ಮಲೆನಾಡಿನ ಒಂದು ಸುಂದರ ಹಳ್ಳಿಯನ್ನು ನಿಮಗೆ ಪರಿಚಯಿಸಬೇಕೆಂಬ ಆಸಕ್ತಿ ನನ್ನದು. ಕೆಲವೊಮ್ಮೆ ನಾವು ದೂರದ ಪ್ರೇಕ್ಷಣೀಯ ಸ್ಥಳಗಳನ್ನು ನೋಡಿರುತ್ತೇವೆ ಅಥವಾ ನೋಡಲು ಆಸಕ್ತಿ ಇರುತ್ತದೆ. ಆದರೆ ನಮ್ಮ ಹತ್ತಿರವಿರುವ ಸುಂದರ ಪ್ರಾಕೃತಿಕ ತಾಣಗಳನ್ನು ನಾವು ನೋಡಿರುವುದಿಲ್ಲ.
ಇದರಲ್ಲಿ ಕಾಸರವಳ್ಳಿ ಒಂದು. ಕಾಸರವಳ್ಳಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಶೃಂಗೇರಿ ಹೆದ್ದಾರಿಯಲ್ಲಿ ತೀರ್ಥಹಳ್ಳಿಯಿಂದ 22ಕಿ.ಮೀ.ದೂರದಲ್ಲಿ ಬರುತ್ತದೆ. ಇಲ್ಲಿಯ ಸೋಮೇಶ್ವರ ದೇವಸ್ಥಾನ ಜಗತ್ಪ್ರಸಿದ್ಧವಾಗಿದ್ದು, ಸುಮಾರು 400 ವರ್ಷಗಳ ಹಿಂದೆ ಕೆಳದಿಯ ಅರಸರಾದ ಸೋಮ ಶೇಖರ ನಾಯ್ಕನಿಂದ ಕಟ್ಟಿಸಲ್ಪಟ್ಟಿತು.
ಭಗವಾನ್ ಶಿವ ವೈರಾಗ್ಯ ಮೂರ್ತಿ, ಲೋಕದ ಹಿತಕ್ಕಾಗಿ ತನ್ನನ್ನು ಸಮರ್ಪಣೆ ಮಾಡಿಕೊಂಡವನು, ತಾನು ಸರ್ವ ಸಂಗ ಪರಿತ್ಯಾಗಿಯಾದರೂ ತನ್ನ ಸುತ್ತಲಿನ ಪರಿಸರವನ್ನು ಪ್ರಕೃತಿಯನ್ನು ಸುಂದರವಾಗಿಸಿದವನು. ಪರಶಿವನ ಯಾವುದೇ ತಾಣಗಳನ್ನು ನಾವು ಗಮನಿಸಿದಾಗ ಹೆಚ್ಚಿನವು ಸುಂದರ ಪರಿಸರದಲ್ಲಿ ನದಿಯ ದಂಡೆಯಲ್ಲಿ ಇರುವುದನ್ನು ಗಮನಿಸಬಹುದು. ಅಂದರೆ ನಾವು ಪ್ರಕೃತಿಯನ್ನು ಭಗವಂತನ ರೂಪದಲ್ಲಿ ಆರಾಧಿಸುತ್ತೇವೆ.
ಆಗ ಸುಂದರವಾದ ಪ್ರಕೃತಿ ಮತ್ತು ಭಗವಂತನ ಮೇಲಿನ ನಂಬಿಕೆ ಮೇಳೈಸಿದಾಗ ಅದೊಂದು ಸುಂದರ ರೂಪವಾಗಿ ನಮ್ಮ ಮನಸ್ಸಿನಲ್ಲಿ ನೆಲೆ ನಿಲ್ಲುತ್ತದೆ. ದೇವಸ್ಥಾನ ಪೂರ್ವಕ್ಕೆ ಮುಖ ಮಾಡಿದ್ದು, ಬೆಳಗಿನ ಪ್ರಥಮ ಕಿರಣ ಲಿಂಗದ ಮೇಲೆ ಬೀಳುವುದು ವಿಶೇಷ, ತುಂಗೆ ದೇವಸ್ಥಾನದ ಎದುರಿಗೆ ವಿಶಾಲವಾದ ಭೂಮಿಕೆಯಲ್ಲಿ ಸೌಮ್ಯ ಹರಿವಿನಿಂದ ಉತ್ತರದಿಂದ ದಕ್ಷಿಣಕ್ಕೆ ಹರಿಯುತ್ತಾಳೆ. ಶೃಂಗೇರಿಯ ಸಮೀಪ ಗಂಗಾ ಮೂಲದಲ್ಲಿ ಹುಟ್ಟುವ ತುಂಗೆ ಇಲ್ಲಿ ಹರಿದು ಬೃಹತ್ ಪಾತ್ರದಲ್ಲಿ ಮುಂದುವರಿಯುತ್ತಾಳೆ.
ಈ ಹಳ್ಳಿ ಗತಕಾಲದ ವೈಭವವನ್ನು ತೋರಿಸುತ್ತದೆ, ಬಿದನೂರಿನ ಅರಸರ ಶ್ರೀಮಂತಿಕೆಗೆ ಸಾಕ್ಷಿಯಾಗಿದೆ, ಮಲೆನಾಡಿನ ಈ ಒಂದು ಹಳ್ಳಿ ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ ಕನ್ನಡನಾಡಿಗೆ ಮಾದರಿಯಾಗಿತ್ತು, ಕೆಳದಿಯ ನಾಯಕರ ಕಾಲದ ಸಾಂಸ್ಕೃತಿಕ ರಾಯಭಾರಿಯಾಗಿತ್ತು. ಅರಸರ ಕಾಲದಲ್ಲಿ ಮಲೆನಾಡಿನ ಹೆಸರನ್ನು ದೂರದವೆಗೂ ಪಸರಿಸಿತ್ತು.
ಸ್ಥಳೀಯರು ಹೇಳುವ ಹಾಗೇ ಇಲ್ಲಿ ಅರಸರ ಕಾಲದಿಂದ ಇತ್ತೀಚಿನವರೆಗೂ ಜಾತ್ರೆ, ದೀಪೋತ್ಸವ ಮತ್ತು ನವರಾತ್ರಿ ಉತ್ಸವಗಳು ಅತೀ ವಿಜೃಂಭಣೆಯಿಂದ ನಡೆಯುತ್ತಿದ್ದವು.ಇದಕ್ಕೆ ಪೂರಕವೆಂಬಂತೆ ಅಗ್ರಹಾರ ಮನೆಗಳು, ಪಡಸಾಲೆಗಳು, ದೊಡ್ಡ, ದೊಡ್ಡ ಮರದ ದಿಮ್ಮಿಗಳಲ್ಲಿ ಕೆತ್ತಿದ ಕೆತ್ತನೆಗಳು ಅವರ ಕಲಾ ನಿಪುಣತೆಯನ್ನು ದೈವಭಕ್ತಿ ಮತ್ತು ಆಸ್ತಿಕ ಮನೋಭಾವನೆಗೆ ಒಂದು ನಿದರ್ಶನ. ಬಿದನೂರಿನ ಇತಿಹಾಸದ ಪ್ರಕಾರ ಭೋಗಲಿಂಗವನ್ನು ಕಾಶಿಯಿಂದ ತರಲಾಯಿತು. ದೇವಸ್ಥಾನದ ಓಲಗದ ಮಂಟಪ, ಅಗ್ರಹಾರವನ್ನು, ತುಂಗೆಯ ತಟವನ್ನು ಹೊಂದಿರುವ ಕಾಸರವಳ್ಳಿ ಅರಸರ ಸಾಂಸ್ಕೃತಿಕ ಸೊಬಗಿನ ತವರೂರು.
ಮಲೆನಾಡಿನ ಕೇಂದ್ರ ಭಾಗದಲ್ಲಿರುವ ಈ ಹಳ್ಳಿ ಅಡಿಕೆ, ಕಾಫಿ, ಭತ್ತದ ಬೆಳೆಗಳಿಂದ ಶ್ರೀಮಂತವಾಗಿದೆ, ಎಲ್ಲೆಂದರಲ್ಲಿ ತುಂಗೆಯ ನೀರಿನ ಸೌಕರ್ಯವಿದೆ. ತುಂಗಾ ನದಿಗೆ ಸೋಪಾನಗಳಿದ್ದು ಅಲ್ಲಿಗೆ ಹೋದರೆ ಸ್ವಲ್ಪ ವಿರಮಿಸೋಣ ಎನ್ನಿಸುತ್ತದೆ, ಸುಂದರ ಪ್ರಕೃತಿಯಲ್ಲಿ ನಮ್ಮನ್ನೆ ನಾವು ಮರೆಯುತ್ತೇವೆ, ಸುತ್ತಲಿನ ಪರಿಸರ ಇಳೆಗೆ ಹಸಿರಿನ ಚಾದರವನ್ನು ಹೊದಿಸಿದ ಹಾಗೆ ಅತ್ಯಂತ ಸುಂದರವಾಗಿದೆ.
ಹೊಳೆಯ ಮಧ್ಯದಲ್ಲಿ ಕೂಡಿಟ್ಟ ಹಾಗಿರುವ ಸಾಲಂಕೃತ ಬಂಡೆಗಳು ಬಹು ಸುಂದರವಾಗಿವೆ, ಕಾರ್ತಿಕ ಮಾಸದಲ್ಲಿ ಈ ಬಂಡೆಗಳ ಮೇಲೆ ಹಣತೆಗಳನ್ನು ಹಚ್ಚಿಟ್ಟರೆ ನಕ್ಷತ ಲೋಕವೇ ಇಳೆಗೆ ಬಂದಂತೆ ಕಾಣುತ್ತದೆ. ನಮ್ಮ ಹಿಂದೂ ಸಂಸ್ಕೃತಿಯಲ್ಲಿ ದೇವಳಗಳು ಶ್ರದ್ದಾ ಭಕ್ತಿಗಳ ಕೇಂದ್ರಗಳು, ಸಮಾಜ ಎಷ್ಟೇ ವೇಗದಲ್ಲಿದ್ದರೂ ಇವುಗಳು ಆಸ್ತಿಕರ ನಂಬಿಕೆಯ ಕೇಂದ್ರಗಳಾಗಿವೆ.
ಒಮ್ಮೆ ಸಂಸಾರ ಸಮೇತ ಇಲ್ಲಿಗೆ ಭೇಟಿ ಕೊಡಿ ಸ್ಹೇಹಿತರೇ.
*ಸತೀಶ್ ಚಂದ್ರ ಅಡಿಗ
ಅರಳಸುರಳಿ