ಬೆಂಗಳೂರು: ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಜಾರಿ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ವಿಳಂಬ ಅನುಸರಿಸುತ್ತಿದ್ದು, ಇದನ್ನು ವಿರೋಧಿಸಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ರಾಜ್ಯ ಪ್ರವಾಸದ ವೇಳೆ ಕಪ್ಪು ಬಾವುಟ ಪ್ರದರ್ಶಿಸುವುದಾಗಿ ಸದಾಶಿವ ಆಯೋಗ ವರದಿ ಜಾರಿ ಹೋರಾಟ ಸಮಿತಿ ಎಚ್ಚರಿಸಿದೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಮಾರಸಂದ್ರ ಮುನಿಯಪ್ಪ, ರಾಜ್ಯ ಸರ್ಕಾರದ ನಡೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ವರದಿ ಜಾರಿ ಸಂಬಂಧ ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಛಲವಾದಿ ಸೇರಿದಂತೆ ಇನ್ನಿತರ ಸಮುದಾಯದ ಮುಖಂಡರ ಸಭೆ ನಡೆಸಿದ್ದರು.
ಆ ವೇಳೆ ವರದಿ ಜಾರಿ ಸಂಬಂಧ ಕೇಂದ್ರಕ್ಕೆ ಶಿಫಾರಸು ಮಾಡಲು 15 ದಿನಗಳ ಗಡುವು ಕೇಳಿದ್ದರು. ಕಾನೂನು ತಜ್ಞರ ಸಲಹೆ ಪಡೆದು ಮುಂದುವರಿಯುವ ಭರವಸೆ ನೀಡಿದ್ದರು.ಆದರೆ ಅವರು ನೀಡಿದ್ದ ಗಡುವು ಮುಗಿದಿದ್ದು, ಈಗ ಈ ವಿಚಾರವಾಗಿ ನಕಾರತ್ಮಕವಾಗಿ ಮಾತನಾಡುತ್ತಿದ್ದಾರೆ ಎಂದು ದೂರಿದರು.
ಸರ್ಕಾರದ ಈ ವಿಳಂಬ ನೀತಿ ಖಂಡಿಸಿ ಸದಾಶಿವ ಆಯೋಗ ವರದಿ ಜಾರಿ ಹೋರಾಟ ಸಮಿತಿ ರಾಹುಲ್ ಗಾಂಧಿ ಅವರ ರಾಜ್ಯ ಪ್ರವಾಸದ ವೇಳೆ ಕಪ್ಪು ಬಾವುಟ ಪ್ರದರ್ಶಿಸಲು ತೀರ್ಮಾನಿಸಿದೆ. ಫೆ.10ರಂದು ಹೊಸಕೋಟೆೆ, ಫೆ.11ರಂದು ಕಲಬುರ್ಗಿ ಮತ್ತು ಫೆ.12ರಂದು ಬೀದರ್‌ಗೆ ರಾಹುಲ್ ಗಾಂಧಿ ಅವರು ಭೇಟಿ ನೀಡಲಿದ್ದು, ಆ ವೇಳೆ ಹೋರಾಟ ಸಮಿತಿಯ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಲಿದ್ದಾರೆ ಎಂದರು.
ಸಮಿತಿಯ ರಾಜ್ಯ ಉಪಾಧ್ಯಕ್ಷ ಎನ್.ಮೂರ್ತಿ ಮಾತನಾಡಿ, ಸರ್ಕಾರಕ್ಕೆ ಪರಿಶಿಷ್ಟ ಜಾತಿಗಳ ಏಳ್ಗೆ ಬೇಕಾಗಿಲ್ಲ. ಈ ಹಿನ್ನೆಲೆಯಲ್ಲಿ ಸದಾಶಿವ ಆಯೋಗದ ವರದಿಯನ್ನು ಒಪ್ಪಿಕೊಂಡು ಕೇಂದ್ರಕ್ಕೆ ಶಿಫಾರಸು ಮಾಡುತ್ತಿಲ್ಲ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುನಾವಣೆಯಲ್ಲಿ ಭಾರಿ ಬೆಲೆ ತೆತ್ತಬೇಕಾಗುತ್ತದೆ ಎಂದು ಎಚ್ಚರಿಸಿದರು.