ಹೈದರಾಬಾದ್: ಭಾರತದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ʼಪುಷ್ಪ-2ʼ ಸಿನಿಮಾದ ಪೋಸ್ಟರ್ ಹಾಗೂ ಟೀಸರ್ ರಿಲೀಸ್ ಆಗಿದೆ. ಅಲ್ಲು ಅರ್ಜುನ್ ಹುಟ್ಟು ಹಬ್ಬಕ್ಕೆ ಫ್ಯಾನ್ಸ್ ಗಳಿಗೆ ಡಬಲ್ ಸಂಭ್ರಮ ಸಿಕ್ಕಿದೆ.
ʼಪುಷ್ಪ ಎಲ್ಲಿದ್ದಾನೆʼ ಎಂದು ಎರಡು ದಿನಗಳ ಹಿಂದೆ ಪುಟ್ಟ ಟೀಸರ್ ಮೂಲಕ ಸಿನಿಮಾ ಫಸ್ಟ್ ಝಲಕ್ ತೋರಿಸುವುದಾಗಿ ಅನೌನ್ಸ್ ಮಾಡಿದ್ದ ಮೈತ್ರಿ ಮೂವಿ ಮೇಕರ್ಸ್ ಇದೀಗ ʼಪುಷ್ಪ-2ʼ ಚಿತ್ರದ ಅದ್ದೂರಿ ಮೇಕಿಂಗ್ ವುಳ್ಳ, ಮಾಸ್, ಸಸ್ಪೆನ್ಸ್ ಅಂಶವುಳ್ಳ ಟೀಸರ್ ನ್ನು ರಿಲೀಸ್ ಮಾಡಿದೆ. ಇಡೀ ಊರಿಗೇ ಊರೇ ಪುಷ್ಪ ಎಲ್ಲಿದ್ದಾನೆ ಎನ್ನುವ ಅಂತೆ – ಕಂತೆಗಳನ್ನು ಹೇಳಿಕೊಂಡು, ಪುಷ್ಪ ಸತ್ತು ಹೋಗಿದ್ದಾನೆ ಎನ್ನುವ ಕಹಾನಿಯನ್ನು ವಿರೋಧಿಸಿ, ಪುಷ್ಪನಿಗಾಗಿ ಗಲಾಟೆ, ಪ್ರತಿಭಟನೆ ಮಾಡಿ, ಆತನ ಒಳ್ಳೆಯ ಕಾಯಕವನ್ನು ಹೇಳಿಕೊಂಡು, ಆತನಿಗಾಗಿ ಕಾಯುವ ಅಂಶವನ್ನು ಟೀಸರ್ ನಲ್ಲಿ ಜಬರ್ ದಸ್ತ್ ಬಿಜಿಎಂನೊಂದಿಗೆ ತೋರಿಸಲಾಗಿದೆ. ಹುಲಿಯೊಂದು ಕಾಡಿನಲ್ಲಿ ʼಪುಷ್ಪʼನನ್ನು ನೋಡಿ ಹಿಂದೆ ಹೋಗುವ ದೃಶ್ಯದೊಂದಿಗೆ ಟೀಸರ್ ಮುಕ್ತಾಯವಾಗುತ್ತದೆ.
ಕಾಡಿನಲ್ಲಿ ಪುಷ್ಪನಿಗಾಗಿ ಪೊಲೀಸರು ಹುಡುಕಾಟ ನಡೆಸುವ ದೃಶ್ಯ, ಪತ್ತೆಯ ಜಾಡು ಹತ್ತಿ ಹೋಗುವ ದೃಶ್ಯವನ್ನು ತೋರಿಸುವ ರೀತಿ ನೋಡಿದರೆ ʼಪುಷ್ಪ-2ʼ ನಲ್ಲಿ ಸಾಕಷ್ಟು ಆ್ಯಕ್ಷನ್ ಹಾಗೂ ಥ್ರಿಲ್ ಗಳು ಇರುವುದು ಗೊತ್ತಾಗುತ್ತದೆ.
ಸಿನಿಮಾದ ಪಸ್ಟ್ ಲುಕ್ ಪೋಸ್ಟರ್ ನೋಡಿ ‘ಬನ್ನಿ’ ಫ್ಯಾನ್ಸ್ ಗಳು ಎಕ್ಸೈಟ್ ಆಗಿದ್ದಾರೆ. ಅಲ್ಲು ಅರ್ಜುನ್ ಎಂದೂ ಕಾಣದ ಅವತಾರದಲ್ಲಿ ಇಲ್ಲಿ ಕಾಣಿಸಿಕೊಂಡಿದ್ದಾರೆ. ಸೀರೆ ತೊಟ್ಟು, ಹೂವಿನ ಹಾರ ಹಾಗೂ ಲಿಂಬೆ ಹಾರವನ್ನು ಹಾಕಿ ಕೈಲ್ಲೊಂದು ಗನ್ ಹಿಡಿದು ನಿಂತಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಅಲ್ಲು ಅರ್ಜುನ್ ಈ ಪೋಸ್ಟರ್ ನ್ನು ಹಂಚಿಕೊಂಡಿದ್ದಾರೆ. ಸದ್ಯ ಈ ಪೋಸ್ಟರ್ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಸುಕುಮಾರ್ ಬರೆದು ನಿರ್ದೇಶಿಸಿರುವ ಪುಷ್ಪ 2 ಚಿತ್ರದಲ್ಲಿ ಅಲ್ಲು ಅರ್ಜುನ್, ಫಾಹದ್ ಫಾಸಿಲ್ ಮತ್ತು ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.ಈ ವರ್ಷದ ಕೊನೆಯಲ್ಲಿ ಚಿತ್ರವು ರಿಲೀಸ್ ಆಗುವ ಸಾಧ್ಯತೆಯಿದೆ.