Advertisement
ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಲು ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಬಿಜೆಪಿಯಲ್ಲೂ ಚುನಾವಣ ಚಟುವಟಿಕೆ ಬಿರುಸು ಪಡೆದುಕೊಳ್ಳುತ್ತಿದೆ. ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಿಸಿರುವ ಬಿಜೆಪಿ ಅದನ್ನು ಚುನಾವಣ ಅಸ್ತ್ರವನ್ನಾಗಿ ಬಳಸಿಕೊಂಡು ಲಾಭ ಪಡೆಯಲು ಮುಂದಾಗಿದೆ. ಅದಕ್ಕಾಗಿ ಅತಿಹೆಚ್ಚು ಮೀಸಲು ಕ್ಷೇತ್ರಗಳಿರುವ ಬಳ್ಳಾರಿ, ರಾಯಚೂರು ಜಿಲ್ಲೆಗಳಲ್ಲಿ ಪ್ರತಿ ಎರಡು ಮೀಸಲು ಕ್ಷೇತ್ರಗಳಿಗೆ ಒಂದು ಬೃಹತ್ ಸಮಾವೇಶ ನಡೆಸಲು ಸಿದ್ಧತೆ ನಡೆಸುತ್ತಿದೆ.
ತೀವ್ರ ಒತ್ತಡದ ಬಳಿಕ ಮೀಸಲು ಪ್ರಮಾಣವನ್ನು ಎಸ್‌ಸಿ ಶೇ.15ರಿಂದ ಶೇ.17, ಎಸ್‌ಟಿ ಶೇ.3 ರಿಂದ ಶೇ.7ರಷ್ಟು ಹೆಚ್ಚಿಸಲಾಗಿತ್ತು. ಇದರ ಲಾಭ ಪಡೆಯುವ ಸಲುವಾಗಿ ಕಳೆದ ನವೆಂಬರ್‌ನಲ್ಲಿ ಬಳ್ಳಾರಿಯಲ್ಲಿ ರಾಜ್ಯಮಟ್ಟದ ಎಸ್‌ಟಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು. ಚುನಾವಣೆ ಸಮೀಪಿಸಿದ ಹಿನ್ನೆಲೆಯಲ್ಲಿ ಇದೀಗ ಬಳ್ಳಾರಿ, ರಾಯಚೂರು ಜಿಲ್ಲೆಗಳಲ್ಲಿ ಎರಡು ಮೀಸಲು ಕ್ಷೇತ್ರಗಳಿಗೆ ಒಂದು ಬೃಹತ್ ಸಮಾವೇಶವನ್ನು ಆಯೋಜಿಸುವ ಮೂಲಕ ಮೀಸಲಾತಿಯ ಲಾಭ ಪಡೆಯಲು ಸಚಿವ ಶ್ರೀರಾಮುಲು ಮುಂದಾಗಿದ್ದಾರೆ. ಚಿತ್ರನಟ ಸುದೀಪ್ ಭಾಗಿ
ಮೀಸಲಾತಿ ಹೆಚ್ಚಳ ಲಾಭ ಪಡೆಯುವ ಸಲುವಾಗಿ ಮೀಸಲು ಕ್ಷೇತ್ರಗಳಲ್ಲಿ ಸಮಾವೇಶ ನಡೆಸಲು ಮುಂದಾಗಿರುವ ಬಿಜೆಪಿ, ಸಮಾವೇಶಕ್ಕೆ ಸ್ಟಾರ್ ಪ್ರಚಾರಕರನ್ನು ಕರೆಸಲು ಚಿಂತನೆ ನಡೆಸಿದೆ. ಇತ್ತೀಚೆಗಷ್ಟೇ ಬಿಜೆಪಿ ಪರ ಪ್ರಚಾರ ಮಾಡುವುದಾಗಿ ಬಹಿರಂಗವಾಗಿ ಹೇಳಿಕೊಂಡಿರುವ ನಟ ಕಿಚ್ಚ ಸುದೀಪ್ ಅವರನ್ನು ಸಮಾವೇಶಗಳಿಗೆ ಕರೆಸಲು ಚಿಂತನೆ ನಡೆಸಿದೆ. ಜತೆಗೆ ಈ ಉಭಯ ಜಿಲ್ಲೆಗಳಲ್ಲೂ ಸುದೀಪ್ ಅಭಿಮಾನಿಗಳು ಅಧಿಕ ಸಂಖ್ಯೆಯಲ್ಲಿರುವ ಹಿನ್ನೆಲೆಯಲ್ಲಿ ಅವರನ್ನು ಕರೆಸಲಾಗುತ್ತಿದೆ. ಇವರೊಂದಿಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಸಹ ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.