ಬಜಪೆ: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಗಮನ ರಸ್ತೆಯ ಕಾರ್ ಪಾರ್ಕಿಂಗ್ ಬಳಿ ಬುಧವಾರ ಮಧ್ಯಾಹ್ನ ವಾರಸುದಾರರಿಲ್ಲದ ಕಪ್ಪು ಬ್ಯಾಗ್‌ವೊಂದು ಪತ್ತೆಯಾಗಿದ್ದು, ಕೆಲಕಾಲ ಆತಂಕದ ವಾತಾವರಣಕ್ಕೆ ಕಾರಣವಾಗುವ ಘಟನೆ ನಡೆಯಿತು.
ರವಿವಾರ ಶ್ರೀಲಂಕಾದಲ್ಲಿ ಸಂಭವಿಸಿದ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ಮಂಗಳೂರು ವಿಮಾನ ನಿಲ್ದಾಣದಲ್ಲಿಯೂ ಪ್ರಯಾಣಿಕರ ತಪಾಸಣೆ ಸೇರಿದಂತೆ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ. ಹೀಗಿರುವಾಗ, ನಿಲ್ದಾಣದೊಳಗೆ ಅನಾಥವಾಗಿ ಬ್ಯಾಗ್ ಇರುವುದು ಕಂಡುಬಂದಿದ್ದು, ಆತಂಕಕ್ಕೆ ಎಡೆಮಾಡಿದ್ದು ಗಮನಾರ್ಹ.
ಬುಧವಾರ ಮಧ್ಯಾಹ್ನ 12.15 ಗಂಟೆ ವೇಳೆಗೆ ಕಾರ್ ಪಾರ್ಕಿಂಗ್‌ನ ಬ್ಯಾರಿಕೇಡ್‌ಗಳ ಮಧ್ಯೆ ಈ ಬ್ಯಾಗ್ ಪತ್ತೆಯಾಗಿತ್ತು. ಅದು ಯಾರೋ ವಿಮಾನದಲ್ಲಿ ಪ್ರಯಾಣಿಸುವುದಕ್ಕೆ ನಿಲ್ದಾಣಕ್ಕೆ ಬಂದವರು ಲಗೇಜ್ ಕೊಂಡೊಯ್ಯುವಾಗ ಗೊತ್ತಾಗದೆ ಬಿದ್ದು ಹೋದದ್ದೇ ಅಥವಾ ವಿಮಾನ ಹಿಡಿಯುವ ಅವಸರದಲ್ಲಿ ಮರೆತು ಹೋಗಿ ಅಲ್ಲಿಯೇ ಬಾಕಿಯಾಗಿತ್ತೇ ಎನ್ನುವುದು ಸದ್ಯಕ್ಕೆ ಗೊತ್ತಾಗಿಲ್ಲ. ಸುಮಾರು ಮುಕ್ಕಾಲು ಗಂಟೆ ಆ ಬ್ಯಾಗ್ ಕಾರ್ ಪಾರ್ಕಿಂಗ್ ಜಾಗದಲ್ಲಿ ಅನಾಥವಾಗಿದ್ದು, ನಂತರ ಸಂಶಯಗೊಂಡು ನಿಲ್ದಾಣದಲ್ಲಿ ಭದ್ರತಾ ಉಸ್ತುವಾರಿ ನೋಡಿಕೊಳ್ಳುತ್ತಿರುವ ಸಿಐಎಸ್‌ಎಫ್ ಸಿಬಂದಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಆರಂಭಿಸಿದ್ದರು.
ಮೊದಲಿಗೆ ಬ್ಯಾಗ್ ಇರುವ ಪ್ರದೇಶಕ್ಕೆ ಯಾರು ಕೂಡ ಹೋಗದಂತೆ ಜನರನ್ನು ತಡೆಯಲಾಗಿತ್ತು. ಆ ಬಳಿಕ, ಸಿಐಎಸ್‌ಎಫ್ ಸಿಬಂದಿ ಯು ಬಾಂಬ್ ಪತ್ತೆ ದಳ ಹಾಗೂ ಶ್ವಾನದಳದವರನ್ನು ಸ್ಥಳಕ್ಕೆ ಕರೆಸಿ ಬ್ಯಾಗ್ ಅನ್ನು° ತೀವ್ರ ತಪಾಸಣೆಗೆ ಒಳಪಡಿಸಿದರು. ಆದರೆ, ಬ್ಯಾಗ್‌ನೊಳಗೆ ಯಾವುದೇ ಸಂಶಯಾಸ್ಪದ ವಸ್ತುಗಳು ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ಬಳಿಕ ಅದನ್ನು ಸಿಐಎಸ್‌ಎಫ್ ಸಿಬಂದಿಯು ವಿಮಾನ ನಿಲ್ದಾಣದೊಳಗೆ ಕೊಂಡೊಯ್ದರು.