Advertisement
ಕಳೆದ ವರ್ಷ ಜಿಲ್ಲೆಯಲ್ಲಿ ಜಿಲ್ಲಾ ಕನ್ನಡ ಸಮ್ಮೇಳನ ನಡೆಸಲಿಲ್ಲ ಎಂಬ ಸಾರ್ವಜನಿಕರ ಹಾಗೂ ಸಾಹಿತ್ಯ ಪ್ರೇಮಿಗಳ ಆರೋಪಕ್ಕೆ ತುತ್ತಾಗಿದ್ದ ಜಿಲ್ಲಾ ಕಸಾಪ, ಈ ವರ್ಷ ಎಚ್ಚೆತ್ತುಕೊಂಡು ಜಿಲ್ಲೆಯಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಜುಲೈ ತಿಂಗಳ ಒಳಗೆ ಮುಗಿಸಲು ಭರದ ತಯಾರಿಯಲ್ಲಿ ತೊಡಗಿದ್ದರೂ ಸ್ಥಳೀಯ ಜನಪ್ರತಿನಿಧಿಗಳಿಂದ ನಿರೀಕ್ಷಿತ ಸ್ಪಂದನೆ ಸಿಕ್ಕಿಲ್ಲ. ಇದರಿಂದಾಗಿ ಮಹತ್ವಕಾಂಕ್ಷಿ ಸಾಹಿತ್ಯ ಸಮ್ಮೇಳನಗಳನ್ನು ಅದ್ದೂರಿಯಾಗಿ ನಡೆಸಲು ಉದ್ದೇಶಿಸಿದ್ದ ಕಸಾಪ ಪದಾಧಿಕಾರಿಗಳು ಸದ್ಯ ಏನು ಮಾಡಲಾಗದೇ ಅಸಹಾಯಕ ಸ್ಥಿತಿಯಲ್ಲಿರುವುದು ಕಂಡು ಬಂದಿದೆ.
Related Articles
Advertisement
ಆಹ್ವಾನ ಪತ್ರಿಕೆ ಮುದ್ರಣವಿಲ್ಲ: ಸಾಹಿತ್ಯ ಸಮ್ಮೇಳನಗಳು ಕನಿಷ್ಟ ತಿಂಗಳ ಮೊದಲೇ ಸಮ್ಮೇಳನದ ಆಹ್ವಾನ ಪತ್ರಿಕೆಗಳು ಹೊರ ಬಂದು ವ್ಯಾಪಕ ಪ್ರಚಾರ ನಡೆಸಬೇಕು. ಆದರೆ ಜಿಲ್ಲೆಯ ಚಿಂತಾಮಣಿಯಲ್ಲಿ ನಡೆಯುತ್ತಿರುವ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಕೇವಲ ನಾಲ್ಕು ದಿನ ಮಾತ್ರ ಬಾಕಿ ಇದ್ದರೂ ಇದುವರೆಗೂ ಸಮ್ಮೇಳನದ ಆಹ್ವಾನ ಪತ್ರಿಕೆ ಹೊರ ಬಂದಿಲ್ಲ. ಜೊತೆಗೆ ಸಾಹಿತ್ಯ ಸಮ್ಮೇಳನ ಎಲ್ಲಿ ನಡೆಸಬೇಕೆಂಬ ಸ್ಥಳ ಕೂಡ ಇನ್ನೂ ಗುರುತಿಸಿಲ್ಲ. ಇದೇ ಪರಿಸ್ಥಿತಿ ತಾಲೂಕು ಮಟ್ಟದ ಸಮ್ಮೇಳನ ದಿನಾಂಕ ನಿಗದಿಯಾಗಿರುವ ತಾಲೂಕುಗಳಲ್ಲಿ ಕಂಡು ಬಂದಿದೆ.
ಇದಕ್ಕೆ ಮುಖ್ಯ ಕಾರಣ ಸಮ್ಮೇಳನದ ಸಿದ್ಧತೆಗಳ ಬಗ್ಗೆ ಚರ್ಚಿಸಲು ಕ್ಷೇತ್ರಗಳ ಶಾಸಕರು ಕೈಗೆ ಸಿಗದಿರುವುದು. ಇನ್ನೂ ಸಮ್ಮೇಳನಕ್ಕೆ ಯಾರನ್ನು ಆಹ್ವಾನಿಸಬೇಕು, ಹಿರಿಯ ಸಾಹಿತಿಗಳನ್ನು ಕರೆಯಬೇಕಾ ಅಥವಾ ಸ್ಥಳೀಯವಾಗಿರುವ ಜನಪ್ರತಿನಿಧಿಗಳಿಂದಲೇ ಸಮ್ಮೇಳನ ಉದ್ಘಾಟಿಸಬೇಕಾ ಎಂಬ ಗೊಂದಲದಲ್ಲಿ ಕಸಾಪ ಪದಾಧಿಕಾರಿಗಳು ಮುಳುಗಿರುವುದು ಎದ್ದು ಕಾಣುತ್ತಿದೆ.
ಒಟ್ಟಿನಲ್ಲಿ ಆಂಧ್ರದ ಗಡಿಯಲ್ಲಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಅರ್ಥಪೂರ್ಣವಾಗಿ ಕನ್ನಡ ನೆಲ, ಜಲ, ಸಾಹಿತ್ಯ ಸಂಸ್ಕೃತಿಯ ಪ್ರತೀಕವಾಗಿ ನಡೆಯಬೇಕಿತ್ತಾದರೂ ಸದ್ಯ ರಾಜ್ಯ ರಾಜಕೀಯ ವಲಯದಲ್ಲಿ ಮೂಡಿರುವ ರಾಜಕೀಯ ಅನಿಶ್ಚಿತೆಯ ಕಾರ್ಮೋಡದಿಂದ ಸಾಹಿತ್ಯ ಸಮ್ಮೇಳನಗಳು ಕಳೆಗುಂದುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.
ಸಮ್ಮೇಳನ ನಡೆಸಲು ಜುಲೈ ಗಡುವು: ಕಳೆದ ವರ್ಷ ಜಿಲ್ಲಾ ಹಾಗೂ ತಾಲೂಕು ಮಟ್ಟದ ಸಮ್ಮೇಳನಗಳನ್ನು ನಡೆಸಲು ಸಾಧ್ಯವಾಗದೇ ಜಿಲ್ಲೆಯ ಸಾರ್ವಜನಿಕರ ಹಾಗೂ ಸಾಹಿತ್ಯ ಪ್ರೇಮಿಗಳಿಂದ ಸಾಕಷ್ಟು ಟೀಕೆಗೆ ಜಿಲ್ಲಾ ಕಸಾಪ ಗುರಿಯಾಗಿತ್ತು. ಅಲ್ಲದೇ ಕಳೆದ ವರ್ಷದ ಜಿಲ್ಲಾ ಹಾಗೂ ತಾಲೂಕು ಸಮ್ಮೇಳನಗಳನ್ನು ಈ ವರ್ಷದ ಜುಲೈ ಅಂತ್ಯದೊಳಗೆ ಮಾಡಿ ಮುಗಿಸದಿದ್ದರೆ ಜಿಲ್ಲಾ ಮಟ್ಟದ ಸಮ್ಮೇಳನಕ್ಕೆ ನೀಡುವ 5 ಲಕ್ಷ ರೂ.ಅನುದಾನ ಹಾಗೂ
ತಾಲೂಕು ಮಟ್ಟದ ಸಮ್ಮೇಳನಕ್ಕೆ ನೀಡುವ 1 ಲಕ್ಷ ರೂ. ಅನುದಾನ ನೀಡುವುದಿಲ್ಲ ಎಂದು ಈಗಾಗಲೇ ಕೇಂದ್ರ ಕಸಾಪ ಘಟಕ, ಜಿಲ್ಲಾ ಹಾಗೂ ತಾಲೂಕು ಘಟಕಗಳಿಗೆ ಎಚ್ಚರಿಕೆ ನೀಡಿದೆ. ಹೀಗಾಗಿ ಜುಲೈ ತಿಂಗಳ ಒಳಗೆ ಜಿಲ್ಲಾ ಹಾಗೂ ತಾಲೂಕು ಕಸಾಪ ಸಮ್ಮೇಳನಗಳನ್ನು ಮುಗಿಸಿ ಬಿಡಬೇಕೆಂಬ ಹಠ ತೊಟ್ಟು ಕಸಾಪ ಘಟಕಗಳು ಸಮ್ಮೇಳನದ ಆಯೋಜನೆಗೆ ಸಿದ್ಧತೆಗಳಲ್ಲಿ ತೊಡಗಿದ್ದರೂ ಕ್ಷೇತ್ರಗಳಲ್ಲಿ ಶಾಸಕರ ಭೇಟಿ ಸಾಧ್ಯವಾಗದೇ ಸಮ್ಮೇಳನ ನಡೆಸಲು ಪರದಾಡುವಂತಾಗಿದೆ.
ಜಿಲ್ಲೆಯ ಚಿಂತಾಮಣಿ ನಗರದಲ್ಲಿ ಇದೇ ತಿಂಗಳ 27, 28 ರಂದು ಎರಡು ದಿನಗಳ ಕಾಲ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಗೆ ಸಿದ್ಧತೆ ನಡೆದಿದೆ. ಆದರೆ ರಾಜ್ಯ ಸರ್ಕಾರದ ಅನಿಶ್ಚಿತೆಯ ಪರಿಣಾಮ ಸಮ್ಮೇಳನದ ಸಿದ್ಧತೆಗಳಿಗೆ ಹಿನ್ನಡೆಯಾಗಿದೆ. ಆದರೂ ನಿಗದಿಯಂತೆ ಜಿಲ್ಲಾ ಹಾಗೂ ತಾಲೂಕು ಸಮ್ಮೇಳನ ನಡೆಸಲಾಗುವುದು.-ಡಾ.ಕೈವಾರ ಶ್ರೀನಿವಾಸ್, ಕಸಾಪ ಜಿಲ್ಲಾಧ್ಯಕ್ಷರು * ಕಾಗತಿ ನಾಗರಾಜಪ್ಪ