ನ್ಯೂಯಾರ್ಕ್: ಹೊಟ್ಟೆಪಾಡಿಗಾಗಿ ರಸ್ತೆಯಲ್ಲಿ ಮತ್ತು ಸ್ಥಳೀಯ ರೈಲುಗಳಲ್ಲಿ ನೃತ್ಯ ಮಾಡುತ್ತಿದ್ದ ಕರಿಯ ಜನಾಂಗದ ವ್ಯಕ್ತಿಯನ್ನು ಮೂವರು ಬಿಳಿಯರು ಸೇರಿಕೊಂಡು ಅಮಾನವೀಯವಾಗಿ ಹತ್ಯೆ ಮಾಡಿರುವ ಘಟನೆ ಅಮೆರಿಕದ ಮ್ಯಾನ್‌ಹಟನ್‌ನಲ್ಲಿ ಸೋಮವಾರ ನಡೆದಿದೆ.
ಈ ವೀಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಮಾನವೀಯ ಕೃತ್ಯದ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ. ಜೋರ್ಡಾನ್ ನೀಲಿ ಮೃತ ವ್ಯಕ್ತಿ. ಈತನಿಗೆ ಒಂದು ನೆಲೆ ಇರಲಿಲ್ಲ.
ಈತನಿಗೆ ನೃತ್ಯ ಎಂದರೆ ಪಂಚಪ್ರಾಣ. ಹೊಟ್ಟೆಪಾಡಿಗಾಗಿ ನ್ಯೂಯಾರ್ಕ್‌ನ ಟೈಮ್ಸ್ ಸ್ವೇರ್ ಸಹಿತ ರಸ್ತೆಗಳಲ್ಲಿ, ರೈಲುಗಳಲ್ಲಿ ಜನನಿಬಿಡ ಸ್ಥಳಗಳಲ್ಲಿ ನೃತ್ಯ ಮಾಡುತ್ತಿದ್ದ. ಖ್ಯಾತ ಡಾನ್ಸರ್ ಮೈಕೆಲ್ ಜಾಕ್ಸನ್‌ನಿಂದ ಪ್ರೇರಿತನಾಗಿ ಅವನಂತೆ ನೃತ್ಯ ಮಾಡುತ್ತಿದ್ದ. ಈತನಿಗೆ ಸ್ವಲ್ಪ ಮಾನಸಿಕ ಅಸ್ವಸ್ಥತೆ ಇತ್ತು. ಗುರುವಾರ ಮ್ಯಾನ್‌ಹಟನ್‌ನಿಂದ ನ್ಯೂಯಾರ್ಕ್‌ಗೆ ತೆರಳುತ್ತಿದ್ದ ರೈಲು ಹತ್ತಿ, ನೃತ್ಯ ಮಾಡಿ ಕಾಸಿಗಾಗಿ ಪ್ರಯಾಣಿಕರಿಗೆ ಬೇಡಿದ್ದಾನೆ. ಅಲ್ಲದೇ ಪ್ರಯಾಣಿಕರನ್ನು ಈತ ಬೈಯ್ದಿದ್ದಾನೆ ಎಂದು ಆರೋಪಿಸಲಾಗಿದೆ. ಈ ವೇಳೆ ಮೂವರು ಬಿಳಿಯರು ಇವನ ಮೇಲೆ ಎರಗಿ, ಹಿಗ್ಗಾಮುಗ್ಗ ಥಳಿಸಿದ್ದಾರೆ. ಅಲ್ಲದೇ ಅಮೆರಿಕ ನೌಕಾದಳದ ನಿವೃತ್ತ ಸಿಬಂದಿಯೊಬ್ಬ, ಜೋರ್ಡಾನ್ ಕುತ್ತಿಗೆಯನ್ನು 2 ನಿಮಿಷ 55 ಸೆಕೆಂಡುಗಳ ಕಾಲ ಹಿಸುಕಿದ್ದಾನೆ. ಇದರಿಂದ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸುಮಾರು 30 ಪ್ರಯಾಣಿಕರು ಈ ಕೃತ್ಯವನ್ನು ಮೂಕಪ್ರೇಕ್ಷಕರಾಗಿ ವೀಕ್ಷಿಸಿದ್ದಾರೆ. ಅಮೆರಿಕ ಸಹಿತ ವಿವಿಧ ದೇಶಗಳ ನಾಗರಿಕರು ಈ ಅಮಾನವೀಯ ಕೃತ್ಯವನ್ನು ಖಂಡಿಸಿದ್ದಾರೆ.