ಕೆ ಹೊಡೆತ: ಕ್ಯಾ| ಗಣೇಶ್‌ ಕಾರ್ಣಿಕ್‌

11:35 PM Oct 11, 2023 | Team Udayavani |

ಮಂಗಳೂರು: “ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)-2020’ನ್ನು ಹಿಂಪಡೆದರೆ ರಾಜ್ಯದ ಮಕ್ಕಳ ಭವಿಷ್ಯಕ್ಕೆ ಪೆಟ್ಟು ಬೀಳಲಿದೆ ಎಂದು ಪೀಪಲ್ಸ್‌ ಪೋರಂ ಫಾರ್‌ ಕರ್ನಾಟಕದ ಪ್ರಮುಖರಾದ ವಿಧಾನಪರಿಷತ್‌ ಮಾಜಿ ಸದಸ್ಯ ಕ್ಯಾ| ಗಣೇಶ್‌ ಕಾರ್ಣಿಕ್‌ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

Advertisement

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಬದಲು ಎಸ್‌ಇಪಿ (ರಾಜ್ಯ ಶಿಕ್ಷಣ ನೀತಿ) ಜಾರಿಗೆ ತರಲು ರಾಜ್ಯದ ಕಾಂಗ್ರೆಸ್‌ ಸರಕಾರ ನಿರ್ಧರಿಸಿರುವುದು ಖಂಡನೀಯ. ಇದರ ವಿರುದ್ಧ ಆಂದೋಲನ ನಡೆಸಲಾಗುವುದು. ಮುಖ್ಯಮಂತ್ರಿ, ಸಚಿವರು ಮೊದಲು ಎನ್‌ಇಪಿಯ ಕರಡು ಪ್ರತಿಗಳನ್ನು ಓದಲಿ. ಆಗ ಅದರಲ್ಲಿರುವ ಒಳ್ಳೆಯ ಅಂಶಗಳು ತಿಳಿಯುತ್ತವೆ. ಕೇವಲ ರಾಜಕೀಯ ಕಾರಣಕ್ಕಾಗಿ ನಿರ್ಧಾರ ತೆಗೆದುಕೊಂಡು ಮಕ್ಕಳ ಭವಿಷ್ಯದ ಮೇಲೆ ಕಲ್ಲು ಹಾಕಬಾರದು. ಸರಕಾರದ ನಿರ್ಧಾರ ಪ್ರಜಾಪ್ರಭುತ್ವ, ಸಂವಿಧಾನ ವಿರೋಧಿ ನೀತಿಯಾಗುತ್ತದೆ ಎಂದರು.

ಎನ್‌ಇಪಿ ಜಾರಿಯಿಂದ ಶಿಕ್ಷಣಕ್ಕೆ ಜಿಡಿಪಿಯ ಶೇ. 6ರಷ್ಟು ವಿನಿಯೋಗವಾಗುತ್ತದೆ. ಎನ್‌ಇಪಿ ಮಕ್ಕಳಲ್ಲಿ ಕುತೂಹಲ, ಸಂಶೋಧನೆ ಉಳಿಸಿಕೊಂಡು ಕೌಶಲಯುತವಾದ ಶಿಕ್ಷಣ ನೀಡುತ್ತದೆ. ವ್ಯಕ್ತಿತ್ವ ವಿಕಸನ ದೊಂದಿಗೆ ಜಗತ್ತಿನ ಉದ್ಯೋಗ ಅವಕಾಶಕ್ಕೆ ಪೂರಕವಾಗಿ ವ್ಯಕ್ತಿಯನ್ನಾಗಿ ರೂಪಿಸುತ್ತದೆ. ಭವಿಷ್ಯದ ದೃಷ್ಟಿಯಿಂದ ಎನ್‌ಇಪಿ ಅಗತ್ಯ. ಒಂದು ವೇಳೆ ಅಗತ್ಯವಿದ್ದರೆ ಎನ್‌ಇಪಿಯಲ್ಲಿಯೇ ಬದಲಾವಣೆ ಮಾಡಿಕೊಳ್ಳಲು ಅವಕಾಶ ವಿದೆ. ಆದರೆ ಅಧ್ಯಾಯಗಳನ್ನು ಕಿತ್ತೆಸೆಯುವುದರಿಂದ ಅದು ಎಸ್‌ಇಪಿ ಆಗದು ಎಂದು ಹೇಳಿದರು.

ಅವೈಜ್ಞಾನಿಕ ಪರಿಷ್ಕರಣೆ
ಕಾಂಗ್ರೆಸ್‌ ಸರಕಾರ ಪಠ್ಯಪುಸ್ತಕಗಳ ಅವೈಜ್ಞಾನಿಕ ಪರಿಷ್ಕರಣೆಗೆ ಮುಂದಾಗಿದ್ದು ಮಕ್ಕಳ ಮನಸ್ಸನ್ನು ವಿಭಿಜಿಸಲು ಪ್ರಯತ್ನಿಸುತ್ತಿದೆ. ಜಾತೀಯತೆಯ ಪಾಠ ಅಳವಡಿಸಿದೆ. ಸುಳ್ಳು ಇತಿಹಾಸಗಳನ್ನು ಪ್ರತಿಪಾದಿಸಿದೆ ಎಂದು ಕಾರ್ಣಿಕ್‌ ಹೇಳಿದರು.

ರಾಜಕೀಯ ಬೇಡ
ನಿವೃತ್ತ ಪ್ರಾಧ್ಯಾಪಕ ಪ್ರೊ| ರವಿಶಂಕರ ರಾವ್‌ ಮಾತನಾಡಿ, 1968, 1986ರ ಅನಂತರ 34 ವರ್ಷಗಳ ಬಳಿಕ 2020ರಲ್ಲಿ ಹೊಸ ಶಿಕ್ಷಣ ನೀತಿಯನ್ನು ರೂಪಿಸಲಾಗಿದೆ. ಶಿಕ್ಷಣವನ್ನು ರಾಜಕೀಯಗೊಳಿಸಬಾರದು. ಪುನರವಲೋಕಿಸಿ ಒಳ್ಳೆಯದನ್ನು ಒಪ್ಪಿಕೊಳ್ಳಬೇಕು ಎಂದು ಹೇಳಿದರು.

Advertisement

ಯಶಸ್ವಿಯಾಗಿ ಜಾರಿ
ನಿವೃತ್ತ ಪ್ರಾಂಶುಪಾಲ ಪ್ರೊ| ರಾಜಶೇಖರ ಹೆಬ್ಬಾರ್ ಮಾತನಾಡಿ, ರಾಜ್ಯದಲ್ಲಿ 2 ವರ್ಷಗಳಿಂದ ಎನ್‌ಇಪಿ ಯಶಸ್ವಿಯಾಗಿ ಜಾರಿಯಾಗಿದೆ. ಕನಿಷ್ಠ 5 ವರ್ಷ ನೋಡಿ ಅನಂತರ ನಿರ್ಧಾರ ತೆಗೆದುಕೊಳ್ಳಬೇಕು ಎಂದರು.
ಶಾಸಕ ವೇದವ್ಯಾಸ ಕಾಮತ್‌ ಮಾತನಾಡಿ, ಎನ್‌ಇಪಿ ಅಂಗನವಾಡಿ ನೌಕರರನ್ನು ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ತರುವ ಅವಕಾಶ ಮಾಡಿ ಕೊಟ್ಟಿದೆ. ಹಿಂಪಡೆಯುವುದರಿಂದ ಅಂಗನವಾಡಿ ನೌಕರರಿಗೂ ಅನ್ಯಾಯ ವಾಗಲಿದೆ ಎಂದರು. ವಿಧಾನ ಪರಿಷತ್‌ ಸದಸ್ಯ ಪ್ರತಾಪಸಿಂಹ ನಾಯಕ್‌, ವಿಕಾಸ್‌ ಪುತ್ತೂರು ಪತ್ರಿಕಾಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next